ಪದ್ಯ ೨೯: ಸಾತ್ಯಕಿಯು ಭೀಮನಲ್ಲಿ ಏನು ಹೇಳಿದನು?

ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ (ದ್ರೋಣ ಪರ್ವ, ೧೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತಪ್ಪಿಸಿಕೊಳ್ಳಲು ಯತ್ನಿಸಿದನು ಭೀಮನು ಅವನನ್ನು ಮತ್ತೆ ಅವಚಿದನು. ಸಾತ್ಯಕಿಯು, ಭೀಂಅ ದೊರೆಯಾಣೆ ನನ್ನನ್ನು ಬಿಡು, ಆ ನೀಚನ ರಕ್ತವನ್ನು ಕುಡಿಯುತ್ತೇನೆ ಎಂದನು. ಧೃಷ್ಟದ್ಯುಮ್ನನು ಭೀಮಾ ಬಿಟ್ಟುಬಿಡು, ಸಾತ್ಯಕಿ ಮಿಸುಕಾಡುತ್ತಿದ್ದಾನೆ ಅವನನ್ನು ಬಿಡು, ನನ್ನೊಡನೆ ಯುದ್ಧಮಾಡಿ ನೋಡಲಿ ಎಂದನು.

ಅರ್ಥ:
ಮಿಡುಕು: ಅಲುಗಾಟ; ಒಡೆಯ: ನಾಯಕ; ಅವಚು: ಆವರಿಸು, ಅಪ್ಪಿಕೊಳ್ಳು; ಪವನಜ: ಭೀಮ; ಬಿಡು: ತೊರೆ; ನೃಪ: ರಾಜ; ಆಣೆ: ಪ್ರಮಾಣ; ಕುಡಿ: ಪಾನಮಾದು; ಖಳ: ದುಷ್ಟ; ಶೋಣಿತ: ರಕ್ತ; ಅಕಟ: ಅಯ್ಯೋ; ಹಿಡಿ: ಗ್ರಹಿಸು; ಹಮ್ಮೈಸು: ಎಚ್ಚರ ತಪ್ಪು, ಮೂರ್ಛೆ ಹೋಗು; ತೊಡಕು: ಸಿಕ್ಕು, ಗೋಜು; ಅಳ್ಳಿರಿ: ನಡುಗಿಸು, ಚುಚ್ಚು;

ಪದವಿಂಗಡಣೆ:
ಮಿಡುಕಿದನು +ಸಾತ್ಯಕಿ +ವೃಕೋದರ
ನೊಡೆ+ಅವಚಿದನು +ಮತ್ತೆ +ಪವನಜ
ಬಿಡು +ನಿನಗೆ +ನೃಪನಾಣೆ+ ಕುಡಿವೆನು+ ಖಳನ +ಶೋಣಿತವ
ಬಿಡು +ಬಿಡ್+ಅಕಟಾ +ಭೀಮ +ಸಾತ್ಯಕಿ
ಹಿಡಿಹಿಡಿಯ+ ಹಮ್ಮೈಸುವನು+ ಬಿಡು
ತೊಡಕಿ +ನೋಡಲಿ+ಎನುತ +ಧೃಷ್ಟದ್ಯುಮ್ನನ್+ಅಳ್ಳಿರಿದ

ಅಚ್ಚರಿ:
(೧) ವೃಕೋದರ, ಪವನಜ, ಭೀಮ – ಭೀಮನನ್ನು ಕರೆದ ಪರಿ
(೨) ಬಿಡು ಬಿಡಕಟಾ, ಹಿಡಿಹಿಡಿ – ಜೋಡಿ ಪದಗಳ ಬಳಕೆ

ಪದ್ಯ ೫೯: ದ್ರೋಣನು ಯಾರನ್ನು ನೋಡಲು ಇಚ್ಛಿಸಿದನು?

ಆಳುತನವುಳ್ಳವರ ಕರೆ ಪಾಂ
ಚಾಲರೊಳ್ಳೆಗರವದಿರಂಬಿನ
ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು
ಖೂಳರಿವರಂತಿರಲಿ ದೊರೆ ಕ
ಟ್ಟಾಳಹನು ಕರೆ ಧರ್ಮಪುತ್ರನ
ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ (ದ್ರೋಣ ಪರ್ವ, ೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ದ್ರೋಣನು ಎಲೋ ಸೈನಿಕರೇ, ಗಂಡುತನವುಳ್ಳವರನ್ನು ಯುದ್ಧಕ್ಕೆ ಕರೆಯಿರಿ, ಪಾಂಚಾಲರು ನೀರುಹಾವಿನಂತಹವರು. ಬಾಣವು ಕಣ್ಣಿಗೆ ಕಣುವ ಮೊದಲೇ ನರಳಲಾರಂಭಿಸುತ್ತಾ ಓಡುತ್ತಾರೆ. ಈ ಕ್ಷುದ್ರರ ಸುದ್ದಿಯೇನು, ಪರಾಕ್ರಮಿಯಾದ ಧರ್ಮಜನನ್ನು ನೋಡಬೇಕು ಎಂದು ಮುನ್ನುಗ್ಗಿದನು.

ಅರ್ಥ:
ಆಳುತನ: ಪರಾಕ್ರಮ; ಕರೆ: ಬರೆಮಾಡು; ಒಳ್ಳೆ: ನೀರು ಹಾವು; ಅಂಬು: ಬಾಣ; ಕೋಲ: ಬಾಣದ ತುದಿ, ಹಿಂಭಾಗ; ಕಾಣು: ತೋರು; ಮುನ್ನ: ಮೊದಲು; ಹಮ್ಮೈಸು: ಗರ್ವಿಸು; ಹುರಿ: ಕಾಯಿಸು; ಖೂಳ: ದುಷ್ಟ; ದೊರೆ: ರಾಜ; ಕಟ್ಟಾಳು: ಪರಾಕ್ರಮಿ; ಕರೆ: ಬರೆಮಾಡು; ತೋಳ: ಭುಜ; ಬಲುಹು: ಶಕ್ತಿ; ನೋಡು: ವೀಕ್ಷಿಸು; ಉರುಬು: ಹೇಳು;

ಪದವಿಂಗಡಣೆ:
ಆಳುತನವುಳ್ಳವರ +ಕರೆ +ಪಾಂ
ಚಾಲರ್+ಒಳ್ಳೆಗರ್+ಅವದಿರ್+ಅಂಬಿನ
ಕೋಲ +ಕಾಣದ +ಮುನ್ನ +ಹಮ್ಮೈಸುವರು+ ಹುರಿಯೊಡೆದು
ಖೂಳರ್+ಇವರಂತಿರಲಿ+ ದೊರೆ+ ಕ
ಟ್ಟಾಳಹನು+ ಕರೆ +ಧರ್ಮಪುತ್ರನ
ತೋಳ +ಬಲುಹನು +ನೋಡಬೇಕೆಂದ್+ಉರುಬಿದನು +ದ್ರೋಣ

ಅಚ್ಚರಿ:
(೧) ಪಾಂಚಾಲರು ನಿಶ್ಯಕ್ತರು ಎಂದು ಹೇಳುವ ಪರಿ – ಪಾಂಚಾಲರೊಳ್ಳೆಗರ್
(೨) ಆಳುತನವುಳ್ಲವರ ಕರೆ, ಕರೆ ಧರ್ಮಪುತ್ರನ – ಕರೆ ಪದದ ಬಳಕೆ