ಪದ್ಯ ೪೫: ಆನೆ ಕುದುರೆಗಳನ್ನು ಯುದ್ಧಕ್ಕೆ ಹೇಗೆ ಸಿದ್ಧಪಡಿಸಿದರು?

ಕಡಿಯಣವನಾನೆಗಳ ಮೋರೆಗೆ
ತೊಡಿಸಿದರು ದಂತಿಗಳ ಹೆಗಲಲಿ
ನಿಡುನೊಗನ ಕಟ್ಟಿದರು ಕಿವಿಯಲಿ ಕೀಲುಗಳ ಸರಿಸಿ
ಜಡಿವ ಗುಳವನು ಹಾಯ್ಕಿ ಬೀಸಿದ
ರೊಡನೊಡನೆ ಹಕ್ಕರಿಕೆ ಜೋಡಿನ
ಲಡಸಿ ಗಾಲಿಯ ಬಿಗಿದು ಗಜಬಜಿಸಿತ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕಡಿವಾಣಗಲನ್ನು ಆನೆಗಳ ಮೋರೆಗೆ ತೊಡಿಸಿದರು. ಆನೆಗಳ ಕತ್ತಿನ ಮೇಲೆ ನೊಗವನ್ನ ಕಟ್ಟಿದರು. ಕಿವಿಯಲ್ಲಿ ಕೀಲುಗಳನ್ನು ಸರಿಸಿದರು. ಗುಳವನ್ನು ಜೋಡಿನೊಳಕ್ಕೆ ಸೇರಿಸಿ ಗಾಲಿಗೆ ಬಿಗಿದರು.

ಅರ್ಥ:
ಕಡಿವಾಣ: ಕುದುರೆಬಾಯಿಗೆ ಹಾಕುವ ಕಬ್ಬಿಣದ ಬಳೆಗೆ ಕಡಿವಾಣ ಎಂದು ಹೆಸರು; ಆನೆ: ಕುದುರೆ; ಮೋರೆ: ಮುಖ; ತೊಡಿಸು: ಜೋಡಿಸು; ದಂತಿ: ಆನೆ; ಹೆಗಲು: ಭುಜ; ನೊಗ: ಬಂಡಿಯನ್ನಾಗಲಿ, ನೇಗಿಲನ್ನಾಗಲಿ ಎಳೆಯಲು ಎತ್ತು, ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಕಟ್ಟು: ನಿರ್ಮಿಸು; ಕಿವಿ: ಕರ್ಣ; ಕೀಲು: ಮರ್ಮ, ಅಗುಳಿ; ಸರಿಸು: ತಳ್ಳು; ಜಡಿ:ಸ್ರವಿಸು, ಗದರಿಸು; ಗುಳ: ಕುಂಟೆ, ನೇಗಿಲುಗಳ ತುದಿಗೆ ಜೋಡಿಸುವ ಕಬ್ಬಿಣದ ಪಟ್ಟಿ; ಹಾಯ್ಕು: ಇಡು, ಇರಿಸು; ಬೀಸು: ಬೀಸುವಿಕೆ, ತೂಗುವಿಕೆ; ಒಡನೆ: ಒಮ್ಮೆ; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಅಡಸು: ಬಿಗಿಯಾಗಿ ಒತ್ತು; ಗಾಲಿ: ಚಕ್ರ; ಬಿಗಿ: ಕಟ್ಟು, ಬಂಧಿಸು; ಗಜಬಜ: ಗೊಂದಲ; ನೃಪ: ರಾಜ; ಕಟಕ: ಸೈನ್ಯ;

ಪದವಿಂಗಡಣೆ:
ಕಡಿಯಣವನ್+ಆನೆಗಳ +ಮೋರೆಗೆ
ತೊಡಿಸಿದರು +ದಂತಿಗಳ +ಹೆಗಲಲಿ
ನಿಡುನೊಗನ +ಕಟ್ಟಿದರು +ಕಿವಿಯಲಿ +ಕೀಲುಗಳ +ಸರಿಸಿ
ಜಡಿವ +ಗುಳವನು +ಹಾಯ್ಕಿ +ಬೀಸಿದರ್
ಒಡನೊಡನೆ +ಹಕ್ಕರಿಕೆ +ಜೋಡಿನಲ್
ಅಡಸಿ +ಗಾಲಿಯ +ಬಿಗಿದು +ಗಜಬಜಿಸಿತ್ತು+ ನೃಪಕಟಕ

ಅಚ್ಚರಿ:
(೧) ಆನೆ, ದಂತಿ – ಸಮಾನಾರ್ಥಕ ಪದಗಳು

ಪದ್ಯ ೩೭: ಸೈನಿಕರು ನಿದ್ರೆಗೇಕೆ ಅವಮಾನ ಮಾಡಿದರು?

ತಡಿಯ ಬಲಿಸುವ ಗುಳನ ರೆಂಚೆಯ
ಗಡಣಿಸುವ ಹಕ್ಕರಿಕೆಗಳನಾ
ಯ್ದಡಸಿ ಹೊಲಿಸುವ ಕಬ್ಬಿಗಳ ಕೊಂಡಿಗಳ ಮಿಗೆ ಬಲಿವ
ಒಡೆದ ದೂಹತ್ತಿಗೆಗೆ ಕೀಲ್ಗಳ
ನಡಸಿ ಬೆಟ್ಟದ ಗಾಲಿಗಚ್ಚನು
ತೊಡಿಸುತಿರಲಾಯ್ತೆರಡು ಬಲದೊಳು ನಿದ್ರೆಗವಮಾನ (ಭೀಷ್ಮ ಪರ್ವ, ೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆನೆ ಕುದುರೆಗಳ ತಡಿಯನ್ನು ಭದ್ರ ಮಾಡುವ, ರೆಂಚೆಯನ್ನು ಸರಿಪಡಿಸುವ ಮೈಜೋಡುಗಲನ್ನು ಆಯ್ದು ಹರಿದಿದ್ದರೆ ಹೊಲಿಸುವ, ಕದಿವಾಣದ ಕೊಂಡಿಗಳನ್ನು ಬಲಪದಿಸುವ, ಒಡೆದು ಹೋದ ಉದ್ದವಾದ ಕತ್ತಿಗಳಿಗೆ ಕೀಲುಗಳನ್ನು ಹಾಕಿ ಭದ್ರಪಡಿಸುವ, ಗಾಲಿಗಲನ್ನು ಅಚ್ಚಿಗೆ ತೊಡಿಸುವ ಭರದಲ್ಲಿ ಯೋಧರು ನಿದ್ದೆಗೆ ಅವಮಾನ ಮಾಡಿದರು.

ಅರ್ಥ:
ತಡಿ: ಕುದುರೆಯ ಜೀನು; ಬಲಿಸು: ಗಟ್ಟಿಮಾಡು; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ಗಡಣ: ಕೂಡಿಸುವಿಕೆ; ಹಕ್ಕರಿ: ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಆಯ್ದು: ಆರಿಸಿ; ಅಡಸು: ಬಿಗಿಯಾಗಿ ಒತ್ತು; ಹೊಲಿ: ಹಣೆ; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಕಬ್ಬಿಣದ ತುಂಡು; ಕೊಂಡಿ: ಕೊಕ್ಕೆ; ಮಿಗೆ: ಹೆಚ್ಚು; ಬಲಿ: ಗಟ್ಟಿ; ಒಡೆ: ಸೀಳು; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಕೀಲು: ಅಗುಳಿ; ಅಡಸು: ಬಿಗಿಯಾಗಿ ಒತ್ತು; ಬೆಟ್ಟ: ಗಿರಿ; ಗಾಲಿ:ಚಕ್ರ; ಅಚ್ಚು:ಪಡಿಯಚ್ಚಿನಲ್ಲಿ ಎರಕಹೊಯ್ದು ತೆಗೆದ ಪ್ರತಿರೂಪ,; ತೊಡಿಸು: ಧರಿಸು; ಬಲ: ಸೈನ್ಯ; ನಿದ್ರೆ: ಶಯನ; ಅವಮಾನ: ಅಗೌರವ;

ಪದವಿಂಗಡಣೆ:
ತಡಿಯ +ಬಲಿಸುವ +ಗುಳನ +ರೆಂಚೆಯ
ಗಡಣಿಸುವ +ಹಕ್ಕರಿಕೆಗಳನಾಯ್ದ್
ಅಡಸಿ+ ಹೊಲಿಸುವ +ಕಬ್ಬಿಗಳ+ ಕೊಂಡಿಗಳ+ ಮಿಗೆ +ಬಲಿವ
ಒಡೆದ +ದೂಹತ್ತಿಗೆಗೆ +ಕೀಲ್ಗಳನ್
ಅಡಸಿ +ಬೆಟ್ಟದ+ ಗಾಲಿಗ್+ಅಚ್ಚನು
ತೊಡಿಸುತಿರಲ್+ಆಯ್ತೆರಡು +ಬಲದೊಳು +ನಿದ್ರೆಗ್+ಅವಮಾನ

ಅಚ್ಚರಿ:
(೧) ಸೈನಿಕರು ಕೆಲಸದಲ್ಲಿ ಮಗ್ನರಾಗಿದ್ದರು ಎಂದು ಹೇಳುವ ಪರಿ – ಎರಡು ಬಲದೊಳು ನಿದ್ರೆಗವಮಾನ

ಪದ್ಯ ೫೧: ಕುದುರೆಗಳನ್ನು ಯುದ್ಧಕ್ಕೆ ಹೇಗೆ ಸಿದ್ಧಪಡಿಸಲಾಯಿತು?

ಬರಿಗಡಗ ಕೀಳ್ಕಂಬಿ ದುಕ್ಕುಡಿ
ಯುರುಗುಗಡಿಯಣ ಮೊಗವಡಂಗಳು
ತುರಗವದನದಲೊಪ್ಪಿರಲು ತಾ ಪಣೆಯನಳವಡಿಸಿ
ಕೊರಳ ಕೊಡಕೆಯ ಪಾರ್ಶ್ವಪೇಚಕ
ದೆರಡು ಕಡೆಯಲಿ ಸುತ್ತು ಝಲ್ಲಿಯ
ಪರಿಪರಿಯ ಹಕ್ಕರಿಯಲಿ ಬೀಸಿದರು ಚೌರಿಗಳ (ಭೀಷ್ಮ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಪಕ್ಕದ ಕಡಗ, ಬಾಯಲ್ಲಿಟ್ಟ ಕಂಬಿ, ಎರಡೂ ಕಡೆಯ ಕಡಿವಾಣ, ಮುಖವಾಡಗಲನ್ನು ಕುದುರೆಗಳಿಗೆ ಕಟ್ಟಿದರು. ಕೊರಳಿನ ಹಗ್ಗ, ಬಾಲದ ಕೆಳಗೆ ಕಟ್ಟಿದ ಹಗ್ಗಗಳಿಗೆ ಗೊಂಡೆಗಳನ್ನು ಕಟ್ಟಿದ್ದರು. ದೇಹರಕ್ಷಣೆಗಾಗಿ ಎರಡೂ ಕಡೆಗೆ ಕವಚಗಲನ್ನು ಕಟ್ಟಿದರು. ಅವುಗಳನ್ನು ಚೌರಿಯಿಂದ ಅಲಂಕರಿಸಿದರು.

ಅರ್ಥ:
ಬರಿ: ಪಕ್ಕ, ಬದಿ; ಕಡಗ: ಕೈಗೆ ಅಥವಾ ಕಾಲಿಗೆ ಹಾಕಿಕೊಳ್ಳುವ ಬಳೆ; ಕಂಬಿ: ಲೋಹದ ತಂತಿ; ದುಕ್ಕುಡಿ: ಕಡಿವಾಣ; ಉರುಗು: ಬಾಗು, ಓರೆಯಾಗು; ಕಡಿಯಣ: ಕುದುರೆಬಾಯಿಗೆ ಹಾಕುವ ಕಬ್ಬಿಣದ ಬಳೆಗೆ ಕಡಿವಾಣ ಎಂದು ಹೆಸರು; ಮೊಗ: ಮುಖ; ತುರಗ: ಅಶ್ವ; ವದನ: ಮುಖ; ಒಪ್ಪು: ಒಪ್ಪಿಗೆ, ಸಮ್ಮತಿ; ಪಣೆ:ಹಣೆ, ನೊಸಲು; ಅಳವಡಿಸು: ಜೋಡಿಸು; ಕೊರಳು: ಗಂಟಲು; ಕೊಡಕೆ: ಕಿವಿ; ಪಾರ್ಶ್ವ: ಪಕ್ಕ, ಮಗ್ಗುಲು; ಪೇಚಕ: ಬಾಲದ ಬುಡ; ಕಡೆ: ಬದಿ; ಸುತ್ತು: ಬಳಸು, ತಿರುಗು; ಝಲ್ಲಿ: ಗೊಂಚಲು, ಕುಚ್ಚು; ಪರಿಪರಿ: ಬಹಳ ರೀತಿ; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಬೀಸು: ಹರಹು; ಚೌರಿ: ಚಮರ;

ಪದವಿಂಗಡಣೆ:
ಬರಿ+ಕಡಗ +ಕೀಳ್+ಕಂಬಿ +ದುಕ್ಕುಡಿ
ಉರುಗು+ಕಡಿಯಣ+ ಮೊಗವಡಂಗಳು
ತುರಗ+ವದನದಲ್+ಒಪ್ಪಿರಲು +ತಾ +ಪಣೆಯನ್+ಅಳವಡಿಸಿ
ಕೊರಳ +ಕೊಡಕೆಯ +ಪಾರ್ಶ್ವ+ಪೇಚಕದ್
ಎರಡು +ಕಡೆಯಲಿ +ಸುತ್ತು +ಝಲ್ಲಿಯ
ಪರಿಪರಿಯ +ಹಕ್ಕರಿಯಲಿ +ಬೀಸಿದರು +ಚೌರಿಗಳ

ಅಚ್ಚರಿ:
(೧) ಕುದುರೆಯನ್ನು ಸಿದ್ಧಪಡಿಸಲು ವಿವರಿಸಲು ಬಳಸಿದ ಪದಗಳು: ಕಡಗ, ಕಂಬಿ, ದುಕ್ಕುಡಿ, ಕಡಿಯಣ, ಕೊಡಕೆ, ಪೇಚಕ, ಹಕ್ಕರಿ

ಪದ್ಯ ೩೧: ಯುದ್ಧಭೂಮಿಯಲ್ಲಿ ಯಾವ ವಸ್ತುಗಳು ಬಿದ್ದಿದ್ದವು?

ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಡಿದು ಬಿದ್ದ ಕುದುರೆಯ ಪಕ್ಕರೆ, ತುಂಡಾಗಿ ಬಿದ್ದ ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ನುಗ್ಗಾಗಿದ್ದ ಆನೆ ಕುದುರೆಗಳ ಪಕ್ಷರಕ್ಷೆ, ಸ್ಫೋಟಗೊಂಡಿದ್ದ ಶಿರಸ್ತ್ರಾಣಗಳು, ತುಂಡಾಗಿದ್ದ ಬಾಹು ಮತ್ತು ದೇಹ ಕವಚಗಳು, ಪಾದರಕ್ಷೆಗಳು, ಹರಿದು ಬಿದ್ದ ಹಗ್ಗ, ಮುಖವಾಡ, ಪೀಠ, ಕೈಗೋಲು, ಕಡಿವಾಣ, ಕಬ್ಬಿ ಇವುಗಳು ರಣಭೂಮಿಯಲ್ಲಿ ಚೆಲ್ಲಿದ್ದವು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ಕುದುರೆಯ ಜೀನು, ಪಕ್ಕರೆ; ಸೀಳು: ಚೂರು, ತುಂಡು; ದಡಿ: ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ಜೀನು; ವಸ್ತ್ರಗಳ ಅಂಚು; ನೆಗ್ಗು:ಕುಗ್ಗು, ಕುಸಿ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ:ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ಸಿಡಿ:ಸ್ಫೋಟ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಜೋಡು: ಜೊತೆ, ಜೋಡಿ; ಮೊಚ್ಚೆ:ಪಾದರಕ್ಷೆ, ಚಪ್ಪಲಿ; ಉಡಿ: ಮುರಿ, ತುಂಡು ಮಾಡು; ಮಿಣಿ:ಚರ್ಮದ ಹಗ್ಗ; ಮೊಗ: ಮುಖ; ಮೊಗರಂಬ: ಮುಖವಾಡ; ಗದ್ದುಗೆ: ಪೀಠ; ಬಡಿಗೆ: ಕೋಲು, ದೊಣ್ಣೆ; ಸೂತ್ರಿಕೆ: ದಾರ, ನೂಲು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಕಡಿ:ತುಂಡು, ಹೋಳು; ಕುಸುರಿ: ತುಂಡು,ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಕೂಡೆ: ಜೊತೆ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಕಡಿದ +ಹಕ್ಕರಿಕೆಗಳ +ಸೀಳಿದ
ದಡಿಯ +ನೆಗ್ಗಿದ +ಗುಳದ +ರೆಂಚೆಯ
ಸಿಡಿದ +ಸೀಸಕ+ ಬಾಹುರಕ್ಷೆಯ+ ಜೋಡು +ಮೊಚ್ಚೆಯದ
ಉಡಿದ +ಮಿಣಿ +ಮೊಗರಂಬ+ ಗದ್ದುಗೆ
ಬಡಿಗೆಗಳ+ ಸೂತ್ರಿಕೆಯ +ಕಬ್ಬಿಯ
ಕಡಿಯಣದ +ಕುಸುರಿಗಳಲ್+ಎಸೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ಕಡಿ, ದಡಿ, ಸಿಡಿ, ಉಡಿ, ಬಡಿ – ಪ್ರಾಸ ಪದಗಳು
(೨) ಹಕ್ಕರಿ, ದಡಿ, ರೆಂಚೆ, ಸೀಸಕ, ಬಾಹುರಕ್ಷೆ, ಮಿಣಿ, ಮೊಗರಂಬ, ಗದ್ದುಗೆ, ಸೂತ್ರಿಕೆ – ರಣರಂಗದಲ್ಲಿ ಚೆಲ್ಲಿದ ವಸ್ತುಗಳು