ಪದ್ಯ ೪೯: ಹೊಸ ಜಗತ್ತು ಏಕೆ ಹುಟ್ಟಿತೆಂದೆನಿಸಿತು?

ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದುವು ದಂತಿಯಲಿ ಪಡಿ
ಧರಣಿಯಾದವು ಛತ್ರಚಮರದ
ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ (ಭೀಷ್ಮ ಪರ್ವ, ೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಸೈನ್ಯದ ಆನೆಗಳ ಮದಧಾರೆಯಿಂದ ಹೊಸ ಸಮುದ್ರಗಳಾದವು. ರಾಜರ ಕಿರೀಟಗಳ ಕಾಂತಿಯಿಂದ ಸೂರ್ಯ ಚಂದ್ರರು ಸಂಭವಿಸಿದರು. ಆನೆಗಳಿಂದ ಪರ್ವತ ಶ್ರೇಣಿಗಳಾದವು. ಛತ್ರ ಚಾಮರಗಳಿಂದ ಭೂಮಿಗೆ ಪ್ರತಿಯಾದ ಇನ್ನೊಂದು ಭೂಮಿಯೇ ನಿರ್ಮಾಣವಾಯಿತು, ಬ್ರಹ್ಮನ ಸೃಷ್ಟಿಯಲ್ಲಿ ಸೈನ್ಯದಿಂದ ಹೊಸ ಸೃಷ್ಟಿಯೊಂದ ಉಂಟಾಯಿತು.

ಅರ್ಥ:
ಸುರಿ: ಹರಿ; ಗಜ: ಆನೆ; ಮದ: ಮತ್ತು, ಅಮಲು; ಧಾರೆ: ವರ್ಷ; ಹೊಸ: ನವ; ಶರಧಿ: ಸಾಗರ; ಸಂಭವಿಸು: ಹುಟ್ಟು; ನೃಪ: ರಾಜ; ವರ: ಶ್ರೇಷ್ಠ; ಮಕುಟ: ಕಿರೀಟ; ಮಣಿ: ಬೆಲೆಬಾಳುವ ಮಣಿ; ಸೂರಿಯ: ಸೂರ್ಯ; ಗಿರಿ: ಬೆಟ್ಟ; ದಂತಿ: ಹಲ್ಲು; ಪಡಿ: ಪ್ರತಿಯಾದುದು; ಧರಣಿ: ಭೂಮಿ; ಛತ್ರ: ಕೊಡೆ; ಚಮರ: ಚಾಮರ; ಅರರೆ: ಆಶ್ಚರ್ಯದ ಸಂಕೇತ; ನೂತನ: ಹೊಸ; ಸೃಷ್ಟಿ: ಹುಟ್ಟು; ವಿರಿಂಚ: ಬ್ರಹ್ಮ; ಸೃಷ್ಟಿ: ಉತ್ಪತ್ತಿ, ಹುಟ್ಟು;

ಪದವಿಂಗಡಣೆ:
ಸುರಿವ +ಗಜ+ಮದಧಾರೆಯಲಿ +ಹೊಸ
ಶರಧಿಗಳು+ ಸಂಭವಿಸಿದವು+ ನೃಪ
ವರರ +ಮಕುಟದ +ಮಣಿಯೊಳ್+ಆದರು +ಚಂದ್ರ+ಸೂರಿಯರು
ಗಿರಿಗಳ್+ಆದುವು +ದಂತಿಯಲಿ +ಪಡಿ
ಧರಣಿಯಾದವು +ಛತ್ರ+ಚಮರದಲ್
ಅರರೆ +ನೂತನ +ಸೃಷ್ಟಿಯಾಯ್ತು +ವಿರಿಂಚ+ಸೃಷ್ಟಿಯಲಿ

ಅಚ್ಚರಿ:
(೧) ಹೊಸ, ನೂತನ – ಸಮನಾರ್ಥಕ ಪದ
(೨) ಉಪಮಾನಗಳ ಬಳಕೆ – ಸುರಿವ ಗಜಮದಧಾರೆಯಲಿ ಹೊಸಶರಧಿಗಳು ಸಂಭವಿಸಿದವು; ನೃಪ ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು; ಗಿರಿಗಳಾದುವು ದಂತಿಯಲಿ;

ಪದ್ಯ ೨೩: ಯಾವುದರಲ್ಲಿ ಎಲ್ಲವೂ ಮುಳುಗಿತ್ತು?

ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನು ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿರ್ದೆನು ಭೂಪ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುಧಿಷ್ಥಿರ ಕೇಳು, ಈ ಭೂಮಿ, ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶಗಳೊಂದೂ ಆ ನೀರಿನ ದೆಸೆಯಿಂದ ಕಾಣಲಿಲ್ಲ. ನನ್ನ ಚಿತ್ತದ ಚಿಂತೆಯನ್ನು ಏನೆಂದು ಹೇಳಲಿ, ಆ ನೀರಿನಲ್ಲಿ ಮುಳುಗುತ್ತಾ ಏಳುತ್ತಾ ನಾನು ಸಂಕಟ ಪದುತ್ತಿದ್ದೆನು ಹಲುಬುತ್ತಿದ್ದೆನು ಎಂದು ಮುನಿಗಳು ತಿಳಿಸಿದರು.

ಅರ್ಥ:
ನೆಲ: ಭೂಮಿ; ಚಂದ್ರ: ಶಶಿ; ಸೂರ್ಯ: ರವಿ; ಕೃಶಾನು: ಅಗ್ನಿ, ಬೆಂಕಿ; ತೇಜ: ಕಾಂತಿ, ಪ್ರಕಾಶ; ಸಮೀರ: ವಾಯು; ಕಾಣು: ತೋರು; ಸಲಿಲ: ಜಲ; ಸೃಷ್ಟಿ: ಉತ್ಪತ್ತಿ, ಹುಟ್ಟು; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಲು: ಬಹಳ; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಹೊಯ್ಲು: ಏಟು, ಹೊಡೆತ; ಮುಳುಗು: ಮಿಂದು; ಏಳು: ಮೇಲೇಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಈ +ನೆಲನನ್+ಈ+ ಚಂದ್ರ +ಸೂರ್ಯ +ಕೃ
ಶಾನು +ತೇಜವನ್+ಈ+ ಸಮೀರಣನ್
ಈ+ನಭವ+ ನಾ+ ಕಾಣೆನ್+ಒಂದೇ +ಸಲಿಲ+ ಸೃಷ್ಟಿಯಲಿ
ಏನು +ಹೇಳುವೆನ್+ಎನ್ನ +ಚಿತ್ತ
ಗ್ಲಾನಿಯನು +ಬಲುತೆರೆಯ+ ಹೊಯ್ಲಿನೊಳ್
ಆನು+ ಮುಳುಗುತ್+ಏಳುತಿರ್ದೆನು+ ಭೂಪ +ಕೇಳೆಂದ

ಅಚ್ಚರಿ:
(೧) ಪಂಚಭೂತಗಳು ನೀರಿನಲ್ಲಿ ಮುಳುಗಿದವು ಎಂದು ಹೇಳುವ ಪರಿ – ಈ ನೆಲನನೀ ಚಂದ್ರ ಸೂರ್ಯ ಕೃಶಾನು ತೇಜವನೀ ಸಮೀರಣ ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ

ಪದ್ಯ ೮: ಮಾನವ ಹೇಗೆ ಭಗವಂತನಾಗುತ್ತಾನೆ?

ಸೃಷ್ಟಿ ಸಂಹಾರದಲಿ ಭೂತದ
ಕಟ್ಟಲೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲ ಕರ್ಮವ
ಮೆಟ್ಟಿನಿಲೆ ಭಗವಂತನೆನಿಸುವೆ ರಾಯ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಪ್ರಕೃತಿಯ ಹುಟ್ಟು ಮತ್ತು ನಾಶಗಳಲ್ಲಿ, ಪಂಚಭೂತಗಳು ಬಂದು ಹೋಗುವುದರಲ್ಲಿ, ವಿದ್ಯೆ ಮತ್ತು ಅವಿದ್ಯೆಯಲ್ಲಿ ಒಂದೇ ಆಗಿದ್ದು ನಷ್ಟ ಲಾಭಗಳಲ್ಲಿ ಮನಸ್ಸನ್ನು ಕದಲಿಸದೆ ಕಾಲ ಕರ್ಮಗಳನ್ನು ಮೆಟ್ಟಿ ನಿಂತರೆ ಆಗ ನೀನು ಭಗವಂತನಾಗುವೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಸೃಷ್ಟಿ: ಪ್ರಕೃತಿ, ಜಗತ್ತು; ಸಂಹಾರ:ನಾಶ, ಕೊನೆ; ಭೂತ: ಚರಾಚರಾತ್ಮಕ ಜೀವರಾಶಿ; ಕಟ್ಟಳೆ: ಅನೂಚಾನವಾಗಿ ಅನುಸರಿಸಿಕೊಂಡು ಬಂದ ನಿಯಮ; ಗತಾಗತಿ: ಹೋಗುವುದು ಬರುವುದು; ಮುಟ್ಟು: ತಾಕು; ವಿದ್ಯೆ: ಜ್ಞಾನ; ಅವಿದ್ಯೆ: ಅಜ್ಞಾನ; ಅಪ್ರತಿಮ: ಎಣೆಯಿಲ್ಲದ, ಸಮಾನವಿಲ್ಲದ; ನಷ್ಟ: ಹಾನಿ, ಕೆಡುಕು; ತುಷ್ಟಿ: ಲಾಭ; ಮನ: ಮನಸ್ಸು; ಬಿಟ್ಟು: ಬಿಡುಗಡೆ; ಹಿಡಿ: ಬಂಧನ; ಕಾಲ: ಸಮಯ; ಕರ್ಮ: ಕೆಲಸ; ಮೆಟ್ಟು: ತುಳಿ; ನಿಲೆ: ನಿಂತರೆ; ಭಗವಂತ: ದೈವ; ರಾಯ: ಅರಸು;

ಪದವಿಂಗಡಣೆ:
ಸೃಷ್ಟಿ +ಸಂಹಾರದಲಿ +ಭೂತದ
ಕಟ್ಟಲೆಗಳ +ಗತಾಗತಿಗಳಲಿ
ಮುಟ್ಟಿಸಿದ +ವಿದ್ಯೆಯಲ್+ಅವಿದ್ಯೆಯಲ್+ಅಪ್ರತಿಮನೆನಿಸಿ
ನಷ್ಟಿಯಲಿ +ತುಷ್ಟಿಯಲಿ +ಮನವನು
ಬಿಟ್ಟು +ಹಿಡಿಯದೆ +ಕಾಲ +ಕರ್ಮವ
ಮೆಟ್ಟಿನಿಲೆ +ಭಗವಂತನ್+ಎನಿಸುವೆ +ರಾಯ +ಕೇಳೆಂದ

ಅಚ್ಚರಿ:
(೧) ಸೃಷ್ಟಿ, ನಷ್ಟಿ, ತುಷ್ಟಿ – ಷ್ಟಿ ಇಂದ ಕೊನೆಗೊಳ್ಳುವ ಪದ
(೨) ವಿದ್ಯೆ ಅವಿದ್ಯೆ, ನಷ್ಟಿ, ತುಷ್ಟಿ – ವಿರುದ್ಧ ಪದಗಳು