ಪದ್ಯ ೫೮: ರಾವುತರು ಹೇಗೆ ಆವರಿಸಿದರು?

ಹಿಡಿಯೆ ಜವನಿಕೆ ಸಮರ ಮೋನದ
ಬಿಡುದಲೆಯ ಬಿರುದಾವಳಿಯಲು
ಗ್ಗಡಣೆಗಳ ಸೋಲಿಸುತ ತಮ್ಮನ್ವಯವ ಪಾಲಿಸುತ
ಝಡಿವ ದೂಹತ್ತಿಗಳ ಹಾಯಿಕಿ
ಹಿಡಿವ ಲೌಡಿಯ ಹತ್ತಳದ ತನಿ
ಗಡಣಿಗರು ಮೂದಲಿಸಿ ಕವಿದುದು ರಾಯರಾವುತರು (ಭೀಷ್ಮ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸಮರದಲ್ಲಿ ಅದುವರೆಗೆ ಹಿಡಿದಿದ್ದ ಮೌನದ ತೆರೆಯನ್ನು ಸರಿಸಿ ಬಿರುದಾವಳಿಗಳು ಉಗ್ಗಡಿಸುತ್ತಿರಲು, ತಮ್ಮ ವಂಶದ ಕ್ರಮವನ್ನು ಪಾಲಿಸಿ, ದೂಹತ್ತಿ, ಲೌಡಿ ಮೊದಲಾದ ಆಯುಧಗಳನ್ನು ಲಗಾಮನ್ನು ಹಿಡಿದು ಶತ್ರುಗಳನ್ನು ಮೂದಲಿಸುತ್ತಾ ರಾವುತರು ಆವರಿಸಿದರು.

ಅರ್ಥ:
ಹಿಡಿ: ಬಂಧಿಸು; ಜವನಿಕೆ: ಪರದೆ; ಸಮರ: ಯುದ್ಧ; ಮೋನ: ಚೂಪಾದ; ಬಿಡುದಲೆ: ಬಿರಿಹೋಯ್ದ ಕೂದಲಿನ ತಲೆ; ಬಿರುದವಳಿ: ಗೌರವಸೂಚಕ ಹೆಸರು; ಉಗ್ಗಡಣೆ: ಉದ್ಘೋಷಣೆ, ಕೂಗು; ಸೋಲು: ಪರಾಭವ; ಅನ್ವಯ: ವಂಶ; ಪಾಲಿಸು: ನಡೆಸು; ಝಡಿಕೆ: ಅವಸರ; ದೂಹತ್ತಿ: ಎರಡು ಕಡೆ ಚೂಪಾದ ಹತ್ತಿ;
ಹಾಯ್ಕು: ತಿವಿ; ಹಿಡಿ: ಬಂಧಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಹತ್ತಳ:ಚಾವಟಿ, ಬಾರುಗೋಲು; ಗಡಣ: ಗುಂಪು; ಮೂದಲಿಸು: ಹಂಗಿಸು; ಕವಿ: ಆವರಿಸು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಹಿಡಿಯೆ +ಜವನಿಕೆ +ಸಮರ +ಮೋನದ
ಬಿಡುದಲೆಯ +ಬಿರುದಾವಳಿಯಲ್
ಉಗ್ಗಡಣೆಗಳ +ಸೋಲಿಸುತ +ತಮ್ಮ್+ಅನ್ವಯವ +ಪಾಲಿಸುತ
ಝಡಿವ +ದೂಹತ್ತಿಗಳ +ಹಾಯಿಕಿ
ಹಿಡಿವ +ಲೌಡಿಯ +ಹತ್ತಳದ+ ತನಿ
ಗಡಣಿಗರು +ಮೂದಲಿಸಿ+ ಕವಿದುದು +ರಾಯ+ರಾವುತರು

ಅಚ್ಚರಿ:
(೧) ದೂಹತ್ತಿ, ಲೌಡಿ, ಹತ್ತಳ – ಆಯುಧಗಳ ಹೆಸರು