ಪದ್ಯ ೩೫: ಕೌರವನನ್ನು ಕಂಡ ಪಾಂಡವರ ಸ್ಥಿತಿ ಹೇಗಾಯಿತು?

ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ (ಗದಾ ಪರ್ವ, ೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನನ್ನು ಕಂಡು ಧರ್ಮಜನ ಮುಖವರಳಿತು, ಭೀಮನಿಗೆ ಹರ್ಷವುಕ್ಕಿತು, ಅರ್ಜುನ, ನಕುಲ, ಸಹದೇವರು ಅತೀವ ಸಂತಸಗೊಂಡರು. ಉಪಪಾಂಡವರು, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿಗಳು ಹರಕೆ ಕಟ್ಟಿಕೋಂಡಕ್ಕೆ ದೇವತೆಗಳು ವರವನ್ನು ಕೊಟ್ಟರು ಎಂದುಕೊಂಡರು.

ಅರ್ಥ:
ಅರಳು: ವಿಕಸಿಸು; ಅರಸ: ರಾಜ; ವದನ: ಮುಖ; ಹರುಷ: ಸಮ್ತಸ; ಉಕ್ಕು: ಹೆಚ್ಚಾಗು; ಉಬ್ಬು: ಹಿಗ್ಗು; ಉರು: ಎದೆ; ಮುದ: ಸಂತಸ; ಉಬ್ಬರಿಸು: ಉತ್ಸಾಹಿತನಾಗು; ಹರಕೆ: ಮೀಸಲು, ಮುಡಿಪು, ಸಂಕಲ್ಪ; ದೈವ: ಭಗವಂತ; ವರ: ಆಶೀರ್ವಾದ; ಸುತ: ಮಗ; ಒಲವು: ಪ್ರೀತಿ; ಉರೆ: ಅತಿಶಯವಾಗಿ; ಉರು: ವಿಶೇಷವಾದ;

ಪದವಿಂಗಡಣೆ:
ಅರಳಿತ್+ಅರಸನ+ ವದನ+ ಭೀಮನ
ಹರುಷವ್+ಉಕ್ಕಿತು +ಪಾರ್ಥನ್+ಉಬ್ಬಿದನ್
ಉರು+ಮುದದಿನ್+ಉರೆ+ ನಕುಲನ್+ಉಬ್ಬರಿಸಿದನು+ ಸಹದೇವ
ಹರಕೆಯಲಿ +ದೈವಂಗಳ್+ಇತ್ತವು
ವರವನೆಂದರು +ದ್ರೌಪದೀಸುತರ್
ಉರು +ಶಿಖಂಡಿ +ದ್ರುಪದಸುತ +ಸಾತ್ಯಕಿಗಳ್+ಒಲವಿನಲಿ

ಅಚ್ಚರಿ:
(೧) ಉಬ್ಬು, ಉರು, ಉರೆ, ಉಬ್ಬರಿಸು – ಪದಗಳ ಬಳಕೆ
(೨) ಸಂತೋಷಗೊಂಡನು ಎಂದು ಹೇಳಲು – ಅರಳಿತರಸನ ವದನ

ಪದ್ಯ ೪೪: ದುರ್ಯೋಧನನು ಅರಮನೆಯಿಂದ ಹೇಗೆ ಹೊರಬಂದನು?

ವೀರ ಧೃತರಾಷ್ಟ್ರಂಗೆ ವರ ಗಾಂ
ಧಾರಿಗೆರಗಿದನವರ ಹರಕೆಯ
ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ
ಚಾರುಚಮರದ ನಿಕರದವರೊ
ಯ್ಯಾರಿಸಲು ಜಯರವದ ರಭಸದು
ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ (ಭೀಷ್ಮ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಧೃತರಾಷ್ಟ್ರ ಗಾಂಧಾರಿಗೆ ನಮಸ್ಕರಿಸಿ, ದುರ್ಯೋಧನನು ಅವರ ಆಶೀರ್ವಾದವನ್ನು ಸ್ವೀಕರಿಸಿದನು. ಬ್ರಾಹ್ಮಣರಿಗೆ ನಮಸ್ಕರಿಸಿ ಛತ್ರ ಚಾಮರಧಾರಿಗಳ ಜೊತೆಗೆ ಅವನು ಪ್ರಯಾಣ ಮಾಡಲು, ಎಲ್ಲೆಡೆ ಜಯಕಾರಗಳು ಕೇಳಿ ಬಂದವು.

ಅರ್ಥ:
ವೀರ: ಶೂರ, ಪರಾಕ್ರಮಿ; ವರ: ಶ್ರೇಷ್ಠ; ಎರಗು: ನಮಸ್ಕರಿಸು; ಹರಕೆ: ಆಶೀರ್ವಾದ; ಭೂರಿ: ಹೆಚ್ಚು, ಅಧಿಕ; ಅವನೀಸುರ: ಬ್ರಾಹ್ಮಣ; ಅವನೀ: ಭೂಮಿ; ಸುರ: ದೇವತೆ; ಅಭಿನಮಿಸು: ನಮಸ್ಕರಿಸು; ಚಾರು: ಸುಂದರ; ಚಮರ: ಚಾಮರ; ನಿಕರ: ಗುಂಪು; ಒಯ್ಯಾರ: ಬೆಡಗು, ಬಿನ್ನಾಣ; ಜಯ: ಗೆಲುವು; ರವ: ಶಬ್ದ; ರಭಸ: ವೇಗ; ಉದಾರ: ಧಾರಾಳ ಸ್ವಭಾವದ; ಮೆರೆ: ಹೊಳೆ, ಪ್ರಕಾಶಿಸು; ಬೀಳುಕೊಡು: ತೆರಳು; ರಾಜಮಂದಿರ: ಅರಮನೆ;

ಪದವಿಂಗಡಣೆ:
ವೀರ +ಧೃತರಾಷ್ಟ್ರಂಗೆ +ವರ +ಗಾಂ
ಧಾರಿಗ್+ಎರಗಿದನ್+ಅವರ+ ಹರಕೆಯ
ಭೂರಿಗಳ+ ಕೈಕೊಂಡನ್+ಅವನೀಸುರರಿಗ್+ಅಭಿನಮಿಸಿ
ಚಾರು+ಚಮರದ+ ನಿಕರದವರ್
ಒಯ್ಯಾರಿಸಲು+ ಜಯರವದ+ ರಭಸದ್
ಉದಾರ +ಮೆರೆಯಲು +ಬೀಳುಕೊಂಡನು +ರಾಜಮಂದಿರವ

ಅಚ್ಚರಿ:
(೧) ಎರಗು, ಅಭಿನಮಿಸು – ಸಮನಾರ್ಥಕ ಪದ