ಪದ್ಯ ೮೧: ಇಂದ್ರನ ಆಲಯ ಹೇಗಿದೆ?

ಹೊಳೆವುತಿದೆ ದೂರದಲಿ ರಜತಾ
ಚಲವ ಕಂಡಂದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೆಂದ್ರ ನಂದನನೆ
ನಿಳಯವದೆ ನಸುದೂರದಲಿ ಥಳ
ಥಳಿಸುವಮಳ ಮಣಿ ಪ್ರಭಾಪರಿ
ವಳಯ ರಶ್ಮಿ ನಿಬದ್ಧವಮರಾವತಿಯ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೮೧ ಪದ್ಯ)

ತಾತ್ಪರ್ಯ:
ದೂರದಲ್ಲಿ ಬೆಳ್ಳಿಯ ಬೆಟ್ಟವೋ ಎಂಬಂತೆ ಇಂದ್ರನ ಪಟ್ಟದಾನೆ ಐರಾವತವು ಕಾಣಿಸುತ್ತಿದೆ. ಸ್ವಲ್ಪವೇ ದೂರದಲ್ಲಿ ಅತಿ ಶ್ರೇಷ್ಠವಾದ ದೋಷವಿಲ್ಲದ ಮಣಿ ರಶ್ಮಿಗಳಿಂದ ಕೂಡಿದ ದೇವೇಂದ್ರನ ಮನೆಯಿದೆ. ಅದೋ ಹೊಳೆಯುವ ಅಮರಾವತಿಯನ್ನು ನೋಡು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಹೊಳೆ: ಪ್ರಕಾಶಿಸು; ದೂರ: ಬಹಳ ಅಂತರ; ರಜತ: ಬೆಳ್ಳಿ; ಅಚಲ: ಬೆಟ್ಟ; ಕಂಡು: ನೋಡು; ಅಂದ: ಚೆಲುವು; ಕೆಲ: ಕೊಂಚ, ಸ್ವಲ್ಪ, ಮಗ್ಗಲು; ಬಲ: ರಾಕ್ಷಸನ ಹೆಸರು; ವಿರೋಧಿ: ವೈರಿ; ಬಲವಿರೋಧಿ: ಇಂದ್ರ; ಆನೆ: ಗಜ; ಸುರೇಂದ್ರ: ಇಂದ್ರ; ನಂದನ: ಮಗ; ನಿಳಯ: ಮನೆ; ನಸು: ಸ್ವಲ್ಪ; ಥಳಥಳಿಸು: ಹೊಳೆ, ಪ್ರಕಾಶಿಸು; ಅಮಳ: ನಿರ್ಮಲ; ಮಣಿ: ಬೆಲೆಬಾಳುವ ರತ್ನ; ಪ್ರಭೆ: ಕಾಂತಿ; ವಳಯ: ಆವರಣ; ರಶ್ಮಿ: ಕಾಂತಿ; ನಿಬದ್ಧ: ಕಟ್ಟಲ್ಪಟ್ಟ; ನೋಡು: ವೀಕ್ಷಿಸು;

ಪದವಿಂಗಡಣೆ:
ಹೊಳೆವುತಿದೆ +ದೂರದಲಿ +ರಜತಾ
ಚಲವ +ಕಂಡಂದದಲಿ +ಕೆಲದಲಿ
ಬಲವಿರೋಧಿಯ +ಪಟ್ಟದಾನೆ +ಸುರೆಂದ್ರ+ ನಂದನನೆ
ನಿಳಯವ್+ಅದೆ+ ನಸು+ದೂರದಲಿ +ಥಳ
ಥಳಿಸುವ್+ಅಮಳ +ಮಣಿ +ಪ್ರಭಾಪರಿ
ವಳಯ +ರಶ್ಮಿ+ ನಿಬದ್ಧವ್+ಅಮರಾವತಿಯ +ನೋಡೆಂದ

ಅಚ್ಚರಿ:
(೧) ಇಂದ್ರನನ್ನು ಬಲವಿರೋಧಿ, ಸುರೇಂದ್ರ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ರಜತಾಚಲವ ಕಂಡಂದದಲಿ ಕೆಲದಲಿ ಬಲವಿರೋಧಿಯ ಪಟ್ಟದಾನೆ

ಪದ್ಯ ೨೫: ಯುಧಿಷ್ಠಿರನು ಯಾರಿಗೆ ಸಮಾನನು?

ಅನುಜರನು ಹೇಳುವರೆ ಭೀಮಾ
ರ್ಜುನರು ವಧುವಾರೆಂಬರಮರಾಂ
ಗನೆಯರಿಗೆ ನೂರೆಂಟು ಮಡಿಯೀ ದ್ರೌಪದಾದೇವಿ
ಘನ ಸಹಾಯನು ಹವಣಿನವನೆಂ
ಬೆನೆ ಚತುರ್ದಶ ಭುವನಪತಿ ನೃಪ
ನಿನಗೆ ಪಾಡೇ ಪನ್ನಗೇಂದ್ರ ಸುರೇಂದ್ರರಿದಿರಿನಲಿ (ಆದಿ ಪರ್ವ, ೧೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧರ್ಮರಾಯನ ಬಗ್ಗೆ ನಾರದರು ತಮ್ಮ ಹೊಗಳಿಕೆಯ ಮಾತುಗಳನ್ನು ಮುಂದುವರೆಸುತ್ತಾ, ನಿನ್ನ ತಮ್ಮಂದಿರೋ ಬಲಶಾಲಿಗಳಾದ್ ಭೀಮಾರ್ಜುನರು, ಪತ್ನಿಯೋ ದೇವಾಮ್ಗನೆಯರಿಗೆ ನೂರೆಂಟು ಪಟ್ಟು ಹೆಚ್ಚಿನವಳಾದ ದ್ರೌಪದಿ, ನಿನ್ನ ಬೆಂಬಲಕ್ಕೆ ನಿಲ್ಲುವವನು ಹದಿನಾಲ್ಕು ಲೋಕದ ಒಡೆಯನಾದ ಶ್ರೀಕೃಷ್ಣ, ನಾಗೆಂದ್ರನಾಗಲಿ, ದೇವೆಂದ್ರನಾಗಲಿ ನಿನಗೆ ಸಮಾನರೆ?

ಅರ್ಥ:
ಅನುಜ: ತಮ್ಮ; ವಧು: ಹುಡುಗಿ, ಸ್ತ್ರೀ; ಅಂಗನೆ: ಲಲನೆ, ಚೆಲುವೆ; ಮಡಿ: ಪಟ್ಟು; ಘನ: ಮಹತ್ವವುಳ್ಳ, ಶ್ರೇಷ್ಠವಾದ; ಸಹಾಯ: ನೆರವು; ಹವಣಿನವ: ತೂಗುವವ; ಭುವನ: ಲೋಕ; ಭುವನಪತಿ: ರಾಜ; ನೃಪ: ರಾಜ; ಪಾಡೆ: ಸಮಾನರು; ಪನ್ನಗ: ಹಾವು; ಸುರ: ದೇವತೆಗಳು; ಸುರೇಂದ್ರ: ಇಂದ್ರ;

ಪದವಿಂಗಡಣೆ:
ಅನುಜರನು +ಹೇಳುವರೆ+ ಭೀಮಾ
ರ್ಜುನರು +ವಧುವಾರೆಂಬರ್+ಅಮರಾಂ
ಗನೆಯರಿಗೆ+ ನೂರೆಂಟು +ಮಡಿ+ಯೀ +ದ್ರೌಪದಾದೇವಿ
ಘನ+ ಸಹಾಯನು +ಹವಣಿನವನ್+ಎಂ
ಬೆನೆ +ಚತುರ್ದಶ +ಭುವನಪತಿ+ ನೃಪ
ನಿನಗೆ+ ಪಾಡೇ +ಪನ್ನಗೇಂದ್ರ +ಸುರೇಂದ್ರರಿದಿರಿನಲಿ

ಅಚ್ಚರಿ:
(೧) ಪಾತಾಳಲೋಕದ ನಾಗೇಂದ್ರ, ಸ್ವರ್ಗಲೋಕದ ದೇವೆಂದ್ರ – ಮೂರು ಲೋಕಗಳಲ್ಲು ನಿನಗೆ ಸಮಾನರಿಲ್ಲ ಎಂದು ಹೇಳಲು ಪನ್ನಗೇಂದ್ರ, ದೇವೆಂದ್ರರ ಬಳಕೆ