ಪದ್ಯ ೧೧೬: ಸದ್ಗುಣಗಳಿದ್ದರೂ ಯಾರು ದರಿದ್ರನೆಂದು ಪರಿಗಣಿಸಲ್ಪಡುತ್ತಾನೆ?

ವಿದ್ಯೆ ಸತ್ಕುಲ ಬಹು ವಿವೇಕವು
ಬುದ್ಧಿ ಜಾಣ್ಮೆಯ ನುಡಿಯ ಸಡಗರ
ಶುದ್ಧ ಚಿತ್ತ ಸುಶೀಲ ಭುಜಬಲ ಭದ್ರನೆಂದೆನಿಸಿ
ಉದ್ಯುಗವು ಮೊದಲಾದ ಗುಣಗಳಿ
ವಿದ್ದು ಫಲವೇನೀ ಜಗದ ತೊರೆ
ಮದ್ದು ಹೊದ್ದದ ನರಗೆ ದಾರಿದ್ರಂಗನಾ ವರಗೆ (ಉದ್ಯೋಗ ಪರ್ವ, ೩ ಸಂಧಿ, ೧೧೬ ಪದ್ಯ)

ತಾತ್ಪರ್ಯ:
ಯಾವ ಮನುಷ್ಯನಲ್ಲಿ ವಿದ್ಯೆ, ಒಳ್ಳೆಯ ಕುಲದ ಹಿನ್ನಲೆ, ವಿವೇಕ ವಿಚಾರದ ಬುದ್ಧಿ, ಜಾಣತನ, ವಾಕ್ಚಾತುರ್ಯ, ನಿರ್ಮಲವಾದ ಚಿತ್ತಶುದ್ಧಿ, ಒಳ್ಳೆಯ ನಡತೆ, ಪರಾಕ್ರಮದ ಗುಣ, ಉದ್ಯಮಶೀಲತೆ ಇಂತಹ ಸದ್ಗುಣಗಳಿದ್ದರೂ ಏನು ಫಲ, ಅವನಲ್ಲಿ ವೈರಾಗ್ಯವೆಂಬ ಗುಣವಿಲ್ಲದಿದ್ದರೆ ಈ ಎಲ್ಲಾ ಗುಣಗಳು ವ್ಯರ್ಥ, ಅವನಲ್ಲಿ ವೈರಾಗ್ಯಗುಣ ಬರುವವರೆಗೂ ಅವನನ್ನು ದರಿದ್ರನೆಂದೇ ಪರಿಗಣಿಸಬೇಕು ಎಂದು ವಿದುರ ವೈರಾಗ್ಯದ ಮಹತ್ತ್ವವನ್ನು ತಿಳಿಸಿದ.

ಅರ್ಥ:
ವಿದ್ಯೆ: ತಿಳುವಳಿಕೆ, ಜ್ಞಾನ; ಸತ್ಕುಲ: ಒಳ್ಳೆಯ ವಂಶ; ಬಹು: ಬಹಳ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಬುದ್ಧಿ: ತಿಳಿವು, ಅರಿವು; ಜಾಣ: ಬುದ್ಧಿವಂತ, ಚತುರ; ನುಡಿ: ಮಾತು; ಸಡಗರ: ಉತ್ಸಾಹ, ಸಂಭ್ರಮ; ಶುದ್ಧ: ನಿರ್ಮಲ; ಚಿತ್ತ; ಬುದ್ಧಿ; ಸುಶೀಲ: ಒಳ್ಳೆಯ ನಡತೆ; ಭುಜಬಲ: ಪರಾಕ್ರಮ; ಭದ್ರ:ಸುಖ, ಶ್ರೇಯಸ್ಸು; ಉದ್ಯುಗ: ಪ್ರಯತ್ನ, ಉದ್ಯೋಗಶೀಲ; ಮೊದಲಾದ: ಮುಂತಾದ; ಗುಣ: ನಡತೆ, ಸ್ವಭಾವ; ಫಲ: ಫಲಿತಾಂಶ; ಜಗ: ಜಗತ್ತು; ತೊರೆ: ಬಿಡು; ಮದ್ದು: ಜೌಷದಿ; ಹೊದ್ದದ: ಹೊಂದಿರದ; ನರ: ಮನುಷ್ಯ; ದಾರಿದ್ರ: ಬಡತನ,ಕೊರತೆ, ಹೀನ; ಆವರಗೆ: ಅಲ್ಲಿಯ ತನಕ;

ಪದವಿಂಗಡಣೆ:
ವಿದ್ಯೆ +ಸತ್ಕುಲ +ಬಹು +ವಿವೇಕವು
ಬುದ್ಧಿ +ಜಾಣ್ಮೆಯ +ನುಡಿಯ +ಸಡಗರ
ಶುದ್ಧ +ಚಿತ್ತ +ಸುಶೀಲ +ಭುಜಬಲ +ಭದ್ರನೆಂದ್+ಎನಿಸಿ
ಉದ್ಯುಗವು+ ಮೊದಲಾದ+ ಗುಣಗಳಿ
ವಿದ್ದು+ ಫಲವೇನ್+ಈ+ ಜಗದ +ತೊರೆ
ಮದ್ದು+ ಹೊದ್ದದ +ನರಗೆ+ ದಾರಿದ್ರಂಗನಾ +ವರಗೆ

ಅಚ್ಚರಿ:
(೧) ಜಗದ ತೊರೆ ಮದ್ದು – ವೈರಾಗ್ಯವನ್ನು ಹೇಳಿರುವ ಪರಿ

ಪದ್ಯ ೩೯: ಸಿರಿಯುಳ್ಳವನನ್ನು ಲೋಕ ಹೇಗೆ ಭಾವಿಸುತ್ತದೆ?

ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲ ಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐಶ್ವರ್ಯವನ್ನು ಸಮಾಜ ಹೇಗೆ ನೋಡುತ್ತದೆಂದು ವಿದುರ ಈ ಪದ್ಯದಲ್ಲಿ ತಿಳಿಸಿದ್ದಾನೆ. ಐಶ್ವರ್ಯವಿದ್ದವನೇ ಒಳ್ಳೆಯ ಕುಲದಲ್ಲಿ ಜನಿಸಿದವನು, ಐಶ್ವರ್ಯವಿದ್ದವನೇ ಪಂಡಿತನು, ಅವನೆ ಮಹಾತ್ಮನು, ಅವನಲ್ಲಿ ಸಕಲ ಸದ್ಗುಣಗಳೂ ಇವೆ, ಅವನೇ ಒಳ್ಳೆಯ ಶೀಲವಂತ ಎಂದು ಲೋಕ ಭಾವಿಸುತ್ತದೆ. ಐಶ್ವರ್ಯವಿಲ್ಲದವನು ಸ್ವಯಂ ಶಿವನೇ ಆಗಿದ್ದರೂ ಅವನನ್ನು ಲಕ್ಷಿಸುವುದಿಲ್ಲ.

ಅರ್ಥ:
ಸಿರಿ: ಐಶ್ವರ್ಯ; ಉಳ್ಳವ: ಇರುವ; ಕುಲಜ: ಒಳ್ಳೆಕುಲದಲ್ಲಿ ಹುಟ್ಟಿದ; ವಿದಗ್ಧ: ವಿದ್ವಾಂಸ; ಮಹಾತ್ಮ: ಶ್ರೇಷ್ಠ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಸುಶೀಲ: ಒಳ್ಳೆಯ ನಡತೆ, ಸದಾಚಾರ; ರಹಿತ: ಇಲ್ಲದ ಸ್ಥಿತಿ; ಶಿವ: ಈಶ್ವರ; ಸರಕು:ಲಕ್ಷ್ಯ; ಲೋಕ: ಜಗತ್ತು; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಿರಿಯನ್+ಉಳ್ಳವನವನೆ+ ಕುಲಜನು
ಸಿರಿಯನ್+ಉಳ್ಳವನೇ +ವಿದಗ್ಧನು
ಸಿರಿಯನ್+ಉಳ್ಳವನೇ +ಮಹಾತ್ಮನು +ಸಕಲ +ಗುಣಯುತನು
ಸಿರಿಯನ್+ಉಳ್ಳವನೇ +ಸುಶೀಲನು
ಸಿರಿರಹಿತ+ ಶಿವನಾದೊಡ್+ಆಗಲಿ
ಸರಕು +ಮಾಡದು +ಲೋಕವ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಸಿರಿ – ೫ ಸಾಲಿನ ಮೊದಲ ಪದ
(೨) ಸಿರಿಯಿದ್ದವರನ್ನು ೫ ರೀತಿ ಸಮಾಜ ಗುರುತಿಸುತ್ತದೆ, ಕುಲಜ, ವಿದಗ್ಧ, ಮಹಾತ್ಮ, ಗುಣಯುತ, ಸುಶೀಲ