ಪದ್ಯ ೧೯: ಕೃಷ್ಣನು ಅಶ್ವತ್ಥಾಮನನ್ನು ಹೇಗೆ ಗದರಿಸಿದನು?

ಮರುಳಲಾ ಗುರುಸುತ ಯುಧಿಷ್ಠಿರ
ನಿರೆ ವಿಭಾಡಿಸುವಾ ಮೃಗೇಂದ್ರನ
ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ
ಕುರುನೃಪತಿಯಾಸ್ಥಾನವಲ್ಲು
ಬ್ಬರಿಸಿ ಬೊಬ್ಬಿಡಲಾಹವಾಂತ
ಸ್ಸರಣಿ ಗುರುಸುತ ನಿನಗೆ ಸದರವೆಯೆಂದನಸುರಾರಿ (ಗದಾ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೇ ಮೂಢ, ನಿನಗೇನಾದರು ತಲೆಕೆಟ್ಟಿದೆಯೇ? ಧರ್ಮಜನನ್ನು ಕೊಲ್ಲುತ್ತಿದ್ದೆಯೇ? ಸಿಂಹದ ಆಸ್ಥಾನದಲ್ಲಿ ಬಡನರಿಯ ಬಾಧೆ ಅಷ್ಟು ಬಲವಾಗಿರಲು ಸಾಧ್ಯವೇ? ಉಬ್ಬಿ ಕೂಗಾಡಲು ಇದು ಕೌರವನ ಆಸ್ಥಾನವೆಂದು ಕೊಂಡೆಯಾ? ಯುದ್ಧದ ನಡೆ ಪರಿಣಾಮಗಳು ನಿನಗೆ ಅಷ್ಟು ಸದರವೆಂದುಕೊಂಡೆಯಾ ಎಂದು ಗದರಿಸಿದನು.

ಅರ್ಥ:
ಮರುಳ: ಮೂಢ; ವಿಭಾಡಿಸು: ನಾಶಮಾಡು; ಮೃಗೇಂದ್ರ: ಸಿಂಹ; ಗರವಟಿಗೆ: ದರಬಾರು, ಆಸ್ಥಾನ; ಸೃಗಾಲ: ನರಿ; ಬಡ: ಅಲ್ಪ; ಬಾಧೆ: ನೋವು; ಬಲುಹು: ಬಲ, ಶಕ್ತಿ; ನೃಪತಿ: ರಾಜ; ಆಸ್ಥಾನ: ದರ್ಬಾರು; ಉಬ್ಬರಿಸು: ಉತ್ಸಾಹಿತನಾಗು; ಬೊಬ್ಬಿಡು: ಆರ್ಭಟಿಸು; ಆಹವ: ಯುದ್ಧ; ಸರಣಿ: ಕ್ರಮ, ರೀತಿ; ಸುತ: ಮಗ; ಸದರ: ಸಲಿಗೆ, ಸಸಾರ;

ಪದವಿಂಗಡಣೆ:
ಮರುಳಲಾ +ಗುರುಸುತ +ಯುಧಿಷ್ಠಿರ
ನಿರೆ+ ವಿಭಾಡಿಸುವಾ +ಮೃಗೇಂದ್ರನ
ಗರವಟಿಗೆಯಲಿ +ಬಡ+ಸೃಗಾಲನ+ ಬಾಧೆ +ಬಲುಹು +ಗಡಾ
ಕುರು+ನೃಪತಿ+ಆಸ್ಥಾನವಲ್ಲ್
ಉಬ್ಬರಿಸಿ+ ಬೊಬ್ಬಿಡಲ್+ಆಹವ+ಅಂತ
ಸ್ಸರಣಿ+ ಗುರುಸುತ +ನಿನಗೆ +ಸದರವೆ+ಯೆಂದನ್+ಅಸುರಾರಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೃಗೇಂದ್ರನ ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ

ಪದ್ಯ ೧೦: ಕಂಸನ ಮತ್ತು ಸೃಗಾಲರ ಅಂತ್ಯವು ಹೇಗಾಯಿತು?

ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದವು ಭೂಪ ಕೇಳೆಂದ (ಗದಾ ಪರ್ವ, ೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ಕೇಳು, ನಮ್ಮ ತಾಯಿಯ ಒಡಹುಟ್ಟಿದವನಾದ ಕಂಸನು ನಮಗೆ ಸೋದರಮಾವ. ಮಮತೆಯಿಲ್ಲದೆ, ಹಲವು ಮೋಸಗಳಿಂದ ನಮ್ಮನ್ನು ಕೊಲ್ಲಲು ಹವಣಿಸಿದನು. ಹಿಂಸೆಯಿಂದಲೇ ಅವನನ್ನು ಕೊಂದೆವು. ಸೃಗಾಲನು ಮಾಯಾ ಯುದ್ಧವನ್ನು ಮಾಡಿ ನಮ್ಮನ್ನು ಜಯಿಸಲು ಬಂದಾಗ ಅವನ ಮಾಯೆಯ ಕತ್ತಲನ್ನು ಮಾಯೆಯಿಂದಲೇ ಹೋಗಲಾಡಿಸಿಕೊಂಡೆವು ಎಂದು ಕೃಷ್ಣನು ನುಡಿದನು.

ಅರ್ಥ:
ತಾಯಿ: ಅಮ್ಮ; ಒಡಹುಟ್ಟು: ಜೊತೆಯಲ್ಲಿ ಜನಿಸು; ನಿರ್ಮಮತೆ: ಪ್ರೀತಿಯಿಲ್ಲದ; ನಿರ್ದಾಟಿಸು: ವಿಶೇಷವಾಗಿ ಅಪ್ಪಳಿಸು; ಕ್ರಮ: ರೀತಿ; ಹಿಂಸೆ: ನೋವು; ಆಕೃತಿ: ರಚನೆ; ರಚಿಸು: ನಿರ್ಮಿಸು; ಸಮರ: ಯುದ್ಧ; ನೃಪ: ರಾಜ; ಆಕ್ರಮಿಸು: ದಾಳಿ ನಡೆಸುವುದು; ಠಕ್ಕು: ಮೋಸ; ಮಾಯೆ: ಗಾರುಡಿ; ತಿಮಿರ: ಅಂಧಕಾರ; ಗೆಲಿ: ಜಯಿಸು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎಮಗೆ +ತಾಯ್+ಒಡಹುಟ್ಟಿದನು+ ನಿ
ರ್ಮಮತೆಯಲಿ +ನಿರ್ದಾಟಿಸಿದನ
ಆ+ಕ್ರಮದಲೇ +ಕಂಸಂಗೆ +ಹಿಂಸಾಕೃತಿಯ+ ರಚಿಸಿದೆವು
ಸಮರದೊಳಗೆ+ ಸೃಗಾಲ+ನೃಪನ
ಆಕ್ರಮಿಸಿದನು +ಠಕ್ಕಿನಲಿ+ ಮಾಯಾ
ತಿಮಿರವನು +ಮಾಯೆಯಲಿ +ಗೆಲಿದವು+ ಭೂಪ +ಕೇಳೆಂದ

ಅಚ್ಚರಿ:
(೧) ಗೆಲ್ಲುವ ಕ್ರಮ – ಮಾಯಾ ತಿಮಿರವನು ಮಾಯೆಯಲಿ ಗೆಲಿದವು
(೨) ನಿ ಕಾರದ ಪದಗಳ ಬಳಕೆ – ನಿರ್ಮಮತೆ, ನಿರ್ದಾಟಿಸಿ

ಪದ್ಯ ೨೦: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು?

ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾದುದೆ ಸುಗೀತದ
ರಸದ ಮಧುವಿಂಗಾಂತ ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ತಂದೆ ಕುರುರಾಯ, ಬೆಳುದಿಂಗಳನ್ನೂ ತಡೆಯದ ನಿನ್ನ ಮುಡಿಯು ಈಗ ಬಿಸಿಲಿಗೊಡ್ಡಿತೇ? ಸುಗಂಧವನ್ನಾಘ್ರಾಣಿಸುವ ಮೂಗು ಹಳೆಯ ಹೆಣಗಳ ಹೊಲಸು ವಾಸನೆಯಿಂದ ಉಸುರಾಡಲು ಕಷ್ಟಪಡುತ್ತಿದೆಯೇ? ಮಧುರ ಸಂಗೀತದ ರಸವನ್ನು ಕೇಳುವ ಕಿವಿ, ಕಾಗೆ ನರಿಗಳ ಕೂಗನ್ನು ಕೇಳುವಂತಾಯಿತೇ ಎಂದು ಕೊರಗಿದನು.

ಅರ್ಥ:
ಶಶಿ: ಚಂದ್ರ; ರುಚಿ: ಸವಿ; ಸೈರಿಸು: ತಾಳು, ಸಹಿಸು; ಸಿರಿಮುಡಿ: ಶ್ರೇಷ್ಠವಾದ ಶಿರ; ಬಿಸಿಲು: ಸೂರ್ಯನ ಪ್ರಕಾಶ; ಸೆಕೆ: ಹಬೆ; ಸುಗಂಧ: ಪರಿಮಳ: ಪ್ರಸರ: ಹರಡು; ಪೂರ್ಣ: ತುಂಬ; ಘ್ರಾಣ: ಮೂಗು, ಮೂಸುವಿಕೆ; ಹಳೆ: ಹಿಂದಿನ; ಹಳೆವೆಣ: ಬಹಳ ಸಮಯವಾದ ಹೆಣ (ಜೀವವಿಲ್ಲದ ಶರೀರ); ಹೊಲಸು: ಕೊಳಕು, ಅಶುದ್ಧ; ಉಸುರು: ಜೀವ; ತೆಹವು: ತೆರವು, ಬಿಡುವು; ಸುಗೀತ: ಸುಸ್ವರವಾದ ಗಾಯನ, ಸಂಗೀತ; ರಸ: ಸಾರ; ಮಧು: ಜೇನು; ಕಿವಿ: ಕರ್ಣ; ವಾಯಸ: ಕಾಗೆ; ಸೃಗಾಅ: ನರಿ; ಧ್ವನಿ: ಶಬ್ದ; ಸೊಗಸು: ಚೆಂದ; ರಾಯ: ರಾಜ;

ಪದವಿಂಗಡಣೆ:
ಶಶಿರುಚಿಗೆ +ಸೈರಿಸದ +ಸಿರಿಮುಡಿ
ಬಿಸಿಲ +ಸೆಕೆಗಾಂತುದೆ +ಸುಗಂಧ
ಪ್ರಸರ+ಪೂರ್ಣ+ಘ್ರಾಣವೀ +ಹಳೆವೆಣನ +ಹೊಲಸಿನಲಿ
ಉಸುರುದೆಗಹಾದುದೆ +ಸುಗೀತದ
ರಸದ +ಮಧುವಿಂಗಾಂತ +ಕಿವಿ +ವಾ
ಯಸ +ಸೃಗಾಲ+ಧ್ವನಿಗೆ +ಸೊಗಸಿತೆ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ಹಿಂದಿನ ಸ್ಥಿತಿ – ಶಶಿರುಚಿಗೆ ಸೈರಿಸದ ಸಿರಿಮುಡಿ, ಸುಗಂಧ ಪ್ರಸರಪೂರ್ಣಘ್ರಾಣ, ಸುಗೀತದರಸದ ಮಧುವಿಂಗಾಂತ ಕಿವಿ

ಪದ್ಯ ೫೯: ಕೃಷ್ಣನು ಯಾವ ರಾಕ್ಷಸರನ್ನು ಸಂಹರಿಸಿದನು?

ಮುರನ ನರಕನ ಹಂಸಡಿಬಿಕರ
ವರಸೃಗಾಲದ ದಂತವಕ್ತ್ರನ
ದುರುಳ ಪೌಂಡ್ರಕ ಪಂಚಜನ ಕುಂಭನ ನಿಕುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ (ಸಭಾ ಪರ್ವ, ೧೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ ಮೊದಲಾದ ದುಷ್ಟ ದೈತ್ಯರನ್ನು ಯುದ್ಧದಲ್ಲಿ ಸಂಹರಿಸಿದನು. ಅವರಿಗೆ ನೀನು ಯಾವ ರೀತಿಯಲ್ಲೂ ಸಮನಲ್ಲ. ಇವನನ್ನು ಹಿಂದೆ ಕೆಣಕಿದವರು ನಿನಗಿಂತ ಬಲಶಾಲಿಗಳೆಂದು ಭೀಷ್ಮರು ಹೇಳಿದರು.

ಅರ್ಥ:
ದುರುಳ: ದುಷ್ಟ; ಅರಿ: ವೈರಿ; ಒರಸು: ಸಾರಿಸು, ನಾಶಮಾಡು, ಅಳಿಸು; ಪಾಡು: ಸ್ಥಿತಿ, ಅವಸ್ಥೆ; ದೈತ್ಯ: ರಾಕ್ಷಸ; ಕೆಣಕು: ರೇಗಿಸು;

ಪದವಿಂಗಡಣೆ:
ಮುರನ+ ನರಕನ+ ಹಂಸ+ಡಿಬಿಕರ
ವರಸೃಗಾಲದ +ದಂತವಕ್ತ್ರನ
ದುರುಳ +ಪೌಂಡ್ರಕ +ಪಂಚಜನ +ಕುಂಭನ +ನಿಕುಂಭಕನ
ಅರಿ +ಹಯಗ್ರೀವಕನ +ಸಾಲ್ವನನ್
ಒರಸಿದನಲಾ +ನಿನ್ನ +ಪಾಡಿನ
ದುರುಳರೇ +ದೈತ್ಯೇಂದ್ರರ್+ಈತನ +ಕೆಣಕಿದವರೆಂದ

ಅಚ್ಚರಿ:
(೧) ರಾಕ್ಷಸರ ಹೆಸರು – ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ