ಪದ್ಯ ೨೧: ಯಾವ ಶಕುನಗಳನ್ನು ಭೀಮನು ಕಂಡನು?

ಹೆಸರ ನಾಯ್ಗಳ ಹಾಸ ಹರಿದು
ಬ್ಬಸದ ಲುಳಿಗದವರ್ದಿರ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹೆದೆಯ ಹರಿವಿನಲಿ
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳೇನನೆಂಬೆನು ಶಕುನ ಸೂಚಕವ (ಅರಣ್ಯ ಪರ್ವ, ೧೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಬೇಟೆಗೆ ಬಹು ಪ್ರಸಿದ್ಧವೂ ಪ್ರಶಸ್ತವೂ ಆದ ನಾಯಿಗಳ ಸಾಲಿನ ನಡುವೆ ಬೇಟೆಗೆ ಬಳಸುವ ಸಾಕು ಪ್ರಾಣಿಗಳು ನುಗ್ಗಿದವು. ಬೇಟೆಗೆ ಹದಗೊಳಿಸಿದ್ದ ಬಿಲ್ಲುಗಳ ಹೆದೆಗಳು ಹರಿದು ಹೋದವು. ಮೊಲಗಳು ಮೇಲೆ ಬಂದವು, ಉರಿ ಹೊಗೆಗಳು ಕಂಡವು, ಹಸುಬ ಹರಡೆಗಳು ಆ ದಿಕ್ಕಿಗೆ ಹಾರಿದವು. ಅಶುಭಸೂಚಕಗಳನ್ನು ನಾನೇನೆಂದು ಹೇಳಲಿ.

ಅರ್ಥ:
ಹೆಸರ: ಪ್ರಸಿದ್ಧ; ನಾಯಿ: ಶ್ವಾನ; ಹಾಸ: ಬಂಧನ, ಹಗ್ಗ; ಹರಿ: ಓಡು, ಧಾವಿಸು, ಪ್ರವಹಿಸು; ಉಬ್ಬಸ: ಕಷ್ಟ, ಸಂಕಟ; ಲುಳಿ: ರಭಸ; ಹಿಡಿ: ಬಂಧಿಸು; ಮೃಗ: ಪ್ರಾಣಿ; ಮಸಗು: ಹರಡು; ಹದ: ಸರಿಯಾದ ಸ್ಥಿತಿ; ಒದೆ: ತುಳಿ, ಮೆಟ್ಟು, ತಳ್ಳು; ಹೆದೆ: ಬಿಲ್ಲಿಗೆ ಹೂಡುವ ಬಾಣಕ್ಕೆ ಆಧಾರವಾದ ಸೂತ್ರ; ಹರಿವು: ದಾಳಿ, ಮುತ್ತಿಗೆ; ನುಸುಳು: ತೂರುವಿಕೆ; ಉರಿ:ಸಂಕಟ; ಹೊಗೆ: ಧೂಮ; ದೆಸೆ: ದಿಕ್ಕು; ಕೆದರು: ಹರಡು; ಹೊಲ: ಬೆಳೆ ಬೆಳೆಯುವ ಭೂಮಿ; ಹಸುಬ: ಒಂದು ಬಗೆಯ ಹಕ್ಕಿ; ಹರಡೆ: ಶಕುನದ ಹಕ್ಕಿ, ಹಾಲಕ್ಕಿ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ, ಹಕ್ಕಿ; ಸೂಚಕ: ತೋರಿಸು;

ಪದವಿಂಗಡಣೆ:
ಹೆಸರ+ ನಾಯ್ಗಳ +ಹಾಸ +ಹರಿದ್
ಉಬ್ಬಸದ +ಲುಳಿಗದ್+ಅವದಿರ +ಹಿಡಿ+ಮೃಗ
ಮಸಗಿದವು +ಹದವಿಲುಗಳ್+ಒದೆದವು +ಹೆದೆಯ +ಹರಿವಿನಲಿ
ನುಸುಳಿದವು +ಮೊಲನ್+ಉರಿಯ +ಹೊಗೆಗಳ
ದೆಸೆವಿಡಿದು +ಕೆದರಿದವು +ಹೊಲದಲಿ
ಹಸುಬ +ಹರಡೆಗಳ್+ಏನನೆಂಬೆನು +ಶಕುನ +ಸೂಚಕವ

ಅಚ್ಚರಿ:
(೧) ಹ ಕಾರದ ಸಾಲು ಪದಗಳು – ಹೊಲದಲಿ ಹಸುಬ ಹರಡೆಗಳ್, ಹೆದೆಯ ಹರಿವಿನಲಿ

ಪದ್ಯ ೩೩: ಯಾವ ಶಕುನಗಳನ್ನು ನೋಡುತ್ತಾ ಅರ್ಜುನನು ನಡೆದನು?

ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತವಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜ ನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ (ಅರಣ್ಯ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ನೀರು ಹಕ್ಕಿಯ, ಹಸುಬಗಳ ಎಡದಲ್ಲಿ ಸುಹಕುನದ ಸದ್ದು ಮಾಡಿದವು. ಜಿಂಕೆ, ಭಾರದ್ವಾಜ ಪಕ್ಷಿಗಳು ದಾರಿಕೊಟ್ಟವು. ಮುಂಗುಸಿ, ಓತಿಕೇತಗಳು ದಾರಿಯನ್ನು ತಿದ್ದಿಕೊಟ್ಟವು. ನಾಯಿಯು ಅನುಕೂಲ ಶಕುನವನ್ನು ತೋರಿತು. ಸೂರ್ಯೋದಯ ಸಮಯದಲ್ಲಿ ಶುಭಶಕುನಗಳನ್ನು ನೋಡುತ್ತಾ ಅರ್ಜುನನು ಇಂದ್ರಕೀಲ ಪರ್ವತದತ್ತ ಪ್ರಯಾಣ ಬೆಳಸಿದನು.

ಅರ್ಥ:
ಹರಡೆ: ನೀರುಹಕ್ಕಿಯ ಜಾತಿ, ಪ್ರಸರಿಸು; ವಾಮ: ಎಡಭಾಗ; ಉಲಿ:ಧ್ವನಿ, ಕೂಗು; ಮಧುರ: ಇಂಪು; ಸ್ವರ: ನಾದ; ಅಪಸವ್ಯ: ಬಲಗಡೆ; ಹಸುಬ: ಹಕ್ಕಿಯ ಜಾತಿ; ಸರ: ಉಲಿ, ಧ್ವನಿ; ಸಮಾಹಿತ: ಜೊತೆ; ಸೂರ್ಯ: ಭಾನು; ಉದಯ: ಹುಟ್ಟು; ಸಮಯ: ಕಾಲ; ಹರಿಣ: ಜಿಂಕೆ; ಭಾರದ್ವಾಜ: ಪಕ್ಷಿಯ ಜಾತಿ; ನುಡಿ: ಮಾತು; ಸರಟ: ಓತಿಕೇತ, ಊಸರವಳ್ಳಿ; ನಕುಲ: ಮುಂಗುಲಿ, ಮುಂಗಸಿ; ತಿದ್ದು: ಸರಿಪಡಿಸು; ಕುಕ್ಕುರ: ನಾಯಿ, ಶ್ವಾನ; ತಾಳು: ಹೊಂದಿಕೆಯಾಗು; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಕೈಕೊಳುತ: ನಿರ್ವಹಿಸು; ನಡೆ: ಚಲಿಸು;

ಪದವಿಂಗಡಣೆ:
ಹರಡೆ +ವಾಮದೊಳ್+ಉಲಿಯೆ +ಮಧುರ
ಸ್ವರದಲ್+ಅಪಸವ್ಯದಲಿ +ಹಸುಬನ
ಸರ +ಸಮಾಹಿತವಾಗೆ +ಸೂರ್ಯೋದಯದ +ಸಮಯದಲಿ
ಹರಿಣ +ಭಾರದ್ವಾಜ +ನುಡಿಕೆಯ
ಸರಟ+ ನಕುಲನ +ತಿದ್ದುಗಳ+ ಕು
ಕ್ಕುರನ +ತಾಳಿನ+ ಶಕುನವನು +ಕೈಕೊಳುತ +ನಡೆತಂದ

ಅಚ್ಚರಿ:
(೧) ಹರಡೆ, ಹಸುಬ, ಭಾರದ್ವಾಜ – ಪಕ್ಷಿಗಳ ಬಗೆ
(೨) ಉಲಿ, ಸ್ವರ, ಸರ – ಸಾಮ್ಯಾರ್ಥ ಪದಗಳು

ಪದ್ಯ ೨: ಯಾವ ಅಪಶಕುನಗಳು ಪಾಂಡವರನ್ನು ಎದುರಾದವು?

ಹರಡೆ ಕೆದರಿತು ಬಲದ ಉದಯದ
ಲುರಿಯಲೊದರಿತು ಹಸುಬನೆಡದಲಿ
ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ
ನರಿಗಳೊದರಿದವಿದಿರಿನಲಿ ಮೋ
ಹರವ ಮೊಲನಡಹಾಯ್ದವಾನೆಗ
ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ (ಸಭಾ ಪರ್ವ, ೧೪ ಸಂಧಿ, ೨ ಪದ್ಯ)

ತಾತ್ಪರ್ಯ:
ಪಾಂಡವರ ಪಯಣದಲ್ಲಿ ಅವರಿಗೆ ಹಲವಾರು ಅಪಶಕುನಗಳು ಎದುರಾದವು. ಹಾಲಕ್ಕಿ ಬಲದಲ್ಲೂ, ಹಸುಬವು ಸೂರ್ಯೋದಯದ ಸಮಯಕ್ಕೆ ಉರಿಯಲ್ಲಿ ಚೀರಿಕೊಂಡಿತು. ಕಾಗೆಯು ಎಡಕ್ಕೂ ಹಂಗವು ಬಲಕ್ಕೂ ಹಾರಿದವು. ಸೈನ್ಯದ ಇದಿರಲ್ಲೇ ನರಿಗಳು ಅರಚಿದವು. ಮೊಲಗಳು ಸೈನ್ಯವನ್ನು ತಡೆದವು. ಆನೆಗಳು ಘೀಳಿಟ್ತು ಬಿದ್ದವು. ರಥಕ್ಕೆ ಕಟ್ಟಿದ ಕುದುರೆಗಳು ಮುಗ್ಗುರಿಸಿದವು.

ಅರ್ಥ:
ಹರಡೆ: ಶಕುನದ ಹಕ್ಕಿ, ಹಾಲಕ್ಕಿ; ಕೆದರು: ಹರಡು, ಚದರಿಸು, ಬೆದಕು; ಉದಯ: ಹುಟ್ಟ; ಉರಿ: ಸಂಕಟ; ಒದರು: ಚೀರು; ಹಸುಬ: ಹಾರೀತವೆಂಬ ಹಕ್ಕಿ; ಎಡ: ವಾಮಭಾಗ; ಕರಿಯ ಹಕ್ಕಿ: ಕಾಗೆ; ಹಕ್ಕಿ: ಪಕ್ಷಿ; ವಾಮ: ಎಡ; ಒದರು: ಚೀರು; ಇದಿರು: ಎದುರು; ಮೋಹರ: ಸೈನ್ಯ; ಅಡಹಾಯ್ದು: ಅಡ್ಡ ಹಾಕು; ಆನೆ: ಕರಿ, ಇಭ; ಅರಚು: ಕೂಗು; ಕೆಡೆ: ಬೀಳು; ಮುಗ್ಗು: ಮುಗ್ಗುರಿಸು; ರಥ: ಬಂಡಿ; ವಾಜಿ: ಕುದುರೆ; ನೃಪ: ರಾಜ; ತಾರು: ಒಣಗು, ಗುಂಪು; ಹಂಗ: ಶಕುನದ ಹಕ್ಕಿ;

ಪದವಿಂಗಡಣೆ:
ಹರಡೆ+ ಕೆದರಿತು +ಬಲದ +ಉದಯದಲ್
ಉರಿಯಲ್+ಒದರಿತು +ಹಸುಬನ್+ಎಡದಲಿ
ಕರಿಯ +ಹಕ್ಕಿಯ +ತಾರುಹಂಗನ+ ವಾಮ+ದುಡಿಕೆಗಳ
ನರಿಗಳ್+ಒದರಿದವ್+ಇದಿರಿನಲಿ+ ಮೋ
ಹರವ +ಮೊಲನ್+ಅಡಹಾಯ್ದವ್+ಆನೆಗಳ್
ಅರಚಿ +ಕೆಡೆದವು +ಮುಗ್ಗಿದವು +ರಥ+ವಾಜಿಗಳು +ನೃಪರ

ಅಚ್ಚರಿ:
(೧) ಪಕ್ಷಿಗಳ ಹೆಸರು – ಹರಡೆ, ಹಸುಬ, ಕರಿಯ ಹಕ್ಕಿ, ಹಂಗ
(೨) ಕಾಗೆಯನ್ನು ಕರಿಯ ಹಕ್ಕಿ ಎಂದು ಕರೆದ ಬಗೆ
(೩) ಒದರು, ಅರಚು – ಸಾಮ್ಯಾರ್ಥ ಪದ