ಪದ್ಯ ೫: ಸಂಜಯನು ಯಾರನ್ನು ನೋಡಲು ಹೋದನು?

ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ (ಗದಾ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ನನ್ನ ಹೆಡತಲೆಗೆ ಹೂಡಿದ್ದ ಕತ್ತಿಯಿಂದ ಅವರು ನನ್ನನ್ನುಳಿಸಿ ಕಳಿಸಿದರು. ಕೌರವನನ್ನು ಹುಡುಕುತ್ತಾ ಬರುತ್ತಿರಲು ತಲೆಗೆ ಮುಸುಕು ಹಾಕಿಕೊಂಡು ಬೀಳುತ್ತಾ ಏಳುತ್ತಾ ಹೋಗುವವನನ್ನು ಕಂಡೆನು. ಇವನು ಅರಸನೋ ಅಲ್ಲವೋ ನೋಡಿ ಬಿಡೋಣವೆಂದು ಹತ್ತಿರಕ್ಕೆ ಹೋದೆನು.

ಅರ್ಥ:
ಸೆಳೆ: ಎಳೆತ, ಸೆಳೆತ; ಮೃತ್ಯು: ಸಾವು; ಹೆಡತಲೆ: ಹಿಂದಲೆ; ಒದೆ: ತಳ್ಳು; ಕೃಪೆ: ಕರುಣೆ; ತಲೆಬಳಿಚು: ತಲೆ ಕತ್ತರಿಸು; ಕಳಿಸು: ತೆರಳು; ಬಂದು: ಆಗಮಿಸು; ಅರಕೆ: ಕೊರತೆ, ನ್ಯೂನತೆ; ಬಳಲು: ಆಯಾಸ, ದಣಿವು; ಬೀಳು: ಎರಗು; ಏಳು: ಹತ್ತು; ತಲೆ: ಶಿರ; ಮುಸುಕು: ಹೊದಿಕೆ; ನಡೆ: ಚಲಿಸು; ಕಂಡು: ನೊಡು; ನೆಲ: ಭೂಮಿ; ಒಡೆಯ: ರಾಜ; ಸುಳಿ: ಬೀಸು, ತೀಡು; ಸಮೀಪ: ಹತ್ತಿರ;

ಪದವಿಂಗಡಣೆ:
ಸೆಳೆದುಕೊಂಡನು +ಮೃತ್ಯುವಿನ +ಹೆಡ
ತಲೆಯನ್+ಒದೆದು +ಕೃಪಾಳು +ತನ್ನನು
ತಲೆಬಳಿಚಿ +ಕಳುಹಿದರೆ +ಬಂದೆನು+ ರಾಯನ್+ಅರಕೆಯಲಿ
ಬಳಲಿ +ಬೀಳುತ್+ಏಳುತ್+ಒಬ್ಬನೆ
ತಲೆಮುಸುಕಿನಲಿ +ನಡೆಯೆ +ಕಂಡೆನು
ನೆಲನೊಡೆಯನ್+ಅಹುದಲ್ಲೆನುತ +ಸುಳಿದೆನು +ಸಮೀಪದಲಿ

ಅಚ್ಚರಿ:
(೧) ದುರ್ಯೋಧನನನ್ನು ನೆಲನೊಡೆಯ ಎಂದು ಕರೆದಿರುವುದು
(೨) ದುರ್ಯೋಧನನು ನಡೆಯುತ್ತಿದ್ದ ಪರಿ – ಬಳಲಿ ಬೀಳುತ್ತೇಳುತೊಬ್ಬನೆ ತಲೆಮುಸುಕಿನಲಿ ನಡೆಯೆ ಕಂಡೆನು

ಪದ್ಯ ೩೦: ಶ್ರೀಕೃಷ್ಣನು ಏನೆಂದು ಹೇಳಿದನು?

ಮುಳಿದು ಯಾದವ ಸೇನೆ ಕೈದುವ
ಸೆಳೆದುದಾ ಪಾಂಚಾಲನಾಯಕ
ರುಲಿದು ನಿಂದುದು ಕಂಡನಸುರಧ್ವಂಸಿ ನಸುನಗುತ
ಎಲೆಲೆ ಪಾಪಿಗಳಿರ ವೃಥಾ ತ
ಮ್ಮೊಳಗೆ ತೋಟಿ ಶರಾಗ್ನಿಯಿತ್ತಲು
ಮೊಳಗುತದೆ ಕೆಡೆಬೀಳಹೊಯ್ ಹೊಯ್ ಕುನ್ನಿಗಳನೆಂದ (ದ್ರೋಣ ಪರ್ವ, ೧೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಒಂದು ಕಡೆ ಯಾದವ ಸೈನ್ಯವು ಆಯುಧಗಳನ್ನು ಸೆಳೆದು ನಿಂತಿತು. ಇನ್ನೊಂದೆಡೆ ಪಾಂಚಾಲರು ಗರ್ಜಿಸಿ ಯುದ್ಧಸನ್ನದ್ಧರಾದರು. ಶ್ರೀಕೃಷ್ಣನು ನಗುತ್ತಾ, ಎಲೋ ಪಾಪಿಗಳಿರಾ ನಾರಾಯಣಾಸ್ತ್ರದ ಉರಿ ಇತ್ತ ಮುನ್ನುಗ್ಗುತ್ತಿದೆ. ಇವರು ತಮ್ಮ ತಮ್ಮಲ್ಲಿ ಜಗಳಕಾಯುತ್ತಿದ್ದಾರೆ. ಈ ಇಬ್ಬರು ನಾಯಿಗಳನ್ನು ಹೊಡೆದು ಬೀಳಿಸಿರಿ ಎಂದನು.

ಅರ್ಥ:
ಮುಳಿ: ಸಿಟ್ಟು, ಕೋಪ; ಸೇನೆ: ಸೈನ್ಯ; ಕೈದು: ಆಯುಧ; ಸೆಳೆ: ಜಗ್ಗು, ಎಳೆ; ನಾಯಕ: ಒಡೆಯ; ಉಲಿ: ಶಬ್ದ; ನಿಂದು: ನಿಲ್ಲು; ಅಸುರಧ್ವಂಸಿ: ಕೃಷ್ಣ; ನಸುನಗು: ಹಸನ್ಮುಖ; ಪಾಪಿ: ದುಷ್ಟ; ವೃಥಾ: ಸುಮ್ಮನೆ; ತೋಟಿ: ಕಲಹ, ಜಗಳ;ಶರ: ಬಾಣ; ಅಗ್ನಿ: ಬೆಂಕಿ; ಮೊಳಗು: ಧ್ವನಿ, ಸದ್ದು; ಕೆಡೆ: ಬೀಳು, ಕುಸಿ; ಹೊಯ್: ಶಬ್ದವನ್ನು ಸೂಚಿಸುವ ಪದ; ಕುನ್ನಿ: ನಾಯಿ;

ಪದವಿಂಗಡಣೆ:
ಮುಳಿದು +ಯಾದವ +ಸೇನೆ +ಕೈದುವ
ಸೆಳೆದುದಾ +ಪಾಂಚಾಲ+ನಾಯಕರ್
ಉಲಿದು +ನಿಂದುದು +ಕಂಡನ್+ಅಸುರಧ್ವಂಸಿ +ನಸುನಗುತ
ಎಲೆಲೆ +ಪಾಪಿಗಳಿರ +ವೃಥಾ +ತ
ಮ್ಮೊಳಗೆ +ತೋಟಿ +ಶರಾಗ್ನಿ+ಇತ್ತಲು
ಮೊಳಗುತದೆ+ ಕೆಡೆಬೀಳ+ಹೊಯ್+ ಹೊಯ್ +ಕುನ್ನಿಗಳನೆಂದ

ಅಚ್ಚರಿ:
(೧) ಮುಳಿದು, ಸೆಳೆದು, ಉಲಿದು – ಪ್ರಾಸ ಪದಗಳು
(೨) ಬಯ್ಯುವ ಪರಿ – ಎಲೆಲೆ ಪಾಪಿಗಳಿರ; ಕೆಡೆಬೀಳಹೊಯ್ ಹೊಯ್ ಕುನ್ನಿಗಳನೆಂದ