ಪದ್ಯ ೩೩: ಮೈತ್ರೇಯ ಮುನಿಗಳು ಕೌರವನಿಗೆ ಯಾವ ಶಾಪ ನೀಡಿದ್ದರು?

ಎಣಿಸಬಹುದೇ ನಿಮ್ಮ ನೃಪನವ
ಗುಣವನನ್ಯಾಯ ಪ್ರಬಂಧಕೆ
ಗಣನೆಯುಂಟೇ ಭೀಮಗಡ ಖಂಡಿಸಿದ ತೊಡೆಗಳನು
ಕೆಣಕಿದನು ಮೈತ್ರೇಯನನು ನೃಪ
ನಣಕಿಸಲು ಶಪಿಸಿದನು ತೊಡೆಗಳ
ಹಣಿದವಾಡಲಿಯೆಂದನದು ತಪ್ಪುವುದೆ ಋಷಿವಚನ (ಗದಾ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕೌರವನ ಅವಗುಣ ಒಂದೇ ಎರಡೇ ಅವು ಎಣಿಸಲಾರದಷ್ಟಿವೆ. ಭೀಮ ತೊಡೆಗಳನ್ನು ಮುರಿದ ತಾನೆ? ಕೌರವನು ಮೈತ್ರೇಯನನ್ನು ಅಣಕಿಸಿದಾಗ ಅವನು “ನಿನ್ನ ತೊಡೆಗಳು ಮುರಿದುಬೀಳಲಿ” ಎಂದು ಶಪಿಸಿದ್ದನ್ನು ಮರೆತೆಯಾ? ಋಷಿವಾಕ್ಯವು ತಪ್ಪಾಗಲು ಸಾಧ್ಯವೇ ಎಂದು ಪ್ರಶ್ನಿಸಿದನು.

ಅರ್ಥ:
ಎಣಿಸು: ಲೆಕ್ಕಹಾಕು; ನೃಪ: ರಾಜ; ಅವಗುಣ: ಕೆಟ್ಟ ನಡತೆ; ಪ್ರಬಂಧ: ಬಾಂಧವ್ಯ, ಕಟ್ಟು, ವ್ಯವಸ್ಥೆ; ಗಣನೆ:ಲೆಕ್ಕ; ಗಡ: ಅಲ್ಲವೆ, ತ್ವರಿತವಾಗಿ; ಖಂಡಿಸು: ಕಡಿ, ಕತ್ತರಿಸು; ತೊಡೆ: ಜಂಘೆ; ಕೆಣಕು: ರೇಗಿಸು; ಅಣಕಿಸು: ಹಂಗಿಸು; ಶಪಿಸು: ನಿಂದಿಸು, ತೆಗಳು; ಹಣಿ: ಬಾಗು, ಮಣಿ; ತಪ್ಪುವುದೆ: ನಡೆಯದೇ ಇರುವುದೆ; ವಚನ: ಮಾತು;

ಪದವಿಂಗಡಣೆ:
ಎಣಿಸಬಹುದೇ+ ನಿಮ್ಮ+ ನೃಪನ್+ಅವ
ಗುಣವನ್+ಅನ್ಯಾಯ +ಪ್ರಬಂಧಕೆ
ಗಣನೆಯುಂಟೇ +ಭೀಮಗಡ+ ಖಂಡಿಸಿದ +ತೊಡೆಗಳನು
ಕೆಣಕಿದನು+ ಮೈತ್ರೇಯನನು +ನೃಪನ್
ಅಣಕಿಸಲು +ಶಪಿಸಿದನು +ತೊಡೆಗಳ
ಹಣಿದವಾಡಲಿ+ಎಂದನ್+ಅದು +ತಪ್ಪುವುದೆ +ಋಷಿವಚನ

ಅಚ್ಚರಿ:
(೧) ಎಣಿಸಬಹುದೇ, ಗಣನೆಯುಂಟೆ – ಸಾಮ್ಯಾರ್ಥ ಪದ

ಪದ್ಯ ೪೭: ದುರ್ಯೊಧನನನ್ನು ಸೈನಿಕರು ಹೇಗೆ ಹುಡುಕಿದರು?

ಹೆಣನ ಬಗಿದರಸಿದರು ಕರಿಗಳ
ಹಣಿದದಲಿ ನೋಡಿದರು ರಥಸಂ
ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ
ಹಣುಗಿದರು ಭಗದತ್ತನಾನೆಯ
ನಣೆದುನೋಡಿದರರುಣವಾರಿಯ
ಕೆಣಕಿ ಕೊಡರಸಿದರು ಚಾರರು ಕಳನ ಚೌಕದಲಿ (ಗದಾ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೂತರು ರಣರಂಗದಲ್ಲಿ ಹೆಣಗಳನ್ನು ಕಿತ್ತೆಸೆದು ಹುಡುಕಿದರು. ಆನೆಗಳ ಹೆಣಗಳ ನಡುವೆ, ಭೀಷ್ಮನ ಸರಳ ಮಂಚದಡಿಯಲ್ಲಿ ಭಗದತ್ತನ ಆನೆಯ ಹಿಂದೆ, ಮುಂದೆ ರಕ್ತದ ಮಡುಗಳ ನಡುವೆ ದೂತರು ದುರ್ಯೋಧನನನ್ನು ಹುಡುಕಿದರು.

ಅರ್ಥ:
ಹೆಣ: ಜೀವವಿಲ್ಲದ ಶರೀರ; ಬಗಿ: ಸೀಳು; ಅರಸು: ಹುಡುಕು; ಕರಿ: ಆನೆ; ಹಣಿ: ಬಾಗು, ಮಣಿ, ತುಂಡುಮಾಡು; ನೋಡು: ವೀಕ್ಷಿಸು; ರಥ: ಬಂಡಿ; ಸಂದಣಿ: ಗುಂಪು, ಸಮೂಹ; ಕೆದರು: ಹರಡು; ಸರಳ: ಬಾಣ; ಮಂಚ: ಪಲ್ಲಂಗ; ಹಣುಗು: ಹಿಂಜರಿ; ಅಣೆ: ಹೊಡೆ; ಅರುಣವಾರಿ: ರಕ್ತ, ಕೆಂಪುನೀರು; ಕೆಣಕು: ಕೆದಕು, ಪ್ರಚೋದಿಸು; ಅಸಿ: ಈಡಾಡು; ಚಾರ: ದುತರು; ಕಳ: ಯುದ್ಧರಂಗ; ಚೌಕ: ಮೇರೆ, ಎಲ್ಲೆ;

ಪದವಿಂಗಡಣೆ:
ಹೆಣನ +ಬಗಿದ್+ಅರಸಿದರು+ ಕರಿಗಳ
ಹಣಿದದಲಿ +ನೋಡಿದರು+ ರಥ+ಸಂ
ದಣಿಗಳ್+ಒಟ್ಟಿಲ +ಕೆದರಿ +ಭೀಷ್ಮನ +ಸರಳ +ಮಂಚದಲಿ
ಹಣುಗಿದರು +ಭಗದತ್ತನ್+ಆನೆಯನ್
ಅಣೆದು+ನೋಡಿದರ್+ಅರುಣವಾರಿಯ
ಕೆಣಕಿ +ಕೊಡರ್+ಅಸಿದರು +ಚಾರರು +ಕಳನ +ಚೌಕದಲಿ

ಅಚ್ಚರಿ:
(೧) ಹಣಿ, ಸಂದಣಿ – ಪ್ರಾಸ ಪದ
(೨) ಹೆಣ, ಹಣಿ, ಹಣುಗಿ – ಹ ಕಾರದ ಪದಗಳು

ಪದ್ಯ ೮: ಸಾತ್ಯಕಿಯ ಸುತ್ತಲು ಯಾರು ಬಿದ್ದಿದ್ದರು?

ಕೆಣಕಿದರೆ ಭುಗಿಲೆಂದುದೀತನ
ರಣಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣಿದವೊ ನಿನ್ನಾಳು ಕುದುರೆಯನರಿಯೆ ನಾನೆಂದ (ಕರ್ಣ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಶತ್ರುಗಳು ಮೇಲೆ ಬೀಳಲು ಸಾತ್ಯಕಿಯ ಪರಾಕ್ರಮದ ಬೆಂಕಿ ಭುಗಿಲೆಂದು ಉಬ್ಬಿತು. ಕಾಡುಕಿಚ್ಚಿನ ಬಾಯಿಗೆ ಒಣಗಿದ ಹುಲ್ಲಿನ ಬಣವೆ ಸಿಕ್ಕ ಹಾಗಾಯಿತು. ಸಾತ್ಯಕಿಯ ಬಾಣಗಳೇ ಕಾಣಲಿಲ್ಲ. ಅವನ ಸುತ್ತಲೂ ಹೆಣದ ಬಣವೆ ಹಾಣಿಸಿತು. ನಿನ್ನ ಸೈನಿಕರು, ಕುದುರೆಗಳು ಬಾಳೆಯ ಗಿಡದಂತೆ ಸುಲಭವಾಗಿ ಕಡಿತಗೊಂಡು ಬಿದ್ದರು.

ಅರ್ಥ:
ಕೆಣಕು: ಪ್ರಚೋದಿಸು, ರೇಗಿಸು; ಭುಗಿಲ್: ಶಬ್ದವನ್ನು ವರ್ಣಿಸುವ ಪದ; ರಣ: ಯುದ್ಧ; ಪರಾಕ್ರಮ: ಶೌರ್ಯ; ವಹ್ನಿ: ಬೆಂಕಿ; ಕರಡ:ಕಾಡಿನಲ್ಲಿ ಬೆಳೆದು ಒಣಗಿದ ಹುಲ್ಲು; ಬಣಬೆ: ಮೆದೆ; ಸಿಕ್ಕು: ದೊರೆತು; ಕಾಳುಗಿಚ್ಚು: ಅಡವಿ ಬೆಂಕಿ; ಬಾಯ: ತಿನ್ನಲು ಬಳಸುವ ಅಂಗ; ಬಗರೆಗೆ: ಓಡು; ಕಣೆ: ಬಾಣ; ಕಾಣು: ನೋಡು; ಸುತ್ತ: ಎಲ್ಲಾಕಡೆ; ಒಟ್ಟು: ಎಲ್ಲಾ; ಹೆಣ: ಶವ; ಕಂಡು: ನೋಡು; ಬಾಳೆ: ಕದಳಿ; ಹಣಿ: ಬಾಗು, ಮಣಿ; ಆಳು: ಸೈನ್ಯ; ಕುದುರೆ: ತುರಗ, ಅಶ್ವ; ಅರಿ: ತಿಳಿ;

ಪದವಿಂಗಡಣೆ:
ಕೆಣಕಿದರೆ +ಭುಗಿಲೆಂದುದ್+ಈತನ
ರಣಪರಾಕ್ರಮ+ವಹ್ನಿ +ಕರಡದ
ಬಣಬೆ+ ಸಿಕ್ಕಿತು +ಕಾಳುಗಿಚ್ಚಿನ +ಬಾಯ +ಬಗರಗೆಗೆ
ಕಣೆಯ +ಕಾಣೆನು +ಸುತ್ತಲೊಟ್ಟುವ
ಹೆಣನ+ ಕಂಡೆನ್+ಇದಾವ +ಬಾಳೆಯ
ಹಣಿದವೊ +ನಿನ್ನಾಳು +ಕುದುರೆಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಹ್ನಿ ಕರಡದ ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
(೨) ಉಪಮಾನದ ಪ್ರಯೋಗ – ಒಟ್ಟುವ ಹೆಣನ ಕಂಡೆನಿದಾವ ಬಾಳೆಯ ಹಣಿದವೊ ನಿನ್ನಾಳು