ಪದ್ಯ ೧೧: ಮಕ್ಕಳು ಹೇಗೆ ಬೆಳೆಯುತ್ತಿದ್ದರು?

ಬೆಳೆವುತಿರ್ದರು ಹರಿಣಪಕ್ಷದ
ನಳಿನರಿಪುವಿನವೊಲ್ ಕುಮಾರರು
ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ
ಕಲಿತವಿದ್ಯರ ಮಾಡಿ ತಾಯು
ಮ್ಮಳಿಸದಂತಿರೆ ಸೋಮವಂಶದ
ಬೆಳವಿಗೆಯನೇ ಮಾಡಿ ಕೊಂಡಾಡಿದನು ಕಲಿಭೀಷ್ಮ (ಆದಿ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮೂವರು ಕುಮಾರರು ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಿದ್ದರು. ಕುಲಾಚಾರದಂತೆ ಧೃತರಾಷ್ಟ್ರ, ಪಾಂಡು ಇವರಿಗೆ ಚೌಲ, ಉಪನಯನ ಕರ್ಮಗಳನ್ನು ಭೀಷ್ಮನು ಮಾಡಿಸಿದನು. ಅವರಿಗೆ ವಿದ್ಯಾಭ್ಯಾಸವನ್ನು ಮಾಡಿಸಿ ಯೋಜನಗಂಧಿಗೆ ದುಃಖವಾಗದಂತೆ ಚಂದ್ರವಂಶದ ಅಭ್ಯುದಯಕ್ಕೆ ಭೀಷ್ಮನು ಕಾರಣನಾದನು.

ಅರ್ಥ:
ಬೆಳೆ: ವೃದ್ಧಿಸು; ಹರಿಣ: ಬಿಳಿಯ ಬಣ್ಣ; ಪಕ್ಷ: ಹದಿನೈದು ದಿನಗಳ ಕಾಲ; ನಳಿನರಿಪು: ಚಂದ್ರ; ನಳಿನ: ಕಮಲ; ರಿಪು: ವೈರಿ; ಕುಮಾರ: ಮಕ್ಕಳು; ಕುಲ: ವಂಶ; ವಿಹಿತ: ಯೋಗ್ಯವಾದುದು; ಚೌಲ: ಹುಟ್ಟು ಕೂದಲನ್ನು ತೆಗೆಸುವುದು; ಉಪನಯನ: ಮುಂಜಿ, ಬ್ರಹ್ಮೋಪದೇಶ; ರಚಿಸು: ನಿರ್ಮಿಸು; ಕಲಿತವಿದ್ಯ: ವಿದ್ಯಾಭ್ಯಾಸ; ತಾಯಿ: ಮಾತೆ; ಉಮ್ಮಳಿಸು: ಅ೦ತರಾಳದಿ೦ದ ಹೊರಹೊಮ್ಮು; ಸೋಮ: ಚಂದ್ರ; ವಂಶ: ಕುಲ; ಬೆಳವಿಗೆ: ಏಳಿಗೆ; ಕೊಂಡಾಡು: ಹೊಗಳು; ಕಲಿ: ಶೂರ;

ಪದವಿಂಗಡಣೆ:
ಬೆಳೆವುತಿರ್ದರು +ಹರಿಣಪಕ್ಷದ
ನಳಿನರಿಪುವಿನವೊಲ್ +ಕುಮಾರರು
ಕುಲವಿಹಿತ +ಚೌಲ+ಉಪನಯನವನ್+ಇಬ್ಬರಿಗೆ +ರಚಿಸಿ
ಕಲಿತವಿದ್ಯರ+ ಮಾಡಿ +ತಾಯ್
ಉಮ್ಮಳಿಸದಂತಿರೆ +ಸೋಮ+ವಂಶದ
ಬೆಳವಿಗೆಯನೇ +ಮಾಡಿ +ಕೊಂಡಾಡಿದನು +ಕಲಿ+ಭೀಷ್ಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಣಪಕ್ಷದ ನಳಿನರಿಪುವಿನವೊಲ್

ಪದ್ಯ ೧೫: ಚಂದ್ರವಂಶಕ್ಕೆ ಕೆಟ್ಟ ಹೆಸರೇಕೆ ಬರುತ್ತದೆ?

ಜಾತಿಮಾತ್ರದಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳ ಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ನಮ್ಮ ಹುಟ್ಟಿನಿಂದ ಬಂದ ಕೀರ್ತಿ ಪ್ರಸಿದ್ಧಿಗಳು ನಮಗೆ ಬೇಕಲ್ಲವೇ? ಹಾಗಾದರೆ ನಾವು ಹುಟ್ಟಿದ್ದು ನಿರ್ಮಲವಾದ ಚಂದ್ರವಂಶದಲ್ಲಿ. ನೀನು ಹೆದರಿ ಓಡಿ ನೀರಿನಲ್ಲಿ ಅಡಗಿಕೋಂಡರೆ ನಮಗೆ ಕೆಟ್ಟ ಹೆಸರು ಬರುವುದಿಲ್ಲವೇ? ನಾಡಾಡಿಗಳ ಕೈಗೆ ಬಾಯಿಗೆ ನೀನು ಗಾಸವಾಗಿ ಕೆಟ್ಟ ಹೆಸರು ಹೊತ್ತುಕೊಂಡಂತಾಗುವುದಿಲ್ಲವೇ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ಜಾತಿ: ಕುಲ; ಬಂದ: ಪಡೆದ; ಖ್ಯಾತಿ: ಪ್ರಸಿದ್ಧಿ; ವಿಖ್ಯಾತಿ: ಪ್ರಸಿದ್ಧಿ, ಕೀರ್ತಿ; ಜಾತ: ಹುಟ್ಟಿದುದು; ನಿರ್ಮಳ: ಶುದ್ಧ; ಸೋಮ: ಚಂದ್ರ; ವಂಶ: ಕುಲ; ಭೀತಿ: ಭಯ; ಹೊಕ್ಕು: ಸೇರು; ಮಾತು: ನುಡಿ; ತಾಗು: ಮುಟ್ಟು; ಅಕಟ: ಅಯ್ಯೋ; ಬೂತು: ಕುಚೋದ್ಯ, ಕುಚೇಷ್ಟೆ; ಬಂದೈ: ಬರೆಮಾಡು; ತಂದೆ: ಅಪ್ಪ; ರಾಯ: ರಾಜ;

ಪದವಿಂಗಡಣೆ:
ಜಾತಿಮಾತ್ರದಮೇಲೆ +ಬಂದ
ಖ್ಯಾತಿ+ವಿಖ್ಯಾತಿಗಳು +ನಮಗ್+ಎನೆ
ಜಾತರಾದೆವು +ನಾವು +ನಿರ್ಮಳ +ಸೋಮ+ವಂಶದಲಿ
ಭೀತಿಯಲಿ +ನೀ +ನೀರ +ಹೊಕ್ಕಡೆ
ಮಾತು +ತಾಗದೆ+ ತಮ್ಮನ್+ಅಕಟಾ
ಬೂತುಗಳ+ ಕೈಬಾಯ್ಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ಕೌರವನ ಸ್ಥಿತಿಯನ್ನು ವರ್ಣಿಸುವ ಪರಿ – ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ

ಪದ್ಯ ೬೦: ಧರ್ಮಜನೇಕೆ ಚಿಂತಾಸಕ್ತನಾದನು?

ಕೇಳಿದನು ಯಮಸೂನು ದುಗುಡವ
ತಾಳಿದನು ನಳನಹುಷ ಭರತ ನೃ
ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ
ಕೋಳುವೋದುದೆ ಕೀರ್ತಿಯೆಮ್ಮೀ
ಬಾಳಿಕೆಯ ಸುಡಲೆನುತ ಚಿಂತಾ
ಲೋಲನಿದ್ದನು ವೀರ ನಾರಾಯಣನ ನೆನೆಯುತ್ತ (ಅರಣ್ಯ ಪರ್ವ, ೨೦ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧರ್ಮಜನು ಕೌರವರ ಸೋಲಿನ ಸ್ಥಿತಿಯನ್ನು ಕೇಳಿದನು, ನಳ ನಹುಷ, ಭರತರಂತಹ ಚಕ್ರವರ್ತಿಗಳ ಪರಂಪರೆಯುಳ್ಳ ಚಂದ್ರವಂಶದ ಕೀರ್ತಿಯು ಹಾಳಾಯಿತೇ, ನಾವು ಬದುಕಿದ್ದೇನು ಪ್ರಯೋಜನ, ನಮ್ಮ ಬಾಳಿಕೆ ಸುಡಲಿ ಎಂದು ಯೋಚಿಸುತ್ತಾ ಚಿಂತೆಯಲ್ಲಿ ಮುಳುಗಿ ಶ್ರೀಕೃಷ್ಣನನ್ನು ಸ್ಮರಿಸಿದನು.

ಅರ್ಥ:
ಕೇಳು: ಆಲಿಸು; ಸೂನು: ಮಗ; ದುಗುಡ: ದುಃಖ; ತಾಳು: ಹೊಂದು, ಪಡೆ; ನೃಪಾಲ: ರಾಜ; ಪಾರಂಪರೆ: ವಂಶ, ಪೀಳಿಗೆ; ಉದಿಸು: ಹುಟ್ತು; ಸೋಮ: ಚಂದ್ರ; ವಂಶ: ಕುಲ; ಕೋಳು: ಪೆಟ್ಟು; ಕೀರ್ತಿ: ಯಶಸ್ಸು; ಬಾಳಿಕೆ: ಬದುಕು; ಸುಡು: ದಹಿಸು; ಚಿಂತೆ: ಯೋಚನೆ; ಲೋಲ: ಆಸಕ್ತ; ನೆನೆ: ಜ್ಞಾಪಿಸಿಕೋ;

ಪದವಿಂಗಡಣೆ:
ಕೇಳಿದನು +ಯಮಸೂನು +ದುಗುಡವ
ತಾಳಿದನು +ನಳ+ನಹುಷ +ಭರತ+ ನೃ
ಪಾಲ +ಪಾರಂಪರೆಯಲ್+ಉದಿಸಿದ +ಸೋಮ+ವಂಶದಲಿ
ಕೋಳುವೋದುದೆ +ಕೀರ್ತಿ+ಎಮ್ಮೀ
ಬಾಳಿಕೆಯ +ಸುಡಲ್+ಎನುತ +ಚಿಂತಾ
ಲೋಲನಿದ್ದನು +ವೀರ +ನಾರಾಯಣನ +ನೆನೆಯುತ್ತ

ಅಚ್ಚರಿ:
(೧) ಚಿಂತಿತನಾದನು ಎಂದು ಹೇಳಲು – ಚಿಂತಾಲೋಲನಿದ್ದನು
(೨) ಚಂದ್ರವಂಶದ ಕಾಳಜಿಯನ್ನು ತೋರುವ ಪರಿ – ಕೋಳುವೋದುದೆ ಕೀರ್ತಿಯೆಮ್ಮೀ
ಬಾಳಿಕೆಯ ಸುಡಲ್