ಪದ್ಯ ೨೧: ದುರ್ಯೋಧನನು ದುಶ್ಯಾಸನನಿಗೆ ಏನೆಂದು ಆಜ್ಞಾಪಿಸಿದನು?

ಅಹುದಲೇ ಬಳಿಕೇನು ನೀನ ತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ (ಸಭಾ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಕರ್ಣನ ಮಾತನ್ನು ಸಮರ್ಥಿಸುತ್ತಾ, ಕರ್ಣ ವಿಶಾಲಬುದ್ಧಿಯುಳ್ಳ ನಿನ್ನ ಮಾತು ಸರಿಯಾಗಿದೆ, ಈ ದುರಭಿಮಾನಿಗಳಾದ ಪಾಂಡವರ ಮೋಸಗಳು ನಿನಗೇನು ಗೊತ್ತು, ಅವರ ದುರ್ಮಾರ್ಗಗಳು ಅವರಿಗೇ ಇರಲಿ, ಎಂದು ದುಶ್ಯಾಸನನ್ನು ಕರೆದು ದಾಸಿಯರ ಭವನದಲ್ಲಿ ಸಹಾರರು, ಅವರ ವೇಳೆಗಳನ್ನು ಸರದಿಗಳನ್ನು ಗೊತ್ತುಪಡಿಸುವವರು ಬರಲಿ, ಈ ಹೆಣ್ಣನ್ನು ದಾಸಿಯರ ಭವನಕ್ಕೆ ನೂಕೆಂದು ದುರ್ಯೋಧನನು ದುಶ್ಯಾಸನನಿಗೆ ಆಜ್ಞಾಪಿಸಿದನು.

ಅರ್ಥ:
ಬಳಿಕ: ನಂತರ; ಬಹಳ: ತುಂಬ; ಮತಿ: ಬುದ್ಧಿ; ಕುಹಕ: ಮೋಸ, ವಂಚನೆ; ಕೋಟಿ: ವರ್ಗ, ಕೊನೆ; ಬಲ್ಲೆ: ತಿಳಿ; ವೃಥ: ಸುಮ್ಮನೆ; ಅಭಿಮಾನಿ: ಪ್ರೀತಿಯುಳ್ಳವನು; ರಹಣಿ: ಹೊಂದಿಕೆ, ಕ್ರಮ; ಸಾಕು: ಕೊನೆ, ಅಂತ್ಯ; ತೊತ್ತು: ದಾಸ; ಸಹಚರ: ಅನುಚರ, ಸೇವಕ; ಸೂಳಾಯತ: ಓಲೆಯಕಾರ; ಕರೆ: ಬರೆಮಾಡು; ಮಹಿಳೆ: ಸ್ತ್ರೀ; ನೂಕು: ತಳ್ಳು; ನೇಮಿಸು: ಅಜ್ಞಾಪಿಸು;

ಪದವಿಂಗಡಣೆ:
ಅಹುದಲೇ+ ಬಳಿಕೇನು +ನೀನ್+ಅತಿ
ಬಹಳ +ಮತಿಯೈ +ಕರ್ಣ +ನೀನ್+ಈ
ಕುಹಕ+ ಕೋಟಿಯನೆತ್ತ+ ಬಲ್ಲೆ +ವೃಥ+ಅಭಿಮಾನಿಗಳ
ರಹಣಿ+ ಸಾಕಂತಿರಲಿ+ ತೊತ್ತಿರ
ಸಹಚರರ+ ಸೂಳಾಯಿತರ+ ಕರೆ
ಮಹಿಳೆಯನು +ನೂಕೆಂದು +ದುಶ್ಯಾಸನಗೆ+ ನೇಮಿಸಿದ

ಅಚ್ಚರಿ:
(೧) ದುರ್ಯೋಧನನು ಪಾಂಡವರನ್ನು ನೋಡುವ ಪರಿ – ಕುಹಕ ಕೋಟಿಯನೆತ್ತ ಬಲ್ಲೆ, ವೃಥಾಭಿಮಾನಿಗಳ ರಹಣಿ