ಪದ್ಯ ೫೬: ಅರ್ಜುನನು ಕರ್ಮದ ಬಗ್ಗೆ ಯಾವ ಪ್ರಶ್ನೆಯನ್ನು ಕೇಳಿದನು?

ಅಸುರರಿಪು ಕೇಳಾದಿಯಲಿ ಸಂ
ಚಿಸಿದ ಕರ್ಮವು ಜೀವರನು ಬಂ
ಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು
ಪಸರಿಸೆತಲಾ ಸ್ಮಾರ್ತಮಾರ್ಗ
ಪ್ರಸರ ಕೊಂದಡೆ ಪಾಪ ಪಾವನ
ವೆಸಗೆ ಪುಣ್ಯವೆನಿಪ್ಪ ವಿವರಕ್ಕೇನು ನೆಲೆಯೆಂದ (ಭೀಷ್ಮ ಪರ್ವ, ೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೃಷ್ಣ ಆದಿಯಲ್ಲಿ ಕರ್ಮವು ಜೀವರನ್ನು ಬಂಧಿಸಿದುದೇ ಆದರೆ, ಕರ್ಮದ ಗುಣದೋಷಗಳು ಕರ್ತೃವನ್ನು ಹೇಗೆ ತಾನೇ ಬಂಧಿಸಲು ಸಾಧ್ಯ, ಆದಿಯಲ್ಲಿ ಸಂಚಿಸಿದ ಕರ್ಮವಾದರೂ ಯಾವುದು? ಶೃತಿ ವಿಹಿತವಾದ ಸ್ಮೃತಿಯಲ್ಲಿ ವಿಧಿಸಿದ ವಿಧಾನದಂತೆ ಕೊಂದರೆ ಪಾಪ ಬರುತ್ತದೆ, ಪವಿತ್ರ ಕರ್ಮದಿಂದ ಪುಣ್ಯವು ಬರುತ್ತದೆ ಎನ್ನುವುದಕ್ಕೆ ಆಧಾರವೇನು, ಪ್ರಥಮವಾಗಿ ಸೃಷ್ಟಿಯಾದ ಜೀವರಿಗೆ ಯಾವ ಕರ್ಮವಿರಲು ಸಾಧ್ಯ?

ಅರ್ಥ:
ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಕೇಳು: ಆಲಿಸು; ಆದಿ: ಮುಂಚೆ; ಸಂಚಿಸು: ಸಂಗ್ರಹಿಸು; ಕರ್ಮ: ಕೆಲಸ, ಕಾರ್ಯದ ಫಲ; ಜೀವ: ಉಸಿರು; ಬಂಧಿಸು: ಕಟ್ಟು; ಗುಣ: ನಡತೆ; ದೋಷ: ತಪ್ಪು; ಕರ್ತೃ: ಮಾಡುವವನು; ತಾಗು: ಮುಟ್ಟು; ಪಸರಿಸು: ಹರಡು; ಸ್ಮಾರ್ತ: ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ; ಮಾರ್ಗ: ದಾರಿ; ಪ್ರಸರ: ಹರಡುವುದು; ಕೊಂದು: ಕೊಲ್ಲು; ಪಾಪ: ಕೆಟ್ಟ ಕೆಲಸ; ಪಾವನ: ಶುದ್ಧವಾದುದು; ಎಸಗು: ಹೊರಹಾಕು; ಪುಣ್ಯ: ಒಳ್ಳೆಯ ಕೆಲಸ; ವಿವರ: ವಿಸ್ತಾರ, ಹರಹು; ನೆಲೆ: ಆಶ್ರಯ;

ಪದವಿಂಗಡಣೆ:
ಅಸುರರಿಪು +ಕೇಳ್+ಆದಿಯಲಿ +ಸಂ
ಚಿಸಿದ +ಕರ್ಮವು +ಜೀವರನು +ಬಂ
ಧಿಸಲು +ತದ್ಗುಣದೋಷ +ಕರ್ತೃವನೇಕೆ+ ತಾಗುವುದು
ಪಸರಿಸೆತಲಾ+ ಸ್ಮಾರ್ತ+ಮಾರ್ಗ
ಪ್ರಸರ+ ಕೊಂದಡೆ +ಪಾಪ +ಪಾವನ
ವೆಸಗೆ+ ಪುಣ್ಯವೆನಿಪ್ಪ+ ವಿವರಕ್ಕೇನು +ನೆಲೆಯೆಂದ

ಅಚ್ಚರಿ:
(೧) ಅರ್ಜುನನ ಪ್ರಶ್ನೆ – ಆದಿಯಲಿ ಸಂಚಿಸಿದ ಕರ್ಮವು ಜೀವರನು ಬಂಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು

ಪದ್ಯ ೩೦: ಅರ್ಜುನನನ್ನು ಊರ್ವಶಿಯು ಹೇಗೆ ಹಂಗಿಸಿದಳು?

ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತ ವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರಹರಯೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನ ತರ್ಕವನ್ನು ಕೇಳಿ ಕೋಪಗೊಂಡು, ಹೌದಲ್ಲವೇ, ನೀವು ವೇದವಿಹಿತ ಮಾರ್ಗದವರು, ಅಲ್ಲದೆ ಸ್ಮೃತಿಯಲ್ಲಿ ವಿಧಿಸಿದಂತೆ ನಡೆಯುವವರೆಂಬುದನ್ನು ಮೂರು ಲೋಕದ ಜನಗಳೆಲ್ಲರೂ ಅರಿತಿಲ್ಲವೇ, ಐವರು ಒಬ್ಬ ಹೆಂಗಸನ್ನು ಮದುವೆಯಾಗಿರುವರಂತೆ, ಅವರು ನೀವಲ್ಲ ತಾನೆ, ನಮ್ಮನ್ನು ಮಾತ್ರ ಸ್ವಲ್ಪವೂ ಬಯಸದಿರುವವರು ನೀವಲ್ಲವೇ ಶಿವ ಶಿವಾ ಎಂದು ಊರ್ವಶಿ ಅರ್ಜುನನನ್ನು ಹಂಗಿಸಿದಳು.

ಅರ್ಥ:
ಅಹುದು: ಹೌದು; ಶ್ರೌತ: ವೇದಗಳಿಗೆ ಸಂಬಂಧಿಸಿದ; ಪಥ: ಮಾರ್ಗ; ಬಹಿರಿ: ಬಂದಿರಿ; ಸ್ಮಾರ್ತ:ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ; ವಿಧಿ: ನಿಯಮ; ಸನ್ನಿಹಿತ: ಹತ್ತಿರ, ಸಮೀಪ; ಅರಿ: ತಿಳಿ; ಮೂಜಗ: ತ್ರಿಲೋಕ; ಜನ: ಮನುಷ್ಯ; ಮಹಿಳೆ: ನಾರಿ; ಒಡಗೂಡು: ಸೇರು; ನಿಸ್ಪೃಹ: ಆಸೆ ಇಲ್ಲದವ; ಹರ: ಶಿವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಹುದ್+ಅಹುದಲೇ +ಶ್ರೌತ +ಪಥದಲಿ
ಬಹಿರಿ +ನೀವೇ +ಸ್ಮಾರ್ತ +ವಿಧಿ +ಸ
ನ್ನಿಹಿತರ್+ಎಂಬುದನ್+ಅರಿಯದೇ +ಮೂಜಗದ+ ಜನವೆಲ್ಲ
ಮಹಿಳೆ+ಒಬ್ಬಳೊಳ್+ಐವರ್+ಒಡಗೂ
ಡಿಹರು +ನೀವೇನಲ್ಲಲೇ +ನಿ
ಸ್ಪೃಹರು +ನೀವ್ +ನಮ್ಮಲ್ಲಿ+ ಹರಹರ+ಎಂದಳ್+ಇಂದುಮುಖಿ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ – ಮಹಿಳೆಯೊಬ್ಬಳೊಳೈವರೊಡಗೂಡಿಹರು ನೀವೇನಲ್ಲಲೇ

ಪದ್ಯ ೮೬: ಪುರೋಹಿತನ ಲಕ್ಷಣಗಳೇನು?

ದಂಡ ನೀತಿ ಸ್ಮಾರ್ತ ಶೌಚೋ
ದ್ದಂಡ ವೇದಾಧ್ಯಾಯನ ನಿಪುಣರು
ಪಂಡಿತಪ್ರಿಯ ಶಾಂತಿ ಪೌಷ್ಟಿಕ ಕರ್ಮ ದೇಶಿಕನ
ಚಂಡ ದೈವಜ್ಞನನುನುತಗುಣ
ಮಂಡಿತನ ಬಹುಶಾಸ್ತ್ರ ಪಠನಾ
ಖಂಡಿತನ ಪೌರೋಹಿತನ ಮಾಡುವುದು ಮತವೆಂದ (ಉದ್ಯೋಗ ಪರ್ವ, ೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ರಾಜನೀತಿ, ಸ್ಮೃತಿಗಳಲ್ಲಿ ಪಾಂಡಿತ್ಯ ನಿರ್ಮಲ ಮನಸ್ಸುಳ್ಳವ, ವೇದಾಧ್ಯಯನಗಳಲ್ಲಿ ನಿಪುಣನಾಗಿ, ಪಂಡಿತರಿಗೆ ಪ್ರಿಯನಾಗಿ, ಶಾಂತಿಕರ್ಮ, ಪೌಷ್ಟಿಕ ಕರ್ಮಗಳಲ್ಲಿ ಗುರುವಾಗಿ, ಮಂತ್ರ ಶಾಸ್ತ್ರಜ್ಞ, ಜ್ಯೋತಿಷ್ಯ ಶಾಸ್ತ್ರಗಳ ಪರಿಣತಿಹೊಂದಿ, ಸದ್ಗುಣಗಳ ನಿಧಿಯಾಗಿ, ಅಖಂಡವಾಗಿ ಅನೇಕ ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿರುವವನನ್ನು ಪುರೋಹಿತನೆಂದು ಅಂಗೀಕರಿಸಬಹುದು.

ಅರ್ಥ:
ದಂಡ:ಕೋಲು; ನೀತಿ:ಮಾರ್ಗ ದರ್ಶನ, ಮುನ್ನಡೆಸುವಿಕೆ; ದಂಡನೀತಿ:ಸಾಮ, ದಾನ, ಭೇದ ಮತ್ತು ದಂಡಗಳೆಂಬ ರಾಜನೀತಿಯ ನಾಲ್ಕು ಉಪಾಯ ಗಳಲ್ಲೊಂದು; ಸ್ಮಾರ್ತ:ಸ್ಮೃತಿಗಳಲ್ಲಿ ಪರಿಣತನಾದವ; ಶೌಚ: ಕಳಂಕ ರಹಿತವಾದ ನಡತೆ, ಸದಾಚಾರ; ಉದ್ದಂಡ:ಶ್ರೇಷ್ಠ; ವೇದ: ತಿಳಿವಳಿಕೆ, ಜ್ಞಾನ; ಪಂಡಿತ:ವಿದ್ವಾಂಸ; ಪ್ರಿಯ: ವಾತ್ಸಲ್ಯ, ಇಷ್ಟವಾದುದು; ಶಾಂತಿ: ನೆಮ್ಮದಿ, ಚಿತ್ತಸ್ವಾಸ್ಥ್ಯ; ಪೌಷ್ಟಿಕ: ಶಕ್ತಿಯನ್ನು ಕೊಡುವಂತಹದು; ಕರ್ಮ: ಕೆಲಸ; ದೇಶಿಕ: ಆಚಾರ್ಯ, ಗುರು; ಚಂಡ:ತೀಕ್ಷ್ಣವಾದ, ಪ್ರಚಂಡ; ದೈವಜ್ಞ: ಭವಿಷ್ಯವನ್ನು ಹೇಳುವವನು, ಜ್ಯೋತಿಷಿ; ನುತ: ಕೊಂಡಾಡಿದ, ಹೊಗಳಿದ; ಗುಣ: ನಡತೆ; ಮಂಡಿತ: ಶೋಭೆಗೊಂಡ, ಅಲಂಕೃತವಾದ ; ಬಹು: ಬಹಳ; ಶಾಸ್ತ್ರ: ಧಾರ್ಮಿಕ ವಿಷಯ; ಪಠನ: ಓದುವಿಕೆ, ವಾಚನ; ಅಖಂಡ: ಇಡಿಯಾದ, ಪೂರ್ತಿಯಾದ; ಪುರೋಹಿತ: ವೇದೋಕ್ತ ವಿಧಿ, ಧಾರ್ಮಿಕ ವ್ರತ ಮಾಡಿಸುವ; ಮತ: ಅಭಿಪ್ರಾಯ, ಆಶಯ;

ಪದವಿಂಗಡಣೆ:
ದಂಡ + ನೀತಿ +ಸ್ಮಾರ್ತ+ ಶೌಚ
ಉದ್ದಂಡ+ ವೇದಾಧ್ಯಾಯನ+ ನಿಪುಣರು
ಪಂಡಿತಪ್ರಿಯ+ ಶಾಂತಿ +ಪೌಷ್ಟಿಕ+ ಕರ್ಮ +ದೇಶಿಕನ
ಚಂಡ +ದೈವಜ್ಞನನು+ನುತಗುಣ
ಮಂಡಿತನ+ ಬಹುಶಾಸ್ತ್ರ +ಪಠನ
ಅಖಂಡಿತನ+ ಪೌರೋಹಿತನ+ ಮಾಡುವುದು +ಮತವೆಂದ

ಅಚ್ಚರಿ:
(೧) ದಂಡ, ಉದ್ದಂಡ, ಚಂಡ – ಪ್ರಾಸ ಪದಗಳು
(೨) ಪುರೋಹಿತನೆನಿಸಲು ೧೦ ಗುಣಗಳನ್ನು ಉಲ್ಲೇಖಿಸಿರುವ ಪದ್ಯ