ಪದ್ಯ ೨: ಸರೋವರದಲ್ಲಿ ಯಾವ ರೀತಿ ತಳಮಳವಾಯಿತು?

ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು (ಗದಾ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಮಹಾ ಶಬ್ದಕ್ಕೆ ಸರೋವರದ ತಲದ ಮಳಲು ಮೇಲೆದ್ದು ನೀರು ಕದಡಿತು. ಜಲಚರಕಗಳು ವೈರವನ್ನು ಮರೆತು ಒಟ್ಟಾಗಿ ಮೇಲಕ್ಕೆ ನೆಗೆದವು. ಕಮಲಪುಷ್ಪಗಳಲ್ಲಿದ್ದ ದುಂಬಿಗಳು ಬೆದರಿ ಅಲ್ಲಿಯೇ ಅಡಗಿಕೊಂಡವು. ಹಂಸಗಳು ಹಾರಿಹೋದವು. ಚಕ್ರವಾಕ ಪಕ್ಷಿಗಳು ಜಾರಿಕೊಂಡು ಆಚೆಗೆ ಹೋದವು.

ಅರ್ಥ:
ತಳಮಳ: ಗೊಂದಲ; ಮೊಗೆ: ಹೊರಹಾಕು; ಕದಡು: ಬಗ್ಗಡ, ರಾಡಿ, ಕಲಕಿದ ದ್ರವ; ಕೊಳ: ಸರೋವರ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ನಿಚಯ: ಗುಂಪು; ಬೊಬ್ಬುಳಿ: ನೀರುಗುಳ್ಳೆ; ಉಬ್ಬು: ಅತಿಶಯ, ಹೆಚ್ಚಾಗು; ನೆಗೆ: ಜಿಗಿ; ವಿಗತ: ಮರೆತ; ವೈರ: ಶತ್ರು, ಹಗೆತನ; ದಳ: ಸೈನ್ಯ; ಬಿಗಿ: ಗಟ್ಟಿ,ದೃಢ; ಅಂಬುಜ: ತಾವರೆ; ಅಡಗು: ಬಚ್ಚಿಟ್ಟುಕೊಳ್ಳು; ಅಳಿ: ದುಂಬಿ; ನಿಕರ: ಗುಂಪು; ಹಾರು: ಲಂಘಿಸು; ಹಂಸ: ಮರಾಲ; ಜವಾಯಿಲತನ: ವೇಗ, ಕ್ಷಿಪ್ರತೆ; ಜಗುಳು: ಜಾರು, ಸಡಿಲವಾಗು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಆವಳಿ: ಗುಂಪು;

ಪದವಿಂಗಡಣೆ:
ತಳಮಳಲ +ಮೊಗೆಮೊಗೆದು +ಕದಡಿತು
ಕೊಳನ +ಜಲಚರ+ನಿಚಯವ್+ಈ+ ಬೊ
ಬ್ಬುಳಿಕೆ +ಮಿಗಲೊಬ್ಬುಳಿಕೆ+ ನೆಗೆದವು+ ವಿಗತ+ ವೈರದಲಿ
ದಳವ +ಬಿಗಿದ್+ಅಂಬುಜದೊಳ್+ಅಡಗಿದವ್
ಅಳಿ+ನಿಕರ +ಹಾರಿದವು +ಹಂಸಾ
ವಳಿ +ಜವಾಯಿಲತನದಿ +ಜಗುಳ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧) ನಿಕರ, ನಿಚಯ, ಆವಳಿ – ಸಮಾನಾರ್ಥಕ ಪದ
(೨) ಜ ಕಾರದ ತ್ರಿವಳಿ ಪದ – ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು

ಪದ್ಯ ೩೬: ಕೃಷ್ಣನು ಏಕೆ ಶಿಷ್ಟನಾದನೆಂದು ಶಿಶುಪಾಲನು ಹೀಯಾಳಿಸಿದನು?

ಬೀವಿನಾರವೆಯೊಳಗೆ ಕಳಹಂ
ಸಾವಳಿಗೆ ರಮ್ಯವೆ ಜಪಾ ಕುಸು
ಮಾವಳಿಗಳಲಿ ಮಧುಕರನ ಮೋಹರಕೆ ಮನ್ನಣೆಯೆ
ಈ ವಿಕಾರದ ಯಜ್ಞದಲಿ ರಾ
ಜಾವಳಿಗೆ ಮನ್ನಣೆಯೆ ಶಿವಶಿವ
ನೀವು ಗೋಪಿಜಾರರಿಲ್ಲಿಗೆ ಶಿಷ್ಟರಹರೆಂದ (ಸಭಾ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬೇವಿನ ವನದ ಮಧ್ಯೆ ಕಳಹಂಸಗಳಿಗೆ ಒಪ್ಪೀತೇ? ದುಂಬಿಗಳು ದಾಸವಾಳದ ಹೂವನ್ನು ಒಪ್ಪುವವೇ? ಈ ವಿಕಾರ ಯಜ್ಞದಲ್ಲಿ ರಾಜರಿಗೆ ಮನ್ನಣೆ ಸಿಕ್ಕೀತೇ? ನೀನು ಗೋಪೀಜಾರನಾದುದರಿಂದ ಇಲ್ಲಿ ಶಿಷ್ಟನಾದೆ ಎಂದು ಶಿಶುಪಾಲನು ಹೀಯಾಳಿಸಿದನು.

ಅರ್ಥ:
ಆರವೆ: ಉದ್ಯಾನ, ತೋಪು; ಕಳ: ಮಧುರವಾದ; ಹಂಸ: ಬಿಳಿಯ ಬಣ್ಣದ ಪಕ್ಷಿ, ಮರಾಲ; ಆವಳಿ: ಗುಂಪು; ಮಧುಕರ: ಜೇನು; ಮೋಹ: ಆಸೆ; ಮನ್ನಣೆ: ಗೌರವ; ವಿಕಾರ: ಬದಲಾವಣೆ; ಯಜ್ಞ: ಯಾಗ, ಕ್ರತು; ರಾಜ: ನೃಪ; ಜಾರ: ವ್ಯಭಿಚಾರಿ; ಶಿಷ್ಟ:ಒಳ್ಳೆಯ ನಡವಳಿಕೆ; ಕುಸುಮ: ಹೂವು; ಜಪಾ: ದಾಸವಾಳ;

ಪದವಿಂಗಡಣೆ:
ಬೀವಿನ್+ಆರವೆಯೊಳಗೆ +ಕಳಹಂ
ಸಾವಳಿಗೆ+ ರಮ್ಯವೆ +ಜಪಾ +ಕುಸು
ಮಾವಳಿಗಳಲಿ+ ಮಧುಕರನ +ಮೋಹರಕೆ+ ಮನ್ನಣೆಯೆ
ಈ +ವಿಕಾರದ +ಯಜ್ಞದಲಿ +ರಾ
ಜಾವಳಿಗೆ+ ಮನ್ನಣೆಯೆ +ಶಿವಶಿವ
ನೀವು +ಗೋಪಿಜಾರರಿಲ್ಲಿಗೆ +ಶಿಷ್ಟರಹರೆಂದ

ಅಚ್ಚರಿ:
(೧) ಆವಳಿ ಪದದ ಬಳಕೆ – ೩ ಬಾರಿ ಪ್ರಯೋಗ – ಹಂಸಾವಳಿ, ಕುಸುಮಾವಳಿ, ರಾಜಾವಳಿ
(೨) ಉಪಮಾನದ ಪ್ರಯೋಗ – ಬೀವಿನಾರವೆಯೊಳಗೆ ಕಳಹಂಸಾವಳಿಗೆ ರಮ್ಯವೆ; ಜಪಾ ಕುಸು
ಮಾವಳಿಗಳಲಿ ಮಧುಕರನ ಮೋಹರಕೆ ಮನ್ನಣೆಯೆ