ಪದ್ಯ ೫೩: ಶಾಪದಿಂದ ಒಳಿತಾಗುವುದೆಂದು ಹೇಗೆ ಇಂದ್ರನು ಹೇಳಿದನು?

ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ (ಅರಣ್ಯ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಊರ್ವಶಿಯ ಶಾಪದಿಂದ ನಿನಗಾವ ಹಾನಿಯೂ ಇಲ್ಲ, ನಿಪುಣರಾದ ಶತ್ರುಗಳು ನಿನ್ನನ್ನು ಹುಡುಕುತ್ತಾ ಬಂದಾಗ ಅವರ ದೃಷ್ಟಿ ಬಾಣಗಳಿಂದ ನಪುಂಸಕತನದ ಕವಚವು ನಿನ್ನನ್ನು ಕಾಪಾಡುತ್ತದೆ. ಊರ್ವಶಿಯು ಶಾಪಕೊಟ್ಟದ್ದು ನಿನ್ನ ಪೂರ್ವ ಜನ್ಮದ ಪುಣ್ಯದಿಂದಲೇ ಆಯಿತು. ಅವಳ ಅಪಕಾರ ನಿಮ್ಮ ಪ್ರತಿಜ್ಞೆಯನ್ನುಳಿಸಿಕೊಡುತ್ತದೆ ಎನ್ನುವುದನ್ನು ತಿಳಿಯದವನು ನೀನು ಎಂದು ಇಂದ್ರನು ಅರ್ಜುನನನ್ನು ಸಂತೈಸಿದನು.

ಅರ್ಥ:
ಖೋಡಿ: ದುರುಳತನ; ಮಗ: ಸುತ; ಚಿಂತಿಸು: ಯೋಚಿಸು; ಅಜ್ಞಾತ: ತಿಳಿಯದ; ನೆರೆ: ಗುಂಪು; ಜೋಡು: ಜೊತೆ; ಜಾಣಾಯ್ಲ: ಬುದ್ಧಿವಂತ, ಜಾಣ; ರಿಪು: ವೈರಿ; ಜನ: ಮನುಷ್ಯರ ಗುಂಪು; ದೃಷ್ಟಿ: ನೋಟ; ಶರ: ಬಾಣ; ಹತಿ: ಹೊಡೆತ; ಕೂಡು: ಸೇರು; ಪುಣ್ಯ: ಸದಾಚಾರ; ಸುರಸತಿ: ಅಪ್ಸರೆ; ಅಪಕೃತಿ: ಕೆಟ್ಟ ಕಾರ್ಯ; ಭಾಷೆ: ನುಡಿ; ಬೀಡು: ವಸತಿ; ಸಲಹು: ಕಾಪಾಡು; ಅರಿ: ತಿಳಿ; ಸಾಹಿತ್ಯ: ಸಾಮಗ್ರಿ, ಸಲಕರಣೆ;

ಪದವಿಂಗಡಣೆ:
ಖೋಡಿ+ಇಲ್ಲೆಲೆ +ಮಗನೆ +ಚಿಂತಿಸ
ಬೇಡ +ನಿಮ್ಮ್+ಅಜ್ಞಾತದಲಿ +ನೆರೆ
ಜೋಡಲಾ +ಜಾಣಾಯ್ಲ +ರಿಪುಜನ+ ದೃಷ್ಟಿ +ಶರಹತಿಗೆ
ಕೂಡಿತ್+ಇದು +ಪುಣ್ಯದಲಿ+ ಸುರಸತಿ
ಮಾಡಿದ್+ಅಪಕೃತಿ +ನಿನ್ನ +ಭಾಷೆಯ
ಬೀಡ +ಸಲಹಿದುದ್+ಅರಿಯೆ+ ನೀ +ಸಾಹಿತ್ಯನಲ್ಲೆಂದ

ಅಚ್ಚರಿ:
(೧) ಶಾಪವು ಹೇಗೆ ಉಪಕಾರ ಎಂದು ಹೇಳುವ ಪರಿ – ನಿಮ್ಮಜ್ಞಾತದಲಿ ನೆರೆ ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
(೨) ಸುರಸತಿ, ಶರಹತಿ – ಪ್ರಾಸ ಪದಗಳು

ಪದ್ಯ ೨೧: ಧರ್ಮಜನು ಅರ್ಜುನನಿಗೆ ಯಾವ ಸಲಹೆಯನ್ನು ನೀಡಿದನು?

ಏಳು ನಿಷ್ಪ್ರತ್ಯೂಹದಲಿ ಶಶಿ
ಮೌಳಿ ತಲೆದೋರಲಿ ತದೀಯ ಶ
ರಾಳಿಗಳು ಸಿದ್ದಿಸಲಿ ಸೇರಲಿ ಶಿವನ ಕೃಪೆ ನಿನಗೆ
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣ ಕಮಲದಲಿ (ಅರಣ್ಯ ಪರ್ವ, ೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನಿನ್ನು ಎದ್ದು ಹೊರಡು, ಶಿವನು ನಿನಗೆ ಯಾವ ಅಡಚಣೆಗಳಿಲ್ಲದ ಪ್ರತ್ಯಕ್ಷನಾಗಲಿ, ಅವನ ಬಾಣಗಳು ನಿನಗೆ ಸಿದ್ಧಿಸಲಿ, ಶಿವನು ನಿನ್ನ ಮೇಲೆ ಕೃಪಮಾಡಲಿ, ತಪಾಸು ಮಾಡುವಾಗ ಅಪ್ಸರೆಯರಿಗೆ ಮನಸೋತು ಬೆರೆಯಬೇಡ. ನೀನು ಶಿವನ ಚರಣಕಮಲಗಳಲ್ಲೇ ಮನಸ್ಸನ್ನು ನಿಲ್ಲಿಸು, ಆಗ ನಿನಗೆ ಶಿವನ ಬಾಣಗಳು ಸಿದ್ಧಿಸುವವು ಎಂದು ಹೇಳಿದನು

ಅರ್ಥ:
ಏಳು: ಮೇಲೇಳು; ಪ್ರತ್ಯೂಹ: ಅಡ್ಡಿ, ಅಡಚಣೆ; ಶಶಿ: ಚಂದ್ರ; ಮೌಳಿ: ತಲೆ; ತಲೆ: ಶಿರ; ತೋರು: ಗೋಚರ, ಕಾಣಿಸು; ಶರಾಳಿ: ಬಾಣಗಳ ಗುಂಪು; ಸಿದ್ಧಿಸು: ಈಡೇರು, ನೆರವೇರು; ಸೇರು: ತಲುಪು, ಮುಟ್ಟು; ಕೃಪೆ: ದಯೆ; ಸೋಲು: ಪರಾಭವ; ಸುರಸತಿ: ಅಪ್ಸರೆ; ಸತಿ: ಹೆಣ್ಣು; ಸುರ: ದೇವತೆ; ಸಮ್ಮೇಳ: ಜೊತೆಗೂಡು; ಮೇಳ: ಕೂಡುವಿಕೆ; ಕೈ: ಹಸ್ತ; ಕೈಮೇಳ: ನೆರವೇರಿಸು, ಸಿದ್ಧಿಸು; ಕಾಮ: ಮನ್ಮಥ; ವೈರಿ: ಶತ್ರು; ಕಾಮವೈರಿ: ಶಿವ; ಚರಣ: ಪಾದ; ಕಮಲ: ಪದ್ಮ;

ಪದವಿಂಗಡಣೆ:
ಏಳು +ನಿಷ್ಪ್ರತ್ಯೂಹದಲಿ +ಶಶಿ
ಮೌಳಿ+ ತಲೆದೋರಲಿ +ತದೀಯ +ಶ
ರಾಳಿಗಳು +ಸಿದ್ದಿಸಲಿ+ ಸೇರಲಿ+ ಶಿವನ+ ಕೃಪೆ +ನಿನಗೆ
ಸೋಲದಿರು+ ಸುರಸತಿಯರಿಗೆ+ ಸ
ಮ್ಮೇಳವಾಗದಿರ್+ಅವರೊಡನೆ +ಕೈ
ಮೇಳವಿಸುವುದು +ಕಾಮವೈರಿಯ+ ಚರಣ +ಕಮಲದಲಿ

ಅಚ್ಚರಿ:
(೧) ಮೌಳಿ, ತಲೆ – ಸಮನಾರ್ಥಕ ಪದ
(೨) ಅರ್ಜುನನಿಗೆ ಎಚ್ಚರಿಸುವ ಪರಿ – ಸೋಲದಿರು ಸುರಸತಿಯರಿಗೆ ಸಮ್ಮೇಳವಾಗದಿರವರೊಡನೆ
(೩) ಒಳ್ಳೆಯದಾಗಲಿ ಎಂದು ಹೇಳುವ ಪರಿ – ಸೇರಲಿ ಶಿವನ ಕೃಪೆ ನಿನಗೆ
(೪) ಶಶಿಮೌಳಿ, ಕಾಮವೈರಿ, ಶಿವ – ಶಂಕರನ ಹಲವು ನಾಮಗಳು

ಪದ್ಯ ೧೦೨: ಕುಂತಿಯು ತನ್ನ ಅರಮನೆಗೆ ಯಾವ ವಸ್ತುಗಳನ್ನು ತಂದಳು?

ಸುರಪನೈರಾವತವನೇರಿಯೆ
ಪುರದ ಬೀದಿಗಳೊಳಗೆ ಬಂದಳು
ಕರಿನಗರಕೇರಿಯಲಿ ನಡೆದುದು ಸಕಲಜನನಿಕರ
ಅರಸಿ ಸುರಸತಿಯರಿಗೆ ಕೊಟ್ಟಳು
ಹರುಷದಿಂಬಾಗಿನವ ನಿಜಮಂ
ದಿರಕೆ ತಂದಳು ಸುರಭಿ ಸಹ ಸುರಸತಿಯರೊಡಗೂಡಿ (ಆದಿ ಪರ್ವ, ೨೧ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಐರಾವತನ್ನೇರಿ ಗೌರಿವ್ರತವನ್ನು ಮಾಡಿದ ನಂತರ, ಕುಂತಿಯು ಐರಾವತದ ಮೇಲೆಯೆ ಕುಳಿತು ಹಸ್ತಿನಾಪುರದ ಬೀದಿಗಳಲ್ಲಿ ಸಂಚರಿಸಿದಳು. ಹಸ್ತಿನಾಪುರದ ಸಮಸ್ತ ಜನರು ಆಕೆಯ ಸುತ್ತಮುತ್ತ ನಡೆದರು, ಕುಂತಿಯು ದೇವತಾಸ್ತ್ರಿಯರಿಗೆಲ್ಲಾ ಬಾಗಿನವನ್ನು ನೀಡಿದಳು, ಕಾಮಧೇನುವೆ ಮೊದಲಾದ ಸಮಸ್ತ ದೇವತಾವಸ್ತುಗಳನ್ನು ತನ್ನ ಅರಮನೆಗೆ ಕರೆತಂದಳು.

ಅರ್ಥ:
ಸುರಪ: ಇಂದ್ರ; ಏರು: ಹತ್ತು; ಪುರ: ಊರು; ಬೀದಿ: ರಸ್ತೆ; ಬಂದು: ಆಗಮಿಸು; ಕರಿ: ಆನೆ; ನಗರ: ಊರು; ಕರಿನಗರ: ಹಸ್ತಿನಾಪುರ; ಕೇರಿ: ಬೀದಿ,ಓಣಿ; ಸಕಲ: ಎಲ್ಲಾ; ನಿಕರ: ಗುಂಪು; ಅರಸಿ: ರಾಣಿ; ಸುರಸತಿ: ಅಪ್ಸರೆಯರು; ಬಾಗಿನ: ಕಾಣಿಕೆ, ಉಡುಗೊರೆ; ನಿಜಮಂದಿರ: ತನ್ನ ಅರಮನೆ; ಸುರಭಿ: ಕಾಮಧೇನು; ಸಹ: ಜೊತೆ; ಸುರಸತಿ: ಅಪ್ಸರೆ;

ಪದವಿಂಗಡಣೆ:
ಸುರಪನ್+ಐರಾವತವನ್+ಏರಿಯೆ
ಪುರದ+ ಬೀದಿಗಳ್+ಒಳಗೆ +ಬಂದಳು
ಕರಿನಗರ+ಕೇರಿಯಲಿ +ನಡೆದುದು +ಸಕಲ+ಜನನಿಕರ
ಅರಸಿ +ಸುರಸತಿಯರಿಗೆ+ ಕೊಟ್ಟಳು
ಹರುಷದಿಂ+ಬಾಗಿನವ +ನಿಜಮಂ
ದಿರಕೆ +ತಂದಳು +ಸುರಭಿ +ಸಹ +ಸುರಸತಿಯರ್+ಒಡಗೂಡಿ

ಅಚ್ಚರಿ:
(೧) “ಸ” ಕಾರದ ತ್ರಿವಳಿ ಪದಗಳು – ಸುರಭಿ ಸಹ ಸುರಸತಿ
(೨) ಹಸ್ತಿನಾಪುರದ ಬೀದಿಗಳಲ್ಲಿ ಎಂದು ಹೇಳಲು – ಕರಿನಗರಕೇರಿ ಎಂಬ ಪ್ರಯೋಗ

ಪದ್ಯ ೯೯: ಕುಂತಿ ನಡೆಸಿದ ಗಜಗೌರಿ ಉತ್ಸವದ ಪರಿ ಹೇಗಿತ್ತು?

ಸುರಭಿಕರೆದರೆ ಧರಣಿ ದಣಿದುದು
ನೆರೆದಜನ ನೆರೆವುಂಡು ದಣಿದುದು
ಸುರತರುವಿನಶನದಲಿ ಲೋಕದ ಬಾಯ ಕಡೆಬಿಟ್ಟು
ಸುರರ ಸತಿಯರ ಕಂಡು ಕಂಗಳು
ಹಿರಿದು ದಣಿದುವು ಹೇಳಲೇನದ
ನರಸ ಕೇಳೈ ಕುಂತಿದೇವಿಯ ನೋಂಪಿಯುತ್ಸಹವ (ಆದಿ ಪರ್ವ, ೨೧ ಸಂಧಿ, ೯೯ ಪದ್ಯ)

ತಾತ್ಪರ್ಯ:
ವ್ರತಾಚರಣೆಯು ಕೊನೆಗೊಳ್ಳುತ್ತಿದ್ದಂತೆ ಎಲ್ಲರಲ್ಲೂ ಸಂತಸ ಮೂಡಿತ್ತು. ಕಾಮಧೇನುವು ಹಾಲನ್ನು ಕರೆಯಲು ಭೂಮಿ ತೃಪ್ತವಾಯಿತು, ಸೇರಿದ ಜನರೆಲ್ಲರೂ ಮೃಷ್ಟಾನ ಭೋಜನದಿಂದ ತೃಪ್ತರಾದರು, ಬೇಡಿದುದನ್ನು ನೀಡುವ ಕಲ್ಪವೃಕ್ಷವು ಬೇಡಿದುದನ್ನೆಲ್ಲಾ ನೀಡಿತು, ಅಪ್ಸರೆಯರನ್ನು ಕಂಡು ಕಣ್ಣು ತೃಪ್ತಿಹೊಂದಿತು, ಹೀಗೆ ಕುಂತೀದೇವಿಯ ವ್ರತದ ಉತ್ಸವವನ್ನು ಹೇಗೆಂದು ವರ್ಣಿಸಲಿ ರಾಜ ಜನಮೇಜಯ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಸುರಭಿ:ದೇವಲೋಕದ ಹಸು, ಕಾಮಧೇನು; ಕರೆ:ಹಿಂಡು (ಹಾಲನ್ನು), ಒದಗಿಸು; ದಣಿ:ತೃಪ್ತಿಹೊಂದು; ನೆರೆ: ಹೆಚ್ಚಳ, ಅತಿಶಯ; ಜನ: ಮನುಷ್ಯ; ಉಂಡು: ಊಟಮಾಡು; ಸುರತರು: ದೇವಲೋಕದ ಮರ, ಕಲ್ಪವೃಕ್ಷ; ಅಶನ: ಆಹಾರ, ಅನ್ನ; ಲೋಕ: ಜಗತ್ತು; ಬಾಯ:ಮುಖದ ಅಂಗ; ಸುರ:ದೇವತೆ; ಸತಿ: ಸ್ತ್ರೀ; ಕಂಗಳು: ಕಣ್ಣು,ನಯನ; ಹಿರಿ: ಹೊರಕ್ಕೆ ಎಳೆ,ಸೆಳೆ; ಅರಸ: ರಾಜ; ಕೇಳು: ಆಲಿಸು; ನೋಂಪು: ವ್ರತ; ಉತ್ಸವ: ಹಬ್ಬ;

ಪದವಿಂಗಡಣೆ:
ಸುರಭಿ+ಕರೆದರೆ +ಧರಣಿ +ದಣಿದುದು
ನೆರೆದಜನ +ನೆರೆ+ವುಂಡು +ದಣಿದುದು
ಸುರತರುವಿನ್+ಅಶನದಲಿ +ಲೋಕದ +ಬಾಯ +ಕಡೆಬಿಟ್ಟು
ಸುರರ +ಸತಿಯರ +ಕಂಡು +ಕಂಗಳು
ಹಿರಿದು +ದಣಿದುವು +ಹೇಳಲೇನ್+ಅದನ್
ಅರಸ+ ಕೇಳೈ +ಕುಂತಿದೇವಿಯ +ನೋಂಪಿ+ಯುತ್ಸಹವ

ಅಚ್ಚರಿ:
(೧) ದಣಿದುದು – ೧, ೨ ಸಾಲಿನ ಕೊನೆ ಪದ, ದಣಿ ಪದ ೫ ಸಾಲಿನಲ್ಲೂ ಪ್ರಯೋಗ
(೨) ನೆರೆ – ೨ ಸಾಲಿನ ಮೊದಲೆರಡು ಪದದ ಮೊದಲನೆ ಪದ, ನೆರೆದಜನ, ನೆರೆಯುಂಡು
(೩) ೪ ಸಾಲಿನಲ್ಲಿ ಸ,ಕ ಅಕ್ಷರಗಳ ಜೋಡಿ ಪದಗಳ ಬಳಕೆ – ಸುರರ ಸತಿಯರ; ಕಂಡು ಕಂಗಳು
(೪) ಸುರಭಿ – ಕಾಮಧೇನು, ಸುರತರು – ಕಲ್ಪವೃಕ್ಷ, ಸುರಸತಿ – ಅಪ್ಸರೆ – “ಸುರ” ಪದದ ಬಳಕೆ