ಪದ್ಯ ೭೪: ದುರ್ಯೋಧನನ ರಥವನ್ನು ಹೇಗೆ ಅಪ್ಪಳಿಸಿದನು?

ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ (ದ್ರೋಣ ಪರ್ವ, ೨ ಸಂಧಿ, ೭೪ ಪದ್ಯ)

ತಾತ್ಪರ್ಯ:
ಸ್ವಾಮಿದ್ರೋಹಿ ಸಿಕ್ಕಿದನು. ಅವನ ಕತ್ತನ್ನು ಕಡೆದು ರಕ್ತವನ್ನು ಕುಡಿಯಲು ಬಾಯನ್ನೊಡ್ಡು ಎನ್ನುತ್ತಾ ಎದುರಿನಲ್ಲಿದ್ದ ಆನೆ, ಕುದುರೆಗಳನ್ನು ಬಡಿದುಕೊಂಡು ಎಲವೋ ದುರಾತ್ಮ, ಮೋಸದ ಜೂಜಿನ ಲಂಪಟ, ನಿಲ್ಲು ನಿಲ್ಲು ಎನ್ನುತ್ತಾ ಒಳಹೊಕ್ಕು ದುರ್ಯೋಧನನ ರಥವನ್ನಪ್ಪಳಿಸಿದನು.

ಅರ್ಥ:
ಸಿಲುಕು: ಹಿಡಿ; ತಿವಿ: ಚುಚ್ಚು; ಸ್ವಾಮಿ: ಒಡೆಯ; ದ್ರೋಹ: ಮೋಸ; ಗಳ: ಕತ್ತು; ರಕುತ: ನೆತ್ತರು; ಒಡ್ಡು: ಅರ್ಪಿಸು, ಈಡುಮಾಡು; ಅಳವಿ: ಯುದ್ಧ; ಹೊಕ್ಕು: ಸೇರು; ಒಕ್ಕಲು: ನೆಲೆನಿಲ್ಲು; ಆನೆ: ಗಜ; ಕುದುರೆ: ಅಶ್ವ; ದುರಾತ್ಮ: ದುಷ್ಟ; ದ್ಯೂತ: ಜೂಜು, ಪಗಡೆಯಾಟ; ಕೇಳಿ: ಕ್ರೀಡೆ, ವಿನೋದ; ಕಲಹ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ನಿಲ್ಲು: ತಡೆ; ಅರಿ: ಕತ್ತರಿಸು; ಅಪ್ಪಳಿಸು: ತಟ್ಟು, ತಾಗು; ರಥ: ಬಂಡಿ;

ಪದವಿಂಗಡಣೆ:
ಸಿಲುಕಿದನು +ತಿವಿ +ಸ್ವಾಮಿ+ದ್ರೋಹನ
ಗಳದ +ರಕುತಕೆ +ಬಾಯನ್+ಒಡ್ಡೆನುತ್
ಅಳವಿಯಲಿ +ಹೊಕ್ಕ್+ಒಕ್ಕಲಿಕ್ಕಿದನ್+ಆನೆ +ಕುದುರೆಗಳ
ಎಲೆ +ದುರಾತ್ಮ + ದ್ಯೂತ+ಕೇಳೀ
ಕಲಹ+ಲಂಪಟ +ನಿಲ್ಲು +ನಿಲ್ಲೆನುತ್
ಒಳಗುವರಿದ್+ಅಪ್ಪಳಿಸಿದನು +ದುರ್ಯೋಧನನ +ರಥವ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ದುರಾತ್ಮ, ದ್ಯೂತಕೇಳೀ ಕಲಹಲಂಪಟ, ಸ್ವಾಮಿದ್ರೋಹ

ಪದ್ಯ ೬೩: ಯಾರ ಸದ್ದನ್ನು ಕೇಳಿ ಅರ್ಜುನನು ಬಂದನು?

ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ
ತಳಿಸ ಹೇಳೋ ಸ್ವಾಮಿದ್ರೋಹರು
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು
ಕಳವಳಿಸಿ ಸಾತ್ಯಕಿ ಘಟೋತ್ಕಚ
ರುಲಿದು ಹರಿತರೆ ಕೇಳಿದಾ ಕ್ಷಣ
ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ (ದ್ರೋಣ ಪರ್ವ, ೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ರಾಜನು ಶತ್ರುವಿಗೆ ಬಂಧಿಸಲ್ಪಡಲಿದ್ದಾನೆ, ಶತ್ರುವನ್ನು ಎದುರಿಸಲು ವೀರರು ಬರಲಿ, ಸೇನೆಯಲ್ಲಿದ್ದ ಸ್ವಾಮಿದ್ರೋಹಿಗಳಾದ ನಾಯಕಿತ್ತಿಯರು ಎಲ್ಲಿ ಹೋದರು ಎಂದು ಸಾತ್ಯಕಿ ಘಟೋತ್ಕದರು ಕೂಗಿ ಓಡಿಬರಲು, ಈ ಸದ್ದನ್ನು ಕೇಳಿ ಅರ್ಜುನನು ಕೃಷ್ಣನೊಡನೆ ಬಂದನು.

ಅರ್ಥ:
ಎಲೆಲೆ: ಓಹೋ; ದೊರೆ: ರಾಜ; ಸಿಕ್ಕು: ದೊರಕು; ಕರೆ: ಬರೆಮಾದು; ಪಡಿತಳಿಸು: ಎದುರಾಗು; ಹೇಳು: ತಿಳಿಸು; ಸ್ವಾಮಿ: ಒಡೆಯ; ದ್ರೋಹ: ಮೋಸ; ದಳ: ಗುಂಪು; ಹೋಗು: ತೆರಳು; ನಾಯಕಿತ್ತಿ: ಮುಂದಾಳತ್ವವನ್ನು ವಹಿಸಿದ ಸ್ತ್ರೀ; ಕಳವಳ: ಗೊಂದಲ; ಉಲಿ: ಧ್ವನಿ; ಹರಿ: ಚಲಿಸು, ನಡೆ; ಕ್ಷಣ: ಕಾಲದ ಪ್ರಮಾಣ; ಮುರಾಂತಕ: ಕೃಷ್ಣ; ಸಹಿತ: ಜೊತೆ; ವಹಿಲ: ಬೇಗ, ತ್ವರೆ; ಬಂದನು; ಆಗಮಿಸು;

ಪದವಿಂಗಡಣೆ:
ಎಲೆಲೆ +ದೊರೆ +ಸಿಕ್ಕಿದನು +ಕರೆ +ಪಡಿ
ತಳಿಸ +ಹೇಳೋ +ಸ್ವಾಮಿ+ದ್ರೋಹರು
ದಳದಲ್+ಇದ್ದವರ್+ಎತ್ತ +ಹೋದರು +ನಾಯಕಿತ್ತಿಯರು
ಕಳವಳಿಸಿ +ಸಾತ್ಯಕಿ+ ಘಟೋತ್ಕಚರ್
ಉಲಿದು +ಹರಿತರೆ+ ಕೇಳಿದ್+ಆ+ ಕ್ಷಣ
ದಲಿ+ ಮುರಾಂತಕ+ ಸಹಿತ +ವಹಿಲದಿ +ಬಂದನಾ +ಪಾರ್ಥ

ಅಚ್ಚರಿ:
(೧) ನಾಯಕಿತ್ತಿ- ಪದದ ಬಳಕೆ

ಪದ್ಯ ೧೦: ಭೀಮನನ್ನು ಕುರುಸೇನೆಯು ಹೇಗೆ ಮುತ್ತಿತು?

ಸಿಕ್ಕಿದನು ರಿಪು ಸ್ವಾಮಿದ್ರೋಹನು
ಚುಕ್ಕಿಯೋ ತಡೆ ಹೋಗಬಿಡದಿರಿ
ಹೊಕ್ಕುಳಲಿ ಮಗುವುಂಟೆ ಹಣೆಯಲಿ ನೋಟವೇ ಹಗೆಗೆ
ಹೊಕ್ಕು ಹೊಯ್ ಹೊಯ್ ನೆತ್ತರೊಬ್ಬರಿ
ಗೊಕ್ಕುಡಿತೆಯೇ ಸಾಕೆನುತ ಬಲ
ಮುಕ್ಕುರುಕಿತನಿಲಜನ ಕಾಣೆನು ನಿಮಿಷಮಾತ್ರದಲಿ (ಕರ್ಣ ಪರ್ವ, ೧೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನನ್ನು ನೋಡಿದ ಕುರುಸೇನೆಯು, ಕುರುಸೇನೆಯು ಸ್ವಾಮಿದ್ರೋಹಿ ವೈರಿಯು ಸಿಕ್ಕ. ಇವನನ್ನು ಹೋಗಲು ಬಿಡದಿರಿ. ಇವನೊಬ್ಬ ಅಲ್ಪ ವ್ಯಕ್ತಿ. ನೀವೆಲ್ಲರು ಹೆದರಬೇಡಿ, ಇವನಿಗೆ ಹೊಕ್ಕುಳಲ್ಲಿ ಮಗುವಿದೆಯೇ (ಇವನೇನು ವಿಷ್ಣುವೇ?) ಇವನಿಗೇನು ಹಣೆಯಲ್ಲಿ ಕಣ್ಣಿದೆಯೇ? (ಇವನೇನು ಶಿವನೆ) ಮುನ್ನುಗ್ಗಿ ಹೊಡೆಯಿರಿ. ಇವನ ರಕ್ತ ನಮ್ಮಲ್ಲಿ ಒಬ್ಬರಿಗೆ ಒಂದೇ ಗುಟುಕು ಸಿಕ್ಕೀತು ಎಂದು ಸೇನೆಯು ನುಗ್ಗಿತು. ಒಂದು ನಿಮಿಷಮಾತ್ರದಕ್ಕೆ ಭೀಮನು ಕಾಣೆಯಾದಂತೆ ತೋರಿದನು.

ಅರ್ಥ:
ಸಿಕ್ಕು: ಲಭಿಸು; ರಿಪು: ವೈರಿ; ಸ್ವಾಮಿ: ಒಡೆಯ; ದ್ರೋಹಿ: ಕೇಡನ್ನು ಬಗೆಯುವವನು, ವಂಚಕ; ಚುಕ್ಕಿ: ಅಲ್ಪವ್ಯಕ್ತಿ; ತಡೆ: ನಿಲ್ಲಿಸು; ಹೋಗು: ತೆರಳು; ಬಿಡದಿರು: ತಡೆಯಿರಿ, ನಿಲ್ಲಿಸಿ; ಹೊಕ್ಕುಳು: ನಾಭಿ; ಮಗು: ಹಸುಳೆ, ಶಿಶು; ಹಣೆ: ಲಲಾಟ, ಭಾಳ; ನೋಟ: ಕಣ್ಣು; ಹಗೆ: ವೈರಿ; ಹೊಕ್ಕು: ನೂಕು, ಸೇರು; ಹೊಯ್: ಉತ್ಸಾಹದಲ್ಲಿ ಹೇಳುವ ಮಾತು; ನೆತ್ತರು: ರಕ್ತ; ಒಕ್ಕುಡಿತೆ:ಒಂದು ಬೊಗಸೆ; ಸಾಕು: ಕೊನೆ; ಬಲ: ಶಕ್ತಿ; ಮುಕ್ಕುರು: ಕವಿ, ಮುತ್ತು, ಆವರಿಸು; ಅನಿಲಜ: ವಾಯುಪುತ್ರ (ಭೀಮ); ಕಾಣು: ತೋರಿಸು; ನಿಮಿಷ: ಕ್ಷಣ, ಸಮಯ;

ಪದವಿಂಗಡಣೆ:
ಸಿಕ್ಕಿದನು +ರಿಪು +ಸ್ವಾಮಿದ್ರೋಹನು
ಚುಕ್ಕಿಯೋ +ತಡೆ +ಹೋಗ+ಬಿಡದಿರಿ
ಹೊಕ್ಕುಳಲಿ+ ಮಗುವುಂಟೆ +ಹಣೆಯಲಿ +ನೋಟವೇ +ಹಗೆಗೆ
ಹೊಕ್ಕು +ಹೊಯ್ +ಹೊಯ್ +ನೆತ್ತರ್+ಒಬ್ಬರಿಗ್
ಒಕ್ಕುಡಿತೆಯೇ +ಸಾಕೆನುತ +ಬಲ
ಮುಕ್ಕುರುಕಿತ್+ಅನಿಲಜನ +ಕಾಣೆನು +ನಿಮಿಷಮಾತ್ರದಲಿ

ಅಚ್ಚರಿ:
(೧) ವಿಷ್ಣು ಮತ್ತು ಶಿವನನ್ನು ಕರೆದ ಬಗೆ – ಹೊಕ್ಕುಳಲಿ ಮಗುವುಂಟೆ ಹಣೆಯಲಿ ನೋಟವೇ

ಪದ್ಯ ೪೯: ದುರ್ಯೋಧನನ ಕರೆಗೆ ಯಾರು ಮುಂದೆ ಬಂದರು?

ಎಲೆಲೆ ಕರ್ಣ ಕುಮಾರನೋ ಪಡಿ
ಬಲವ ಕರೆಯೋ ಬಾಲನೊಬ್ಬನೆ
ನಿಲುವುದರಿದೋ ಸ್ವಾಮಿದ್ರೋಹರ ಹಿಡಿದು ನೂಕೆನುತ
ಉಲಿಯೆ ಕೌರವ ರಾಯನುಬ್ಬಿದ
ಕಳಕಳದ ಬಹುವಿಧದ ವಾದ್ಯದ
ದಳದ ದೆಖ್ಖಾದೆಖ್ಖಿಯಲಿ ಕಲಿಕರ್ಣ ನಡೆತಂದ (ಕರ್ಣ ಪರ್ವ, ೧೦ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅಯ್ಯೋ ಕರ್ಣನ ಮಗನೊಬ್ಬನೇ ವೈರಿಗಳ ಮಧ್ಯೆ ಯುದ್ಧಮಾಡುತ್ತಿದ್ದಾನೆ, ಅವನ ಸಹಾಯಕ್ಕೆ ಸೈನ್ಯವನ್ನು ಕಳಿಸಿರಿ, ಓಡಿಹೋಗುತ್ತಿರುವ ಸ್ವಾಮಿದ್ರೋಹಿಗಳನ್ನು ಹಿಡಿದು ನೂಕಿರಿ ಎಂದೆನಲು ರಣವಾದ್ಯಗಳು ಮೊರೆಯುತ್ತಿರಲು ಸೈನ್ಯ ಸಮೂಹದೊಡನೆ ಕರ್ಣನು ಮುಂದೆ ಬಂದನು.

ಅರ್ಥ:
ಎಲೆಲೆ: ಓಹೋ; ಕುಮಾರ: ಪುತ್ರ; ಪಡಿಬಲ: ಎದುರುಪಡೆ; ಕರೆ: ಬರೆಮಾಡು; ಬಾಲ: ಕುಮಾರ; ಒಬ್ಬ: ಒಂಟಿ; ನಿಲುವು: ತಡೆ; ಸ್ವಾಮಿ: ಒಡೆಯ; ದ್ರೋಹ: ವಿಶ್ವಾಸಘಾತ; ಹಿಡಿ: ಬಂಧಿಸು; ನೂಕು: ತಳ್ಳು; ಉಲಿ:ಧ್ವನಿ; ರಾಯ: ದೊರೆ; ಉಬ್ಬಿ:ಹಿಗ್ಗು; ಕಳಕಳ: ವ್ಯಥೆ, ಉದ್ವಿಘ್ನತೆ; ಬಹು: ಬಹಳ; ವಿಧ: ರೀತಿ, ಕ್ರಮ; ವಾದ್ಯ: ಸಂಗೀತದ ಸಾಧನ; ದಳ: ಸೈನ್ಯ; ದೆಖ್ಖಾಳ: ತೀಕ್ಷಣ, ರಭಸ; ನಡೆತಂದ: ಮುನ್ನಡೆದ; ಕಲಿ: ಶೂರ;

ಪದವಿಂಗಡಣೆ:
ಎಲೆಲೆ+ ಕರ್ಣ +ಕುಮಾರನೋ +ಪಡಿ
ಬಲವ +ಕರೆಯೋ +ಬಾಲನೊಬ್ಬನೆ
ನಿಲುವುದರಿದೋ +ಸ್ವಾಮಿದ್ರೋಹರ+ ಹಿಡಿದು+ ನೂಕೆನುತ
ಉಲಿಯೆ +ಕೌರವ+ ರಾಯನ್+ಉಬ್ಬಿದ
ಕಳಕಳದ +ಬಹುವಿಧದ +ವಾದ್ಯದ
ದಳದ +ದೆಖ್ಖಾದೆಖ್ಖಿಯಲಿ +ಕಲಿಕರ್ಣ +ನಡೆತಂದ

ಅಚ್ಚರಿ:
(೧) ದೆಖ್ಖಾದೆಖ್ಖಿಯಲಿ – ಪದದ ಬಳಕೆ
(೨) ದುರ್ಯೋಧನನ ಕಳಕಳಿ – ಎಲೆಲೆ ಕರ್ಣ ಕುಮಾರನೋ ಪಡಿಬಲವ ಕರೆಯೋ ಬಾಲನೊಬ್ಬನೆ ನಿಲುವುದರಿದೋ

ಪದ್ಯ ೨೬: ಇಂದ್ರನು ದೇವತೆಗಳನ್ನು ಹೇಗೆ ಹುರಿದುಂಬಿಸಿದನು?

ಹೊಗಲಿ ಸಮರಕೆ ಸ್ವಾಮಿದ್ರೋಹರು
ತೆಗೆಯಬೇಡೋ ಬೆನ್ನ ಲಾಂಕೆಗೆ
ಜಗದೊಡೆಯನೋ ಫಡಫಡಂಜದಿರೆನಲು ಸುರರಾಜ
ಉಗಿದ ಖಡುಗದ ತಿರುವಿನಂಬಿನ
ಬಿಗಿದ ಬಿಲ್ಲಿನ ಸುರಪನಿದಿರಿನೊ
ಳಗಣಿತಾಮರ ಭಟರು ಹೊಕ್ಕುದು ದೈತ್ಯಬಲದೊಳಗೆ (ಕರ್ಣ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೇವತೆಗಳು ಇಂದ್ರನನ್ನು ಬೈಯ್ಯುವುದನ್ನು ಕಂಡನಿಂದ್ರನು, ಎಲೋ ಸ್ವಾಮಿದ್ರೋಹಿಗಳೇ, ಯುದ್ಧಕ್ಕೆ ಮುನ್ನುಗ್ಗಿ, ನಮ್ಮ ಬೆಂಬಲಕ್ಕೆ ಜಗದೊಡೆಯನಾದ ಶಿವನೇ ಇದ್ದಾನೆ, ಹೆದರಬೇಡಿರಿ ಎಂದನು. ಆಗ ಖಡ್ಗಧಾರಿಗಳಾಗಿ, ಬಿಲ್ಲಿನ ತಿರುವಿನಲ್ಲಿ ಬಾಣವನ್ನು ಹೂಡಿ ದೇವತೆಗಳು ಸಮರಕ್ಕೆ ಮುನ್ನುಗ್ಗಿದರು.

ಅರ್ಥ:
ಹೊಗಲಿ: ನಡೆಯಿರಿ; ಸಮರ: ಯುದ್ಧ; ಸ್ವಾಮಿ: ಒಡೆಯ; ದ್ರೋಹ: ವಿಶ್ವಾಸಘಾತ, ವಂಚನೆ; ತೆಗೆ: ಹೊರಹಾಕು; ಬೆನ್ನ: ಹಿಂದೆ; ಲಾಂಕೆ: ಬೆಂಬಲ; ಜಗ: ಜಗತ್ತು; ಒಡೆಯ: ದೊರೆ, ನಾಯಕ; ಫಡಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಅಂಜದಿರಿ: ಹೆದರದಿರಿ; ಸುರರಾಜ: ದೇವತೆಗಳ ಒಡೆಯ (ಇಂದ್ರ); ಉಗಿ: ಹೊರಹಾಕು; ಖಡುಗ: ಕತ್ತಿ; ತಿರುವು: ಸುತ್ತು; ಅಂಬು: ಬಾಣ; ಬಿಗಿ: ಗಟ್ಟಿಯಾಗಿ ಕಟ್ಟು; ಬಿಲ್ಲು: ಧನಸ್ಸು; ಸುರಪ:ಇಂದ್ರ; ಇದಿರು: ಎದುರು; ಅಗಣಿತ: ಅಸಂಖ್ಯಾತ; ಅಮರ: ದೇವತೆಗಳು; ಭಟ: ಸೈನ್ಯ; ಹೊಕ್ಕು: ಸೇರು; ದೈತ್ಯ: ದಾನವ; ಬಲ: ಸೈನ್ಯ;

ಪದವಿಂಗಡಣೆ:
ಹೊಗಲಿ +ಸಮರಕೆ+ ಸ್ವಾಮಿದ್ರೋಹರು
ತೆಗೆಯಬೇಡೋ +ಬೆನ್ನ +ಲಾಂಕೆಗೆ
ಜಗದೊಡೆಯನೋ +ಫಡಫಡ್+ಅಂಜದಿರ್+ಎನಲು +ಸುರರಾಜ
ಉಗಿದ +ಖಡುಗದ +ತಿರುವಿನ್+ಅಂಬಿನ
ಬಿಗಿದ +ಬಿಲ್ಲಿನ +ಸುರಪನ್+ಇದಿರಿನೊಳ್
ಅಗಣಿತ+ಅಮರ +ಭಟರು +ಹೊಕ್ಕುದು +ದೈತ್ಯ+ಬಲದೊಳಗೆ

ಅಚ್ಚರಿ:
(೧) ಸುರರಾಜ, ಸುರಪ – ಇಂದ್ರನನ್ನು ಕರೆದ ಬಗೆ
(೨) ದೇವತೆಗಳು ಯುದ್ಧಕ್ಕೆ ಹೋದ ಪರಿ – ಉಗಿದ ಖಡುಗದ ತಿರುವಿನಂಬಿನ ಬಿಗಿದ ಬಿಲ್ಲಿನ

ಪದ್ಯ ೯: ಸಹದೇವನ ರಥವನ್ನು ಯಾರು ತಡೆದರು?

ರಾಯನನುಜನ ಹರಿಬದಲಿ ರಾ
ಧೇಯ ಹೊಕ್ಕನು ಸ್ವಾಮಿದ್ರೋಹರ
ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ
ನೋಯಿಸುವೆನೊಮ್ಮೆನುತ ತಿರುವಿನ
ಸಾಯಕದ ಕಿವಿಗಡಿಯ ತೆರಹಿನ
ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ (ಕರ್ಣ ಪರ್ವ, ೪ ಸಂಧಿ, ೯ ಪದ್ಯ)

ತಾತ್ಪರ್ಯ:
ದುಶ್ಯಾಸನು ಪಲಾಯನ ಮಾಡಿದ ವಿಷಯವನ್ನು ತಿಳಿದು ಸೇನಾಧಿಪತಿಯಾದ ಕರ್ಣನು ಇವನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಬಂದನು, ಈ ರೀತಿ ಸ್ವಾಮಿದ್ರೋಹಿಗಳನ್ನುಳಿಸಿದರೆ ಕೆಲಸವಾಗುವುದಿಲ್ಲ, ಇವರಿಗೆ ಯಾವ ಔಷದವನ್ನೆರೆಯಲಿ? ಇವರನ್ನು ನೋಯಿಸಿ ಕೈಬಿಡುತ್ತೇನೆ ಎಂದುಕೊಂಡು ಬಿಲ್ಲನ್ನು ಹೆದೆಯೇರಿಸಿ ಬಾಣವನ್ನು ಕಿವಿಯವರೆಗೆಳೆದು ಬಿಟ್ಟು, ಸಹದೇವನ ರಥವನ್ನು ತಡೆದನು.

ಅರ್ಥ:
ರಾಯ: ರಾಜ; ಅನುಜ: ತಮ್ಮ; ಹರಿಬ: ಕಾಳಗ, ಯುದ್ಧ; ರಾಧೇಯ: ಕರ್ಣ; ಹೊಕ್ಕು: ಸೇರು; ಸ್ವಾಮಿ: ದೊರೆ, ಒಡೆಯ; ದ್ರೋಹ: ಮೋಸ; ಕಾಯಿದರೆ: ರಕ್ಷಿಸು; ಕೈಕೊಳ್ಳದು: ದೊರಕದು; ಔಷಧ: ಮದ್ದು; ನೋವು: ಬೇನೆ, ಶೂಲೆ; ತಿರುವು:ಬಿಲ್ಲಿನ ಹಗ್ಗ, ಹೆದೆ; ಸಾಯಕ: ಬಾಣ, ಶರ; ಕಿವಿ: ಕರ್ಣ; ತೆರಹು: ಬಿಟ್ಟು; ರಾಯ: ರಾಜ; ದಳಪತಿ: ಸೇನಾಧಿಪತಿ; ತರುಬು: ತಡೆ, ನಿಲ್ಲಿಸು; ಮಾದ್ರೀಸುತ: ಸಹದೇವ; ಸುತ: ಮಗ; ರಥ: ಬಂಡಿ;

ಪದವಿಂಗಡಣೆ:
ರಾಯನ್+ಅನುಜನ +ಹರಿಬದಲಿ +ರಾ
ಧೇಯ +ಹೊಕ್ಕನು +ಸ್ವಾಮಿ+ದ್ರೋಹರ
ಕಾಯಿದರೆ +ಕೈಕೊಳ್ಳದ್+ಔಷಧವ್+ಆವುದ್+ಇವದಿರಿಗೆ
ನೋಯಿಸುವೆನ್+ಒಮ್ಮೆನುತ +ತಿರುವಿನ
ಸಾಯಕದ +ಕಿವಿಗಡಿಯ +ತೆರಹಿನ
ರಾಯ +ದಳಪತಿ +ತರುಬಿದನು +ಮಾದ್ರೀಸುತನ +ರಥವ

ಅಚ್ಚರಿ:
(೧) ರಾಧೇಯ, ರಾಯ ದಳಪತಿ – ಕರ್ಣನನ್ನು ಸಂಭೋದಿಸಿರುವ ಬಗೆ
(೨) ಬಾಣಬಿಡಲು ಅಣಿಯಾಗುವುದನ್ನು ಚಿತ್ರಿಸಿರುವ ಬಗೆ – ತಿರುವಿನ
ಸಾಯಕದ ಕಿವಿಗಡಿಯ ತೆರಹಿನ ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ

ಪದ್ಯ ೧೦: ಕ್ಷೇಮದೂರ್ತಿಯು ಪಲಾಯನ ಮಾಡಿದ ಸೈನ್ಯವನ್ನು ನೋಡಿ ಏನೆಂದನು?

ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರ ಗಜಸಹಿತ (ಕರ್ಣ ಪರ್ವ, ೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಲಾಯನ ಮಾಡುತ್ತಿದ್ದ ಕುರುಬಲವನ್ನು ನೋಡಿ ಕ್ಷೇಮಧೂರ್ತಿಯು (ಸಾಲ್ವರಾಜನ ಸೇನಾಧಿಪತಿ) ಇವರು ಸ್ವಾಮಿದ್ರೋಹಿಗಳು, ಎಲ್ಲಿಗೆ ಹೋಗಿ ತಮ್ಮ ಕುಲದ ಕೀರ್ತಿಯ ಬೇರುಗಳನ್ನು ಮುರಿದರೋ ಏನೋ ಇವರು ಕೌರವಸೇನೆಯ ಪಟ್ಟದಾನೆಗಳಂತೆ! ಪಾಂಡವರ ಸೈನ್ಯವು ಕೊಡದಲ್ಲಿಟ್ಟ ಕರಿನಾಗರಹಾವಿನಂತೆ ಇವರು. ಇದನ್ನು ಇದಿರಿಸಬಹುದೇ? ಎಂದು ಸಹಸ್ರ ಆನೆಗಳ ಸೈನ್ಯದೊಡನೆ ಪಾಂಡವ ಸೇನೆಯನ್ನು ತರುಬಿ ನಿಂತನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸ್ವಾಮಿ: ದೊರೆ; ದ್ರೋಹ: ಮೋಸ; ಸಿಡಿ: ಹೊರಹೊಮ್ಮು; ನಿಜ: ದಿಟ; ಕುಲ: ವಂಶ; ಬೇರು: ಮೂಲ, ಬುಡ; ಕಡಿ: ಕಿತ್ತುಹಾಕು, ಸೀಳು; ಬಲ: ಸೈನ್ಯ; ಕಾಹಿ: ರಕ್ಷಿಸುವ, ಕಾಯುವ; ಪಟ್ಟ:ಅಧಿಕಾರ ಸೂಚಕವಾದ ಚಿನ್ನದ ಪಟ್ಟಿ; ಆನೆ: ಕರಿ, ಗಜ; ಕೊಡ: ಕುಂಭ; ಫಣಿ: ಹಾವು; ಬಲ: ಸೈನ್ಯ; ತುಡುಕು: ಹೋರಾಡು, ಸೆಣಸು; ಸೇನೆ: ಸೈನ್ಯ; ತಡೆ: ಅಡ್ಡಹಾಕು; ನಿಂದು: ನಿಲ್ಲು; ಸಹಸ್ರ: ಸಾವಿರ; ಗಜ: ಆನೆ; ಸಹಿತ: ಜೊತೆ;

ಪದವಿಂಗಡಣೆ:
ಫಡಫಡ್+ಎತ್ತಲು +ಸ್ವಾಮಿ+ದ್ರೋಹರು
ಸಿಡಿದರೋ +ನಿಜಕುಲದ+ ಬೇರ್ಗಳ
ಕಡಿದರೋ +ಕುರುಬಲದ +ಕಾಹಿನ +ಪಟ್ಟದಾನೆಗಳು
ಕೊಡನ +ಫಣಿಯಿದು +ಪಾಂಡವರ +ಬಲ
ತುಡುಕಬಹುದೇ +ಎನುತ +ಸೇನೆಯ
ತಡೆದು +ನಿಂದನು +ಕ್ಷೇಮಧೂರ್ತಿ +ಸಹಸ್ರ +ಗಜ+ಸಹಿತ

ಅಚ್ಚರಿ:
(೧) ಫಡಫಡ – ಪದದ ರಚನೆ
(೨) ಕೊಡನ ಫಣಿಯಿದು – ಪದ ರಚನೆ
(೩) ಓಡುವ ಸೈನ್ಯವನ್ನು ವಿವರಿಸುವ ಬಗೆ – ಸ್ವಾಮಿದ್ರೋಹರು, ನಿಜಕುಲದ ಬೇರ್ಗಳ
ಕಡಿದರೋ, ಕುರುಬಲದ ಕಾಹಿನ ಪಟ್ಟದಾನೆಗಳು, ಕೊಡನ ಫಣಿಯಿದು