ಪದ್ಯ ೧೨: ದುರ್ಯೋಧನನಿಗೆ ಯಾವುದರ ಫಲ ದೊರೆಯಿತು?

ರಾಯನಾಸ್ಥಾನದಲಿ ಖೂಳರ
ರಾಯ ನೀನೇ ಭಂಗಪಡಿಸಿ ನ
ವಾಯದಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಜೂಜಾಡಿ ಕಪಟದ
ದಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ (ಗದಾ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಖೂಳರ ರಾಜನೇ, ನಿಮ್ಮೂರಿಗೆ ನಮ್ಮೈವರನ್ನು ಕರೆಸಿ, ಜೂಜಾಡಿ, ಮೋಸದ ಲೆಕ್ಕದಿಂದ ನಮ್ಮನ್ನು ಸೋಲಿಸಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಕೈಹಾಕಿದ ಫಲ ದೊರಕಿತೇ ಹೇಳು ಎಂದು ಭೀಮನು ದುರ್ಯೊಧನನನ್ನು ಕೇಳಿದನು.

ಅರ್ಥ:
ರಾಯ: ರಾಜ; ಆಸ್ಥಾನ: ದರ್ಬಾರು; ಖೂಳ: ದುಷ್ಟ; ಭಂಗ: ಮುರಿ; ನವಾಯ: ಹೊಸದಾದ; ಊರು: ಪಟ್ಟಣ; ಕರಸು: ಬರೆಮಾಡು; ವಾಯ: ಮೋಸ, ಕಪಟ; ಜೂಜು: ಪಗಡೆಯಾಟ; ಕಪಟ: ಮೋಸ; ದಾಯ: ಪಗಡೆಯ ಗರ; ಸೋಲಿಸು: ಪರಾಭವವಾಗು; ಅರಸಿ: ರಾಣಿ; ಸುಲಿ: ತೆಗೆ, ಕಳಚು; ಫಲ: ಪ್ರಯೋಜನ; ಹೇಳು: ತಿಳಿಸು;

ಪದವಿಂಗಡಣೆ:
ರಾಯನ್+ಆಸ್ಥಾನದಲಿ +ಖೂಳರ
ರಾಯ +ನೀನೇ +ಭಂಗಪಡಿಸಿ +ನ
ವಾಯದಲಿ +ನಿಮ್ಮೂರಿಗ್+ಎಮ್ಮೈವರನು +ನೀ +ಕರಸಿ
ವಾಯದಲಿ +ಜೂಜಾಡಿ +ಕಪಟದ
ದಾಯದಲಿ +ಸೋಲಿಸಿ +ಯುಧಿಷ್ಠಿರ
ರಾಯನ್+ಅರಸಿಯ +ಸುಲಿಸಿತಕೆ +ಫಲವಾಯ್ತೆ+ ಹೇಳೆಂದ

ಅಚ್ಚರಿ:
(೧) ನವಾಯ, ವಾಯ, ದಾಯ, ರಾಯ – ಪ್ರಾಸ ಪದಗಳು
(೨) ದುರ್ಯೋಧನನನ್ನು ಖೂಳರ ರಾಯ ಎಂದು ಕರೆದಿರುವುದು

ಪದ್ಯ ೨೫: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೨?

ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಎಳೊ ಕೌರವ, ಹಿಂದೆ ಯುಧಿಷ್ಠಿರನ ಪಟ್ಟದ ರಾಣಿಯಾದ ದ್ರೌಪದಿಯ ಸೀರೆಯನ್ನು ಸಭೆಯಲ್ಲಿ ಸುಲಿಸಿದ ಛಲವು ಎಲ್ಲಿಗೆ ಹೋಯಿತು? ವೈರಿಗಳನ್ನು ಕಾಡಿಗಟ್ಟಿದೆನಂಬ ಸಂತೋಷ ಎಲ್ಲಿಗೆ ಹೋಯಿತು? ಎಲವೋ ದುಷ್ಟಶಿರೋಮಣಿ, ಗಂಧರ್ವನು ನಿನ್ನ ಕೂದಲುಗಳಿಂದ ನಿನ್ನ ಕೈಗಳನ್ನು ಕಟ್ಟಿ ಎಳೆದುಕೊಂಡು ಹೋದಾಗ ಬಿಡಿಸಿದವರು ಯಾರು?

ಅರ್ಥ:
ರಾಯ: ರಾಜ; ಪಟ್ಟದರಸಿ: ಮಹಾರಾಣಿ; ಪಟ್ಟ: ಸ್ಥಾನ; ಸುಲಿಸು: ಕಿತ್ತುಕೊಳ್ಳು; ಛಲ: ದೃಢ ನಿಶ್ಚಯ; ಹಗೆ: ವೈರ; ಹಳುವು: ಕಾಡು; ಹೊಗಿಸು: ಸೇರಿಸು; ಸುಮ್ಮಾನ: ಸಂತೋಷ; ಖಳ: ದುಷ್ತ; ಶಿರೋಮಣಿ: ಅಗ್ರಗಣ್ಯ, ಶ್ರೇಷ್ಠ; ಕೂದಲು: ರೋಮ; ಕೈ: ಹಸ್ತ; ಕಟ್ಟು: ಬಂಧಿಸು; ಖೇಚರ: ಗಗನದಲ್ಲಿ ಸಂಚರಿಸುವವ, ಗಂಧರ್ವ, ದೇವತೆ; ಎಳೆ: ನೂಲಿನ ಎಳೆ, ಸೂತ್ರ; ಬಿಡಿಸು: ಸಡಲಿಸು;

ಪದವಿಂಗಡಣೆ:
ಎಲವೊ +ರಾಯನ +ಪಟ್ಟದರಸಿಯ
ಸುಲಿಸಿದ+ಆ +ಛಲವೆಲ್ಲಿ +ಹಗೆಗಳ
ಹಳುವದಲಿ +ಹೊಗಿಸಿದೆನ್+ಎನಿಪ+ ಸುಮ್ಮಾನ +ತಾನೆಲ್ಲಿ
ಖಳ +ಶಿರೋಮಣಿ +ನಿನ್ನ +ತಲೆಗೂ
ದಲಲಿ +ಕೈಗಳ+ ಕಟ್ಟಿ +ಖೇಚರನ್
ಎಳೆಯೆ +ಬಿಡಿಸಿದರ್+ಆರು +ಕೌರವ +ಎಂದನಾ +ಭೀಮ

ಅಚ್ಚರಿ:
(೧) ದುರ್ಯೋಧನನನ್ನು ಖಳ ಶಿರೋಮಣಿ ಎಂದು ಕರೆದಿರುವುದು
(೨) ಹ ಕಾರದ ತ್ರಿವಳಿ ಪದ – ಹಗೆಗಳ ಹಳುವದಲಿ ಹೊಗಿಸಿದೆನೆನಿಪ