ಪದ್ಯ ೩೪: ಶಲ್ಯ ಧರ್ಮಜರ ಯುದ್ಧವು ಹೇಗೆ ನಡೆಯಿತು?

ಅರಸ ಕೇಳ್ ಶಲ್ಯನ ಯುಧಿಷ್ಠಿರ
ಧರಣಿಪನ ಸಂಗ್ರಾಮವಮ್ದಿನ
ಸುರನದೀನಂದನನ ದ್ರೋಣನ ಸೂತಸಂಭವನ
ನರನ ಭೂರಿಶ್ರವನ ಭೀಮನ
ಕುರುಪತಿಯ ವೃಷಸೇನ ಸೌಭ
ದ್ರರ ಸಮಗ್ರಾಹವವ ಮರಸಿತು ಹೇಳಲೇನೆಂದ (ಶಲ್ಯ ಪರ್ವ, ೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಶಲ್ಯ ಯುಧಿಷ್ಠಿರರ ಕಾಳಗವು ಭೀಷ್ಮ, ದ್ರೋಣ, ಕರ್ಣ, ಅರ್ಜುನ, ಭೂರಿಶ್ರವ, ಭೀಮ, ದುರ್ಯೋಧನ, ವೃಷಸೇನ, ಅಭಿಮನ್ಯು ಮೊದಲಾದವರೆಲ್ಲ ಮಾಡಿದ ಘೋರ ಸಂಗ್ರಾಮಗಳನ್ನು ಮರೆಸಿತು.

ಅರ್ಥ:
ಅರಸ: ರಾಜ; ಧರಣಿಪ: ರಾಜ; ಸಂಗ್ರಾಮ: ಯುದ್ಧ; ಸುರನದಿ: ಗಂಗೆ; ನಂದನ: ಮಗ; ಸೂತ: ಸಾರಥಿ; ಸಂಭವ: ಹುಟ್ಟಿದ; ನರ: ಅರ್ಜುನ; ಆಹವ: ಯುದ್ಧ; ಮರಸು: ನೆನಪಿನಿಂದ ದೂರ ಮಾಡು;

ಪದವಿಂಗಡಣೆ:
ಅರಸ +ಕೇಳ್ +ಶಲ್ಯನ +ಯುಧಿಷ್ಠಿರ
ಧರಣಿಪನ +ಸಂಗ್ರಾಮವ್+ಅಂದಿನ
ಸುರನದೀನಂದನನ +ದ್ರೋಣನ +ಸೂತ+ಸಂಭವನ
ನರನ+ ಭೂರಿಶ್ರವನ+ ಭೀಮನ
ಕುರುಪತಿಯ+ ವೃಷಸೇನ +ಸೌಭ
ದ್ರರ +ಸಮಗ್ರ+ಆಹವವ +ಮರಸಿತು +ಹೇಳಲೇನೆಂದ

ಅಚ್ಚರಿ:
(೧) ಅರಸ, ಧರಣಿಪ – ಸಾಮಾನಾರ್ಥಕ ಪದ
(೨) ಭೀಷ್ಮರನ್ನು ಸುರನದೀನಂದನ, ಕರ್ಣನನ್ನು ಸೂತಸಂಭವ ಎಂದು ಕರೆದಿರುವುದು

ಪದ್ಯ ೬೨: ಅಭಿಮನ್ಯುವಿನ ಸಹಾಯಕ್ಕೆ ಯಾರು ಬಂದರು?

ಧರೆ ಬಿರಿಯೆ ಬೊಬ್ಬೆಯಲಿ ಬಲದ
ಬ್ಬರಣೆ ದೆಖ್ಖಾದೆಖ್ಖೆಯಾಗಲು
ಧರಣಿಪತಿ ಮರುಗಿದನು ಮಗನೇನಾದನೋ ಎನುತ
ಕರೆದು ಭೀಮನ ನಕುಳನನು ಸಂ
ಗರಕೆ ಧೃಷ್ಟದ್ಯುಮ್ನ ದ್ರುಪದರ
ಪರುಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ (ದ್ರೋಣ ಪರ್ವ, ೫ ಸಂಧಿ, ೬೨ ಪದ್ಯ)

ತಾತ್ಪರ್ಯ:
ಅಬ್ಬರದ ಕೂಗಿಗೆ ಭೂಮಿಯು ಬಿರಿಯಲು, ಸೈನ್ಯಗಳ ಆರ್ಭಟ ಹೆಚಲು ಅಭಿಮನ್ಯುವೇನಾದನೋ ಎಂದು ಧರ್ಮಜನು ದುಃಖಿಸಿದನು. ಭೀಮ, ನಕುಲ, ದೃಷ್ಟದ್ಯುಮ್ಯರನ್ನು ಕರೆಸಿ ಸೈನ್ಯಸಮೇತ ಅಭಿಮನ್ಯುವಿನ ಸಹಾಯಕ್ಕೆ ಕಳಿಸಿದನು.

ಅರ್ಥ:
ಧರೆ: ಭೂಮಿ; ಬಿರಿ: ಬಿರುಕು, ಸೀಳು; ಬೊಬ್ಬೆ: ಜೋರಾದ ಕೂಗು; ಬಲ: ಸೈನ್ಯ; ಅಬ್ಬರಣೆ: ಆರ್ಭಟ; ದೆಖ್ಖಾದೆಖ್ಖಿ: ಮುಖಾಮುಖಿ; ಧರಣಿಪತಿ: ರಾಜ; ಮರುಗು: ತಳಮಳ, ಸಂಕಟ; ಮಗ: ಪುತ್ರ; ಕರೆ: ಬರೆಮಾಡು; ಸಂಗರ: ಯುದ್ಧ; ಪರುಠವ: ಭದ್ರತೆ, ಹೆಚ್ಚಳ, ಆಧಿಕ್ಯ; ಕಳುಹು: ತೆರಳು; ಸೌಭದ್ರ: ಅಭಿಮನ್ಯು; ಪಡಿ: ಸಮಾನವಾದುದು, ಎಣೆ, ಪ್ರತಿ; ಬಲ: ಸೈನ್ಯ;

ಪದವಿಂಗಡಣೆ:
ಧರೆ +ಬಿರಿಯೆ +ಬೊಬ್ಬೆಯಲಿ +ಬಲದ್
ಅಬ್ಬರಣೆ +ದೆಖ್ಖಾದೆಖ್ಖೆಯಾಗಲು
ಧರಣಿಪತಿ +ಮರುಗಿದನು +ಮಗನೇನಾದನೋ+ ಎನುತ
ಕರೆದು+ ಭೀಮನ +ನಕುಳನನು+ ಸಂ
ಗರಕೆ +ಧೃಷ್ಟದ್ಯುಮ್ನ +ದ್ರುಪದರ
ಪರುಠವಿಸಿ +ಕಳುಹಿದನು +ಸೌಭದ್ರಂಗೆ +ಪಡಿ+ಬಲವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿರಿಯೆ ಬೊಬ್ಬೆಯಲಿ ಬಲದಬ್ಬರಣೆ
(೨) ಧರೆ, ಧರಣಿಪತಿ – ಪದಗಳ ಬಳಕೆ

ಪದ್ಯ ೧: ಪಾಂಡವರ ತನಯರು ಯಾರನ್ನು ಬೈದರು?

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತಿಯ ನಂದನರು ತ
ಮ್ಮಾಳೊಡನೆ ಹೇಇದರು ಸೌಭದ್ರಾದಿ ತನಯರಿಗೆ
ಬಾಲಕಿಯ ಬೇಳಂಬವನು ಜೂ
ಜಾಳಿಗಳ ಜಜ್ಝಾರ ತನವನು
ಕೇಳಿ ಬೈದುದು ಸೇನೆ ಖತಿಯಲಿ ಖಳಚತುಷ್ಟಯವ (ಸಭಾ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯ ಮಹಾರಾಜರಿಗೆ ಮಹಾಭಾರತದ ಕಥೆಯನ್ನು ಮುಂದುವರೆಸುತ್ತಾ, ಕೇಳು ರಾಜ ನಿಮ್ಮ ಪೂರ್ವಜರಾದ ಪಾಂಡವರು ಹಿಂದಿರುಗಿ ಬರುತ್ತಾ, ಅಭಿಮನ್ಯು ಮೊದಲಾದ ತಮ್ಮ ಮಕ್ಕಳಿಗೆ ದ್ರೌಪದಿಗೊದಗಿದ ವಿಪತ್ತನ್ನೂ ಜೂಜಾಡಿದ ಕೌರವರ ದುರುದುಂಬಿತನವನ್ನೂ ಹೇಳಿದರು. ಅವರೆಲ್ಲರೂ ದುಷ್ಟ ಚತುಷ್ಕೂಟವನ್ನು (ದುಶ್ಯಾಸನ, ದುರ್ಯೋಧನ, ಶಕುನಿ, ಕರ್ಣ) ರನ್ನು ಬೈದರು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ನಂದನ: ಮಕ್ಕಳು; ತಮ್ಮೊಡನೆ: ಅವರವರಿಗೆ; ಹೇಳು: ತಿಳಿಸು; ಸೌಭದ್ರ: ಅಭಿಮನ್ಯು; ತನಯ: ಮಕ್ಕಳು; ಬಾಲಕಿ: ಹೆಣ್ಣು; ಬೇಳಂಬ:ವಿಪತ್ತು, ಗೊಂದಲ; ಜೂಜಾಳಿ: ದ್ಯೂತ; ಜಜ್ಝಾರ: ಉದ್ಧತ; ಕೇಳಿ: ತಿಳಿದು; ಬೈದು: ಜರೆ; ಸೇನೆ: ಸೈನ್ಯ; ಖತಿ: ಕೋಪ; ಖಳ: ದುಷ್ಟ; ಚತುಷ್ಟ: ನಾಲ್ಕು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುಂತಿಯ +ನಂದನರು +ತ
ಮ್ಮಾಳೊಡನೆ +ಹೇಳಿದರು+ ಸೌಭದ್ರಾದಿ +ತನಯರಿಗೆ
ಬಾಲಕಿಯ +ಬೇಳಂಬವನು +ಜೂ
ಜಾಳಿಗಳ +ಜಜ್ಝಾರ +ತನವನು
ಕೇಳಿ +ಬೈದುದು +ಸೇನೆ +ಖತಿಯಲಿ+ ಖಳ+ಚತುಷ್ಟಯವ

ಅಚ್ಚರಿ:
(೧) ಜೋಡಿ ಪದಗಳು- ಜಾಜಾಳಿಗಳ ಜಜ್ಝಾರ, ಖತಿಯಲಿ ಖಳಚತುಷ್ಟಯವ;

ಪದ್ಯ ೭೭: ಪಾಂಡವರ ಪರಾಭವದ ಯಾರ ಕಿವಿಯನ್ನು ಮುಟ್ಟಿತು?

ಅರಸ ಕೇಳೈ ಬಳಿಕ ಹಸ್ತಿನ
ಪುರದೊಳಾಯ್ತಾ ವಾರ್ತೆ ಬಳಿಕೀ
ಪುರದ ಬಹಿರೋದ್ಯಾನ ವೀಧಿಗಳೊಳಗೆ ಹರಹಿನಲಿ
ಅರಸಿಯರು ಸೌಭದ್ರನವರೈ
ವರ ಕುಮಾರರು ಮಂತ್ರಿಗಳು ಮು
ಖ್ಯರು ಪಸಾಯ್ತರು ಕೇಳಿದರು ಪಂಡವ ಪರಾಜಯವ (ಸಭಾ ಪರ್ವ, ೧೫ ಸಂಧಿ, ೭೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರ ಪರಾಭವದ ವಿಷಯ, ದ್ರೌಪದಿಯನ್ನು ಆಸ್ಥಾನಕ್ಕೆ ಕರೆತಂದ ವಿಷಯವು ಈಗ ಹಸ್ತಿನಾಪ್ರದಲ್ಲಿ ಎಲ್ಲೆಡೆ ಹರಡಿತು. ಬಳಿಕ ಊರ ಹೊರಗಿನ ಉದ್ಯಾನದಲ್ಲಿ, ಪಾಂಡವರ ರಾಣಿಯರು, ಅಭಿಮನ್ಯು ಉಪಪಾಂಡವರು, ಪಾಂಡವರ ಮಂತ್ರಿಗಳು, ಸಾಮಂತರಾಜರು, ಆಪ್ತರು, ಪರಿವಾರದ ಮುಖ್ಯಸ್ಥರಿಗೆ ಪಾಂಡವರ ಸೋಲಿನ ಸುದ್ದಿ ಮುಟ್ಟಿತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಪುರ: ಊರು; ವಾರ್ತೆ: ವಿಷಯ, ಸುದ್ದಿ; ಬಹಿರ: ಹೊರಗಡೆ; ಉದ್ಯಾನ: ಉಪವನ; ವೀಧಿ: ಮಾರ್ಗ; ಹರಹು: ಹಬ್ಬುವಿಕೆ; ಅರಸಿ: ರಾಣಿ; ಸೌಭದ್ರ: ಅಭಿಮನ್ಯು; ವರ: ಶ್ರೇಷ್ಠ; ಕುಮಾರ: ಮಕ್ಕಳು; ಮಂತ್ರಿ: ಸಚಿವ; ಮುಖ್ಯ: ಪ್ರಮುಖ, ಪ್ರಧಾನ; ಪಸಾಯ್ತ: ಸಾಮಂತರಾಜ; ಕೇಳು: ಆಲಿಸು; ಪರಾಜಯ: ಸೋಲು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ +ಹಸ್ತಿನ
ಪುರದೊಳ್+ಆಯ್ತ್+ಆ+ ವಾರ್ತೆ +ಬಳಿಕ್+ಈ
ಪುರದ+ ಬಹಿರ್+ಉದ್ಯಾನ +ವೀಧಿಗಳೊಳಗೆ+ ಹರಹಿನಲಿ
ಅರಸಿಯರು +ಸೌಭದ್ರನ್+ಅವರ್
ಐವರ +ಕುಮಾರರು +ಮಂತ್ರಿಗಳು+ ಮು
ಖ್ಯರು +ಪಸಾಯ್ತರು +ಕೇಳಿದರು +ಪಾಂಡವ+ ಪರಾಜಯವ

ಅಚ್ಚರಿ:
(೧) ಅರಸ ಅರಸಿ – ಪದಗಳ ಬಳಕೆ

ಪದ್ಯ ೧೯: ಕುಂತಿಯು ಯಾರ ಯೋಗಕ್ಷೇಮವನ್ನು ಕೇಳಿದಳು?

ದೇವಕಿಯ ವಸುದೇವನನು ಬಲ
ದೇವ ಸೌಭದ್ರಾದಿ ಯದು ಭೂ
ಪಾವಳಿಯ ಸುಕ್ಷೇಮ ಕುಶಲವ ಕುಂತಿ ಬೆಸಗೊಳಲು
ದೇವ ನಗೆಮೊಗದಿಂದ ವರ ವಸು
ದೇವ ದೇವಕಿಯಾದಿ ಯಾದವ
ರಾ ವಿಳಾಸ ಮಹೀಶರಿರವನು ಕುಂತಿಗರುಹಿದನು (ಉದ್ಯೋಗ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕುಂತಿಯು ಕೃಷ್ಣನನ್ನು ನೋಡಿ, ದೇವಕಿ, ವಸುದೇವ, ಬಲಭದ್ರ, ಸೌಭದ್ರ ಮತ್ತು ಯದುಕುಲದ ಎಲ್ಲರ ಕುಶಲ ಕ್ಷೇಮ ವಿಚಾರವನ್ನು ಕೇಳಿದಳು. ಕೃಷ್ಣನು ಸಂತೋಷದಿಂದ ದೇವಕಿ ವಸುದೇವಾದಿಯರ ಕ್ಷೇಮದ ವಿಚಾರವನ್ನು ತಿಳಿಸಿದನು.

ಅರ್ಥ:
ಭೂಪ: ರಾಜ; ಆವಳಿ: ಗುಂಪು; ಕ್ಷೇಮ: ನೆಮ್ಮದಿ; ಕುಶಲ: ಕ್ಷೇಮ; ಬೆಸ: ಕೇಳುವುದು; ನಗೆ: ಸಂತೋಷ; ಮೊಗ: ಮುಖ; ವರ: ಶ್ರೇಷ್ಠ; ವಿಳಾಸ: ಇರುವ ಸ್ಥಳ; ಮಹೀಶ: ರಾಜ;ಅರುಹು: ತಿಳಿಸು; ಆದಿ: ಮುಂತಾದ;

ಪದವಿಂಗಡಣೆ:
ದೇವಕಿಯ +ವಸುದೇವನನು +ಬಲ
ದೇವ+ ಸೌಭದ್ರಾದಿ +ಯದು +ಭೂ
ಪಾವಳಿಯ +ಸುಕ್ಷೇಮ +ಕುಶಲವ +ಕುಂತಿ +ಬೆಸಗೊಳಲು
ದೇವ +ನಗೆಮೊಗದಿಂದ +ವರ +ವಸು
ದೇವ +ದೇವಕಿಯಾದಿ +ಯಾದವ
ರಾ +ವಿಳಾಸ+ ಮಹೀಶರಿರವನು +ಕುಂತಿಗ್+ಅರುಹಿದನು

ಅಚ್ಚರಿ:
(೧) ದೇವಕಿ, ಬಲದೇವ, ವಸುದೇವ – ಪದಗಳ ಬಳಕೆ