ಪದ್ಯ ೧೮: ಲೋಮಶನು ಧರ್ಮಜನಿಗೆ ಯಾವ ಕಥೆಗಳನ್ನು ಹೇಳಿದನು?

ಸೋಮಕನ ಚರಿತವ ಮರುತ್ತಮ
ಹಾಮಹಿಮಾನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾದಿಗಳಿಗಿತ್ತ ವಿಚಿತ್ರ ವಿಸ್ತರವ (ಅರಣ್ಯ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೋಮಕನ ಚರಿತ್ರೆ, ಮರುತ್ತನ ಆಚಾರ, ಧರ್ಮದ ಆಚರಣೆ, ಯಯಾತಿಯ ಸತ್ಕಥೆ, ಶಿಖಿಯು ದೇವೆಂದ್ರನಿಗೆ ಮಾಂಸವನ್ನೇ ದಾನ ಮಾಡಿದ್ದು, ಮೊದಲಾದ ಅನೇಕ ವಿಚಿತ್ರ ಕಥೆಗಳ ಪ್ರಸಂಗವನ್ನು ಲೋಮಶನು ಧರ್ಮಜನಿಗೆ ಹೇಳಿದನು.

ಅರ್ಥ:
ಚರಿತ: ಕಥೆ; ಮಹಿಮ: ಹಿರಿಮೆ ಯುಳ್ಳವನು, ಮಹಾತ್ಮ; ಆಚಾರ: ಕಟ್ಟುಪಾಡು, ಸಂಪ್ರದಾಯ; ಸ್ತೋಮ: ಗುಂಪು, ಸಮೂಹ; ವಿರಚಿಸು: ನಿರ್ಮಿಸು; ಭೂಮಿಪತಿ: ರಾಜ; ಭೂಮಿ: ಇಳೆ; ಉದ್ಧಾಮ: ಶ್ರೇಷ್ಠ; ಮಾಂಸ: ಅಡಗು; ಮಹೇಂದ್ರ: ಇಂದ್ರ; ವಿಚಿತ್ರ: ಆಶ್ಚರ್ಯಕರವಾದ; ವಿಸ್ತರ:ಹಬ್ಬುಗೆ, ವಿಸ್ತಾರ;

ಪದವಿಂಗಡಣೆ:
ಸೋಮಕನ+ ಚರಿತವ +ಮರುತ್ತ+ಮ
ಹಾಮಹಿಮನ್+ಆಚಾರ +ಧರ್ಮ
ಸ್ತೋಮವನು +ವಿರಚಿಸಿ +ಯಯಾತಿಯ +ಸತ್ಕಥಾಂತರವ
ಭೂಮಿಪತಿ +ಕೇಳಿದನು +ಶಿಬಿ
ಉದ್ದಾಮ+ತನವನು +ತನ್ನ +ಮಾಂಸವನ್
ಆ+ಮಹೇಂದ್ರಾದಿಗಳಿಗಿತ್ತ+ ವಿಚಿತ್ರ +ವಿಸ್ತರವ

ಅಚ್ಚರಿ:
(೧) ಸೋಮಕ, ಮರುತ್ತ, ಯಯಾತಿ, ಶಿಬಿ – ಕಥಾನಾಯಕರ ಹೆಸರುಗಳು

ಪದ್ಯ ೫೫: ದ್ವಾಪರದಲ್ಲಿ ಕಾಲನೇಮಿ ಯಾವ ರೂಪದಲ್ಲಿ ಕಾಣಿಸಿಕೊಂಡಿದ್ದನು?

ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ (ಸಭಾ ಪರ್ವ, ೧೦ ಸಂಧಿ, ೫೫ ಪದ್ಯ)

ತಾತ್ಪರ್ಯ:
ಆ ಮಹಾದೈತ್ಯನಾದ ಕಾಲನೇಮಿಯು ದ್ವಾಪರ ಯುಗದಲ್ಲಿ ಯಾದವರ ಸೀಮೆಯಲ್ಲಿ ಕಂಸನೆಂಬ ಹೆಸರಿನಿಂದ ಹುಟ್ಟಿದನು. ಅವನ ದುಷ್ಟ ಪರಿವಾರದಲ್ಲಿ ಧೇನುಕ, ಕೇಶಿ, ವತ್ಸ, ತೃಣಾವರ್ತ ಮೊದಲಾದ ಹಲವರಿದ್ದರು. ಈ ಮೂಢನಾದ ಶಿಶುಪಾಲನು ಅವರಿಗೆ ಯಾವವಿಧದಲ್ಲೂ ಸಮಾನನಲ್ಲ ಎಂದು ಭೀಷ್ಮರು ನುಡಿದರು.

ಅರ್ಥ:
ಮಹ: ಹಿರಿಯ, ದೊಡ್ಡ; ಅಸುರ: ದಾನವ; ಸನಾಮ: ಹೆಸರಿನಿಂದ ಪ್ರಸಿದ್ಧವಾದ; ಕಾಲ: ಸಮಯ; ಭೂಮಿ: ಧರಣಿ; ಜನಿಸು: ಹುಟ್ಟು; ಅಭಿಧಾನ: ಹೆಸರು; ಮರುಳು: ಮೂಢ; ಹವಣು: ಅಳತೆ, ಪ್ರಮಾಣ; ತದೀಯ: ಅದಕ್ಕೆ ಸಂಬಂಧಪಟ್ಟ; ಸ್ತೋಮ: ಗುಂಪು; ಹಲರು: ಬಹಳ, ಮುಂತಾದ; ಇಹರು: ಇರುವರು; ದುಷ್ಪರಿವಾರ: ಕೆಟ್ಟ ಪರಿಜನ;

ಪದವಿಂಗಡಣೆ:
ಆ +ಮಹಾಸುರ+ ಕಾಲನೇಮಿ +ಸ
ನಾಮನ್+ಈ+ ಕಾಲದಲಿ +ಯಾದವ
ಭೂಮಿಯಲಿ +ಜನಿಸಿದನಲೇ+ ಕಂಸಾಭಿಧಾನದಲಿ
ಈ+ ಮರುಳು +ಹವಣೇ +ತದೀಯ
ಸ್ತೋಮ +ಧೇನುಕ +ಕೇಶಿ +ವತ್ಸ +ತೃ
ಣಾಮಯರು +ಹಲರಿಹರು+ ದುಷ್ಪರಿವಾರ+ ಕಂಸನಲಿ

ಅಚ್ಚರಿ:
(೧) ಕಂಸನ ಪರಿವಾರದವರು – ಕಂಸ, ಧೇನುಕ, ಕೇಶಿ, ವತ್ಸ, ತೃಣಾವರ್ತ
(೨) ಸನಾಮ, ಅಭಿಧಾನ – ಸಾಮ್ಯಾರ್ಥ ಪದಗಳು

ಪದ್ಯ ೧೦: ಅರ್ಜುನನೊಡನೆ ಯಾರು ಹೊರಟರು?

ನೇಮವಾಯಿತು ಮತ್ತೆ ನೃಪತಿ
ಸ್ತೋಮವರ್ಜುನನೊಡನೆ ಕದನೋ
ದ್ಧಾಮರುಬ್ಬರಿಸಿದರು ಪತಿಕರಣೆಗೆ ಮಹೀಪತಿಯ
ಸೋಮಕರು ನಕುಲಾದಿಗಳು ಸುತ
ಸೋಮಕಾದಿ ಕುಮಾರರಖಿಳ ಸ
ನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ (ಕರ್ಣ ಪರ್ವ, ೧೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಮತ್ತೆ ಧರ್ಮಜನು ನಿಯಮವನ್ನು ವಿವರಿಸಲು ಯುದ್ಧದಲ್ಲಿ ಮಹಾಪರಾಕ್ರಮಿಗಳಾದ ರಾಜರನ್ನು ಕರೆದು ಅವರೆಲ್ಲರಿಗೂ ಸನ್ಮಾನಿಸಲು ಅವರೆಲ್ಲರೂ ಉತ್ಸಾಹದಿಂದ ಉಬ್ಬಿದರು. ಸೋಮಕರು, ನಕುಲನೇ ಮೊದಲಾದವರು, ಸುತಸೋಮನೇ ಮೊದಲಾದ ಪಾಂಡವಕುಮಾರರು, ಕಾಲಿನ ತೊಡರು ಖಡೆಯಗಳು ಝಣಝಣ ಸದ್ದು ಮಾಡುತ್ತಿರಲು ಅರ್ಜುನನೊಡನೆ ಹೊರಟರು.

ಅರ್ಥ:
ನೇಮ: ನಿಯಮ; ಮತ್ತೆ: ಪುನಃ; ನೃಪತಿ: ರಾಜ; ಸ್ತೋಮ: ಗುಂಪು; ಒಡನೆ: ಜೊತೆ; ಕದನ: ಯುದ್ಧ; ಉದ್ಧಾಮ: ಶ್ರೇಷ್ಠ; ಉಬ್ಬರ: ಹೆಚ್ಚಳ; ಪತಿಕರಣೆ: ಮೆಚ್ಚು, ಮೆಚ್ಚಿಗೆ; ಮಹೀಪತಿ: ರಾಜ; ಆದಿ: ಮೊದಲಾದ; ಅಖಿಳ: ಎಲ್ಲಾ; ಸನಾಮ: ಪ್ರಖ್ಯಾತ; ಎದ್ದು: ಮೇಲೇಳು; ತೊಡರು: ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಝಣಝಣ: ಶಬ್ದವನ್ನು ಹೇಳುವ ಪದ; ರವ: ಶಬ್ದ; ಖಡೆ: ಕಾಲ ಖಡಗ, ನೂಪುರ;

ಪದವಿಂಗಡಣೆ:
ನೇಮವಾಯಿತು +ಮತ್ತೆ +ನೃಪತಿ
ಸ್ತೋಮವ್+ಅರ್ಜುನನೊಡನೆ+ ಕದನ
ಉದ್ಧಾಮರ್+ಉಬ್ಬರಿಸಿದರು +ಪತಿಕರಣೆಗೆ +ಮಹೀಪತಿಯ
ಸೋಮಕರು +ನಕುಲಾದಿಗಳು +ಸುತ
ಸೋಮಕಾದಿ +ಕುಮಾರರ್+ಅಖಿಳ +ಸ
ನಾಮರ್+ಎದ್ದುದು +ತೊಡರ +ಝಣಝಣ +ರವದ+ ಖಡೆಯದಲಿ

ಅಚ್ಚರಿ:
(೧) ಎದ್ದಾಗ ಆಗುವ ಶಬ್ದವನ್ನು ಚಿತ್ರಿಸಿರುವುದು – ಸನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ
(೨) ಸ್ತೋಮ, ಸೋಮ, ಸುತಸೋಮ – ಪದಗಳ ಬಳಕೆ