ಪದ್ಯ ೩೯: ಅರ್ಜುನನ ಎದುರು ಗೆಲ್ಲಲು ಸಾಧ್ಯವೇ?

ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ (ಕರ್ಣ ಪರ್ವ, ೨೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೇ ಧೃತರಾಷ್ಟ್ರ ರಾಜನೇ, ಹಬ್ಬಿದ ಬೆಂಕಿಯ ಉರಿಯ ಎತ್ತರಕ್ಕೂ ಹಾರಿ ಒಳಗೆ ಹೊಕ್ಕ ಪಕ್ಷಿಯು ಹೊರಬರಲು ಸಾಧ್ಯವೇ? ಅರ್ಜುನನನ್ನು ವಿರೋಧಿಸಿ ನಿಂತ ವೀರನ ಹೆಂಡತಿಯು ಮುತ್ತೈದೆಯಾಗಿ ಉಳಿಯಲು ಸಾಧ್ಯವೇ? ಹೊಸದಾಗಿ ಅರಳಿದ ಸಂಪಿಗೆಯ ಮಕರಂದವನ್ನು ದುಂಬಿಗಳು ತಮ್ಮ ಮರಿಗಳಿಗೆ ತಂದುಕೊಟ್ಟಾವೇ? ಆ ಯುದ್ಧಕ್ಕೆ ಹೋದ ವೃಷಸೇನನ ಮನ್ನಣೆಯ ಸೈನಿಕರು ನನಗೆ ಕಾಣಲಾಗದು ಎಂದು ಸಂಜಯನು ಹೇಳಿದನು.

ಅರ್ಥ:
ಉರಿ: ಬೆಂಕಿ, ಜ್ವಾಲೆ; ಏರು: ಮೇಲೇಳು; ಪತಂಗ: ಹಕ್ಕಿ, ಪಕ್ಷಿ; ಮರಳು: ಹಿಂದಿರುಗು; ರಣ: ಯುದ್ಧ; ನರ: ಅರ್ಜುನ; ಕಳ: ರಣರಂಗ; ಸತಿ: ಹೆಂಡತಿ ಸುವಾಸಿನಿ: ಮುತ್ತೈದೆ; ಅರಳ: ವಿಕಸಿಸಿದ; ಹೊಸ: ನವೀನ; ಸಂಪದೆ: ಸಂಪಿಗೆ; ಮಧು:ಜೇನು; ಮರಿ: ಚಿಕ್ಕ; ತಹ: ಒಪ್ಪಂದ, ತಂದುಕೊಡು; ತುಂಬಿ: ದುಂಬಿ, ಜೇನು; ಕೇಳು: ಆಲಿಸು; ಅರಸ: ರಾಜ; ಹರಿಬ: ಕಾಳಗ, ಯುದ್ಧ; ಹೊಕ್ಕು: ಸೇರು; ಸುಭಟ: ಪರಾಕ್ರಮಿ; ಕಾಣೆ: ನೋಡಲಾಗದು;

ಪದವಿಂಗಡಣೆ:
ಉರಿಯ +ಸರಿಗೇರಿದ+ ಪತಂಗಕೆ
ಮರಳುದಲೆಯೇ +ಮತ್ತೆ +ರಣದಲಿ
ನರನೊಡನೆ +ಕಳನೇರಿದಾತನ+ ಸತಿ+ ಸುವಾಸಿನಿಯೆ
ಅರಳ+ ಹೊಸ +ಸಂಪದೆಯ +ಮಧುವನು
ಮರಿಗೆ+ ತಹವೇ+ ತುಂಬಿಗಳು +ಕೇಳ್
ಅರಸ +ಹರಿಬಕೆ+ ಹೊಕ್ಕ +ಸುಭಟರ+ ಕಾಣೆ +ನಾನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಸರಿಗೇರಿದ ಪತಂಗಕೆ ಮರಳುದಲೆಯೇ; ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ; ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು

ಪದ್ಯ ೧೧೧: ರಾಜರು ಮುಂಜಾನೆ ಯಾವುದರ ದರ್ಶನ ಮಾಡಬೇಕು?

ಕಲಶ ಕನ್ನಡಿ ಕರಿ ತುರಗ ಗೋ
ಕುಲ ವೃಷಭ ಬುಧ ನಿಚಯ ಗಿರಿಸಂ
ಕುಳ ಸುವಾಸಿನಿ ಮಾತೃ ಪಿತೃವರ ವಾಹಿನೀ ನಿಚಯ
ಜಲಧಿ ವಸನಚ್ಛತ್ರ ಊರ್ವೀ
ಲಲನೆಯರನೀಕ್ಷಿಸುವುದವನಿಪ
ತಿಲಕರುಪ್ಪಡಿಸುವ ಸಮಯದೊಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೧೧ ಪದ್ಯ)

ತಾತ್ಪರ್ಯ:
ರಾಜನು ಮುಂಜಾನೆ ಏಳುವಾಗ ಮಂಗಳಕರವಾದ ವಸ್ತುಗಳನ್ನು ನೋಡುವುದು ಶುಭದ ಲಕ್ಷಣ. ಅಂತಹ ವಸ್ತುಗಳಾವುದೆಂದು ಈ ಪದ್ಯದಲ್ಲಿ ವಿದುರ ತಿಳಿಸುತ್ತಾರೆ. ಎದುರುಕಲಶ ಮತ್ತು ಅದಕ್ಕೆ ಹಿಡಿದ ಕನ್ನಡಿ, ಆನೆ, ಕುದುರೆ, ಗೋವುಗಳು, ಎತ್ತು, ವಿದ್ವಾಂಸರ ಗುಂಪು, ಬೆಟ್ಟಗಳ ಸಾಲು, ಸ್ತ್ರೀಯರು, ತಾಯಿ, ತಂದೆ, ಸೈನ್ಯದ ಗುಂಪು, ಸಮುದ್ರ, ಬಟ್ಟೆಯ ಛತ್ರಿ, ಭೂಮಿ ಇವುಗಳನ್ನು ರಾಜರು ಏಳುವಾಗ ನೋಡತಕ್ಕದ್ದು.

ಅರ್ಥ:
ಕಲಶ: ಮಂಗಳಕಾರ್ಯಗಳಲ್ಲಿ ನೀರು ತುಂಬಿ ಅಲಂಕರಿಸಿದ ಬಿಂದಿಗೆ; ಕನ್ನಡಿ:ದರ್ಪಣ; ಕರಿ: ಆನೆ; ತುರಗ: ಕುದುರೆ; ಗೋಕುಲ: ಗೋವು; ವೃಷಬ: ಗೂಳಿ; ಬುಧ: ವಿದ್ವಾಂಸ; ನಿಚಯ: ಗುಂಪು; ಗಿರಿ: ಬೆಟ್ಟ; ಸಂಕುಳ: ಸಾಲು; ಸುವಾಸಿನಿ: ಹೆಂಗಸರು; ಮಾತೃ: ಮಾತೆ, ಅಮ್ಮ; ಪಿತೃ: ತಂದೆ; ವಾಹಿನಿ: ಸೈನ್ಯ, ದಳ; ಜಲಧಿ: ಸಮುದ್ರ; ವಸನ: ಬಟ್ಟೆ; ಛತ್ರಿ: ಕೊಡೆ; ಊರ್ವಿ: ಭೂಮಿ; ಲಲನೆ: ಸ್ತ್ರೀ; ಈಕ್ಷಿಸು: ನೋಡು; ಅವನಿಪ: ರಾಜ; ತಿಲಕ: ಶ್ರೇಷ್ಠ; ಉಪ್ಪಡಿಸು: ಏಳುವ; ಸಮಯ: ಕಾಲ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕಲಶ +ಕನ್ನಡಿ +ಕರಿ +ತುರಗ +ಗೋ
ಕುಲ +ವೃಷಭ +ಬುಧ +ನಿಚಯ +ಗಿರಿಸಂ
ಕುಳ +ಸುವಾಸಿನಿ +ಮಾತೃ +ಪಿತೃವರ +ವಾಹಿನೀ +ನಿಚಯ
ಜಲಧಿ +ವಸನಚ್ಛತ್ರ +ಊರ್ವೀ
ಲಲನೆಯರನ್+ಈಕ್ಷಿಸುವುದ್+ಅವನಿಪ
ತಿಲಕರ್+ಉಪ್ಪಡಿಸುವ +ಸಮಯದೊಳ್+ಅರಸ +ಕೇಳೆಂದ

ಅಚ್ಚರಿ:
(೧) ೧೫ ರೀತಿಯ ವಸ್ತುಗಳನ್ನು ನೋಡುವುದನ್ನು ಈ ಪದ್ಯದಲ್ಲಿ ಹೇಳಿದ್ದಾರೆ
(೨) ‘ಕ’ಕಾರದ ತ್ರಿವಳಿ ಪದ – ಕಲಶ ಕನ್ನಡಿ ಕರಿ
(೩) ನಿಚಯ, ಸಂಕುಳ – ಗುಂಪು ಪದದ ಸಮಾನಾರ್ಥಕ ಪದಗಳ ಬಳಕೆ