ಪದ್ಯ ೩೯: ದ್ರೌಪದಿಯು ಕೀಚಕನನ್ನು ಹೇಗೆ ಎಚ್ಚರಿಸಿದಳು?

ನ್ಯಾಯವನು ಮಿಗೆ ಗೆಲಿವುದೀಯ
ನ್ಯಾಯವಧಿಕವು ಧರ್ಮ ಪರರೇ
ಸ್ಥಾಯಿಗಳು ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲವರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದಳಬುಜಾಕ್ಷಿ (ವಿರಾಟ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ನ್ಯಾಯವನ್ನೇ ಗೆಲ್ಲುವುದರಿಂದ ಅನ್ಯಾಯವೇ ಮಿಗಿಲಾದುದು! ಧರ್ಮಪರರೇ ಸ್ಥಿರವಾಗಿ ನಿಲ್ಲುತ್ತಾರೆ, ಕತ್ತಲೆ ಸೂರ್ಯರ ನಡುವಿನ ವ್ಯತ್ಯಾಸ ನಿನಗೂ ನನ್ನ ಪತಿಗಳಿಗೂ ಇದೆ. ಅವರು ನಿನ್ನನ್ನು ಉಳಿಸುವುದಿಲ್ಲ. ಅವರ ಕೈಗುಣವನ್ನು ಬಲ್ಲವರೇ ಬಲ್ಲರು, ಕೀಚಕ, ನಾಯಿಯು ಸಿಂಕಕ್ಕೆ ಇದಿರು ನಿಂತೀತೇ? ಸಾಕು ನಡೆ ಎಂದು ದ್ರೌಪದಿ ಹೇಳಿದಳು.

ಅರ್ಥ:
ನ್ಯಾಯ: ಯೋಗ್ಯವಾದುದು; ಮಿಗೆ: ಮತ್ತು, ಅಧಿಕವಾಗಿ; ಗೆಲುವು: ಜಯ; ಅನ್ಯಾಯ: ಸರಿಯಲ್ಲದ; ಅಧಿಕ: ಹೆಚ್ಚು; ಧರ್ಮ: ಧಾರಣೆ ಮಾಡಿದುದು ಪರರು: ಅನ್ಯರು; ಸ್ಥಾಯಿ: ಸ್ಥಿರವಾಗಿರುವುದು, ಕಾಯಂ; ತಿಮಿರ: ಅಂಧಕಾರ; ಭಾಸ್ಕರ: ರವಿ; ಅಂತರ: ದೂರ; ಕಾಯು: ರಕ್ಷಣೆ; ಕೈಗುಣ: ಲಕ್ಷಣ; ಆಯತ:ಉಚಿತವಾದ; ಬಲ್ಲ: ತಿಳಿದ; ನಾಯಿ: ಶ್ವಾನ, ಕುನ್ನಿ; ಸಿಂಹ: ಕೇಸರಿ; ಇದಿರು: ಎದುರು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಹೋಗು: ತೆರಳು; ಅಬುಜಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ನ್ಯಾಯವನು +ಮಿಗೆ +ಗೆಲಿವುದ್+ಈ+
ಅನ್ಯಾಯವ್+ಅಧಿಕವು+ ಧರ್ಮ +ಪರರೇ
ಸ್ಥಾಯಿಗಳು +ತಿಮಿರಕ್ಕೆ +ಭಾಸ್ಕರಗ್+ಆವುದ್+ಅಂತರವು
ಕಾಯರ್+ಎನ್ನವರ್+ಅವರ+ ಕೈಗುಣದ್
ಆಯತವ +ಬಲ್ಲವರೆ +ಬಲ್ಲರು
ನಾಯಿ+ ಸಿಂಹಕ್ಕಿದಿರೆ+ ಫಡ+ ಹೋಗೆಂದಳ್+ಅಬುಜಾಕ್ಷಿ

ಅಚ್ಚರಿ:
(೧) ಕೀಚಕನನ್ನು ಬಯ್ಯುವ ಪರಿ – ನಾಯಿ ಸಿಂಹಕ್ಕಿದಿರೆ, ತಿಮಿರಕ್ಕೆ ಭಾಸ್ಕರಗಾವುದಂತರವು
(೨) ಹಿತನುಡಿ – ಧರ್ಮ ಪರರೇ ಸ್ಥಾಯಿಗಳು

ಪದ್ಯ ೫೨: ಯಾರು ಸ್ವರ್ಗಕ್ಕೆ ಪ್ರಯಾಣ ಬೆಳೆಸಿದರು?

ಜೀಯ ವಿಗಡ ಬ್ರಹ್ಮಶರ ವಿಂ
ದ್ರಾಯುಧದ ಮುಂಗುಡಿಯಲಿರಿದುದು
ಮಾಯಕಾರರ ಮೋಹರವನುಬ್ಬಟೆ ಚತುರ್ಬಲವ
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗಂತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬ್ರಹ್ಮಾಸ್ತ್ರವು, ಇಂದ್ರಾಸ್ತ್ರವು ಮುಂಗುಡಿಯಲ್ಲಿ ಶತ್ರುಗಳನ್ನು ಮರ್ದಿಸಿತು. ಮಾಯಾಯುದ್ಧ ವಿಶಾರದರಾದ ಅಸುರರ ಚತುರಂಗ ಸೈನ್ಯವು ಸೋತಿತು. ದಂಡನಾಯಕರೂ, ಪ್ರಮುಖರೂ ಅನೇಕ ದಿಕ್ಕುಗಳಲ್ಲಿದ್ದವರೆಲ್ಲರೂ ಸ್ವರ್ಗಕ್ಕೆ ಪ್ರಯಾಣ ಬೆಳೆಸಿದರು.

ಅರ್ಥ:
ಜೀಯ: ಒಡೆಯ; ವಿಗಡ: ಶೌರ್ಯ, ಪರಾಕ್ರಮ; ಶರ: ಬಾಣ; ಆಯುಧ: ಶಸ್ತ್ರ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಇರಿ: ಚುಚ್ಚು; ಮಾಯ: ಗಾರುಡಿ, ಇಂದ್ರಜಾಲ; ಮೋಹರ: ಯುದ್ಧ; ಉಬ್ಬಟೆ: ಅತಿಶಯ; ಬಲ: ಸೈನ್ಯ; ಹೋಯಿತು: ನಾಶವಾಗು; ಅಸುರ: ರಾಕ್ಷಸ; ಸೇನೆ: ಸೈನ್ಯ; ಸರಿ: ಹೋಗು, ಗಮಿಸು; ನಾಯಕ: ಒಡೆಯ; ನಾನಾ: ಹಲವಾರು; ದಿಗಂತ: ದಿಕ್ಕು; ಸ್ಥಾಯಿ: ಸ್ಥಿರವಾಗಿರುವುದು; ಸಗ್ಗ: ಸ್ವರ್ಗ; ಭೋಗ: ಸುಖವನ್ನು ಅನುಭವಿಸುವುದು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜೀಯ +ವಿಗಡ +ಬ್ರಹ್ಮಶರವ್ +
ಇಂದ್ರಾಯುಧದ +ಮುಂಗುಡಿಯಲ್+ಇರಿದುದು
ಮಾಯಕಾರರ +ಮೋಹರವನ್+ಉಬ್ಬಟೆ +ಚತುರ್ಬಲವ
ಹೋಯಿತಸುರರ+ ಸೇನೆ +ಸರಿದುದು
ನಾಯಕರು +ನಾನಾ +ದಿಗಂತ
ಸ್ಥಾಯಿಗಳು +ಸಗ್ಗಾದಿ +ಭೋಗಕೆ+ ಭೂಪ+ ಕೇಳೆಂದ

ಅಚ್ಚರಿ:
(೧) ಅಳಿದರು ಎಂದು ಹೇಳಲು – ಸರಿದುದು ನಾಯಕರು ನಾನಾ ದಿಗಂತಸ್ಥಾಯಿಗಳು ಸಗ್ಗಾದಿ ಭೋಗಕೆ

ಪದ್ಯ ೯೭: ಯಾರು ಮಲ್ಲನೆನಿಸಿಕೊಳ್ಳುವನು?

ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪ ಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೯೭ ಪದ್ಯ)

ತಾತ್ಪರ್ಯ:
ಪೆಟ್ಟು ವರಸೆ ಮತ್ತು ಮರುವರಸೆಗಳಲ್ಲಿ ದೇಹವನ್ನು ಹಿಡಿದು ಹೊಸ ರೀತಿಯ ಪಟ್ಟುಗಳನ್ನು ಹಾಕಿ ಬೇಸರವಿಲ್ಲದೆ ನೆಲಹಿಡಿದೋ, ಹಿಂದು ಮುಂದೆ ಓಡಾಡಿಯೋ ಹಲವು ಚಮತ್ಕಾರಗಳ ವಿನೋದವನ್ನೂ, ಯಾವುದಕ್ಕೆ ಇನ್ನಾವುದು ಎದುರು ಎಂಬ ಲೆಕ್ಕಾಚಾರವನ್ನೂ ಬಲ್ಲವನು ಮಲ್ಲನೆನಿಸಿಕೊಳ್ಳುತ್ತಾನೆ ಎಂದು ವಿದುರ ಹೇಳಿದನು.

ಅರ್ಥ:
ಗಾಯ:ಪೆಟ್ಟು; ಮೇಣ್: ಅಥವ; ಚೊಕ್ಕೆಯ: ಮಲ್ಲಯುದ್ಧದಲ್ಲಿ ಒಂದು ಪಟ್ಟು; ಕಾಯ: ದೇಹ; ನವಾಯಿ:ಹೊಸತನ, ಚೆಲುವು; ಬಿನ್ನಾಣ: ವಿಶೇಷವಾದ ಜ್ಞಾನ, ಕೌಶಲ್ಯ; ಬಳಿ: ಹತ್ತಿರ; ಸಂದು: ಮೂಲೆ, ಕೋನ; ಬೇಸರ: ಆಸಕ್ತಿಯಿಲ್ಲದಿರುವಿಕೆ, ಬೇಜಾರು; ಸ್ಥಾಯಿ: ಸ್ಥಿರವಾದ, ನೆಲೆಗೊಂಡ; ಸಂಚಾರ: ಚಲನೆ, ಅಡ್ಡಾಡುವುದು; ಸಮಗೈ: ಒಂದೆ ಸಮನಾದ ಶಕ್ತಿ, ಸಮಾನತೆ; ನಾನಾ: ಹಲವಾರು; ವಿನೋದ: ಹಾಸ್ಯ, ತಮಾಷೆ; ದಾಯ: ಸಮಯ, ಅವಕಾಶ, ಉಪಾಯ; ಅರಿ: ತಿಳಿ; ಮಲ್ಲ: ಜಟ್ಟಿ; ರಾಯ: ರಾಜ;

ಪದವಿಂಗಡಣೆ:
ಗಾಯದಲಿ +ಮೇಣ್ +ಚೊಕ್ಕೆಯದಲ್+ಅಡು
ಪಾಯಿಗಳಲುಪ +ಕಾಯದೊಳಗೆ +ನ
ವಾಯಿಗಳ +ಬಿನ್ನಾಣದಲಿ +ಬಳಿಸಂದು +ಬೇಸರದೆ
ಸ್ಥಾಯಿಯಲಿ +ಸಂಚಾರದಲಿ +ಸಮ
ಗೈಯೆನಿಸಿ +ನಾನಾ +ವಿನೋದದ
ದಾಯವರಿವವನ್+ಅವನೆ +ಮಲ್ಲನು +ರಾಯ +ಕೇಳೆಂದ

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಬಿನ್ನಾಣದಲಿ ಬಳಿಸಂದು ಬೇಸರದೆ
(೨) ‘ಸ’ಕಾರದ ತ್ರಿವಳಿ ಪದ – ಸ್ಥಾಯಿಯಲಿ ಸಂಚಾರದಲಿ ಸಮಗೈಯೆನಿಸಿ
(೩) ಪಾಯಿ, ವಾಯಿ, ಸ್ಥಾಯಿ – ಪ್ರಾಸ ಪದಗಳು ೨,೩,೪ ಸಾಲಿನ ಮೊದಲ ಪದ