ಪದ್ಯ ೪೭: ವರುಣಾಸ್ತ್ರವು ಹೇಗೆ ನಾರಾಯಣಾಸ್ತ್ರದ ತಾಪವನ್ನು ತಗ್ಗಿಸಿತು?

ಹೊಗೆಯನೊದೆದೊಳಬಿದ್ದು ಕಿಡಿಗಳ
ನುಗಿದು ದಳ್ಳುರಿದುರುಗಲನು ತನಿ
ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ
ಹಗೆಯನೆನಗಿದಿರೊಡ್ಡಿ ಜುಣುಗಲು
ಬಗೆದರೇ ಖಂಡೆಯದ ಮೊನೆಯಲಿ
ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ವರುಣಾಸ್ತ್ರವು ಹೊಗೆಯನ್ನು ಭೇದಿಸಿ ಒಳಹೊಕ್ಕು, ಭೀಮನ ರಥದ ಸುತ್ತಲೂ ನೀರಿನ ತೆರೆಯನ್ನು ನಿರ್ಮಿಸಿತು. ವರುಣಾಸ್ತ್ರದ ನೀರನ್ನು ಇದಿರು ಬಿಟ್ಟು ಜಾರಿಕೊಳ್ಳಲು ನೋಡುತ್ತಿದ್ದಾರೆ. ನನ್ನ ಕತ್ತಿಯ ಅಲುಗು ಕತ್ತರಿಸುವುದನ್ನು ಇವರು ತಪ್ಪಿಸುವರೋ ಎನ್ನುತ್ತಾ ನಾರಾಯಣಾಸ್ತ್ರವು ಮುನ್ನುಗ್ಗಿತು.

ಅರ್ಥ:
ಹೊಗೆ: ಧೂಮ; ಒದೆ: ನೂಕು; ಕಿಡಿ: ಬೆಂಕಿ; ಉಗಿ: ಹೊರಹಾಕು; ದಳ್ಳುರಿ: ದೊಡ್ಡಉರಿ; ತನಿ: ಹೆಚ್ಚಾಗು; ಬಿಗಿ: ಭದ್ರವಾಗಿರುವುದು; ರಥ: ಬಂಡಿ; ಸುತ್ತಲು: ಎಲ್ಲಾ ಕಡೆ; ಸೂಸು: ಎರಚು, ಚಲ್ಲು; ತೆರೆ: ತೆಗೆ, ಬಿಚ್ಚು; ಮಸಗು: ರೇಗು, ಸಿಟ್ಟುಗೊಳ್ಳು; ಹಗೆ: ವೈರಿ; ಜುಣುಗು: ಜಾರು; ಬಗೆ: ತಿಳಿ; ಖಂಡೆಯ: ಕತ್ತಿ, ಖಡ್ಗ; ಮೊನೆ: ತುದಿ, ಕೊನೆ; ಮಗುಳು: ಪುನಃ, ಮತ್ತೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಹೊಗೆಯನೊದೆದ್+ಒಳಬಿದ್ದು +ಕಿಡಿಗಳನ್
ಉಗಿದು +ದಳ್ಳುರಿದ್+ಉರುಗಲನು +ತನಿ
ಬಿಗಿದು +ಭೀಮನ +ರಥದ +ಸುತ್ತಲು +ಸೂಸಿ +ತೆರೆ +ಮಸಗೆ
ಹಗೆಯನ್+ಎನಗ್+ಇದಿರೊಡ್ಡಿ +ಜುಣುಗಲು
ಬಗೆದರೇ +ಖಂಡೆಯದ +ಮೊನೆಯಲಿ
ಮಗುಳಿಚುವರೇ +ತನ್ನನ್+ಎನುತ್+ಉರವಣಿಸಿತ್+ಅಮಳಾಸ್ತ್ರ

ಅಚ್ಚರಿ:
(೧) ಹೊಗೆ, ಹಗೆ, ಬಗೆ – ಪ್ರಾಸ ಪದಗಳು

ಪದ್ಯ ೧೦: ಭೀಷ್ಮನು ಬಿಟ್ಟ ಬಾಣಗಳ ಪ್ರಭಾವ ಹೇಗಿತ್ತು?

ಸೂಸಿದನು ಸರಳುಗಳನಗಲಕೆ
ಹಾಸಿ ಹಬ್ಬಿದವಶ್ವನಿಕರವ
ಕೀಸಿದವು ಕೀಲಿಸಿದವಾನೆಗಳುದರದೆಲುವಿನಲಿ
ಬೀಸಿ ಬಿಸುಟವು ಪಾಯ್ದಳವ ರಥ
ರಾಸಿಗಳ ಜರುಹಿದವು ಬಲ ವಾ
ರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು (ಭೀಷ್ಮ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಷ್ಮನು ಬಾಣಗಳನ್ನು ಎಲ್ಲೆಡೆಗಳಿಗೆ ಬಿಡಲು, ಆ ಬಾಣಗಳು ಹಬ್ಬಿ ಆನೆ ಕುದುರೆಗಳ ಎಲುಬುಗಳನ್ನು ಮುರಿದವು. ಕಾಲಾಳುಗಳನ್ನು ಹಾರಿಸಿ ಎಸೆದವು. ಸೈನ್ಯ ಸಮುದ್ರವು ಮರಳನ್ನು ಮೊಗೆದವು.

ಅರ್ಥ:
ಸೂಸು: ಹರಡು; ಸರಳು: ಬಾಣ; ಅಗಲ: ವಿಸ್ತಾರ; ಹಾಸು: ಬಿಚ್ಚಿ ಹರಡು; ಹಬ್ಬು: ಹರದು; ಅಶ್ವ: ಕುದುರೆ; ನಿಕರ: ಗುಂಪು; ಈಸು: ತೇಲುತ್ತಾ ಹೋಗು, ಇಷ್ಟು; ಕೀಲಿಸು: ಜೋಡಿಸು; ಆನೆ: ಕರಿ; ಉದರ: ಹೊಟ್ಟೆ; ಎಲುಬು: ಮೂಳೆ; ಬೀಸು: ತೂಗುವಿಕೆ; ಬಿಸುಟು: ಎಸೆ; ಪಾಯ್ದಳ: ಸೈನಿಕ; ರಥ: ಬಂಡಿ; ರಾಶಿ: ಗುಂಪು; ಜರುಹು: ಜರುಗಿಸು; ಬಲ: ಸೈನ್ಯ; ಮಳಲು: ಮರಳು, ಹೊಯಿಗೆ; ವಾರಾಸಿ: ಸಮುದ್ರ; ಮೊಗೆ: ತೋಡು, ತುಂಬಿಕೊಳ್ಳು; ಅಂಬು: ಬಾಣ;

ಪದವಿಂಗಡಣೆ:
ಸೂಸಿದನು +ಸರಳುಗಳನ್+ಅಗಲಕೆ
ಹಾಸಿ+ ಹಬ್ಬಿದವ್+ಅಶ್ವ+ನಿಕರವಕ್
ಈಸಿದವು +ಕೀಲಿಸಿದವ್+ಆನೆಗಳ್+ಉದರದ್+ಎಲುವಿನಲಿ
ಬೀಸಿ +ಬಿಸುಟವು +ಪಾಯ್ದಳವ +ರಥ
ರಾಸಿಗಳ+ ಜರುಹಿದವು+ ಬಲ+ ವಾ
ರಾಸಿಯಲಿ +ತಾಯ್ಮಳಲ +ಮೊಗೆದವು+ ಭೀಷ್ಮನ್+ಅಂಬುಗಳು

ಅಚ್ಚರಿ:
(೧) ಭೀಷ್ಮನ ಬಾಣಗಳ ಪ್ರಭಾವ – ಬಲ ವಾರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು
(೨) ಸೂಸಿ, ಹಾಸಿ, ಈಸಿ, ಬೀಸಿ, ರಾಸಿ – ಪ್ರಾಸ ಪದಗಳು
(೩) ಸರಳು, ಅಂಬು – ಸಮಾನಾರ್ಥಕ ಪದ

ಪದ್ಯ ೪೧: ರಾಜರ ಸಮೂಹವು ಏನೆಂದು ಗರ್ಜಿಸಿತು?

ವಾಸಿಗಳನರಸುವಡೆ ದ್ರುಪದನ
ಮೀಸಲಡಗನು ಹದ್ದು ಕಾಗೆಗೆ
ಸೂಸಿ ವಿಪ್ರನ ಬಡಿದು ಬಿಡುವುದು ಮತ್ತೆ ತಿರಿದುಣಲಿ
ಆ ಸರೋಜಾನನೆಯ ನಮ್ಮ ವಿ
ಲಾಸಿನಿಯ ವೀಧಿಯಲಿ ಕೂಡುವ
ದೈಸಲೇ ಯೆನುತೊಡನೊಡನೆ ಗರ್ಜಿಸಿತು ನೃಪನಿಕರ (ಆದಿ ಪರ್ವ, ೧೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಮ್ಮ ಹಠ, ಸ್ಪರ್ಧೆಯನ್ನು ಅರಸುವುದಾದರೆ, ಈ ದ್ರುಪದನ ಮಾಂಸವನ್ನು ಹದ್ದು ಕಾಗಿಗೆ ಹಾಕಿ ಆ ವಿಪ್ರನನ್ನು ಸದೆಬಡೆದು ಪುನ: ಆ ವಿಪ್ರನು ಭಿಕ್ಷೆಬೇಡಿ ಊಟಮಾಡುವಂತೆ ಮಾಡಿ, ಈ ದ್ರೌಪದಿಯನ್ನು ನಮ್ಮ ವಿಲಾಸಿನಿಯರ ಮನೆಗಳಲ್ಲಿ ಕೂಡಿ ಹಾಕಬೇಕು ಎಂದು ಅಲ್ಲಿ ನೆರೆದಿದ್ದ ರಾಜರು ಮತ್ತೆ ಮತ್ತೆ ಗರ್ಜಿಸಿದರು.

ಅರ್ಥ:
ವಾಸಿ: ಸ್ಪರ್ಧೆ, ಹಠ, ಕೆಚ್ಚು; ಅರಸು:ಹುಡುಕು, ಅನ್ವೇಷಣೆ; ಮೀಸಲು: ಕಾಯ್ದಿರಿಸು; ಅಡಗು: ಮಾಂಸ; ಸೂಸಿ: ಸೋಕಿಸಿ; ವಿಪ್ರ: ಬ್ರಾಹ್ಮಣ; ಬಡಿ: ಹೊಡೆದು; ತಿರಿದು: ಭಿಕ್ಷೆಬೇಡಿ; ಉಣಲಿ: ಊಟಮಾಡಲಿ; ಸರೋಜ: ಕಮಲ; ಆನನ: ಮುಖ; ವಿಲಾಸಿನಿ: ದಾಸಿ; ವೀಧಿ: ಬೀದಿ; ಐಸಲೆ: ಅಷ್ಟೆ, ಅಲ್ಲವೆ; ಒಡನೊಡನೆ; ಮತ್ತೆ ಮತ್ತೆ; ಗರ್ಜಿಸು: ಜೋರಾಗಿ ಕೂಗು; ನೃಪ: ರಾಜ; ನಿಕರ: ಗುಂಪು;

ಪದವಿಂಗಡಣೆ:
ವಾಸಿಗಳನ್+ಅರಸುವಡೆ +ದ್ರುಪದನ
ಮೀಸಲ್+ಅಡಗನು +ಹದ್ದು +ಕಾಗೆಗೆ
ಸೂಸಿ +ವಿಪ್ರನ +ಬಡಿದು +ಬಿಡುವುದು +ಮತ್ತೆ +ತಿರಿದ್+ಉಣಲಿ
ಆ +ಸರೋಜಾನನೆಯ+ ನಮ್ಮ +ವಿ
ಲಾಸಿನಿಯ +ವೀಧಿಯಲಿ +ಕೂಡುವದ್
ಐಸಲೇ +ಯೆನುತ+ಒಡನೊಡನೆ +ಗರ್ಜಿಸಿತು +ನೃಪನಿಕರ

ಅಚ್ಚರಿ:
(೧) ವಾಸಿ, ಸೂಸಿ, ವಿಲಾಸಿ – ಪ್ರಾಸ ಪದಗಳು