ಪದ್ಯ ೬: ಅರ್ಜುನನ ಮಹಾಸ್ತ್ರಗಳ ನಾಟಕವನ್ನು ಯಾರು ವೀಕ್ಷಿಸಿದರು?

ನೆರೆದುದಭ್ರದೊಳಮರಗಣ ಮುನಿ
ವರರು ಸಹಿತ ಯುಧಿಷ್ಠಿರಾದಿಗ
ಳೆರಡುವಂಕವ ಹೊದ್ದಿದರು ಹರಿತನಯನೆಡಬಲವ
ತರುನಿಕರ ಗಿರಿನಿಚಯವಲ್ಲಿಯ
ಪರಿಜನವು ತರುಬಿದುದು ತನಗಿದ
ನರಸಬಣ್ಣಿಸಲಳವೆ ನರನ ಮಹಾಸ್ತ್ರ ನಾಟಕವ (ಅರಣ್ಯ ಪರ್ವ, ೧೪ ಸಂಧಿ, ೬ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ದೇವತೆಗಳು ಬಂದು ನಿಂತರು. ಧರ್ಮಜ ಮತ್ತು ಉಳಿದ ಪಾಂಡವರು ಮುನಿಗಳೊಡನೆ ಅರ್ಜುನನ ಎಡ ಬಲದಲ್ಲಿ ನಿಂತರು. ಕಾಡಿನ ಮರಗಳು, ಬೆಟ್ಟಗಳು, ಪಾಂಡವರ ಪರಿಜನರು ಅಲ್ಲಿನಿಂತರು. ಅರ್ಜುನನ ಮಹಾಸ್ತ್ರಗಳ ನಾಟಕವನ್ನು ಜನಮೇಜಯನೇ ನನಗೆ ವರ್ಣಿಸಲು ಸಾಧ್ಯವೇ!

ಅರ್ಥ:
ನೆರೆ: ಸಮೀಪ, ಹತ್ತಿರ; ಅಭ್ರ: ಆಗಸ; ಅಮರ: ದೇವತೆ; ಗಣ: ಗುಂಪು; ಮುನಿ: ಋಷಿ; ಸಹಿತ: ಜೊತೆ; ಆದಿ: ಮುಂತಾದ; ಅಂಕ: ಗುರುತು, ಬಿರುದು; ಹೊದ್ದು: ಹೊಂದು, ಸೇರು; ಹರಿ: ವಿಷ್ಣು; ತನಯ: ಮಗ; ಎಡಬಲ: ಎರಡೂ ಕಡೆ; ತರು: ಮರ; ನಿಕರ: ಗುಂಪು, ಸಮೂಹ; ಗಿರಿ: ಬೆಟ್ಟ; ನಿಚಯ: ರಾಶಿ, ಗುಂಪು; ಪರಿಜನ: ಬಂಧುಜನ; ತರುಬು: ತಡೆ, ನಿಲ್ಲಿಸು; ಅರಸ: ರಾಜ; ಬಣ್ಣಿಸು: ವಿವರಿಸು, ಹೊಗಳು; ನರ: ಮನುಷ್ಯ; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ನಾಟಕ: ತೋರಿಕೆಯ ವರ್ತನೆ;

ಪದವಿಂಗಡಣೆ:
ನೆರೆದುದ್+ಅಭ್ರದೊಳ್+ಅಮರಗಣ +ಮುನಿ
ವರರು+ ಸಹಿತ +ಯುಧಿಷ್ಠಿರ್+ಆದಿಗಳ್
ಎರಡುವ್+ಅಂಕವ+ ಹೊದ್ದಿದರು +ಹರಿ+ತನಯನ್+ಎಡಬಲವ
ತರು+ನಿಕರ+ ಗಿರಿ+ನಿಚಯವ್ +ಅಲ್ಲಿಯ
ಪರಿಜನವು +ತರುಬಿದುದು +ತನಗಿದನ್
ಅರಸ+ಬಣ್ಣಿಸಲ್+ಅಳವೆ +ನರನ +ಮಹಾಸ್ತ್ರ +ನಾಟಕವ

ಅಚ್ಚರಿ:
(೧) ನಿಚಯ, ನಿಕರ, ಗಣ – ಸಮನಾರ್ಥಕ ಪದ
(೨) ನರ, ಹರಿತನಯ – ಅರ್ಜುನನನ್ನು ಕರೆದ ಪರಿ