ಪದ್ಯ ೮೩: ಸುಗಂಧದ ಓಕುಳಿಯ ಪ್ರಭಾವ ಹೇಗಿತ್ತು?

ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನವ
ಪರಮಸೌರಭಕಲಸಿಕೊಂಡುದು ಸಕಲ ಸುರಕುಲವ (ವಿರಾಟ ಪರ್ವ, ೧೧ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಂಧ, ಕಸ್ತೂರಿ, ಪನ್ನೀರುಗಳ ಪ್ರವಾಹದಿಂದ ಭೂಮಿಯು ನೆನೆಯಿತು. ದಿಕ್ಕುಗಳು ಪರಿಮಳಭರಿತವಾದವು. ತುಂತುರಿನಿಂದ ಸಮುದ್ರವೂ ಕಂಪಾಯಿತು. ಸೂರ್ಯನೂ ಸುಗಂಧ ಭರಿತವಾದನೆಂದ ಮೇಲೆ ಗಾಳಿಯಲ್ಲಿ ಸುಗಂಧ ತುಂಬಿದುದು ಆಶ್ಚರ್ಯವೇನಲ್ಲ. ಓಕುಳಿಯ ಸುಗಂಧದಿಂದ ದೇವತೆಗಳೂ ತೃಪ್ತರಾದರು.

ಅರ್ಥ:
ಧರಣಿ: ಭೂಮಿ; ನೆನೆ: ಒದ್ದೆಯಾಗು; ಗಂಧ: ಚಂದನ; ರಸ: ಸಾರ; ಕತ್ತುರಿ: ಕಸ್ತೂರಿ; ಪನ್ನೀರು: ಸುಗಂಧಯುಕ್ತವಾದ ನೀರು; ಹೊನಲು: ಪ್ರವಾಹ; ಒಡೆ: ಸೀಳು, ಬಿರಿ; ಎರಚು: ಚಿಮುಕಿಸು, ಚೆಲ್ಲು; ದೆಸೆ: ದಿಕ್ಕು; ಕಂಪು: ಸುಗಂಧ; ಅಂಬುಧಿ: ಸಾಗರ; ನವ: ಹೊಸ; ತುಷಾರ: ಹಿಮ, ಮಂಜು; ತರಣಿ: ಸೂರ್ಯ, ನೇಸರು; ಪರಿಮಳ: ಸುಗಂಧ; ಪವನ: ವಾಯು; ಸುರಭಿ: ಸುಗಂಧ; ಅಚ್ಚರಿ: ಆಶ್ಚರ್ಯ; ಗಗನ: ಆಗಸ; ಪರಮ: ಶ್ರೇಷ್ಠ; ಸೌರಭ: ಸುವಾಸನೆ; ಕಲಸು: ಬೆರಸು; ಸಕಲ: ಎಲ್ಲಾ; ಸುರಕುಲ: ದೇವತೆಗಳ ವಂಶ;

ಪದವಿಂಗಡಣೆ:
ಧರಣಿ +ನೆನೆದುದು +ಗಂಧ+ರಸ+ ಕ
ತ್ತುರಿಯ +ಪನ್ನೀರುಗಳ +ಹೊನಲ್+ಒಡೆವ್
ಎರಸಿ+ ದೆಸೆ +ಕಂಪಿಟ್ಟುದ್+ಅಂಬುಧಿ +ನವ +ತುಷಾರದಲಿ
ತರಣಿ +ಪರಿಮಳಿಸಿದನು +ಪವನನ
ಸುರಭಿತನವ್+ಅಚ್ಚರಿಯೆ +ಗಗನವ
ಪರಮ+ಸೌರಭ+ಕಲಸಿಕೊಂಡುದು +ಸಕಲ+ ಸುರಕುಲವ

ಅಚ್ಚರಿ:
(೧) ಉತ್ಪ್ರೇಕ್ಷೆ – ಪರಿಮಳದಿಂದ ಸೂರ್ಯನು ಕಂಪಿಸಿದನು – ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ
(೨) ಸಾಗರವೂ ಸುಗಂಧಮಯವಾಯಿತು ಎಂದು ಹೇಳುವ ಪರಿ – ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ

ಪದ್ಯ ೭: ದ್ರೌಪದಿಯ ಸೌಂದರ್ಯ ಹೇಗಿತ್ತು?

ಹಾರ ನೂಪುರ ಝಣಝಣಿತ ಝೇಂ
ಕಾರ ರವವದು ಮೊಳಗೆ ಭುವನ ಮ
ಯೂರ ಕುಣಿದುದು ವರಕಟಾಕ್ಷದ ಮಿಂಚು ಥಳಥಳಿಸೆ
ಆರು ಹೊಗಳುವರಂಗವಟ್ಟದ
ಸೌರಭದ ಪರಿಮಳಕೆ ತುಂಬಿಯ
ಸಾರಕಟ್ಟಿತು ಬಂದಳಂಗನೆ ಕೀಚಕನ ಮನೆಗೆ (ವಿರಾಟ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ದ್ರೌಪದಿಯ ಕಣ್ಣೋಟವು ಮಿಂಚಿನಂತೆ ಹೊಳೆಯುತ್ತಿರಲು, ಅವಳು ತೊಟ್ಟ ಹಾರ ನೂಪುರಗಳ ಸದ್ದು ಗುಡುಗೆಂದು ಭಾವಿಸಿದ ಲೋಕವೆಂಬ ನವಿಲು ಕುಣಿಯಿತು, ಅವಳ ಸುಂದರ ದೇಹದ ಸುಗಂಧದ ಪರಿಮಳಕ್ಕೆ ಕಮಲವೆಂದು ತಿಳಿದು ದುಂಬಿಗಳ ಹಿಂಡು ಅವಳತ್ತ ಬಂದಿತು, ಇಂತಹ ದ್ರೌಪದಿಯು ಕೀಚಕನ ಮನೆಗೆ ಬಂದಳು.

ಅರ್ಥ:
ಹಾರ: ಮಾಲೆ; ನೂಪುರ: ಕಾಲಿನ ಗೆಜ್ಜೆ, ಕಾಲಂದುಗೆ; ಝಣಝಣ, : ಶಬ್ದವನ್ನು ವಿವರಿಸುವ ಪದ; : ಝೇಂಕಾರ: ನಾದ; ರವ: ಶಬ್ದ; ಮೊಳಗು: ಧ್ವನಿ, ಸದ್ದು; ಭುವನ: ಆಲಯ; ಮಯೂರ: ನವಿಲು; ಕುಣಿ: ನೃತ್ಯ; ವರ: ಶ್ರೇಷ್ಠ; ಕಟಾಕ್ಷ: ದೃಷ್ಟಿ, ಓರೆನೋಟ; ಮಿಂಚು: ಪ್ರಕಾಶ; ಥಳಥಳಿಸು: ಹೊಳೆ; ಹೊಗಳು: ಪ್ರಶಂಶಿಸು; ಅಂಗವಟ್ಟು: ದೇಹ ಸೌಂದರ್ಯ; ಸೌರಭ: ಪರಿಮಳ; ತುಂಬಿ: ಜೇನು ನೊಣ, ದುಂಬಿ; ಸಾರಕಟ್ಟು: ಗುಂಪುಗೂಡು; ಅಂಗನೆ: ಹೆಣ್ಣು; ಮನೆ: ಆಲಯ;

ಪದವಿಂಗಡಣೆ:
ಹಾರ +ನೂಪುರ+ ಝಣಝಣಿತ+ ಝೇಂ
ಕಾರ +ರವವದು+ ಮೊಳಗೆ +ಭುವನ+ ಮ
ಯೂರ +ಕುಣಿದುದು+ ವರಕಟಾಕ್ಷದ+ ಮಿಂಚು +ಥಳಥಳಿಸೆ
ಆರು+ ಹೊಗಳುವರ್+ಅಂಗವಟ್ಟದ
ಸೌರಭದ +ಪರಿಮಳಕೆ +ತುಂಬಿಯ
ಸಾರಕಟ್ಟಿತು +ಬಂದಳಂಗನೆ+ ಕೀಚಕನ+ ಮನೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾರ ನೂಪುರ ಝಣಝಣಿತ ಝೇಂಕಾರ ರವವದು ಮೊಳಗೆ ಭುವನ ಮ
ಯೂರ ಕುಣಿದುದು ವರಕಟಾಕ್ಷದ ಮಿಂಚು ಥಳಥಳಿಸೆ
(೨) ಅಂಗ ಪರಿಮಳದ ಉಪಮಾನ – ಅಂಗವಟ್ಟದ ಸೌರಭದ ಪರಿಮಳಕೆ ತುಂಬಿಯ ಸಾರಕಟ್ಟಿತು