ಪದ್ಯ ೬೬: ಅರ್ಜುನನನ್ನು ಯಾರು ಹರಸಿದರು?

ಅರಸ ಕಳುಹಿದನಿಂದ್ರಸೂತನ
ನರಮನೆಗೆ ಬಂದನು ಧನಂಜಯ
ವೆರಸಿ ಪರ್ಣದ ಔಕಿಗೆಯಲಿ ಮುನೀಂದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿವಧುಗಳಕ್ಷತೆ
ವೆರಸಿ ಗದುಗಿನ ವೀರನಾರಾಯಣನ ಮೈದುನನ (ಅರಣ್ಯ ಪರ್ವ, ೧೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಮಾತಲಿಯನ್ನು ಇಂದ್ರನ ಅರಮನೆಗೆ ಕಳುಹಿಸಿ, ಅರ್ಜುನನೊಡನೆ ಮುನಿಗಳ ಸಮೇತವಾಗಿ ತನ್ನ ಪರ್ಣಶಾಲೆಯ ಅಂಗಳಕ್ಕೆ ಬಂದನು. ದ್ರೌಪದಿಯು ಬಣ್ಣದ ದೀಪಗಳನ್ನು ಹಚ್ಚಿದಳು. ಮುನಿ ಪತ್ನಿಯರು ಅರ್ಜುನನನ್ನು ಹರಸಿದರು.

ಅರ್ಥ:
ಅರಸ: ರಾಜ; ಕಳುಹಿದ: ಬೀಳ್ಕೊಡು; ಸೂತ: ರಥವನ್ನು ಓಡಿಸುವವ; ಅರಮನೆ: ರಾಜರ ಆಲಯ; ಬಂದು: ಆಗಮಿಸು; ಪರ್ಣ: ಎಲೆ; ಚೌಕಿಗೆ:ಮನೆಯ ಒಳ ಅಂಗಳ, ಹಜಾರ; ಮುನಿ: ಋಷಿ; ಮೇಳ: ಗುಂಪು; ಅರಸಿ: ರಾಣಿ; ಬಣ್ಣ: ವರ್ಣ; ಸೊಡರು: ದೀಪ; ಬಲಿ: ಹೆಚ್ಚಾಗು; ಹರಸು: ಆಶೀರ್ವದಿಸು; ಮುನಿವಧು: ಋಷಿ ಪತ್ನಿ; ಅಕ್ಷತೆ: ಮಂತ್ರಿಸಿದ ಅಕ್ಕಿ; ಮೈದುನ: ತಂಗಿಯ ಗಂಡ;

ಪದವಿಂಗಡಣೆ:
ಅರಸ +ಕಳುಹಿದನ್+ಇಂದ್ರ+ಸೂತನನ್
ಅರಮನೆಗೆ +ಬಂದನು +ಧನಂಜಯವ್
ಎರಸಿ+ ಪರ್ಣದ+ ಔಕಿಗೆಯಲಿ +ಮುನೀಂದ್ರ +ಮೇಳದಲಿ
ಅರಸಿ+ ಬಣ್ಣದ +ಸೊಡರ +ಬಲಿದಳು
ಹರಸಿದರು +ಮುನಿವಧುಗಳ್+ಅಕ್ಷತೆವ್
ಎರಸಿ+ ಗದುಗಿನ+ ವೀರನಾರಾಯಣನ +ಮೈದುನನ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ವೀರನಾರಾಯಣನ ಮೈದುನನ
(೨) ಅರಸಿ, ಹರಸಿ, ಎರಸಿ – ಪ್ರಾಸ ಪದಗಳು

ಪದ್ಯ ೯೬: ಇಂದ್ರನ ಓಲಗವು ಹೇಗೆ ಮುಕ್ತಾಯಗೊಂಡಿತು?

ಪಾರುಖಾಣೆಯನಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ (ಅರಣ್ಯ ಪರ್ವ, ೮ ಸಂಧಿ, ೯೬ ಪದ್ಯ)

ತಾತ್ಪರ್ಯ:
ಇಂದ್ರನು ಊರ್ವಶಿ ರಂಭೆ, ಮೇನಕೆ, ಗೌರಿ ಮೊದಲಾದ ಅಪ್ಸರೆಯರಿಗೆ ಬಹುಮಾನವನ್ನು ಕೊಟ್ಟನು. ಅಪ್ಸರೆಯರೂ, ಸಮಸ್ತ ದೇವತೆಗಳೂ ತಮ್ಮ ತಮ್ಮ ಮನೆಗಳಿಗೆ ಹೋದರು. ಓಲಗ ಮುಗಿಯಿತು. ಸಾಲು ದೀಪಗಳನ್ನು ಹಚ್ಚಿದರು. ಆರತಿಯ ಹರಿವಾಣಗಳ ಸಾಲು ಸುಳಿಯಿತು.

ಅರ್ಥ:
ಪಾರುಖಾಣೆ: ಬಹು ಮಾನ, ಉಡುಗೊರೆ; ಜಂಭ: ತಾರಕಾಸುರನ ಪ್ರಧಾನಿ; ಜಂಭಾರಿ: ಇಂದ್ರ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಪಾತ್ರ: ಅರ್ಹನಾದವನು; ಪರಮ: ಅತೀವ; ಹರುಷ: ಸಂತಸ; ನಾರಿ: ಸ್ತ್ರೀ; ನಿಖಿಳ: ಎಲ್ಲಾ; ಅಮರ: ದೇವತೆ; ಬೀಡಾರ: ತಂಗುವ ಸ್ಥಳ, ವಸತಿ; ಐದು: ಬಂದು ಸೇರು; ಹರೆದು: ತೀರಿತು; ಓಲಗ: ದರ್ಬಾರು; ಆರತಿ: ನೀರಾಜನ; ಹರಿವಣ: ತಟ್ಟೆ; ಸುಳಿ: ಕಾಣಿಸಿಕೊಳ್ಳು; ಸಾಲು: ಆವಳಿ; ಸೊಡರು: ದೀಪ;

ಪದವಿಂಗಡಣೆ:
ಪಾರುಖಾಣೆಯನಿತ್ತನಾ +ಜಂ
ಭಾರಿ+ಊರ್ವಶಿ +ರಂಭೆ +ಮೇನಕೆ
ಗೌರಿ+ಮೊದಲಾದ್+ಅಖಿಳ +ಪಾತ್ರಕೆ +ಪರಮ +ಹರುಷದಲಿ
ನಾರಿಯರು +ನಿಖಿಳ+ಅಮರರು+ ಬೀ
ಡಾರಕ್+ಐದಿತು +ಹರೆದುದ್+ಓಲಗವ್
ಆರತಿಯ +ಹರಿವಾಣ+ ಸುಳಿದುದು +ಸಾಲು +ಸೊಡರುಗಳ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುಳಿದುದು ಸಾಲು ಸೊಡರುಗಳ

ಪದ್ಯ ೫೧: ಮುಂದಾಲೋಚನೆಯಿಲ್ಲದ ನೃಪನನ್ನು ಯಾವುದಕ್ಕೆ ಹೋಲಿಸಬಹುದು?

ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರದ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹಬ್ಬುಗೆಯವನ ಸಿರಿ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಮುಂದಾಲೋಚನೆ ಮಾಡದ ರಾಜನ ಬಾಳ್ವಿಕೆಯು, ಗಾಳಿಗೆ ಒಡ್ಡಿದ ಹಣತೆಯಂತೆ, ಮೋಡಗಳ ರಚನೆಯಂತೆ, ಕಾಮನಬಿಲ್ಲಿನಂತೆ, ಶವದ ಉಡುಗೆಯಂತೆ, ಕತ್ತಿಗೆ ಒಡ್ಡಿದ ಕೊರಳಿನಂತೆ, ಹಾವಿರುವ ಬುಟ್ಟಿಯಲ್ಲಿ ಕೈಯಿಟ್ಟಂತೆ, ಪ್ರಾಣಕ್ಕೆ ಸಂಚಕಾರ ತರುತ್ತದೆ, ಅವನ ಸಿರಿ ಭ್ರಮೆ ಎಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಮೇಲು: ಮುಂದಾಲೋಚನೆ; ಅರಿ: ತಿಳಿ; ನೃಪ: ರಾಜ; ಬಾಳಿಕೆ: ಬಾಳುವುದು; ಗಾಳಿ: ಅನಿಲ, ಪವನ; ಒಡ್ಡು: ಈಡುಮಾಡು, ಅರ್ಪಿಸು; ಸೊಡರು: ದೀಪ; ನೀರದ: ಮೋಡ; ಒಡ್ಡಣೆ:ಗುಂಪು; ಜಾಲ: ಗುಂಪು; ಸುರಧನು: ಕಾಮನಬಿಲ್ಲು;ಆಕಾರ: ರೂಪ; ಶವ: ಹೆಣ; ಉಡುಗೆ: ಬಟ್ಟೆ; ಬಾಳು: ಜೀವಿಸು; ಔಕು:ಒತ್ತು, ಹಿಚುಕು;ಬಾಳ್: ಕತ್ತಿ; ಕೊರಳು:ಕತ್ತು; ಭುಜಗ: ಹಾವು; ಹೇಳಿಗೆ:ಹಾವುಗಳನ್ನಿಡುವ ಬಿದಿರಿನ ಬುಟ್ಟಿ; ಕರ: ಕೈ, ಹಸ್ತ; ಬೆಳ್ಳಾರ: ಬಿಳಿಯ ಹಾರ (ಮುತ್ತಿನ ಹಾರ); ಹಬ್ಬುಗೆ:ವಿಸ್ತಾರ; ಸಿರಿ: ಐಶ್ವರ್ಯ; ಭೂಪಾಲ: ರಾಜ ಬೆಳ್ಳಾದ: ಬೆಪ್ಪನಾದ;

ಪದವಿಂಗಡಣೆ:
ಮೇಲನ್+ಅರಿಯದ +ನೃಪನ +ಬಾಳಿಕೆ
ಗಾಳಿಗ್+ಒಡ್ಡಿದ +ಸೊಡರು +ನೀರದ
ಜಾಲದ್+ಒಡ್ಡಣೆ +ಸುರಧನುವಿನ್+ಆಕಾರ +ಶವದ್+ಉಡಿಗೆ
ಬಾಳಿಗ್+ಔಕಿದ +ಕೊರಳು +ಭುಜಗನ
ಹೇಳಿಗೆಯಲ್+ಇಕ್ಕಿದ +ಕರವು+ ಬೆ
ಳ್ಳಾರ +ಹಬ್ಬುಗೆ+ಯವನ +ಸಿರಿ +ಭೂಪಾಲ +ಕೇಳೆಂದ

ಅಚ್ಚರಿ:
(೧) ೬ ಬಗೆಯ ಉಪಮಾನಗಳಿಂದ ರಾಜನ ಮುಂದಾಲೋಚನೆಯ ಮಹತ್ವವನ್ನು ತಿಳಿಸಿರುವುದು
(೨) ಗಾಳಿ, ಬಾಳಿ, ಹೇಳಿ – ಪ್ರಾಸ ಪದಗಳ ಪ್ರಯೋಗ
(೩) ಜಾಲ, ಒಡ್ಡಣೆ – ಸಮನಾರ್ಥಕ ಪದ (ಗುಂಪು)

ಪದ್ಯ ೨೫: ಕುಂತಿಯ ದುಗುಡವೇನು?

ಹೇಳಿ ಮಾಡುವುದೇನು ಫಲುಗುಣ
ಬಾಲಕರು ನೀವೆನ್ನ ಪುಣ್ಯವು
ಗಾಳಿಗೊಡ್ಡಿದ ಸೊಡರೊಲಾದುದು ನೃಪನ ಮರಣದಲಿ
ಹೇಳಲೇನದ ಧರೆಯ ಕೌರವ
ರಾಳುತಿಹರಿಂದವರ ಹಂಗಿನ
ಕೂಳಿನಲಿ ಬೆಂದೊಡಲ ಹೊರೆದಿಹೆವೆಂದಳಿಂದುಮುಖಿ (ಆದಿ ಪರ್ವ, ೨೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅಯ್ಯೋ ಅರ್ಜುನ, ನನ್ನ ಬಯಕೆಯನ್ನು ಹೇಳಿ ಮಾಡುವುದಾದರು ಏನು, ನೀವೆಲ್ಲಾ ಬಾಲಕರು, ನನ್ನ ಪುಣ್ಯವು ನಿಮ್ಮ ತಂದೆಯವರು ಸಾವನ್ನಪಿದಾಗಲೆ ಕ್ಷೀಣಿಸಿತು, ಈಗ ಅದು ಗಾಳಿಗೆ ಒಡ್ಡಿದ ದೀಪದಂತಿದೆ, ಕೌರವರು ಈಗ ರಾಜ್ಯವನ್ನು ಆಳುತ್ತಿರುವರು, ಅವರ ಹಂಗಿನಲ್ಲಿ ನಾವು ಊಟವನ್ನು ತಿಂದು, ಬೆಂದ ಹೊಟ್ಟೆಯನ್ನು ಹೊರೆಯುತ್ತಿದ್ದೇವೆ, ಎಂದಳು

ಅರ್ಥ:
ಹೇಳಿ: ಮಾತಾಡಿ; ಬಾಲಕ: ಚಿಕ್ಕ ಮಕ್ಕಳು; ಪುಣ್ಯ: ಸದಾಚಾರ; ಗಾಳಿ: ಅನಿಲ; ಸೊಡರು:ದೀಪ; ನೃಪ: ರಾಜ; ಮರಣ: ಸಾವು; ಧರೆ: ಭೂಮಿ; ಆಳು: ರಾಜ್ಯಭಾರ; ಹಂಗು: ದಾಕ್ಷಿಣ್ಯ, ಆಭಾರ; ಕೂಳು: ಊಟ; ಬೆಂದು: ಕಾಯಿಸು; ಒಡಲ:ಶರೀರ, ಹೊಟ್ಟೆ; ಹೊರೆ: ಭಾರ;ಇಂದುಮುಖಿ: ಚಂದ್ರನ ಮುಖವುಳ್ಳವಳು;

ಪದವಿಂಗಡಣೆ:
ಹೇಳಿ+ ಮಾಡುವುದೇನು +ಫಲುಗುಣ
ಬಾಲಕರು+ ನೀವ್+ಎನ್ನ+ ಪುಣ್ಯವು
ಗಾಳಿಗೊಡ್ಡಿದ+ ಸೊಡರೊಲ್+ಆದುದು +ನೃಪನ +ಮರಣದಲಿ
ಹೇಳಲೇನದ+ ಧರೆಯ +ಕೌರವ
ರಾಳುತಿಹರ್+ಇಂದ್+ಅವರ+ ಹಂಗಿನ
ಕೂಳಿನಲಿ +ಬೆಂದ್+ಒಡಲ +ಹೊರೆದಿಹೆ+ವೆಂದಳ್+ಇಂದುಮುಖಿ

ಅಚ್ಚರಿ:
(೧) ಕುಂತಿಯ ದಯನೀಯ ಸ್ಥಿತಿಯ ವರ್ಣನೆ – ಪುಣ್ಯವು ಗಾಳಿಗೊಡ್ಡಿದ ಸೊಡರೊಲಾದುದು, ಹಂಗಿನ ಕೂಳಿನಲಿ ಬೆಂದೊಡಲ ಹೊರೆದಿಹೆ