ಪದ್ಯ ೧೦: ಯುಧಿಷ್ಠಿರನು ಹೇಗೆ ಆಸೀನನಾಗಿದ್ದನು?

ಹರನ ನಾಲಕು ಮುಖದ ಮಧ್ಯ
ಸ್ಫುರಿತ ದೀಶಾನನವೊಲಿರೆ ಸೋ
ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ
ಅರಸಿಯನು ವಾಮದಲಿ ವಿವಿಧಾ
ಭರಣ ಮಣಿರಶ್ಮಿಗಳ ಹೊದರಿನ
ಹೊರಳಿಯಲಿ ಕಣ್ಣಾಲಿಗಳು ಕೋರೈಸಿದವು ನಿಮಿಷದಲಿ (ವಿರಾಟ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈಶ್ವರನ ನಾಲ್ಕು ಮುಖಗಳಾದ ಸದ್ಯೋಜಾತ, ವಾಮದೇವ, ತತ್ಪುರುಷ, ಅಘೋರ ಗಳ ನಡುವೆ ಹೊರಹುಮ್ಮುವ ಈಶಾನ ಮುಖದಂತೆ, ಯುಧಿಷ್ಠಿರನು ನಾಲ್ವರು ತಮ್ಮಂದಿರ ನಡುವೆ ಆಸೀನನಾಗಿರುವುದನ್ನು ಕಂಡನು, ಆತನ ವಾಮಭಾಗದಲ್ಲಿ ಸರ್ವಾಭರಣ ಭೂಷಿತಳಾಗಿ ದ್ರೌಪದಿಯು ಕೂತಿದ್ದಳು. ಆ ದೃಶ್ಯವು ನೋಡುವವರ ಕಣ್ಣುಗಳನ್ನು ಕುಕ್ಕುತ್ತಿದ್ದವು.

ಅರ್ಥ:
ಹರ: ಶಿವ; ಮುಖ: ಆನನ; ಮಧ್ಯ: ನಡುವೆ; ಸ್ಫುರಿತ:ಹೊಳೆವ; ಸೋದರ: ಅಣ್ಣ ತಮ್ಮಂದಿರು; ಕಂಡು: ನೋಡು; ಅರಸಿ: ರಾಣಿ; ವಾಮ: ಎಡಭಾಗ; ವಿವಿಧ: ಹಲವಾರು; ಆಭರಣ: ಒಡವೆ; ಮಣಿ: ರತ್ನ; ರಶ್ಮಿ: ಕಾಂತಿ; ಹೊದರು: ಗುಂಪು; ಹೊರಳಿ: ಗುಂಪು, ಆಧಿಕ್ಯ; ಕಣ್ಣಾಲಿ: ಕಣ್ಣುಗುಡ್ಡೆ; ಕೋರೈಸು: ಕಣ್ಣುಕುಕ್ಕು;

ಪದವಿಂಗಡಣೆ:
ಹರನ +ನಾಲಕು +ಮುಖದ +ಮಧ್ಯ
ಸ್ಫುರಿತದ್ + ಈಶಾನನವೊಲ್+ಇರೆ +ಸೋ
ದರ +ಚತುಷ್ಟಯ +ಮಧ್ಯದಲಿ+ ಕಂಡನು +ಯುಧಿಷ್ಠಿರನ
ಅರಸಿಯನು +ವಾಮದಲಿ +ವಿವಿಧಾ
ಭರಣ +ಮಣಿ+ರಶ್ಮಿಗಳ +ಹೊದರಿನ
ಹೊರಳಿಯಲಿ +ಕಣ್ಣಾಲಿಗಳು +ಕೋರೈಸಿದವು +ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರನ ನಾಲಕು ಮುಖದ ಮಧ್ಯಸ್ಫುರಿತದೀಶಾನನವೊಲಿರೆ

ಪದ್ಯ ೨: ಕರ್ಣಾರ್ಜುನರು ಬಿಲ್ಲಿನ ನಾದ ಹೇಗಿತ್ತು?

ಅರಸ ಹೇಳುವುದೇನು ಬಳಿಕಿ
ಬ್ಬರ ಮಹಾಕೋದಂಡದಂಡ
ಸ್ಫುರಿತಮೌರ್ವೀನಾದ ಮುಸುಕಿತು ಸಕಲ ದಿಗುತಟವ
ಸ್ಪುರದಮಂದೋದ್ಭಿನ್ನ ಭಾಸ್ವ
ತ್ಕಿರಣಗರ್ಭಕಳಾಪಭದ್ರಾ
ಕರಣಕಳಿತಧ್ವಾಂತಬಿಂಬಕಳಂಬಸಂತತಿಯ (ಕರ್ಣ ಪರ್ವ, ೨೩ ಸಂಧಿ, ೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಹೇಳುವುದೇನು, ಕರ್ಣಾರ್ಜುನರು ತಮ್ಮ ಮಹಾ ಬಿಲ್ಲನ್ನು ಹೆದೆಯೇರಿಸಿದರು. ಬಿಲ್ಲಿನ ಹೆದೆಯ ನಾದವು ಎಲ್ಲಾ ದಿಕ್ಕುಗಳನ್ನು ಮುಸುಕಿತು. ಹೆದೆಯ ನಾದದಿಂದ ಹುಟ್ಟಿದ ಶಬ್ದದ ಅಲೆಗಳು ಬಾಣಗಲ ಕತ್ತಲನ್ನು ಕವಿಸಿತು.

ಅರ್ಥ:
ಅರಸ: ರಾಜ; ಹೇಳು: ತಿಳಿಸು; ಬಳಿಕ: ನಂತರ; ಮಹಾ: ಶ್ರೇಷ್ಠ; ಕೋದಂಡ: ಬಿಲ್ಲು; ಸ್ಫುರಿತ: ಗೋಚರಿಸಿದ, ಹೊಳೆವ; ಮೌರ್ವಿ: ಬಿಲ್ಲಿನ ಹಗ್ಗ, ಹೆದೆ; ನಾದ: ಶಬ್ದ; ಮುಸುಕು: ಆವರಿಸು; ಸಕಲ: ಎಲ್ಲಾ ದಿಗುತಟ: ದಿಕ್ಕುಗಳ ಕೊನೆ; ಭಾಸ್ವತ್: ಹೊಳೆಯುವ; ಮಂದ: ನಿಧಾನ ಗತಿಯುಳ್ಳದು; ಭಿನ್ನ: ಚೂರು, ತುಂಡು; ಕಿರಣ: ಕಾಂತಿ; ಗರ್ಭ: ಒಳಗು, ಒಳಭಾಗ, ಬಸಿರು; ಕಳಾಪ: ಬತ್ತಳಿಕೆ, ಬಾಣ; ಭದ್ರ: ದೃಢ, ಗಟ್ಟಿ; ಕರಣ: ಕಿವಿ; ಕಳಿತ: ಪೂರ್ಣ; ಬಿಂಬ: ಭಾವ ವಲಯ, ಪರಿವೇಷ; ಅಂಬು: ಬಾಣ; ಸಂತತಿ: ಗುಂಪು;

ಪದವಿಂಗಡಣೆ:
ಅರಸ+ ಹೇಳುವುದೇನು +ಬಳಿಕ್
ಇಬ್ಬರ +ಮಹಾ+ಕೋದಂಡ+ದಂಡ
ಸ್ಫುರಿತ+ಮೌರ್ವೀ+ನಾದ +ಮುಸುಕಿತು +ಸಕಲ+ ದಿಗುತಟವ
ಸ್ಪುರದಮಂದೋದ್+ಭಿನ್ನ +ಭಾಸ್ವತ್
ಕಿರಣ+ಗರ್ಭ+ಕಳಾಪ+ಭದ್ರಾ
ಕರಣ+ಕಳಿತಧ್ವಾಂತ+ಬಿಂಬಕಳ್+ಅಂಬಸಂತತಿಯ

ಅಚ್ಚರಿ:
(೧) ೫, ೬ನೇ ಸಾಲು ಒಂದೇ ಪದವಾಗಿ ರಚಿತವಾದುದು

ಪದ್ಯ ೧೨: ಶಲ್ಯನು ದುರ್ಯೋಧನನನ್ನು ಹೇಗೆ ಕಂಡನು?

ಹರಿದರರಸಾಳುಗಳು ರಾಯನ
ಬರವನೀತಂಗರುಹಿದರು ಕಡು
ಹರುಷದಲಿ ಕಲಿ ಶಲ್ಯ ಹೊರವಂಟನು ನಿಜಾಲಯವ
ಅರಸುಮಕ್ಕಳ ವಜ್ರಮಣಿಯಾ
ಭರಣ ಕಿರಣ ಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ (ಕರ್ಣ ಪರ್ವ, ೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ರಾಜನ ದೂತರು ಮುಂದೆ ಹೋಗಿ, ದೊರೆಯ ಆಗಮನವನ್ನು ಶಲ್ಯನಿಗೆ ತಿಳಿಸಿದರು. ಅವನು ಸಂತೋಷದಿಂದ ತನ್ನ ಮನೆಯನ್ನು ಬಿಟ್ಟು ಹೊರಬಂದನು. ಸುತ್ತುವರಿದಿದ್ದ ರಾಜಕುಮಾರರ ಕಿರೀಟಗಳ ಆಭರಣಗಳ ರತ್ನಮಣಿಯಳ ಬೆಳಕಿನಲ್ಲಿ ಬರುತ್ತಿದ್ದ ಕೌರವವನ್ನು ಕಂಡನು.

ಅರ್ಥ:
ಹರಿ: ಸಾಗು, ಧಾವಿಸು; ಅರಸ: ರಾಜ; ಆಳು: ದೂತ; ರಾಯ: ರಾಜ; ಬರವು: ಆಗಮನ; ಅರುಹಿ: ತಿಳಿಸು; ಕಡು: ತುಂಬ; ಹರುಷ: ಸಂತೋಷ; ಕಲಿ: ಶೂರ; ನಿಜಾಲಯ: ತನ್ನ ಮನೆ; ಮಕ್ಕಳು: ಸುತರ; ವಜ್ರ: ಹೀರ; ಮಣಿ: ರತ್ನ; ಆಭರಣ: ಒಡವೆ; ಕಿರಣ: ಕಾಂತಿ; ಸ್ತೋಮ: ಗುಂಪು; ದೀಪ: ಬೆಳಕು; ಸ್ಫುರಿತ: ಹೊಳೆವ; ಜನ: ಗುಂಪು; ಮಧ್ಯ: ನಡುವೆ; ಕಂಡನು: ನೋಡು;

ಪದವಿಂಗಡಣೆ:
ಹರಿದರ್+ಅರಸಾಳುಗಳು+ ರಾಯನ
ಬರವನ್+ಈತಂಗ್+ಅರುಹಿದರು +ಕಡು
ಹರುಷದಲಿ+ ಕಲಿ+ ಶಲ್ಯ +ಹೊರವಂಟನು +ನಿಜಾಲಯವ
ಅರಸುಮಕ್ಕಳ+ ವಜ್ರಮಣಿಯಾ
ಭರಣ +ಕಿರಣ+ ಸ್ತೋಮ +ದೀಪ
ಸ್ಫುರಿತ +ಜನಮಧ್ಯದಲಿ+ ಕಂಡನು+ ಕೌರವೇಶ್ವರನ

ಅಚ್ಚರಿ:
(೧) ದುರ್ಯೋಧನನು ಕಂಡ ಬಗೆ: ಅರಸುಮಕ್ಕಳ ವಜ್ರಮಣಿಯಾಭರಣ ಕಿರಣ ಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ
(೨) ಅರಸು, ರಾಯ – ಸಮಾನಾರ್ಥಕ ಪದ

ಪದ್ಯ ೫೨: ಅರ್ಜುನನ ಪರಾಕ್ರಮವನ್ನು ಕೃಷ್ಣನು ಹೇಗೆ ವರ್ಣಿಸಿದನು?

ನರನ ಗಾಂಡೀವಪ್ರತಾಪ
ಸ್ಫುರಿತ ನಾರಾಚ ಪ್ರಚಂಡೋ
ತ್ಕರ ದವಾನಲನಿಂದವೀ ಕೌರವ ಕುಲಾರಣ್ಯ
ಉರಿದು ನಂದದೆ ಮಾಣದಧಿಕರೊ
ಳಿರದೆ ತೊಡಕುವುದಾಗದೆಂಬುದ
ನರಿಯೆಯಾ ನೀನೆಂದು ಜರೆದನು ಕೌರವಾಧಿಪನ (ಉದ್ಯೋಗ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೃಷ್ಣನು ಅರ್ಜುನನ ಪರಾಕ್ರಮವನ್ನು ಹೇಳುತ್ತಾ, ಅರ್ಜುನನ ಗಾಂಡಿವ ಧನುಸ್ಸಿನಿಂದ ಹೊರಟ ಬಾಣಗಳಿಂದ ಹೊತ್ತಿ ಆವರಿಸುವ ಪ್ರಚಂಡವಾದ ಕಾಡುಕಿಚ್ಚಿನಿಂದ ಕೌರವ ಕುಲವೆಂಬ ಅರಣ್ಯವು ಉರಿದು ಕರಿದಾಗದೆ ಬಿಡುವುದಿಲ್ಲ. ತಮಗಿಂದ ಅಧಿಕ ಪ್ರತಾಪಿಗಳೊಡನೆ ಯುದ್ಧ ಮಾಡಬಾರದೆಂಬ ತತ್ವವು ನಿನಗೆ ಗೊತ್ತಿಲ್ಲವೇ ಎಂದು ಕೃಷ್ಣನು ದುರ್ಯೋಧನನನ್ನು ನಿಂದಿಸಿದನು.

ಅರ್ಥ:
ನರ: ಅರ್ಜುನ; ಪ್ರತಾಪ: ಪರಾಕ್ರಮ; ಸ್ಫುರಿತ: ಹೊಳೆವ, ಪ್ರಕಾಶಿಸುವ; ನಾರಾಚ: ಬಾಣ; ಪ್ರಚಂಡ:ಭಯಂಕರವಾದುದು; ಉತ್ಕರ:ಸಮೂಹ; ದವ: ಕಾಡು, ಅರಣ್ಯ; ಅನಲ: ಬೆಂಕಿ; ಕುಲ: ವಂಶ; ಅರಣ್ಯ: ಕಾಡು; ಉರಿ: ಸುಡು; ನಂದು: ಆರಿಹೋಗು; ಮಾಣ್: ಬಿಡು; ಅಧಿಕ: ಹೆಚ್ಚು; ತೊಡಕು: ತೊಂದರೆ; ಅರಿ: ತಿಳಿ; ಜರೆ: ನಿಂದಿಸು; ಅಧಿಪ: ಒಡೆಯ;

ಪದವಿಂಗಡಣೆ:
ನರನ +ಗಾಂಡೀವ+ಪ್ರತಾಪ
ಸ್ಫುರಿತ +ನಾರಾಚ +ಪ್ರಚಂಡ
ಉತ್ಕರ +ದವಾನಲನಿಂದವ್+ಈ+ ಕೌರವ+ ಕುಲಾರಣ್ಯ
ಉರಿದು +ನಂದದೆ +ಮಾಣದ್+ಅಧಿಕರೊಳ್
ಇರದೆ+ ತೊಡಕುವುದಾಗದ್+ಎಂಬುದನ್
ಅರಿಯೆಯಾ +ನೀನೆಂದು +ಜರೆದನು+ ಕೌರವಾಧಿಪನ

ಅಚ್ಚರಿ:
(೧) ದವ, ಅರಣ್ಯ – ಸಮನಾರ್ಥಕ ಪದ
(೨) ಪ್ರತಾಪ, ಪ್ರಚಂಡ – ಪ್ರ ಪದಗಳ ಬಳಕೆ

ಪದ್ಯ ೪೨: ದೇವತೆಗಳೆ ನಿಮಗೇಕೆ ಈ ಯುದ್ದ ಎಂದು ಅರ್ಜುನನು ಏಕೆ ಹೇಳಿದನು?

ನರರು ರಚಿಸಿದ ಹವ್ಯಕವ್ಯೋ
ತ್ತರ ಹವಿರ್ಭಾಗವನು ತಿಂದು
ಬ್ಬರಿಸಿ ದೇವಸ್ತ್ರೀ ಕದಂಬದ ಖೇಳಮೇಳದಲಿ
ಇರವು ನಿಮಗೀ ರೌದ್ರಬಾಣ
ಸ್ಫುರಿತ ಕರ್ಕಶ ವಿಸ್ಫುಲಿಂಗೋ
ತ್ಕರದ ಝಳ ನಿಮಗೇಕೆಯೆಂದನು ಪಾರ್ಥ ನಸುನಗುತ (ಆದಿ ಪರ್ವ, ೨೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ದೇವತೆಗಳ ಓಟವನ್ನು ನೋಡಿದ ಅರ್ಜುನ, ಮನುಷ್ಯರು ರಚಿಸಿದ ಯಜ್ಞಯಾಗದಿಗಳ ಹವಿರ್ಭಾಗವನ್ನು ತಿಂದು ಕೊಬ್ಬಿ, ಅಪ್ಸರಸ್ತ್ರೀಯರ ಸಮೂಹದಲ್ಲಿ ಆಟವಾಡುತ್ತಾ ಇರುವುದು ನಿಮ್ಮ ರೀತಿ, ನಾವು ಬಿಡುವ ಭಯಂಕರವಾದ ಬಾಣಗಳ ಕಿಡಿಗಳ ಝಳವು ನಿಮಗೆ ಸಹಿಸಲು ಅಸಾಧ್ಯ. ನಿಮಗೇಕೆ ಯುದ್ಧ ಎಂದನು.

ಅರ್ಥ:
ನರ: ಮನುಷ್ಯ; ರಚಿಸು: ರೂಪಿಸು; ಹವ್ಯ:ಹವಿಸ್ಸು;ಉತ್ತರ: ಮುಂದಿನದು; ಹವಿ:ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ; ಭಾಗ:ಅಂಶ; ತಿಂದು:ಊಟಮಾಡಿ; ಉಬ್ಬರಿಸು: ಕೊಬ್ಬಿ; ದೇವಸ್ತ್ರೀ: ಅಪ್ಸರೆ; ಕದಂಬ:ಗುಂಪು; ಖೇಳ:ಆಟ; ಖೇಳಮೇಳ: ವಿನೋದಆಟ; ಬಾಣ: ಅಂಬು, ಶರ; ಸ್ಪುರಿಸು:ಮಿಂಚು, ಗೋಚರವಾಗು; ಸ್ಫುಲಿಂಗ: ಅಗ್ನಿಕಣ; ರೌದ್ರ: ಭಯಂಕರ; ಕರ್ಕಶ: ಒರಟಾದ; ಉತ್ಕರ:ಸೀಳುವುದು, ರಾಶಿ; ಝಳ: ಪ್ರಕಾಶ;

ಪದವಿಂಗಡಣೆ:
ನರರು +ರಚಿಸಿದ +ಹವ್ಯಕವ್ಯ+
ಉತ್ತರ +ಹವಿರ್ಭಾಗವನು +ತಿಂದ್
ಉಬ್ಬರಿಸಿ +ದೇವಸ್ತ್ರೀ +ಕದಂಬದ +ಖೇಳಮೇಳದಲಿ
ಇರವು+ ನಿಮಗೀ +ರೌದ್ರಬಾಣ
ಸ್ಫುರಿತ+ ಕರ್ಕಶ+ ವಿಸ್ಫುಲಿಂಗೋ
ತ್ಕರದ +ಝಳ +ನಿಮಗೇಕೆ+ಯೆಂದನು +ಪಾರ್ಥ +ನಸುನಗುತ

ಅಚ್ಚರಿ:
(೧) ಸ್ಫುರಿತ, ಸ್ಫುಲಿಂಗ – “ಸ್ಫು” ಕಾರದಿಂದ ಶುರುವಾಗುವ ಪದ