ಪದ್ಯ ೩೦: ಭೀಮನಿಗೆ ಹೆದರಿ ಹಂದಿಯು ಎಲ್ಲಿ ಅಡಗಿಕೊಂಡಿತು?

ಈತನುರುಬೆಗೆ ಬೆದರಿತುರು ಸಂ
ಘಾತದಲಿ ಹೆಬ್ಬಂದಿಯೊಂದು ವಿ
ಘಾತದಲಿ ಹಾಯ್ದುದು ಕಿರಾತವ್ರಜವನೊಡೆತುಳಿದು
ಈತನರೆಯಟ್ಟಿದನು ಶಬರ
ವ್ರಾತವುಳಿದುದು ಹಿಂದೆ ಭೀಮನ
ಭೀತಿಯಲಿ ಹೊಕ್ಕುದು ಮಹಾಗಿರಿಗಹನ ಗಹ್ವರವ (ಅರಣ್ಯ ಪರ್ವ, ೧೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಮೃಗಗಳ ಗುಂಪಿನಲ್ಲಿದ್ದ ದೊಡ್ಡ ಹಂದಿಯೊಂದು ಭೀಮನು ಮೇಲೆ ಬೀಳುವುದನ್ನು ಕಂಡು, ಬೇಡರನ್ನು ತುಳಿದು ಓಡಿ ಹೋಯಿತು. ಭೀಮನು ಅದನ್ನು ಹಿಂಬಾಲಿಸಿ ಮುಂದೆ ಹೋದನು, ಬೇಡರ ಗುಂಪು ಹಿಂದೆಯೇ ಉಳಿಯಿತು. ಆ ಹಂದಿಯು ಭೀಮನಿಗೆ ಹೆದರಿ ಬೆಟ್ಟದ ತಪ್ಪಲಿನಲ್ಲಿದ್ದ ದಟ್ಟವಾದ ಕಾಡನ್ನು ಸೇರಿತು.

ಅರ್ಥ:
ಉರುಬೆ: ಅಬ್ಬರ; ಬೆದರು: ಹೆದರು; ಉರು: ಹೆಚ್ಚಾದ; ಸಂಘಾತ: ಗುಂಪು, ಸಮೂಹ; ಹೆಬ್ಬಂದಿ: ದೊಡ್ಡ ಹಂದಿ; ವಿಘಾತ: ಏಟು, ಹೊಡೆತ; ಹಾಯ್ದು: ಹೊಡೆತ; ಕಿರಾತ: ಬೇಡ; ವ್ರಜ: ಗುಂಪು; ಒಡೆ:ಸೀಳು, ಬಿರಿ; ತುಳಿ: ಮೆಟ್ಟು; ಅರೆ: ಅರ್ಧಭಾಗ; ಅಟ್ಟು: ಹಿಂಬಾಲಿಸು; ಶಬರ: ಬೇಡ; ವ್ರಾತ: ಗುಂಪು; ಉಳಿ: ಹೊರತಾಗು; ಹಿಂದೆ: ಹಿಂಭಾಗ; ಭೀತಿ: ಭಯ; ಹೊಕ್ಕು: ಸೇರು; ಮಹಾ: ದೊಡ್ಡ; ಗಿರಿ: ಬೆಟ್ಟ; ಗಹನ: ಕಾಡು, ಅಡವಿ; ಗಹ್ವರ: ಗವಿ, ಗುಹೆ;

ಪದವಿಂಗಡಣೆ:
ಈತನ್+ಉರುಬೆಗೆ +ಬೆದರಿತ್+ಉರು +ಸಂ
ಘಾತದಲಿ +ಹೆಬ್+ಹಂದಿಯೊಂದು +ವಿ
ಘಾತದಲಿ+ ಹಾಯ್ದುದು +ಕಿರಾತ+ವ್ರಜವನ್+ಒಡೆ+ತುಳಿದು
ಈತನ್+ಅರೆ+ಅಟ್ಟಿದನು +ಶಬರ
ವ್ರಾತವ್+ಉಳಿದುದು + ಹಿಂದೆ+ ಭೀಮನ
ಭೀತಿಯಲಿ +ಹೊಕ್ಕುದು +ಮಹಾಗಿರಿ+ಗಹನ+ ಗಹ್ವರವ

ಅಚ್ಚರಿ:
(೧) ಸಂಘಾತ, ವಿಘಾತ – ಪ್ರಾಸ ಪದ
(೨) ವ್ರಜ, ವ್ರಾತ; ಕಿರಾತ, ಶಬರ – ಸಮನಾರ್ಥಕ ಪದ

ಪದ್ಯ ೪೧: ಮೂಕಾಸುರನು ಯಾವ ರೂಪದಿಂದ ಹೋರಾಡಿದನು?

ಹಂದಿಯಾದನು ದನುಜನಾ ಗಿರಿ
ಕಂದರವ ಹೊರವಂಟು ಬೇಂಟೆಯ
ಮಂದಿಯೊಳಗಡಹಾಯ್ದನೆತ್ತಿದನಡ್ಡಬಿದ್ದವರ
ಹಂದಿಯೋ ತಡೆ ನಾಯಿಗಳ ಬಿಡಿ
ಹಿಂದೆ ಹಿಡಿ ಕೆಡೆ ಕುತ್ತು ಕೈಗೊ
ಳ್ಳೆಂದು ಗಜಬಜಿಸಿತ್ತು ಗಾವಳಿ ಗಹನ ಮಧ್ಯದಲಿ (ಅರಣ್ಯ ಪರ್ವ, ೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಮೂಕಾಸುರನು ಹಂದಿಯಾಗಿ ಕಂದಾದಿಂದ ಹೊರಕ್ಕೆ ಬಂದು ಬೇಟೆಗಾರರ ಮಧ್ಯದಲ್ಲಿ ನುಗ್ಗಿ ಅಡ್ಡ ಬಂದವರನ್ನು ಎತ್ತಿ ಹಾಕಿದನು. ಆಗ ಶಬರನು ಹಂದಿ ಬಂದಿದೆ ತಡೆಯಿರಿ, ನಾಯಿಗಳನ್ನು ಅದರ ಮೇಲೆ ಬಿಡಿರಿ, ಹಿಂದಿನಿಂದ ಹಿಡಿದು ಬೀಳಿಸಿರಿ ಆಯುಧದಿಂದ ಇರಿಯಿರಿ, ತಡಮಾಡದೆ ಕಾರ್ಯವನ್ನಾರಂಭಿಸಿರಿ ಎಂದು ಕೂಗಿದರು. ಕಾಡಿನ ನಡುವೆ ಬಹಳ ಗದ್ದಲವಾಯಿತು.

ಅರ್ಥ:
ಹಂದಿ: ವರಾಹ; ದನುಜ: ರಾಕ್ಷಸ; ಗಿರಿ: ಬೆಟ್ಟ; ಕಂದರ: ಕಣಿವೆ; ಹೊರವಂಟು: ಹೊರಬಂದು; ಬೇಟೆ: ವನ್ಯಮೃಗಗಳನ್ನು ಹಿಡಿಯುವ ಕ್ರೀಡೆ; ಮಂದಿ: ಜನ; ಅಡಹಾಯ್ದು: ಮಧ್ಯಹೋಗಿ; ಅಡ್ಡ: ಮಧ್ಯ; ಬೀಳು: ಕೆಳಗೆ ಜಾರು; ತಡೆ: ನಿಲ್ಲಿಸು; ನಾಯಿ: ಶ್ವಾನ; ಬಿಡಿ: ಪ್ರತ್ಯೇಕವಾದುದು; ಹಿಂದೆ: ಹಿಂಬದಿ; ಹಿಡಿ: ಬಂಧಿಸಿ; ಕೆಡೆ: ಬೀಳು, ಕುಸಿ; ಕುತ್ತು: ತೊಂದರೆ, ಆಪತ್ತು; ಕೈಕೊಳ್ಳು: ನಿರ್ವಹಿಸು; ಗಜಬಜ: ಗಲಾಟೆ, ಶಬ್ದ; ಆವಳಿ: ಗುಂಪು; ಗಹನ: ಕಾಡು, ಅಡವಿ; ಮಧ್ಯ: ನಡುವೆ;

ಪದವಿಂಗಡಣೆ:
ಹಂದಿಯಾದನು +ದನುಜನ್+ಆ+ ಗಿರಿ
ಕಂದರವ +ಹೊರವಂಟು +ಬೇಂಟೆಯ
ಮಂದಿಯೊಳಗ್+ಅಡಹಾಯ್ದನ್+ಎತ್ತಿದನ್+ಅಡ್ಡಬಿದ್ದವರ
ಹಂದಿಯೋ +ತಡೆ+ ನಾಯಿಗಳ+ ಬಿಡಿ
ಹಿಂದೆ +ಹಿಡಿ +ಕೆಡೆ +ಕುತ್ತು +ಕೈಗೊ
ಳ್ಳೆಂದು +ಗಜಬಜಿಸಿತ್ತು +ಗಾವಳಿ +ಗಹನ+ ಮಧ್ಯದಲಿ

ಅಚ್ಚರಿ:
(೧) ಕ, ಗ ಕಾರದ ತ್ರಿವಳಿ ಪದ – ಕೆಡೆ ಕುತ್ತು ಕೈಗೊಳ್ಳೆಂದು ಗಜಬಜಿಸಿತ್ತು ಗಾವಳಿ ಗಹನ ಮಧ್ಯದಲಿ
(೨) ಹಂದಿ, ಮಂದಿ – ಪ್ರಾಸ ಪದಗಳು

ಪದ್ಯ ೪: ಶಕುನಿಯು ದುರ್ಯೋಧನನ ಸ್ಥಿತಿಯನ್ನು ಹೇಗೆ ವಿವರಿಸಿದನು?

ಮುರಿಮುರಿದು ಪಟ್ಟಣವ ನೋಡುತ
ನರವೃಕೋದರರೌಡುಗಚ್ಚುತ
ತಿರುಗಿದರು ಗಡ ಗಾಢಬದ್ಧ ಭೃಕುಟಿ ಭೀಷಣರು
ಕರಿಯಸೊಗಡಿನ ಮೃಗ ಪತಿಗೆ ಮೈ
ಹರಿದ ಹಂದಿಗೆ ನೊಂದ ಹಾವಿಂ
ಗರಸ ಮೈಚಾಚಿದೆಯಲಾ ನೀನೆಂದನಾ ಶಕುನಿ (ಸಭಾ ಪರ್ವ, ೧೭ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಮಾರ್ಜುನರು ತೆರಳುವಾಗ ಭಯಂಕರವಾಗಿ ಹುಬ್ಬುಗಂಟಿಟ್ತು, ಮತ್ತೆ ಮತ್ತೆ ಹಸ್ತಿನಾವತಿಯನ್ನು ನೋಡುತ್ತಾ ಹಲ್ಲು ಕಡಿಯುತ್ತ ಊರಿಗೆ ತೆರಳಿದರು. ದುರ್ಯೋಧನಾ, ಆನೆಯ ವಾಸನೆಯನ್ನು ಕುಡಿದು ಬರುತ್ತಿರುವ ಸಿಂಹಕ್ಕೆ, ಗಾಯಗೊಂಡ ಹಂದಿಗೆ, ಅರೆಪೆಟ್ಟುಬಿದ್ದ ಹಾವಿಗೆ ಮೈಚಾಚಿದವನಂತಿರುವೆ ಎಂದು ಹೇಳಿ ದುರ್ಯೋಧನನನ್ನು ಕೆರಳಿಸಿದನು.

ಅರ್ಥ:
ಮುರಿ: ಸೀಳು; ಪಟ್ಟಣ: ಊರು; ನೋಡು: ವೀಕ್ಷಿಸು; ನರ: ಮನುಷ್ಯ, ಅರ್ಜುನ; ವೃಕೋದರ: ತೋಳದಂತ ಹೊಟ್ಟೆಯಿರುವವ (ಭೀಮ); ಔಡು: ಹಲ್ಲಿನಿಂದ ಕಚ್ಚು; ಕಚ್ಚು: ಹಲ್ಲಿನಿಂದ – ಹಿಡಿ, ಕಡಿ; ತಿರುಗು: ಸುತ್ತು; ಗಡ: ಅಲ್ಲವೆ, ಸಂತೋಷ, ಆಶ್ಚರ್ಯ ಮುಂತಾದುವನ್ನು ಸೂಚಿಸುವ ಶಬ್ದ; ಗಾಢ:ಹೆಚ್ಚಳ, ಅತಿಶಯ; ಬದ್ಧ: ಕಟ್ಟಿದ, ಬಿಗಿದ; ಭೃಕುಟಿ: ಹುಬ್ಬುಗಂಟು; ಭೀಷಣ: ಭಯಂಕರ, ಭೀಕರ; ಕರಿ: ಆನೆ; ಸೊಗಡು: ವಾಸನೆ; ಮೃಗಪತಿ: ಸಿಂಹ; ಮೃಗ: ಪ್ರಾಣಿ; ಪತಿ: ಒಡೆಯ; ಹಂದಿ: ವರಾಹ; ನೊಂದು: ಪೆಟ್ಟುತಿಂದು, ಬೇನೆ; ಹಾವು: ಉರಗ; ಅರಸ: ರಾಜ; ಮೈಚಾಚು: ದೇಹವನ್ನು ಹರಡು, ದೇಹವನ್ನು ನೀಡು;

ಪದವಿಂಗಡಣೆ:
ಮುರಿಮುರಿದು +ಪಟ್ಟಣವ +ನೋಡುತ
ನರ+ವೃಕೋದರರ್+ಔಡುಗಚ್ಚುತ
ತಿರುಗಿದರು +ಗಡ+ ಗಾಢಬದ್ಧ +ಭೃಕುಟಿ +ಭೀಷಣರು
ಕರಿಯ+ಸೊಗಡಿನ +ಮೃಗಪತಿಗೆ+ ಮೈ
ಹರಿದ+ ಹಂದಿಗೆ +ನೊಂದ +ಹಾವಿಂಗ್
ಅರಸ+ ಮೈಚಾಚಿದೆಯಲಾ+ ನೀನೆಂದನಾ +ಶಕುನಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕರಿಯಸೊಗಡಿನ ಮೃಗ ಪತಿಗೆ ಮೈಹರಿದ ಹಂದಿಗೆ ನೊಂದ ಹಾವಿಂಗರಸ ಮೈಚಾಚಿದೆಯಲಾ
(೨) ಭೀಮಾರ್ಜುನರ ಮುಖಭಾವ – ಮುರಿಮುರಿದು, ಔಡುಗಚ್ಚುತ್ತ, ಗಾಡಬದ್ಧ ಭೃಕುಟಿ

ಪದ್ಯ ೩೨: ಸೈನ್ಯವು ಕರ್ಣನ ಮೇಲೆ ಹೇಗೆ ಆಕ್ರಮಣ ಮಾಡಿತು?

ಮಂದಿ ಕವಿಯಲಿ ಘಾಯ ತಾಗಿದ
ಹಂದಿಯೋ ರಾಧೇಯನರಸನ
ಮುಂದುಗೆಡಿಸದೆ ಮಾಣನೋ ತೆಗೆ ನೂಕುನೂಕೆನುತ
ಸಂದಣಿಸಿತತಿರಥರು ರಾಯನ
ಮುಂದೆ ತಲೆವರಿಗೆಯಲಿ ಸೇನಾ
ವೃಂದ ತುಡುಕಿತು ಕುಪಿತ ಕಾಳೋರಗನ ನಾಲಿಗೆಯ (ಕರ್ಣ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸೈನ್ಯವೆಲ್ಲವು ಒಟ್ಟುಗೂಡಲಿ, ಕರ್ಣನು ಈಗ ಘಾಯಗೊಂಡ ಹಂದಿಯಂತೆ ಕೋಪಗೊಂಡಿರುವನು, ಇವನು ನಮ್ಮ ರಾಜನ ಮೇಲೆ ಘಾತಿಸದೆ ಬಿಡುವುದಿಲ್ಲ, ಆದುದರಿಂದ ಯೋಧರು ಅವನ ಮೇಲೆ ಮುತ್ತಿಗೆ ಹಾಕಲಿ ಎಂದು ಕೂಗಲು ಮಹಾಪರಾಕ್ರಮಿಗಳು ಯುದ್ಧಕ್ಕೆ ಬಂದು ನಿಂತರು. ಸೈನ್ಯವು ಕೋಪಗೊಂಡು ಕಾಳಸರ್ಪದಂತಿದ್ದ ಕರ್ಣನ ಮೇಲೆ ಎರಗಿತು.

ಅರ್ಥ:
ಮಂದಿ: ಜನಸಮೂಹ; ಕವಿ: ದಟ್ಟವಾಗು; ಘಾಯ: ಪೆಟ್ಟು; ತಾಗು: ಮುಟ್ಟು; ಹಂದಿ: ಸೂಕರ, ವರಾಹ; ರಾಧೇಯ: ಕರ್ಣ; ಅರಸ: ರಾಜ; ಕೆಡಿಸು: ಹಾಳುಮಾಡು; ಮಾಣು: ತಡಮಾಡು; ತೆಗೆ; ಹೊರಹಾಕು; ನೂಕು: ತಳ್ಳು; ಸಂದಣಿ: ಗುಂಪು; ಅತಿರಥ: ಪರಾಕ್ರಮಿ; ರಾಯ: ರಾಜ; ಮುಂದೆ: ಎದುರು; ತಲೆವರಿಗೆ: ತಲೆಯಾಡಲು, ಗುರಾಣಿ; ಸೇನಾವೃಂದ: ಸೈನ್ಯ; ತುಡುಕು: ಹೋರಾಡು, ಸೆಣಸು; ಕುಪಿತ: ಕೋಪ; ಕಾಳೋರಗ: ಕಾಳಸರ್ಪ; ನಾಲಿಗೆ: ಜಿಹ್ವೆ;

ಪದವಿಂಗಡಣೆ:
ಮಂದಿ +ಕವಿಯಲಿ +ಘಾಯ +ತಾಗಿದ
ಹಂದಿಯೋ +ರಾಧೇಯನ್+ಅರಸನ
ಮುಂದುಗೆಡಿಸದೆ +ಮಾಣನೋ +ತೆಗೆ +ನೂಕು+ನೂಕೆನುತ
ಸಂದಣಿಸಿತ್+ಅತಿರಥರು +ರಾಯನ
ಮುಂದೆ +ತಲೆವರಿಗೆಯಲಿ +ಸೇನಾ
ವೃಂದ +ತುಡುಕಿತು +ಕುಪಿತ +ಕಾಳೋರಗನ+ ನಾಲಿಗೆಯ

ಅಚ್ಚರಿ:
(೧) ಕರ್ಣನನ್ನು ಹೋಲಿಸುವ ಪರಿ – ಘಾಯ ತಾಗಿದ ಹಂದಿಯೋ; ಕುಪಿತ ಕಾಳೊರಗನ ನಾಲಿಗೆಯ