ಪದ್ಯ ೪೨: ದುರ್ಯೋಧನನ ಸ್ಥಿತಿ ಹೇಗಾಗಿತ್ತು?

ನಗೆಗೆ ನಗೆ ಕುಂಟಣಿ ವಿವೇಕದ
ಹೊಗೆಗೆ ಹೊಗೆ ಸಖಿಯಾದುದಲ್ಲಿಯ
ಹಗರಣಿಗೆ ನಾನಾದೆನದು ನೋಟಕದ ಜನವಾಯ್ತು
ನಗುವವರ ಜರೆದನೆ ಯುಧಿಷ್ಠಿರ
ನಗೆಯ ಮರೆದೆನೆ ಬೊಪ್ಪ ನಿಮ್ಮಯ
ಮಗನವಸ್ಥಾರೂಪವಿದು ಚಿತ್ತವಿಸಿ ನೀವೆಂದ (ಸಭಾ ಪರ್ವ, ೧೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಆಲಯದಲ್ಲಿದ್ದ ದಾಸಿಯರ ನಗೆ ಹಿಂದೆ ಕೇಳಿದುದು ಈಗ ಮತ್ತೆ ಆ ನಗೆಯೇ ಕೇಳಿತು, ಆಗ ನಾನು ವಿವೇಕರಹಿತನಾಗಿದ್ದೆನಲ್ಲ, ಈಗ ಮತ್ತೆ ಅವಿವೇಕಿಯಾದೆ, ನಾನು ಅವರೆದುರು ಹಾಸ್ಯಪಾತ್ರಧಾರಿಯಾದೆ, ಅಲ್ಲಿದ್ದವರೆಲ್ಲರೂ ಪ್ರೇಕ್ಷಕರಾದರು. ನನ್ನನ್ನು ನೋಡಿ ನಗುವವರನ್ನು ಯುಧಿಷ್ಠಿರನು ತಡೆಯಲಿಲ್ಲ. ಆ ನಗುವನ್ನು ನಾನು ಮರೆತೆನೇ? ಅಪ್ಪ ನಿನ್ನ ಮಗನ ದುರವಸ್ಥೆಯ ರೂಪವನ್ನು ಮನಸ್ಸಿಟ್ಟು ಕೇಳು ಎಂದು ತನ್ನ ನೋವನ್ನು ದುರ್ಯೋಧನನು ತೋಡಿಕೊಂಡನು.

ಅರ್ಥ:
ನಗೆ: ನಕ್ಕು, ಹರ್ಷ; ಕುಂಟಣಿ: ತಲೆಹಿಡುಕಿ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಹೊಗೆ: ಧೂಮ; ಸಖಿ: ಸ್ನೇಹಿತೆ; ಹಗರಣಿಗ: ವಿವಿಧ ವೇಷ, ಅಭಿನಯಗಳಿಂದ ಜನರನ್ನು ನಗಿಸುವವನು, ವೇಷಧಾರಿ; ನೋಟಕ: ನೋಡುವವರ, ಪ್ರೇಕ್ಷಕ; ಜನ: ಮನುಷ್ಯರ ಗುಂಪು; ಜರೆ: ಬಯ್ಯು; ಮರೆ: ಜ್ಞಾಪಕದಿಂದ ದೂರವಿಡು; ಬೊಪ್ಪ: ತಂದೆ; ಮಗ: ಪುತ್ರ; ಅವಸ್ಥ: ಸ್ಥಿತಿ; ಚಿತ್ತವಿಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ನಗೆಗೆ +ನಗೆ +ಕುಂಟಣಿ +ವಿವೇಕದ
ಹೊಗೆಗೆ +ಹೊಗೆ +ಸಖಿಯಾದುದ್+ಅಲ್ಲಿಯ
ಹಗರಣಿಗೆ+ ನಾನಾದೆನ್+ಅದು +ನೋಟಕದ+ ಜನವಾಯ್ತು
ನಗುವವರ +ಜರೆದನೆ+ ಯುಧಿಷ್ಠಿರ
ನಗೆಯ+ ಮರೆದೆನೆ+ ಬೊಪ್ಪ +ನಿಮ್ಮಯ
ಮಗನ್+ಅವಸ್ಥಾ+ರೂಪವಿದು+ ಚಿತ್ತವಿಸಿ+ ನೀವೆಂದ

ಅಚ್ಚರಿ:
(೧) ನಗೆಗೆ ನಗೆ; ಹೊಗೆಗೆ ಹೊಗೆ – ಜೋಡಿ ಪದಗಳು
(೨) ದುರ್ಯೋಧನನ ಸ್ಥಿತಿ – ಹಗರಣಿಗೆ ನಾನಾದೆನದು
(೩) ನಗೆ, ಹೊಗೆ; ಜರೆದನೆ, ಮರೆದೆನೆ – ಪ್ರಾಸ ಪದ