ಪದ್ಯ ೩೮: ಅಶ್ವತ್ಥಾಮನು ತನ್ನ ಪರಾಕ್ರಮದ ಬಗ್ಗೆ ಏನು ಹೇಳಿದನು?

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ನುಡಿಯುತ್ತಾ, ಭೀಷ್ಮನ ಯುದ್ಧ ಕೌಶಲ್ಯದ ಇಮ್ಮಡಿ ಕುಶಲತೆಯನ್ನೂ, ನನ್ನ ತಂದೆ ದ್ರೋಣನ, ಮೂರರಷ್ಟನ್ನೂ, ಕರ್ಣನ ಪರಾಕ್ರಮದ ನಾಲ್ಕರಷ್ಟನ್ನೂ, ಶಲ್ಯನ ಐದರಷ್ಟು ಚಾತುರ್ಯತೆಯನ್ನೂ ತೋರಿಸುತ್ತೇನೆ. ಸುಶರ್ಮ ಶಕುನಿಗಳಿಗೆ ಹೋಲಿಸಲಾಗದಂತಹ ರಣಕೌಶಲ ನನ್ನನು, ನೀನು ನೀರಿನಿಂದ ಹೊರಬಂದು ನೋಡು ಎಂದು ಅಶ್ವತ್ಥಾಮನು ಬೇಡಿದನು.

ಅರ್ಥ:
ರಣ: ಯುದ್ಧಭೂಮಿ; ಇಮ್ಮಡಿ: ಎರಡು ಪಟ್ಟು; ಗುಣ: ನಡತೆ; ತೋರು: ಪ್ರದರ್ಶಿಸು; ಅಪ್ಪ: ತಂದೆ; ಎಣಿಸು: ಲೆಕ್ಕ ಹಾಕು; ಮೂವಡಿ: ಮೂರ್ಪಟ್ಟು; ಅಗ್ಗ: ಶ್ರೇಷ್ಠ; ನಂದನ: ಮಗ; ನಾಲ್ವಡಿ: ನಾಲ್ಕರಷ್ಟು; ಹೊಣಕೆ: ಯುದ್ಧ; ಶೌರ್ಯ; ಪಾಡು: ಸಮಾನ, ಸಾಟಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ರಣದೊಳಾ +ಗಾಂಗೇಯಗ್+ಇಮ್ಮಡಿ
ಗುಣವ +ತೋರುವ್+ಎನಪ್ಪನ್+ಅವರಿಂದ್
ಎಣಿಸಿಕೊಳು +ಮೂವಡಿಯನ್+ಅಗ್ಗದ +ಸೂತ+ನಂದನನ
ರಣಕೆ +ನಾಲ್ವಡಿ +ಮಾದ್ರರಾಜನ
ಹೊಣಕೆಗ್+ಐದು +ಸುಶರ್ಮ+ ಶಕುನಿಗಳ್
ಎಣಿಸುವಡೆ+ ಪಾಡಲ್ಲ +ನೋಡ್+ಏಳ್+ಎಂದನಾ +ದ್ರೌಣಿ

ಅಚ್ಚರಿ:
(೧) ರಣ, ಗುಣ – ಪ್ರಾಸ ಪದಗಳು
(೨) ರಣ – ೧, ೪ ಸಾಲಿನ ಮೊದಲ ಪದ

ಪದ್ಯ ೨೦: ಅರ್ಜುನನು ಯಾವುದರ ಮಧ್ಯೆ ಸೇತುವೆಯನ್ನು ಕಟ್ಟಿದನು?

ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಮ್ಗಣಕೆ ಕಲಿಪಾರ್ಥ (ವಿರಾಟ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭಲೇ ಕರ್ಣ, ಬಿಲುಗಾರನೆಂದರೆ ನೀನು, ನಿನ್ನ ಬಾಣ ಪ್ರಯೋಗ ಎಷ್ಟು ಸೊಗಸು, ನೀನು ಪರಶುರಾಮನ ಸಂಪ್ರದಾಯದಲ್ಲಿ ಬಿಲ್ವಿದ್ಯೆಯನ್ನು ಕಲಿತವನು. ನಿನ್ನ ಮುಮ್ದೆ ನಮ್ಮ ಬಿಲ್ವಿದ್ಯೆ ಏನು ಮಹಾ ದೊಡ್ಡದು ಎಂದು ಹೊಗಳಿ ಅರ್ಜುನನು ಭೂಮಿಗೂ ಆಕಾಶಕ್ಕೂ ಬಾಣದ ಕಟ್ಟೆಯನ್ನು ಕಟ್ಟಿದನು.

ಅರ್ಥ:
ಪೂತು: ಭಲೇ; ಬಿಲುಗಾರ: ಧನುಧರ; ಮಝ: ಭಲೇ; ಸೂತ: ಸಾರಥಿ; ನಂದನ: ಮಗ; ಬಾಣ: ಸರಳ; ರಚನೆ: ನಿರ್ಮಾಣ; ನೂತನ: ನವೀನ, ಹೊಸ; ವಿದ್ಯೆ: ಜ್ಞಾನ; ಬಿಲು: ಬಿಲ್ಲು, ಚಾಪ; ಭಾರ್ಗವ: ಪರಶುರಾಮ; ಸಂಪ್ರದಾಯ: ರೂಢಿ, ಪದ್ಧತಿ; ಬಲುಮೆ: ಶಕ್ತಿ; ಅತಿಶಯ: ಹೆಚ್ಚು; ಸರಳು: ಬಾಣ; ಸೇತು: ಸೇತುವೆ, ಸಂಕ; ಕಟ್ಟು: ನಿರ್ಮಿಸು; ಗಗನ: ಆಗಸ; ಅಂಗಣ: ಆವರಣದ ಬಯಲು, ಅಂಗಳ; ಕಲಿ: ಶೂರ;

ಪದವಿಂಗಡಣೆ:
ಪೂತುರೇ +ಬಿಲುಗಾರ+ ಮಝರೇ
ಸೂತನಂದನ +ಬಾಣರಚನಾ
ನೂತನದ+ ಬಿಲುವಿದ್ಯೆ+ ಭಾರ್ಗವ +ಸಂಪ್ರದಾಯವಲ
ಆತುಕೊಳ್ಳೈ +ನಮ್ಮ +ಬಲುಮೆಗಳ್
ಏತರ್+ಅತಿಶಯವೆನುತ +ಸರಳಿನ
ಸೇತುವನು +ಕಟ್ಟಿದನು +ಗಗನಾಂಗಣಕೆ +ಕಲಿಪಾರ್ಥ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಪರಿ – ಪೂತುರೇ ಬಿಲುಗಾರ ಮಝರೇ ಸೂತನಂದನ
(೨) ಅರ್ಜುನನ ಶಕ್ತಿ – ಸರಳಿನ ಸೇತುವನು ಕಟ್ಟಿದನು ಗಗನಾಮ್ಗಣಕೆ ಕಲಿಪಾರ್ಥ

ಪದ್ಯ ೪೧: ಕರ್ಣ ಭೀಮರ ಮಾತಿನ ಚಕಮಕಿ ಹೇಗಿತ್ತು?

ಆತುಕೊಳ್ಳೈ ಭ್ರೂಣಹತ್ಯಾ
ಪಾತಕಿಯೆ ಪಡಿತಳಿಸು ವಿಶಿಖ
ವ್ರಾತವಿವೆಯೆನುತೆಚ್ಚನಿನಸುತನನಿಲನಂದನನ
ಆತುಕೊಂಬರೆ ಸರಿಸನಲ್ಲ ವಿ
ಜಾತಿಯಲಿ ಸಂಭವಿಸಿದನೆ ಫಡ
ಸೂತನಂದನ ಎನುತ ಕರ್ಣನನೆಚ್ಚನಾ ಭೀಮ (ಕರ್ಣ ಪರ್ವ, ೧೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕರ್ಣನು ಭೀಮನೆದುರು ಬಂದು, ಎಲವೋ ಭೀಮನೇ, ಭ್ರೂಣಹತ್ಯ ಪಾತಕಿಯೇ? ಈ ಬಾಣಗಳನ್ನು ಬಿಟ್ಟೆ, ನೀನು ಇವನ್ನು ಸೈರಿಸು ಎನ್ನುತ್ತಾ ಭೀಮನನ್ನು ಬಾಣಗಳಿಂದ ಹೊಡೆದನು. ಭೀಮನು ಸೈರಿಸಲು ನನಗೆ ನೀನು ಸರಿಸಮನೆ. ಬೇರೆ ಜಾತಿಯಲ್ಲಿ ಹುಟ್ಟಿದವನೇ ಸೂತಪುತ್ರನೇ! ಎಂದು ಕರ್ಣನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಆತು: ಸರಿಯಾಗಿ ಹಿಡಿದು, ತಾಗಿಕೊಂಡು; ಭ್ರೂಣ: ಹುಡುಗ, ಬಾಲಕ; ಹತ್ಯ: ಮರಣ; ಪಾತಕಿ: ಪಾಪಿ; ಪಡಿ: ಸಮಾನವಾದುದು; ವಿಶಿಖ: ಬಾಣ, ಅಂಬು; ವ್ರಾತ: ಗುಂಪು; ಎಚ್ಚು: ಬಾಣಬಿಡು; ಸುತ: ಮಗ; ಅನಿಲನಂದನ: ವಾಯುಪುತ್ರ (ಭೀಮ); ಸರಿಸನಲ್ಲ: ಸಮಾನನಲ್ಲ; ವಿಜಾತಿ: ಬೇರೆ ಜಾತಿ; ಸಂಭವಿಸು: ಹುಟ್ಟು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸೂತನಂದನ: ಸೂತನ ಮಗ; ಇನಸುತ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಆತುಕೊಳ್ಳೈ +ಭ್ರೂಣಹತ್ಯಾ
ಪಾತಕಿಯೆ +ಪಡಿತಳಿಸು+ ವಿಶಿಖ
ವ್ರಾತವಿವೆ+ಎನುತ್+ಎಚ್ಚನ್+ಇನಸುತನ್+ಅನಿಲನಂದನನ
ಆತುಕೊಂಬರೆ +ಸರಿಸನಲ್ಲ+ ವಿ
ಜಾತಿಯಲಿ +ಸಂಭವಿಸಿದನೆ +ಫಡ
ಸೂತನಂದನ+ ಎನುತ +ಕರ್ಣನನ್+ಎಚ್ಚನಾ +ಭೀಮ

ಅಚ್ಚರಿ:
(೧) ಭ್ರೂಣಹತ್ರ, ಸೂತನಂದನ – ಇಬ್ಬರು ಬಯ್ಯುವ ಪರಿ
(೨) ಕರ್ಣ ಮತ್ತು ಭೀಮನನ್ನು ಕರೆದಿರುವ ಬಗೆ: ಅನಿಲನಂದನ, ಭೀಮ; ಇನಸುತನ್, ಸೂತನಂದನ

ಪದ್ಯ ೫: ಶಲ್ಯನು ಯಾವ ಎಚ್ಚರದ ನುಡಿಯನ್ನು ದುರ್ಯೋಧನನಿಗೆ ತಿಳಿಸಿದನು?

ನಿಮ್ಮ ವಿಜಯಶ್ರೀಯ ಕಡೆಗ
ಣ್ಣೆಮ್ಮ ಮುಖದಲಿ ಮರಿದುದಾದಡೆ
ನಮ್ಮ ಕೊರತೆಯದೇಕೆ ಕರಸೈ ಸೂತನಂದನನ
ನಮ್ಮ ಹೇಳಿಕೆ ಯಾವುದದನೀ
ತಮ್ಮ ಮೀರಿದು ನಡೆದನಾದಡೆ
ನಮ್ಮ ವಾಘೆಯ ಬೀಳುಕೊಡುವೆವು ರಾಯ ಕೇಳೆಂದ (ಕರ್ಣ ಪರ್ವ್, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ದುರ್ಯೋಧನ ನಿನ್ನ ವಿಜಯಲಕ್ಷ್ಮಿಯ ಕುಡಿನೋಟ ನಮ್ಮ ಮುಖದತ್ತ ಬೀರುವುದಾದರೆ ನಮ್ಮ ಮಾನಕ್ಕೆ ಕುಂದಾದರೂ ಪರವಾಗಿಲ್ಲ, ನೀನು ಹೇಳಿದಂತೆ ನಡೆದುಕೊಳ್ಳುತ್ತೇನೆ, ಬರೆಮಾಡು ಕರ್ಣನನ್ನು, ಆದರೆ ಒಂದು ಮಾತು ನಮ್ಮ ಮಾತನ್ನು ಮೀರಿದೊಡನೆ ನಾವು ಲಗಾಮನ್ನು ಬಿಟ್ಟು ಹೋಗುತ್ತೇವೆ ಎಂದು ಎಚ್ಚರದ ನುಡಿಯನ್ನು ಶಲ್ಯನು ದುರ್ಯೋಧನನಿಗೆ ತಿಳಿಸಿದನು.

ಅರ್ಥ:
ವಿಜಯ: ಗೆಲುವು; ವಿಜಯಶ್ರೀ: ವಿಜಯಲಕ್ಷ್ಮಿ; ಕಡೆಗಣ್ಣು: ಓರೆನೋಟ; ಮುಖ: ಆನನ; ಮರಿದು: ಎಳೆಯದು; ಕೊರತೆ: ನ್ಯೂನ್ಯತೆ; ಕರಸೈ: ಬರೆಮಾಡು; ಸೂತ: ಸಾರಥಿ; ನಂದನ: ಮಗ; ಹೇಳಿಕೆ: ಅಭಿಪ್ರಾಯ; ಮೀರಿ: ದಾಟಿ; ವಾಘೆ: ಲಗಾಮು; ಬೀಳುಕೊಡು: ತೊರೆದು ಬಿಡು; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನಿಮ್ಮ +ವಿಜಯಶ್ರೀಯ +ಕಡೆಗಣ್
ಎಮ್ಮ +ಮುಖದಲಿ +ಮರಿದುದ್+ಆದಡೆ
ನಮ್ಮ +ಕೊರತೆಯದೇಕೆ +ಕರಸೈ+ ಸೂತನಂದನನ
ನಮ್ಮ +ಹೇಳಿಕೆ +ಯಾವುದ್+ಅದನ್+ಈ
ತಮ್ಮ +ಮೀರಿದು +ನಡೆದನ್+ಆದಡೆ
ನಮ್ಮ +ವಾಘೆಯ +ಬೀಳುಕೊಡುವೆವು+ ರಾಯ +ಕೇಳೆಂದ

ಅಚ್ಚರಿ:
(೧) ನಿಮ್ಮ, ಎಮ್ಮ, ನಮ್ಮ, ತಮ್ಮ – ಪ್ರಾಸ ಪದಗಳೂ
(೨) ಗೆಲುವು ನಮ್ಮನ್ನು ನೋಡಿದರೆ ಎನ್ನುವ ಪರಿ – ನಿಮ್ಮ ವಿಜಯಶ್ರೀಯ ಕಡೆಗಣ್ಣೆಮ್ಮ ಮುಖದಲಿ ಮರಿದುದಾದಡೆ ನಮ್ಮ ಕೊರತೆಯದೇಕೆ