ಪದ್ಯ ೩೪: ಅರ್ಜುನನು ಭೀಷ್ಮರನ್ನು ಹೇಗೆ ಪ್ರಶಂಶಿಸಿದನು?

ಒಳ್ಳಿತೈ ಕೈಚಳಕವಾವನ
ಲಿಲ್ಲ ಹರಹರ ಪರಶುರಾಮನ
ನಲ್ಲಿ ಮೆಚ್ಚಿಸಿದಂದವಿನಿತೋ ಮತ್ತೆ ಬೇರುಂಟೊ
ಒಳ್ಳೆಗರನೋಡಿಸಿದ ಸಹಸವ
ನಿಲ್ಲಿ ತೋರಲು ನೆನೆದಿರೇ ತ
ಪ್ಪಲ್ಲ ತಪ್ಪಲ್ಲೆನುತ ಕಣೆಗಳ ಕಡಿದನಾ ಪಾರ್ಥ (ಭೀಷ್ಮ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಒಳ್ಳೆಯದು ಕೈಚಳಕ ಯಾರಲ್ಲಿಲ್ಲ, ಶಿವ ಶಿವಾ ಇಂತಹ ಬಾಣಪ್ರಯೋಗದಿಂದಲೇ ಪರಶುರಾಮರನ್ನು ಮೆಚ್ಚಿಸಿದಿರೋ? ಬೇರೆ ಯಾವುದಾದರೂ ಇತ್ತೋ? ನೀರು ಹಾವಿನಂತಹ ಚತುರಂಗ ಸೈನ್ಯದವರನ್ನೋಡಿಸಿದ ಚಾತುರ್ಯವನ್ನು ನನಗೆ ತೋರಿಸಬೇಕೆಂದುಕೊಂಡಿರಾ? ತಪ್ಪಲ್ಲ ತಪ್ಪಲ್ಲ ಎನ್ನುತ್ತಾ ಅರ್ಜುನನು ಭೀಷ್ಮನ ಬಾಣಗಳನ್ನು ಕಡಿದನು.

ಅರ್ಥ:
ಒಳ್ಳಿತು: ಒಳ್ಳೆಯದು, ಸಮಂಜಸ; ಕೈಚಳಕ: ಚಾಣಾಕ್ಷತೆ; ಹರಹರ: ಮಹಾದೇವ; ಮೆಚ್ಚಿಸು: ಒಡಂಬಡಿಸು, ಒಪ್ಪಿಸು; ಅಂದ: ಸೊಬಗು; ಬೇರೆ: ಅನ್ಯ; ಒಳ್ಳೆ: ನೀರು ಹಾವು; ಓಡಿಸು: ಧಾವಿಸು; ನೆನೆ: ಜ್ಞಾಪಿಸು; ತಪ್ಪು: ಸರಿಯಲ್ಲದು; ಕಣೆ: ಬಾಣ; ಕಡಿ: ಸೀಳು;

ಪದವಿಂಗಡಣೆ:
ಒಳ್ಳಿತೈ +ಕೈಚಳಕವ್+ಆವನಲ್
ಇಲ್ಲ +ಹರಹರ+ ಪರಶುರಾಮನ
ನಲ್ಲಿ +ಮೆಚ್ಚಿಸಿದ್+ಅಂದವ್+ಇನಿತೋ +ಮತ್ತೆ +ಬೇರುಂಟೊ
ಒಳ್ಳೆಗರನೋಡಿಸಿದ+ ಸಹಸವನ್
ಇಲ್ಲಿ +ತೋರಲು +ನೆನೆದಿರೇ+ ತ
ಪ್ಪಲ್ಲ +ತಪ್ಪಲ್ಲೆನುತ +ಕಣೆಗಳ+ ಕಡಿದನಾ +ಪಾರ್ಥ

ಅಚ್ಚರಿ:
(೧) ರೂಪಕದ ಪ್ರಯೋಗ – ಒಳ್ಳೆಗರನೋಡಿಸಿದ ಸಹಸವನಿಲ್ಲಿ ತೋರಲು ನೆನೆದಿರೇ

ಪದ್ಯ ೧೮: ದುರ್ಯೋಧನನ ತಮ್ಮಂದಿರು ಹೇಗೆ ತೋರಿದರು?

ಅಳಲಿದುರಗನ ನೆರವಿ ಟೊಪ್ಪಿಗೆ
ಗಲೆದ ಸಾಳ್ವನ ಹಿಂಡು ಹಸಿದ
ವ್ವಳಿಪ ಸಿಂಹದ ಹಂತಿಕುಪಿತ ಕೃತಾಂತನೊಡ್ಡವಣೆ
ಕೊಲೆಗೆಲಸಕುಬ್ಬೆದ್ದ ರುದ್ರನ
ಬಲವಿದೆನೆ ಹರಹರ ಮಹಾರಥ
ರಳವಿಗೊಟ್ಟಿದೆ ನೋಡು ದುರ್ಯೋಧನ ಸಹೋದರರ (ಭೀಷ್ಮ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸಂಕಟವನ್ನುಂಟುಮಾಡಲು ಸಿದ್ಧವಾಗಿರುವ ಹಾವಿನ ಗುಂಪು, ಬಂಧನ ಬಿಟ ಗಿಡಗಗಳ ಗುಂಪು, ಹಸಿದು ಆಹಾರಕ್ಕಾಗಿ ಹಾತೊರೆಯುತ್ತಿರುವ ಸಿಂಹಗಳ ಸಾಲು, ಕೋಪಗೊಂಡ ಯಮನ ದೂತರು, ಸಂಹಾರ ಕಾರ್ಕಕ್ಕುಜ್ಜುಗಿಸುವ ರುದ್ರನ ಸೈನ್ಯ ಎನ್ನುವಂತೆ ನಿಂತಿರುವ ಶಿವ ಶಿವಾ ಆ ದುರ್ಯೋಧನನ ತಮ್ಮಂದಿರನ್ನು ನೋಡು ಎಂದು ಕೃಷ್ಣನು ತೋರಿಸಿದನು.

ಅರ್ಥ:
ಅಳಲಿಸಿ: ಸಂಕಟಪಡಿಸು; ಉರಗ: ಸರ್ಪ; ನೆರವಿ: ಗುಂಪು; ಟೊಪ್ಪಿಗೆ: ಶಿರಸ್ತ್ರಾಣ; ಸಾಳುವ: ಗಿಡಗ; ಹಿಂಡು: ಗುಂಪು; ಕಳೆ: ಬಿಡು; ಹಸಿವು: ಊಟವಿಲ್ಲದ ಸ್ಥಿತಿ; ಅವ್ವಳಿಸು: ಆರ್ಭಟಿಸು; ಸಿಂಹ: ಕೇಸರಿ; ಹಂತಿ: ಸಾಲು; ಕುಪಿತ: ಕೋಪಗೊಂಡ; ಕೃತಾಂತ: ಯಮ; ಒಡ್ಡವಣೆ: ಗುಂಪು; ಕೊಲೆ: ಸಂಹಾರ; ಕೆಲಸ: ಕಾರ್ಯ; ಉಬ್ಬೇಳು: ಉತ್ಸಾಹದಿಂದ ಏಳು; ರುದ್ರ: ಈಶ್ವರನ ಗಣ; ಬಲ: ಸೈನ್ಯ; ಹರಹರ: ಶಿವ ಶಿವಾ; ಮಹಾರಥ: ಪರಾಕ್ರಮಿ; ಅಳವಿ: ಶಕ್ತಿ; ನೋಡು: ವೀಕ್ಷಿಸು; ಸಹೋದರ: ತಮ್ಮಂದಿರು;

ಪದವಿಂಗಡಣೆ:
ಅಳಲಿದ್+ಉರಗನ +ನೆರವಿ +ಟೊಪ್ಪಿಗೆಗ್
ಅಲೆದ +ಸಾಳ್ವನ +ಹಿಂಡು +ಹಸಿದ್
ಅವ್ವಳಿಪ+ ಸಿಂಹದ +ಹಂತಿ+ಕುಪಿತ +ಕೃತಾಂತನ್+ಒಡ್ಡವಣೆ
ಕೊಲೆಗೆಲಸಲ್+ಉಬ್ಬೆದ್ದ +ರುದ್ರನ
ಬಲವಿದ್+ಎನೆ+ ಹರಹರ+ ಮಹಾರಥರ್
ಅಳವಿಗೊಟ್ಟಿದೆ+ ನೋಡು +ದುರ್ಯೋಧನ +ಸಹೋದರರ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಅಳಲಿದುರಗನ ನೆರವಿ; ಟೊಪ್ಪಿಗೆ ಗಲೆದ ಸಾಳ್ವನ ಹಿಂಡು; ಹಸಿದ
ವ್ವಳಿಪ ಸಿಂಹದ ಹಂತಿ; ಕುಪಿತ ಕೃತಾಂತನೊಡ್ಡವಣೆ; ಕೊಲೆಗೆಲಸಕುಬ್ಬೆದ್ದ ರುದ್ರನ ಬಲವ್

ಪದ್ಯ ೩೦: ಅರ್ಜುನನನ್ನು ಊರ್ವಶಿಯು ಹೇಗೆ ಹಂಗಿಸಿದಳು?

ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತ ವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರಹರಯೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನ ತರ್ಕವನ್ನು ಕೇಳಿ ಕೋಪಗೊಂಡು, ಹೌದಲ್ಲವೇ, ನೀವು ವೇದವಿಹಿತ ಮಾರ್ಗದವರು, ಅಲ್ಲದೆ ಸ್ಮೃತಿಯಲ್ಲಿ ವಿಧಿಸಿದಂತೆ ನಡೆಯುವವರೆಂಬುದನ್ನು ಮೂರು ಲೋಕದ ಜನಗಳೆಲ್ಲರೂ ಅರಿತಿಲ್ಲವೇ, ಐವರು ಒಬ್ಬ ಹೆಂಗಸನ್ನು ಮದುವೆಯಾಗಿರುವರಂತೆ, ಅವರು ನೀವಲ್ಲ ತಾನೆ, ನಮ್ಮನ್ನು ಮಾತ್ರ ಸ್ವಲ್ಪವೂ ಬಯಸದಿರುವವರು ನೀವಲ್ಲವೇ ಶಿವ ಶಿವಾ ಎಂದು ಊರ್ವಶಿ ಅರ್ಜುನನನ್ನು ಹಂಗಿಸಿದಳು.

ಅರ್ಥ:
ಅಹುದು: ಹೌದು; ಶ್ರೌತ: ವೇದಗಳಿಗೆ ಸಂಬಂಧಿಸಿದ; ಪಥ: ಮಾರ್ಗ; ಬಹಿರಿ: ಬಂದಿರಿ; ಸ್ಮಾರ್ತ:ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ; ವಿಧಿ: ನಿಯಮ; ಸನ್ನಿಹಿತ: ಹತ್ತಿರ, ಸಮೀಪ; ಅರಿ: ತಿಳಿ; ಮೂಜಗ: ತ್ರಿಲೋಕ; ಜನ: ಮನುಷ್ಯ; ಮಹಿಳೆ: ನಾರಿ; ಒಡಗೂಡು: ಸೇರು; ನಿಸ್ಪೃಹ: ಆಸೆ ಇಲ್ಲದವ; ಹರ: ಶಿವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಹುದ್+ಅಹುದಲೇ +ಶ್ರೌತ +ಪಥದಲಿ
ಬಹಿರಿ +ನೀವೇ +ಸ್ಮಾರ್ತ +ವಿಧಿ +ಸ
ನ್ನಿಹಿತರ್+ಎಂಬುದನ್+ಅರಿಯದೇ +ಮೂಜಗದ+ ಜನವೆಲ್ಲ
ಮಹಿಳೆ+ಒಬ್ಬಳೊಳ್+ಐವರ್+ಒಡಗೂ
ಡಿಹರು +ನೀವೇನಲ್ಲಲೇ +ನಿ
ಸ್ಪೃಹರು +ನೀವ್ +ನಮ್ಮಲ್ಲಿ+ ಹರಹರ+ಎಂದಳ್+ಇಂದುಮುಖಿ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ – ಮಹಿಳೆಯೊಬ್ಬಳೊಳೈವರೊಡಗೂಡಿಹರು ನೀವೇನಲ್ಲಲೇ

ಪದ್ಯ ೫: ಕೃಷ್ಣನು ಅರ್ಜುನನನ್ನು ಹೇಗೆ ಗದರಿದನು?

ಅಕಟ ಗುರುಹತ್ಯಾ ಮಹಾ ಪಾ
ತಕಕೆ ತಂದೈ ಮನವ ಭರತ
ಪ್ರಕಟಕುಲ ನಿರ್ಮೂಲಕನೆ ನೀನೊಬ್ಬನುದಿಸಿದೆಲ
ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋ
ಲಿಕೆಗೆ ಹರಹರದೇನ ನೆನೆದನೆನುತ್ತ ಗರ್ಜಿಸಿದ (ಕರ್ಣ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಅಯ್ಯೋ ಅರ್ಜುನ ಗುರುಹತ್ಯವೆಂಬ ಮಹಾ ಪಾಪಕ್ಕೆ ಮನಸ್ಸು ಮಾಡಿರುವೆಯೆಲ್ಲಾ! ಭರತವಂಶ ನಿರ್ಮೂಲನಕ್ಕೆ ನೀನೊಬ್ಬ ಹುಟ್ಟಿದೆ, ಕೌರವ ಕುಲದ ರಾಜರಲ್ಲಿ ನಿನ್ನ ಸರಿಹೋಲಿಕೆಗೆ ಪಾಪಾತ್ಮರೊಬ್ಬರನ್ನೂ ನಾನು ಕಾಣಲಿಲ್ಲ. ಶಿವ ಶಿವಾ ಏನು ಮಾಡಬೇಕೆಂದು ಬಯಸಿದೆ ಎಂದು ಕೃಷ್ಣನು ಗರ್ಜಿಸಿದನು.

ಅರ್ಥ:
ಅಕಟ: ಅಯ್ಯೋ; ಗುರು: ಅಚಾರ್ಯ: ಹತ್ಯ: ಕೊಲ್ಲು; ಪಾತಕ: ಪಾಪ; ಮನ: ಮನಸ್ಸು; ಪ್ರಕಟ: ನಿಚ್ಚಳವಾದ; ಕುಲ: ವಂಶ; ನಿರ್ಮೂಲಕ: ನಾಶ; ಉದಿಸು: ಹುಟ್ಟು; ವಿಕಳ: ಭ್ರಾಂತಿ, ನ್ಯೂನತೆ; ನೃಪ: ರಾಜ; ದುರಿತ: ಪಾಪ, ಪಾತಕ; ಹೋಲಿಕೆ: ಸಮಾನ; ನೆನೆ: ಸ್ಮರಿಸು, ವಿಚಾರಿಸು;

ಪದವಿಂಗಡಣೆ:
ಅಕಟ +ಗುರುಹತ್ಯಾ +ಮಹಾ +ಪಾ
ತಕಕೆ +ತಂದೈ +ಮನವ +ಭರತ
ಪ್ರಕಟಕುಲ +ನಿರ್ಮೂಲಕನೆ +ನೀನೊಬ್ಬನ್+ಉದಿಸಿದೆಲ
ವಿಕಳ +ಕುರು+ನೃಪರೊಳಗೆ +ದುರಿತಾ
ತ್ಮಕರ+ ಕಾಣೆನು +ನಿನ್ನ +ಸರಿ+ ಹೋ
ಲಿಕೆಗೆ+ ಹರಹರದ್+ಏನ +ನೆನೆದನೆನುತ್ತ+ ಗರ್ಜಿಸಿದ

ಅಚ್ಚರಿ:
(೧) ಅಕಟ, ಪ್ರಕಟ – ಪ್ರಾಸ ಪದ
(೨) ಬಯ್ಯುವ ಪರಿ – ಗುರುಹತ್ಯಾ ಮಹಾ ಪಾತಕಕೆ ತಂದೈ; ಮನವ ಭರತ
ಪ್ರಕಟಕುಲ ನಿರ್ಮೂಲಕನೆ ನೀನೊಬ್ಬನುದಿಸಿದೆಲ; ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋಲಿಕೆಗೆ

ಪದ್ಯ ೯: ಸಾತ್ಯಕಿಯ ಮೇಲೆ ಹೇಗೆ ಆಕ್ರಮಣ ಮಾಡಿದರು?

ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಿಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸುಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ (ಕರ್ಣ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ತಮ್ಮ ಬಲವು ತಗ್ಗಲು ವಿಂದಾನುವಿಂದರು ಮುಂದೆ ನುಗ್ಗಿ ಸಾತ್ಯಕಿಯನ್ನು ಬಾಣಗಳಿಂದ ಮುಚ್ಚಿದರು. ಆಹಾ ಬಾಣಗಳು ಚೆನ್ನಾಗಿ ಬರುತ್ತಿವೆ, ಶಿವ ಶಿವಾ ರಾಜರಲ್ಲವೇ ಮಹಾ ಸಾಹಸಿಗರಲ್ಲವೇ ನೀವು, ಎಂದು ಸಾತ್ಯಕಿಯು ಬಾಣಗಳನ್ನು ಬಿಟ್ಟನು.

ಅರ್ಥ:
ದೊರೆ: ರಾಜ; ಅವದಿರು: ಅವರು; ಬಲ: ಸೈನ್ಯ; ಸಂವರಣೆ: ಸಜ್ಜು, ಸನ್ನಾಹ; ನೆಗ್ಗು:ಕುಗ್ಗು, ಕುಸಿ; ಹೇವ:ಮಾನ, ಹಗ್; ಹೊಡಕರಿಸು: ಕಾಣಿಸು; ಹೊಕ್ಕು: ಸೇರಿ; ಹೂಳು: ನೆಲದಲ್ಲಿ ಹುದುಗಿಸು; ಅಂಬು: ಬಾಣ; ಸರಳ: ಬಾಣ; ಬರವೊಳು: ಬರುವು, ಆಗಮನ; ಮಹಾದೇವ: ಶಿವ; ಅರಸು: ರಾಜ; ಮಕ್ಕಳು: ಸುತರ್; ವಿರೋಧ: ವೈರತ್ವ; ಹರಹರ: ಶಿವ ಶಿವಾ; ಸಾಹಸಿ: ಪರಾಕ್ರಮಿ; ಅಹುದು: ಹೌದು; ತೆಗೆ: ಹೊರಗೆ ತರು;

ಪದವಿಂಗಡಣೆ:
ದೊರೆಗಳ್+ಅವದಿರು +ತಮ್ಮ +ಬಲ +ಸಂ
ವರಣೆ +ನೆಗ್ಗಿದ+ ಹೇವದಲಿ+ ಹೊಡ
ಕರಿಸಿ +ಹೊಕ್ಕರು +ಹೂಳಿದರು +ಸಾತ್ಯಕಿಯನ್+ಅಂಬಿನಲಿ
ಸರಳ +ಬರವೊಳ್ಳಿತು +ಮಹಾ ದೇವ್
ಅರಸು+ಮಕ್ಕಳಲೇ +ವಿರೋಧವೆ
ಹರಹರ್+ಅತಿಸಾಹಸಿಕರ್+ಅಹುದ್+ಅಹುದೆನುತ+ ತೆಗೆದೆಚ್ಚ

ಅಚ್ಚರಿ:
(೧) ಹ ಕಾರದ ಪದಗಳ ಬಳಕೆ – ಹೇವ, ಹೊಡಕರಿಸು, ಹೂಳು, ಹರಹರ
(೨) ಅಂಬು, ಸರಳ – ಸಮನಾರ್ಥಕ ಪದ