ಪದ್ಯ ೩೭: ಮಂತ್ರಿಗಳು ಯಾವ ಅಭಿಪ್ರಾಯ ಪಟ್ಟರು?

ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲ್ಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು (ದ್ರೋಣ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನನ್ನು ತಡೆದು ನಿಲ್ಲಿಸುವವರೇ ಇಲ್ಲ. ಪಾಂಡವ ವೀರರೆಲ್ಲರೂ ಭಂಗಿತರಾದರು. ಯುದ್ಧದ ವಿಜಯಲಕ್ಷ್ಮಿ ಸುಯೋಧನನ ಕಡೆಗೆ ಸಂತೋಷದ ಕುಡಿನೋಟ ಬೀರಿದ್ದಾಳೆ. ಈಗ ಮುಮ್ದೆ ನಿಮ್ತು ಯುದ್ಧಮಾದುವವರಾರು? ನಾವು ಗೆಲ್ಲುವುದಾದರೂ ಹೇಗೆ? ಇದ್ದ ವಿಷಯವನ್ನು ದೊರೆಗೆ ಬಿನ್ನಹಮಾಡಿರೆಂದು ಎಲ್ಲಾ ಮಂತ್ರಿಗಳು ಹೇಳಿದರು.

ಅರ್ಥ:
ಅಂಗವಿಸು: ಬಯಸು; ಭಟ: ಸೈನಿಕ; ಭಂಗ: ಮುರಿಯುವಿಕೆ, ಚೂರು; ಸಂಗರ: ಯುದ್ಧ; ಸಿರಿ: ಐಶ್ವರ್ಯ; ಸೊಗಸು: ಎಲುವು; ಕಡೆಗಣ್ಣು: ಓರೆನೋಟ; ಸೂಸು: ಎರಚು, ಚಲ್ಲು, ಚಿಮ್ಮು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಅಂಗ: ಭಾಗ; ಜಯ: ಗೆಲುವು; ಹದ: ಸ್ಥಿತಿ; ಅರಸ: ರಾಜ; ಬಿನ್ನಹ: ಕೋರಿಕೆ; ನಿಖಿಳ: ಎಲ್ಲಾ; ಮಂತ್ರಿ: ಸಚಿವ;

ಪದವಿಂಗಡಣೆ:
ಅಂಗವಿಸುವವರಿಲ್ಲ +ಭಟರಿಗೆ
ಭಂಗವಿಕ್ಕಿತು +ಕೌರವೇಂದ್ರಗೆ
ಸಂಗರದ +ಸಿರಿ +ಸೊಗಸಿನಲಿ +ಕಡೆಗಣ್ಣ+ ಸೂಸಿದಳು
ಮುಂಗುಡಿಯಲ್+ಇನ್ನಾರು +ನಮಗಾ
ವಂಗದಲಿ +ಜಯವೇನು +ಹದನ್+ಅರ
ಸಂಗೆ +ಬಿನ್ನಹ +ಮಾಡಿ+ಎಂದರು +ನಿಖಿಳ +ಮಂತ್ರಿಗಳು

ಅಚ್ಚರಿ:
(೧) ಅಂಗ, ಭಂಗ – ಪ್ರಾಸ ಪದಗಳು
(೨) ಸ ಕಾರದ ತ್ರಿವಳಿ ಪದ – ಸಂಗರದ ಸಿರಿ ಸೊಗಸಿನಲಿ

ಪದ್ಯ ೨೧: ಪಾಂಡವರು ಹೇಗೆ ಸವಿಯನ್ನು ಉಣ್ಣಲಿ ಎಂದು ಹೇಳಿದನು?

ವನದ ಚಿಮ್ಮಂಡೆಗಳ ಘೋರ
ಧ್ವನಿಗಳಲಿ ಕಿವಿ ಮೃಗಕುಲದ ಸೊಗ
ಡಿನಲಿ ನಾಸಿಕ ರೌದ್ರಭೂತಾಲೋಕನದಿ ನಯನ
ಜನಪರುರೆಬೆದರುವರು ನಿನ್ನರ
ಮನೆಯ ಸತಿಯರ ನೇವುರನದನು
ಣ್ಪನಿಗಳಲಿ ತನುಗಂಧದಲಿ ರೂಪುಗಳ ಸೊಗಸಿನಲಿ (ಅರಣ್ಯ ಪರ್ವ, ೧೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕಾಡಿನಲ್ಲಿ ಜೀರುಂಡೆಗಳ ಕರ್ಕಶ ಧ್ವನಿಯಿಂದ ಪಾಂಡವರ ಕಿವಿಗಳು ಕಾಡು ಪ್ರಾಣಿಗಳ ಸೊಗಡಿನಿಂದ ಮೂಗು, ಭಯಂಕರ ಪ್ರಾಣಿಗಳ ದರ್ಶನದಿಂದ ಕಣ್ಣು ಬೆದರುತ್ತವೆ. ನಿನ್ನ ಅರಮನೆಯ ಸ್ತ್ರೀಯರ ನೇವುರದ ಧ್ವನಿ, ಮಾತಿನ ಮಂಜುಳ ಧ್ವನಿಯಿಂದ ಅವರ ಕಿವಿಗಳು, ದೇಹದ ಸುಗಂಧದಿಂದ ಅವರ ಮೂಗು, ಸ್ತ್ರಿಯರ ಲಾವಣ್ಯಭರಿತವಾದ ರೂಪಿನಿಂದ ಅವರ ಕಣ್ಣು ಸವಿಯಲಿ ಎಂದು ಹೇಳಿದನು.

ಅರ್ಥ:
ವನ: ಕಾಡು; ಚಿಮ್ಮಂಡೆ: ಜೀರುಂಡೆ; ಘೋರ: ಕರ್ಕಶ; ಧ್ವನಿ: ರವ, ಶಬ್ದ; ಕಿವಿ: ಕರ್ಣ; ಮೃಗ: ಪ್ರಾಣಿ; ಕುಲ: ವಂಶ, ಗುಂಪು; ಸೊಗಡು:ಕಂಪು, ವಾಸನೆ; ನಾಸಿಕ: ಮೂಗು; ರೌದ್ರ: ಭಯಂಕರ; ಭೂತ: ದೆವ್ವ, ಪಿಶಾಚಿ; ಆಲೋಕನ: ನೋಟ; ನಯನ: ಕಣ್ಣು; ಜನಪ: ರಾಜ; ಉರೆ: ಅಧಿಕವಾಗಿ; ಬೆದರು: ಹೆದರು; ಅರಮನೆ: ರಾಜನ ಆಲಯ; ಸತಿ: ಹೆಣ್ಣು; ನೇವುರ: ಅಂದುಗೆ, ನೂಪುರ; ಉಣ್: ಸವಿದು; ದನಿ: ಶಬ್ದ; ತನು: ದೇಹ; ಗಂಧ: ಪರಿಮಳ; ರೂಪು: ಆಕಾರ; ಸೊಗಸು: ಅಂದ;

ಪದವಿಂಗಡಣೆ:
ವನದ+ ಚಿಮ್ಮಂಡೆಗಳ+ ಘೋರ
ಧ್ವನಿಗಳಲಿ +ಕಿವಿ +ಮೃಗ+ಕುಲದ +ಸೊಗ
ಡಿನಲಿ +ನಾಸಿಕ+ ರೌದ್ರ+ಭೂತ+ಆಲೋಕನದಿ +ನಯನ
ಜನಪರ್+ಉರೆ+ಬೆದರುವರು +ನಿನ್ನ್+ಅರ
ಮನೆಯ +ಸತಿಯರ +ನೇವುರನದನ್+
ಉಣ್+ದನಿಗಳಲಿ+ ತನುಗಂಧದಲಿ+ ರೂಪುಗಳ+ ಸೊಗಸಿನಲಿ

ಅಚ್ಚರಿ:
(೧) ಕಿವಿ, ನಯನ, ನಾಸಿಕ – ಹೇಗೆ ಸವಿಯುಣ್ಣಲಿ ಎಂದು ಹೇಳುವ ಪರಿ