ಪದ್ಯ ೨: ಭೀಮ ದುರ್ಯೋಧನರು ಯಾವ ರೀತಿ ಹೋರಾಡಿದರು?

ಹಳಚಿದರು ಸುಳಿ ಘಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು (ಗದಾ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಸುಳಿಗಾಳಿಯಂತೆ ಎರಗುವ ಗರುಡನಂತೆ ಹೊಯ್ದು ಸುತ್ತಿ ಬಿಗಿದು ಮದಗಜಗಳಂತೆ ಮೇಲ್ಬಿದ್ದು ಅಗ್ನಿಯಂತೆ ಮುನ್ನುಗ್ಗಿ ಸುಟ್ಟು, ಹಾವಿನಂತೆ ಅಪ್ಪಳಿಸಿ, ಪಾದರಸದಂತೆ ಚುರುಕಾಗಿ ವೀರರಿಬ್ಬರೂ ಕಾದಿದರು.

ಅರ್ಥ:
ಹಳಚು: ತಾಗು, ಬಡಿ; ಸುಳಿ: ಆವರಿಸು, ಮುತ್ತು; ಗಾಳಿ: ವಾಯು; ಖಗ: ಪಕ್ಷಿ; ಖಗಪತಿ: ಪಕ್ಷಿರಾಜ (ಗರುಡ); ಹೊಯ್ಲು: ಹೊಡೆ; ಬಳಸು: ಆವರಿಸು; ಬಿಗಿ: ಭದ್ರವಾಗಿರುವುದು; ಎರಗು: ಬೀಳು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಮತ್ತಗಜ: ಮದಕರಿ; ಶಿಖಿ: ಬೆಂಕಿ; ಚೂರಿಸು: ಚಳಪಳಿಸುವಂತೆ ತಿರುಗಿಸು; ನಿಲುಕು: ಬಿಡುವು, ವಿರಾಮ; ಫಣಿ: ಹಾವು; ಪಯ: ಪಾದ; ಲುಳಿ: ರಭಸ, ವೇಗ; ಒದೆ: ತುಳಿ, ಮೆಟ್ಟು; ಪಾದರಸ: ಒಂದು ಬಗೆಯ ದ್ರವ ರೂಪದ ಲೋಹ, ಪಾರಜ; ಪಟುಭಟ: ಪರಾಕ್ರಮಿ;

ಪದವಿಂಗಡಣೆ:
ಹಳಚಿದರು +ಸುಳಿ +ಘಾಳಿಯಂತಿರೆ
ಸುಳಿದು +ಖಗಪತಿಯಂತೆ +ಹೊಯ್ಲಲಿ
ಬಳಸಿ +ಬಿಗಿದ್+ಎರಗಿದರು +ಬಿಡೆಯದ +ಮತ್ತ+ಗಜದಂತೆ
ಅಳುವಿದರು +ಶಿಖಿಯಂತೆ +ಚೂರಿಸಿ
ನಿಲುಕಿದರು +ಫಣಿಯಂತೆ +ಪಯ+ಮೈ
ಲುಳಿಯಲ್+ಒಲೆದರು +ಪಾದರಸದಂದದಲಿ+ ಪಟುಭಟರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುವಿದರು ಶಿಖಿಯಂತೆ ಚೂರಿಸಿ ನಿಲುಕಿದರು ಫಣಿಯಂತೆ

ಪದ್ಯ ೬: ಸಂಜಯನ ಪ್ರಾಣವನ್ನು ಯಾರು ಕಾಪಾಡಿದರು?

ಸೆಳೆದಡಾಯ್ಧವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ (ಗದಾ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಕತ್ತಿಯನ್ನೆಳೆದು, ಸಂಜಯನ ತಲೆಯ ಹಿಂಭಾಗಕ್ಕೆ ಹೊಡೆಯಲು ಸನ್ನದ್ಧನಾದನು. ಆದರೆ ಅದೇ ಸಮಯಕ್ಕೆ ವೇದವ್ಯಾಸರು ಅಲ್ಲಿಗೆ ಬಂದು, ಸಾತ್ಯಕಿ ಒಳ್ಳೆಯ ಕೆಲಸಕ್ಕೆ ಕೈಹಾಕಿದ್ದೀಯ, ಸಂಜಯನು ದುಷ್ಟನೇ? ಅವನು ನಮ್ಮ ಶಿಷ್ಯ, ನೀನು ಅವನನ್ನು ಕೊಲ್ಲಬಹುದೇ ಎಂದು ಕೇಳಿ ಅಡಾಯುಧವನ್ನು ತಪ್ಪಿಸಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಅಡಾಯ್ದ: ಅಡ್ಡ ಬಂದು; ಹೆಡತಲೆ: ಹಿಂದಲೆ; ಹೂಡು: ಕಟ್ಟು; ಅರಿ: ಸೀಳು; ಸಮಯ: ಕಾಲ; ಸುಳಿ: ಕಾಣಿಸಿಕೊಳ್ಳು; ಅಗ್ಗ: ಶ್ರೇಷ್ಠ; ಪುಣ್ಯ: ಸದಾಚಾರ; ಲೇಸು: ಒಳಿತು; ಖಳ: ದುಷ್ಟ; ಶಿಷ್ಯ: ವಿದ್ಯಾರ್ಥಿ; ಕೊಲು: ಸಾಯಿಸು; ಕೊಂಡು: ಪಡೆದು; ಕೊರಳು: ಗಂಟಲು; ಅಡಾಯುಧ: ಮೇಲಕ್ಕೆ ಬಾಗಿದ ಕತ್ತಿ;

ಪದವಿಂಗಡಣೆ:
ಸೆಳೆದ್+ಅಡಾಯ್ಧವ+ ಸಂಜಯನ+ ಹೆಡ
ತಲೆಗೆ +ಹೂಡಿದನ್+ಅರಿವ +ಸಮಯಕೆ
ಸುಳಿದನ್+ಅಗ್ಗದ +ಬಾದರಾಯಣನ್+ಅವನ+ ಪುಣ್ಯದಲಿ
ಎಲೆಲೆ +ಸಾತ್ಯಕಿ +ಲೇಸು+ಮಾಡಿದೆ
ಖಳನೆ +ಸಂಜಯನ್+ಎಮ್ಮ +ಶಿಷ್ಯನ
ಕೊಲುವುದೇ +ನೀನೆನುತ +ಕೊಂಡನು+ ಕೊರಳ್+ಅಡಾಯುಧವ

ಅಚ್ಚರಿ:
(೧) ತಲೆಯ ಹಿಂಭಾಗ ಎಂದು ಹೇಳಲು – ಹೆಡತಲೆ ಪದದ ಪ್ರಯೋಗ
(೨) ಸಂಜಯನನ್ನು ರಕ್ಷಿಸಿದ ಪರಿ – ಖಳನೆ ಸಂಜಯನೆಮ್ಮ ಶಿಷ್ಯನಕೊಲುವುದೇ

ಪದ್ಯ ೫೯: ಪರಬ್ರಹ್ಮನ ಸ್ವರೂಪವಾವುದು?

ಜಗದೊಳಾನೇ ಚರಿಸುವೆನು ತ
ಜ್ಜಗವಿದೆಲ್ಲವು ನನ್ನ ಮಾಯೆಯೊ
ಳೊಗೆದು ತೋರಿಸಿ ಸುಳಿಸೆ ಸುಳಿವುದು ಹಿಡಿಯಲಡಗುವುದು
ಮಗುವುತನದೊಳು ಕೂಡಿ ಮೆರೆವುದು
ಜಗವದಲ್ಲದೆ ನಿಜವ ಬೆರಸುವ
ವಿಗಡರಿಗೆ ಪರತತ್ವ ಚಿನುಮಯರೂಪ ತಾನೆಂದ (ಭೀಷ್ಮ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಜಗತ್ತಿನಲ್ಲಿ ಚರಿಸುವವನು ನಾನೇ, ನಾನು ಮಾಯೆಯಿಂದ ಈ ಜಗತ್ತನ್ನು ತೋರಿಸಿದರೆ ಇದು ತೋರುತ್ತದ್. ನಿಲ್ಲಿಸಿದರೆ ಅಡಗುತ್ತದೆ, ಸುಳಿದರೆ ಸುಳಿಯುತ್ತದೆ. ಬಾಲ ಬುದ್ಧಿಯವರಿಗೆ ಈ ಜಗತ್ತು ಮೆರೆದಮ್ತೆ ತೋರುತ್ತದೆ. ಆತ್ಮನಿಷ್ಠರಾದ ಧೀರರಿಗೆ ಚಿನ್ಮಯವಾದ ಪರತತ್ತ್ವವಾದ ಆತ್ಮನಾಗಿರುತ್ತದೆ.

ಅರ್ಥ:
ಜಗ: ಜಗತ್ತು; ಚರಿಸು: ಸಂಚರಿಸು, ನಡೆ; ಮಾಯೆ: ಇಂದ್ರಜಾಲ; ಒಗೆ: ಹುಟ್ಟು; ತೋರು: ಗೋಚರಿಸು; ಸುಳಿ: ತಿರುಗು; ಹಿಡಿ: ಗ್ರಹಿಸು; ಅಡಗು: ಮುಚ್ಚು; ಮಗು: ಬಾಲಕ; ಕೂಡು: ಸೇರು; ಮೆರೆ: ಹೊಳೆ, ಪ್ರಕಾಶಿಸು; ಜಗ: ಪ್ರಪಂಚ; ನಿಜ: ದಿಟ; ಬೆರಸು: ಕೂಡಿಸು; ವಿಗಡ: ಶೌರ್ಯ, ಪರಾಕ್ರಮ, ಉದ್ಧಟ; ಪರತತ್ವ: ಪರಮಾತ್ಮನ ವಿಚಾರ; ಚಿನುಮಯ: ಶುದ್ಧಜ್ಞಾನದಿಂದ ಕೂಡಿದ; ರೂಪ: ಆಕಾರ;

ಪದವಿಂಗಡಣೆ:
ಜಗದೊಳ್+ಆನೇ +ಚರಿಸುವೆನು +ತ
ಜ್ಜಗವಿದೆಲ್ಲವು+ ನನ್ನ+ ಮಾಯೆಯೊಳ್
ಒಗೆದು+ ತೋರಿಸಿ+ ಸುಳಿಸೆ +ಸುಳಿವುದು ಹಿಡಿಯಲ್+ಅಡಗುವುದು
ಮಗುವುತನದೊಳು +ಕೂಡಿ +ಮೆರೆವುದು
ಜಗವದಲ್ಲದೆ +ನಿಜವ +ಬೆರಸುವ
ವಿಗಡರಿಗೆ+ ಪರತತ್ವ+ ಚಿನುಮಯ+ರೂಪ+ ತಾನೆಂದ

ಅಚ್ಚರಿ:
(೧) ಪರಮಾತ್ಮನ ಸ್ವರೂಪ – ಪರತತ್ವ ಚಿನುಮಯರೂಪ ತಾನೆಂದ

ಪದ್ಯ ೨೭: ಕರ್ಣನ ಸಾವಿನ ದುಃಖವು ಯಾರನ್ನು ಆವರಿಸಿತು?

ನರರ್ಗೆ ಸೈರಣೆಯೆತ್ತಣದು ಕರಿ
ತುರಗ ಕಂಬನಿಗರೆದುದದ್ಭುತ
ತರದ ಶೋಕಾಂಬುಧಿಯ ಸುಳಿಯಲಿ ಸಿಲುಕಿತೀ ಸೇನೆ
ಅರಸ ಕೇಳಾಚೆಯಲಿ ಭೀಮನ
ನರ ನಕುಲ ಸಹದೇವ ಸಾತ್ಯಕಿ
ಧರಣಿಪನ ದ್ರೌಪದಿಯ ಚಿಂತೆ ದುರಂತವಾಯ್ತೆಂದ (ಕರ್ಣ ಪರ್ವ, ೨೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎರಡೂ ಸೇನೆಗಳ ಯೋಧರು ಮಾತ್ರವಲ್ಲ, ಆನೆ, ಕುದುರೆಗಳೂ ಕಂಬನಿಗರೆದವು. ಶೋಕ ಸಮುದ್ರದ ಸುಳಿಯಲ್ಲಿ ಸೇನೆಗಳು ಸಿಕ್ಕು ಹಾಕಿಕೊಂಡವು. ರಾಜ ಧೃತರಾಷ್ಟ್ರ ಕೇಳು ಪಾಂಡವರ ಪಾಳಯದಲ್ಲಿ, ಭೀಮ, ಅರ್ಜುನ, ನಕುಲ, ಸಹದೇವ, ಸಾತ್ಯಕಿ, ಧರ್ಮರಾಯ, ದ್ರೌಪದಿಯರೂ ಉರುತರವಾಗಿ ದುಃಖಿಸಿದರು.

ಅರ್ಥ:
ನರ: ಮನುಷ್ಯ; ಸೈರಣೆ: ತಾಳ್ಮೆ, ಸಹನೆ; ಎತ್ತಣ:ಎಲ್ಲಿಯದು; ಕರಿ: ಆನೆ; ತುರಗ: ಅಶ್ವ; ಕಂಬನಿ: ಕಣ್ಣೀರು; ಎರೆದು: ಚೆಲ್ಲಿ; ಅದ್ಭುತ: ಆಶ್ಛರ್ಯ; ಶೋಕ: ದುಃಖ; ಅಂಬುಧಿ: ಸಾಗರ; ಸುಳಿ: ಚಕ್ರ; ಸಿಲುಕು: ಬಂಧಿಸು, ಕಟ್ಟಿಹಾಕು; ಸೇನೆ: ಸೈನ್ಯ; ಅರಸ: ರಾಜ; ಕೇಳು: ಆಲಿಸು; ನರ: ಅರ್ಜುನ; ಧರಣಿಪ: ರಾಜ (ಧರ್ಮರಾಯ); ಚಿಂತೆ: ಯೋಚನೆ; ದುರಂತ: ಕೊನೆಯಿಲ್ಲದುದು;

ಪದವಿಂಗಡಣೆ:
ನರರ್ಗೆ+ ಸೈರಣೆ+ಎತ್ತಣದು +ಕರಿ
ತುರಗ +ಕಂಬನಿಗರೆದುದ್+ಅದ್ಭುತ
ತರದ +ಶೋಕಾಂಬುಧಿಯ +ಸುಳಿಯಲಿ +ಸಿಲುಕಿತೀ +ಸೇನೆ
ಅರಸ+ ಕೇಳ್+ಆಚೆಯಲಿ +ಭೀಮನ
ನರ+ ನಕುಲ+ ಸಹದೇವ +ಸಾತ್ಯಕಿ
ಧರಣಿಪನ+ ದ್ರೌಪದಿಯ+ ಚಿಂತೆ +ದುರಂತವಾಯ್ತೆಂದ

ಅಚ್ಚರಿ:
(೧) ನರ ಪದದ ಬಳಕೆ – ಮನುಷ್ಯ ಮತ್ತು ಅರ್ಜುನ ಎಂದು ಹೇಳುವ ಪರಿ
(೨) ಹೆಚ್ಚಿನ ದುಃಖವನ್ನು ವಿವರಿಸುವ ಬಗೆ – ಅದ್ಭುತ ತರದ ಶೋಕಾಂಬುಧಿಯ ಸುಳಿಯಲಿ ಸಿಲುಕಿತೀ ಸೇನೆ

ಪದ್ಯ ೮: ಕರ್ಣನು ದುರ್ಯೋಧನನನ್ನು ನೆನೆದು ಏಕೆ ಮರುಗಿದನು – ೨?

ಮೊದಲಲಾತ್ಮಜರಳಿವನೊಡವು
ಟ್ಟಿದರ ಮೆಯ್ಯಲಿ ಮರೆದನೊಡವು
ಟ್ಟಿದರು ನೂರ್ವರು ಮಡಿಯೆ ಮರೆದನು ತನ್ನ ಸುಳಿವಿನಲಿ
ಕದನವೆನ್ನಯ ಸುಳಿವನೊಳಕೊಂ
ಡುದು ಸುಯೋಧನನೃಪತಿಗಿನ್ನಾ
ಸ್ಪದರ ಕಾಣೆನು ಶಿವಶಿವಾ ಎಂದಳಲಿದನು ಕರ್ಣ (ಕರ್ಣ ಪರ್ವ, ೨೭ ಸಂಧಿ, ೮ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಕ್ಕಳು ಯುದ್ಧದಲ್ಲಿ ಮಡಿದಾಗ ತನ್ನ ಸಹೋದರರ ಮುಖವನ್ನು ನೋಡಿ ತನ್ನ ದುಃಖವನ್ನು ಮರೆತನು, ತನ್ನ ನೂರ್ವರು ಸೋದರರು ಸತ್ತಾಗ ನನ್ನನ್ನು ನೋಡಿ ತನ್ನ ದುಃಖವನ್ನು ಮರೆತನು. ನಾನೀಗ ಕದನದ ಸುಳಿಯಲ್ಲಿ ಸಿಕ್ಕಿ ಮುಳುಗಿದ್ದೇನೆ, ಕೌರವನು ಇನ್ನಾರ ಮುಖವನ್ನು ನೋಡಿ ದುಃಖವನ್ನು ಮರೆಯಬೇಕು ಎಂದು ಚಿಂತಿಸುತ್ತಾ ಕರ್ಣನು ಮನಸ್ಸಿನಲ್ಲೇ ದುಃಖಪಟ್ಟನು.

ಅರ್ಥ:
ಮೊದಲು: ಮುಂಚೆ ಆತ್ಮಜ: ಮಗ; ಅಳಿ: ಮಡಿ; ಒಡವುಟ್ಟು: ತನ್ನ ಜೊತೆ ಹುಟ್ಟಿದ, ಬಾಂಧವರು; ಮೆಯ್ಯ: ದೇಹ; ಮರೆ: ನೆನಪಿನಿಂದ ದೂರ ತಳ್ಳು; ನೂರು: ಶತ; ಮಡಿ: ಸಾವು; ಸುಳಿ: ಹತ್ತಿರ, ತಿರುಗು; ಕದನ: ಯುದ್ಧ; ಸುಳಿ: ಆವರಿಸು; ನೃಪ: ರಾಜ; ಆಸ್ಪದ: ನೆಲೆ, ಅಶ್ರಯ; ಕಾಣೆ: ತೋರು; ಅಳಲು: ದುಃಖಿಸು;

ಪದವಿಂಗಡಣೆ:
ಮೊದಲಲ್+ಆತ್ಮಜರ್+ಅಳಿವನ್+ಒಡವು
ಟ್ಟಿದರ +ಮೆಯ್ಯಲಿ +ಮರೆದನ್+ಒಡವು
ಟ್ಟಿದರು +ನೂರ್ವರು +ಮಡಿಯೆ +ಮರೆದನು +ತನ್ನ +ಸುಳಿವಿನಲಿ
ಕದನವ್+ಎನ್ನಯ +ಸುಳಿವನ್+ಒಳಕೊಂ
ಡುದು+ ಸುಯೋಧನ+ನೃಪತಿಗ್+ಇನ್+
ಆಸ್ಪದರ+ ಕಾಣೆನು+ ಶಿವಶಿವಾ+ ಎಂದ್+ಅಳಲಿದನು +ಕರ್ಣ

ಅಚ್ಚರಿ:
(೧) ಕರ್ಣನಿಗೆ ದುರ್ಯೋಧನ ಮೇಲಿದ್ದ ಪ್ರೀತಿಯನ್ನು ತೋರುವ ಪದ್ಯ
(೨) ಅಳಿ, ಮಡಿ -ಸಮನಾರ್ಥಕ ಪದ
(೩) ಒಡವು – ೨, ೩ ಸಾಲಿನ ಕೊನೆ ಪದ