ಪದ್ಯ ೩೨: ಕೃಷ್ಣನು ಬಲರಾಮನನ್ನು ತಡೆದು ಏನು ಕೇಳಿದನು?

ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸಿದೆ
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ (ಗದಾ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅತಿವೇಗದಿಂದ ಹೋಗಿ ಬಲರಾಮನ ಸೆರಗನ್ನು ಹಿಡಿದು ನಿಲ್ಲಿಸಿದನು. ಅಣ್ಣಾ, ನಿಮ್ಮ ಕೌರವನು ಪಾಂಡವರನ್ನು ಕರೆಸಿ ಧರ್ಮವನ್ನು ಮೀರದೆ ಮೋಸದ ಜೂಜಿನಲ್ಲಿ ಯುಧಿಷ್ಠಿರನನ್ನು ಸೋಲಿಸಿ, ದ್ರೌಪದಿಯ ಸೀರೆಯನ್ನು ಸುಲಿಸಿದನೋ? ಇದು ಧರ್ಮವೆಂದು ಯಾವ ಋಷಿವಾಕ್ಯ ಹೇಳುತ್ತದೆ ಎಂದು ಪ್ರಶ್ನಿಸಿದನು.

ಅರ್ಥ:
ಹರಿ: ಓಡು, ಧಾವಿಸು; ಹಿಡಿ: ಗ್ರಹಿಸು; ನೀಲಾಂಬರ: ನೀಲಿ ಬಟ್ಟೆಯನ್ನು ಧರಿಸಿದವ (ಬಲರಾಮ); ಸೆರಗು: ಉತ್ತರೀಯ, ಬಟ್ಟೆಯ ತುದಿ; ಚರಿಸು: ನಡೆ; ಧರ್ಮ: ಧಾರಣೆ ಮಾಡಿದುದು; ವಿಸ್ತರ: ಹಬ್ಬುಗೆ, ವಿಸ್ತಾರ; ವಿಭಾಡಿಸು: ನಾಶಮಾಡು; ಕರಸು: ಬರೆಮಾಡು; ಕಪಟ: ಮೋಸ; ದ್ಯೂತ: ಪಗಡೆಯಾಟ, ಜೂಜು; ನೃಪ: ರಾಜ; ಸೋಲಿಸು: ಪರಾಭವಗೊಳಿಸು; ಪಟ್ಟದರಸಿ: ಪಟ್ಟದ ರಾಣಿ; ಸುಲಿಸು: ಬಿಚ್ಚಿಸು, ತೆಗೆಸು; ಋಷಿಮತ: ಒಳ್ಳೆಯ ವಿಚಾರ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಹರಿದು+ ಹಿಡಿದನು +ಮತ್ತೆ+ ನೀಲಾಂ
ಬರನ +ಸೆರಗನು +ನಿಮ್ಮ +ಕುರುಪತಿ
ಚರಿಸಿದನಲಾ +ಧರ್ಮ+ವಿಸ್ತರವನು +ವಿಭಾಡಿಸಿದೆ
ಕರಸಿ +ಕಪಟ+ದ್ಯೂತದಲಿ +ನೃಪ
ವರನ +ಸೋಲಿಸಿ +ಪಟ್ಟದರಸಿಯ
ಕರಸಿ+ ಸುಲಿಸುವುದಾವ +ಋಷಿಮತವ್ + ಎಂದನ್+ಅಸುರಾರಿ

ಅಚ್ಚರಿ:
(೧) ಬೇಗ ಎಂದು ಹೇಳುವ ಪರಿ – ಹರಿದು ಹಿಡಿದನು
(೨) ಬಲರಾಮನನ್ನು ನೀಲಾಂಬರ ಎಂದು ಕರೆದಿರುವುದು
(೩) ಕರಸಿ – ೪, ೬ ಸಾಲಿನ ಮೊದಲ ಪದ

ಪದ್ಯ ೮೫: ಅರ್ಜುನನು ಕೃಷ್ಣನಲ್ಲಿ ಏನು ಬೇಡಿದನು?

ಮರೆದು ನಾಲಗೆಗೊನೆಗೆ ನಾಮದ
ನಿರುಗೆ ನೆಲೆಗೊಳೆ ನಿನ್ನನೇ ಸಲೆ
ತೆರುವ ಬಿರುದನು ಬಲ್ಲೆನೊರಲಿದು ನಿನ್ನ ಹಲುಬಿದರೆ
ಉರುವ ಹೆಂಗುಸಿನುನ್ನತಿಕೆಯಲಿ
ಸೆರಗು ಬೆಳೆದುದ ಕಂಡೆನೈ ಸೈ
ಗರೆವುದೈ ಕಾರಣ್ಯವರುಷವನೆನ್ನ ಮೇಲೆಂದ (ಭೀಷ್ಮ ಪರ್ವ, ೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ನಾಲಗೆಯ ತುದಿಗೆ ಮರೆತು ನಿನ್ನ ನಾಮವು ಬಂದರೂ, ಸ್ಮರಿಸಿದವನಿಗೆ ನಿನ್ನನ್ನೇ ತೆರುವೆ ಎನ್ನುವುದು ನಿನ್ನ ಬಿರುದು, ನಿನ್ನನ್ನು ನೆನೆದು ಹಲುಬಿದ ದ್ರೌಪದಿಯ ಸೆರಗು ಬೆಳೆದು ಅಕ್ಷಯವಾದುದನ್ನು ನಾನೇ ಕಂಡಿದ್ದೇನೆ, ನನ್ನ ಮೇಲೆ ಕಾರುಣ್ಯದ ಮಳೆಯನ್ನು ಸುರಿಸಬೇಕೆಂದು ಬೇಡಿದನು.

ಅರ್ಥ:
ಮರೆ: ಜ್ಞಾಪಕವಿಲ್ಲದ ಸ್ಥಿತಿ; ನಾಲಗೆ: ಜಿಹ್ವೆ; ಕೊನೆ: ತುದಿ; ನಾಮ: ಹೆಸರು; ನಿರುಗೆ: ಕೋರಿಕೆ; ನೆಲೆ: ಸ್ಥಾನ; ಸಲೆ: ಒಂದೇ ಸಮನೆ; ಬಿರುದು: ಹೆಗ್ಗಳಿಕೆ; ಬಲ್ಲೆ: ತಿಳಿ; ಒರಲು: ಹೇಳು; ಹಲುಬು: ಬೇಡಿಕೋ; ಉರುವ: ಶ್ರೇಷ್ಠ; ಹೆಂಗುಸು: ಹೆಣ್ಣು; ಉನ್ನತಿ: ಅಧಿಕ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬೆಳೆದು: ಹೆಚ್ಚಾಗು; ಕಂಡು: ನೋದು; ಸೈಗರೆ: ಬರೆಮಾಡು; ಕಾರುಣ್ಯ: ದಯೆ; ವರುಷ: ಮಳೆ;

ಪದವಿಂಗಡಣೆ:
ಮರೆದು +ನಾಲಗೆ+ಕೊನೆಗೆ +ನಾಮದ
ನಿರುಗೆ +ನೆಲೆಗೊಳೆ+ ನಿನ್ನನೇ+ ಸಲೆ
ತೆರುವ+ ಬಿರುದನು+ ಬಲ್ಲೆನ್+ಒರಲಿದು +ನಿನ್ನ +ಹಲುಬಿದರೆ
ಉರುವ +ಹೆಂಗುಸಿನ್+ಉನ್ನತಿಕೆಯಲಿ
ಸೆರಗು +ಬೆಳೆದುದ+ ಕಂಡೆನೈ +ಸೈ
ಕರೆವುದೈ +ಕಾರಣ್ಯ+ವರುಷವನ್+ಎನ್ನ +ಮೇಲೆಂದ

ಅಚ್ಚರಿ:
(೧) ಕೃಷ್ಣನ ಬಿರುದು – ಮರೆದು ನಾಲಗೆಗೊನೆಗೆ ನಾಮದ ನಿರುಗೆ ನೆಲೆಗೊಳೆ ನಿನ್ನನೇ ಸಲೆ ತೆರುವ

ಪದ್ಯ ೭: ಯಾರ ಸೆರಗು ಕೌರವನಿಗೆ ತಾಕಿತು?

ಮುರಿದುದೈ ರಿಪುರಾಯದಳ ಹಗೆ
ಹರಿದುದೈ ಕುರುಪತಿಗೆ ಹರುಷವ
ಕರೆದುದೈ ಕರ್ಣಪ್ರತಾಪಾಟೋಪ ಜೀಮೂತ
ಇರಿತ ಮೆರೆದುದು ನಿನ್ನವರ ಬೊ
ಬ್ಬಿರಿತ ಜರೆದುದು ವಿಜಯಲಕ್ಷ್ಮಿಯ
ಸೆರಗು ಸೋಂಕಿತು ಕೌರವೇಶ್ವರಗರಸ ಕೇಳೆಂದ (ಕರ್ಣ ಪರ್ವ, ೧೪ ಸಂಧಿ, ೭ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯವು ಸೋತು ಹರಿಹಂಚಾಯಿತು. ವೈರಿಗಳು ಸೋಲನ್ನುಂಡು ಬೆಂಡಾದರು, ದುರ್ಯೋಧನನು ಸಂತೋಷದ ಅಲೆಯಲ್ಲಿ ತೇಲಿದನು, ಕರ್ಣನ ಪ್ರತಾಪ ಮೇಘವು ಕೌರವರಿಗೆ ಹರ್ಷದ ಮಳೆಯನ್ನು ಕರೆಯಿತು. ನಿನ್ನವರು ಸೋಲುಂಡು ಹಿಂಜರಿಯುವುದು ನಿಂತಿತು. ನಿನ್ನವರ ಇರಿತದಿಂದ ಶತ್ರುಗಳು ತಲೆ ತಗ್ಗಿಸಿದರು. ವಿಜಯಲಕ್ಷ್ಮಿಯ ಸೆರಗು ಕೌರವನಿಗೆ ಸೋಕಿತು ಎಂದು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದನು.

ಅರ್ಥ:
ಮುರಿ: ಸೀಳು; ರಿಪು: ವೈರಿ; ರಾಯ: ರಾಜ; ದಳ: ಸೈನ್ಯ; ಹಗೆ: ದ್ವೇಷ; ಹರಿ: ಪ್ರವಾಹ; ಕುರುಪತಿ: ದುರ್ಯೋಧನ; ಹರುಷ: ಸಂತೋಷ; ಕರೆ: ಬರೆಮಾಡು; ಪ್ರತಾಪ: ಪರಾಕ್ರಮ; ಆಟೋಪ: ಆವೇಶ; ಜೀಮೂತ: ಮೋಡ; ಇರಿ: ತಿವಿ, ಚುಚ್ಚು; ಮೆರೆ: ಹೊಳೆ, ಪ್ರಕಾಶಿಸು; ಬೊಬ್ಬೆ: ಅಬ್ಬರ; ಜರೆ: ಮುಪ್ಪು; ಸೆರಗು: ಸೀರೆಯ ಅಂಚು; ಸೊಂಕು: ತಾಗು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುರಿದುದೈ +ರಿಪುರಾಯದಳ +ಹಗೆ
ಹರಿದುದೈ +ಕುರುಪತಿಗೆ +ಹರುಷವ
ಕರೆದುದೈ +ಕರ್ಣ+ಪ್ರತಾಪ+ಆಟೋಪ +ಜೀಮೂತ
ಇರಿತ+ ಮೆರೆದುದು +ನಿನ್ನವರ +ಬೊ
ಬ್ಬಿರಿತ +ಜರೆದುದು +ವಿಜಯಲಕ್ಷ್ಮಿಯ
ಸೆರಗು +ಸೋಂಕಿತು +ಕೌರವೇಶ್ವರಗ್+ಅರಸ +ಕೇಳೆಂದ

ಅಚ್ಚರಿ:
(೧) ಮುರಿದುದೈ, ಹರಿದುದೈ, ಕರೆದುದೈ – ಪ್ರಾಸ ಪದಗಳು
(೨) ರಿಪು, ಹಗೆ; ಕುರುಪತಿ, ಕೌರವೇಶ್ವರ – ಸಮನಾರ್ಥಕ ಪದಗಳು
(೩) ಉಪಮಾನಗಳ ಪ್ರಯೋಗ – ಕರೆದುದೈ ಕರ್ಣಪ್ರತಾಪಾಟೋಪ ಜೀಮೂತ; ವಿಜಯಲಕ್ಷ್ಮಿಯ
ಸೆರಗು ಸೋಂಕಿತು ಕೌರವೇಶ್ವರಗರಸ ಕೇಳೆಂದ; ನಿನ್ನವರ ಬೊ
ಬ್ಬಿರಿತ ಜರೆದುದು