ಪದ್ಯ ೩೧: ಯುದ್ಧಭೂಮಿಯಲ್ಲಿ ಯಾವ ವಸ್ತುಗಳು ಬಿದ್ದಿದ್ದವು?

ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಡಿದು ಬಿದ್ದ ಕುದುರೆಯ ಪಕ್ಕರೆ, ತುಂಡಾಗಿ ಬಿದ್ದ ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ನುಗ್ಗಾಗಿದ್ದ ಆನೆ ಕುದುರೆಗಳ ಪಕ್ಷರಕ್ಷೆ, ಸ್ಫೋಟಗೊಂಡಿದ್ದ ಶಿರಸ್ತ್ರಾಣಗಳು, ತುಂಡಾಗಿದ್ದ ಬಾಹು ಮತ್ತು ದೇಹ ಕವಚಗಳು, ಪಾದರಕ್ಷೆಗಳು, ಹರಿದು ಬಿದ್ದ ಹಗ್ಗ, ಮುಖವಾಡ, ಪೀಠ, ಕೈಗೋಲು, ಕಡಿವಾಣ, ಕಬ್ಬಿ ಇವುಗಳು ರಣಭೂಮಿಯಲ್ಲಿ ಚೆಲ್ಲಿದ್ದವು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ಕುದುರೆಯ ಜೀನು, ಪಕ್ಕರೆ; ಸೀಳು: ಚೂರು, ತುಂಡು; ದಡಿ: ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ಜೀನು; ವಸ್ತ್ರಗಳ ಅಂಚು; ನೆಗ್ಗು:ಕುಗ್ಗು, ಕುಸಿ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ:ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ಸಿಡಿ:ಸ್ಫೋಟ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಜೋಡು: ಜೊತೆ, ಜೋಡಿ; ಮೊಚ್ಚೆ:ಪಾದರಕ್ಷೆ, ಚಪ್ಪಲಿ; ಉಡಿ: ಮುರಿ, ತುಂಡು ಮಾಡು; ಮಿಣಿ:ಚರ್ಮದ ಹಗ್ಗ; ಮೊಗ: ಮುಖ; ಮೊಗರಂಬ: ಮುಖವಾಡ; ಗದ್ದುಗೆ: ಪೀಠ; ಬಡಿಗೆ: ಕೋಲು, ದೊಣ್ಣೆ; ಸೂತ್ರಿಕೆ: ದಾರ, ನೂಲು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಕಡಿ:ತುಂಡು, ಹೋಳು; ಕುಸುರಿ: ತುಂಡು,ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಕೂಡೆ: ಜೊತೆ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಕಡಿದ +ಹಕ್ಕರಿಕೆಗಳ +ಸೀಳಿದ
ದಡಿಯ +ನೆಗ್ಗಿದ +ಗುಳದ +ರೆಂಚೆಯ
ಸಿಡಿದ +ಸೀಸಕ+ ಬಾಹುರಕ್ಷೆಯ+ ಜೋಡು +ಮೊಚ್ಚೆಯದ
ಉಡಿದ +ಮಿಣಿ +ಮೊಗರಂಬ+ ಗದ್ದುಗೆ
ಬಡಿಗೆಗಳ+ ಸೂತ್ರಿಕೆಯ +ಕಬ್ಬಿಯ
ಕಡಿಯಣದ +ಕುಸುರಿಗಳಲ್+ಎಸೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ಕಡಿ, ದಡಿ, ಸಿಡಿ, ಉಡಿ, ಬಡಿ – ಪ್ರಾಸ ಪದಗಳು
(೨) ಹಕ್ಕರಿ, ದಡಿ, ರೆಂಚೆ, ಸೀಸಕ, ಬಾಹುರಕ್ಷೆ, ಮಿಣಿ, ಮೊಗರಂಬ, ಗದ್ದುಗೆ, ಸೂತ್ರಿಕೆ – ರಣರಂಗದಲ್ಲಿ ಚೆಲ್ಲಿದ ವಸ್ತುಗಳು