ಪದ್ಯ ೧೨: ಜನರು ಪಾಂಡವರನ್ನು ಕಂಡು ಏನು ನುಡಿದರು?

ವಲಲ ಕಂಕ ಬೃಹನ್ನಳೆಯ ಮೈ
ಸುಳಿವ ಹೋಲುವರೆಂದು ಕೆಲಬರು
ಕೆಲರಿದೆತ್ತಣ ನರರು ತೆಗೆ ಸುರಲೋಕಪಾಲಕರು
ತಿಳಿಯಲರಿದೆಮಗೆಂದು ಕೆಲಬರು
ತಳವೆಳಗುಗೊಳುತಿರಲು ಮಂದಿಯ
ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈ ಮುಗಿದ (ವಿರಾಟ ಪರ್ವ, ೧೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವರ ಕ್ಷಾತ್ರತೇಜಸ್ಸನ್ನು ನೋಡಿದ ಪರಿವಾರದವರಲ್ಲಿ ಕೆಲವರು, ಇವರು ಕಂಕ, ವಲಲ, ಬೃಹನ್ನಳೆಯನ್ನು ಹೋಲುವರಲ್ಲಾ, ಎಂದು ಮಾತಾಡಿಕೊಂಡರು, ಇವರು ಮನುಷ್ಯರಲ್ಲ, ದೇವತೆಗಳು ಎಂದು ಕೆಲವರು ಹೇಳಲು, ಮಿಕ್ಕ ಜನರು ನಮಗೇನು ತಿಳಿಯುವುದಿಲ್ಲ ಎಂದು ಇನ್ನೂ ಕೆಲವರು ಮಾತಾಡಿಕೊಂಡರು, ಆಗ ಉತ್ತರನು ಜನಗಳನ್ನು ಅತ್ತಿತ್ತ ನೂಕಿ, ತಂದೆಗೆ ಕೈಮುಗಿದು ನಗುತ್ತಾ ಹೇಳಿದನು.

ಅರ್ಥ:
ಮೈ: ತನು; ಹೋಲು: ಸದೃಶವಾಗು; ನರ: ಮನುಷ್ಯ; ತೆಗೆ: ಈಚೆಗೆ ತರು; ಸುರಲೋಕ: ದೇವಲೋಕ; ಪಾಲಕ: ಒಡೆಯ; ತಿಳಿ: ಅರಿ; ಮಂದಿ: ಜನರು; ನೂಕು: ತಳ್ಳು; ನಗು: ಸಂತಸ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ವಲಲ +ಕಂಕ +ಬೃಹನ್ನಳೆಯ +ಮೈ
ಸುಳಿವ +ಹೋಲುವರೆಂದು +ಕೆಲಬರು
ಕೆಲರ್+ಇದೆತ್ತಣ +ನರರು +ತೆಗೆ +ಸುರಲೋಕ+ಪಾಲಕರು
ತಿಳಿಯಲ್+ಅರಿದ್+ಎಮಗೆಂದು +ಕೆಲಬರು
ತಳವೆಳಗುಗೊಳುತಿರಲು +ಮಂದಿಯ
ಕೆಲಕೆ+ ನೂಕಿಯೆ +ತಂದೆಗ್+ಉತ್ತರ +ನಗುತ +ಕೈ +ಮುಗಿದ

ಪದ್ಯ ೨೬: ಧರ್ಮಜನು ಮಾತಲಿಯನ್ನು ಏನು ಕೇಳಿದನು?

ಕುಶಲವೇ ದೇವೆಂದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರನಗರಿ ನಿರ್ಭಯವೆ
ದೆಸೆಯವರು ಮೂಲೆಗಳವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭಂಗಿಸದಲೇ ಹೇಳೆಂದನಾ ಭೂಪ (ಅರಣ್ಯ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇಂದ್ರನು ಚೆನ್ನಾಗಿದ್ದಾನೆಯೇ? ಆತನ ಪತ್ನಿಯರು ಸುಖವಾಗಿದ್ದಾರೆಯೇ? ರಾಕ್ಷಸರು ದೇವತೆಗಳ ಅಧೀನದಲ್ಲಿದ್ದಾರೆಯೇ? ಅಮರಾವತಿಗೆ ಯಾವ ಭಯವೂ ಇಲ್ಲ ತಾನೇ? ದಿಕ್ಪಾಲಕರೆಲ್ಲರೂ ಅವನ ಅಧೀನದಲ್ಲಿರುವರೇ? ದೇವಲೋಕದ ಸೌಖ್ಯವನ್ನು ಅತಿಶಯವಾದ ಇಂದ್ರಿಯ ಸುಖಮಗ್ನತೆಯು ಕೆಡಿಸುತ್ತಿಲ್ಲ ತಾನೇ? ಎಂದು ಧರ್ಮಜನು ಮಾತಲಿಯನ್ನು ಕೇಳಿದನು.

ಅರ್ಥ:
ಕುಶಲ: ಕ್ಷೇಮ; ದೇವೇಂದ್ರ: ಇಂದ್ರ; ಶಶಿವದನೆ: ಚಂದ್ರನಂತ ಮುಖವುಳ್ಳವರು; ಸುಖ: ನೆಮ್ಮದಿ; ರಾಕ್ಷಸ: ದಾನವ; ವಶ: ಅಧೀನ; ನಿರ್ಜರ: ದೇವತೆ; ನಗರ: ಪುರ; ನಿರ್ಭಯ: ನಿರ್ಭೀತಿ; ದೆಸೆ: ದಿಕ್ಕು; ಮೂಲೆ: ಅಂಚು, ಕೊನೆ; ಮನ್ನಿಸು: ಗೌರವಿಸು; ಸುರಲೋಕ: ಸ್ವರ್ಗ; ವ್ಯಸನ: ಗೀಳು, ಚಟ; ಭರ: ಹೆಚ್ಚಳ; ಭಂಗಿಸು: ಕೆಡಿಸು; ಭೂಪ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಕುಶಲವೇ +ದೇವೆಂದ್ರನ್+ಆತನ
ಶಶಿವದನೆಯರು+ ಸುಖಿಗಳೇ +ರಾ
ಕ್ಷಸರು +ವಶವರ್ತಿಗಳೆ+ ನಿರ್ಜರ+ನಗರಿ +ನಿರ್ಭಯವೆ
ದೆಸೆಯವರು +ಮೂಲೆಗಳವರು +ಮ
ನ್ನಿಸುವರೇ +ಸುರಲೋಕ+ ಸುಖವನು
ವ್ಯಸನಭರ+ ಭಂಗಿಸದಲೇ +ಹೇಳೆಂದನಾ +ಭೂಪ

ಅಚ್ಚರಿ:
(೧) ಹೆಂಡತಿಯರು ಎಂದು ಹೇಳುವ ಪರಿ – ಶಶಿವದನೆಯರು
(೨) ನಿ ಕಾರದ ಜೋಡಿ ಪದ – ನಿರ್ಜರನಗರಿ ನಿರ್ಭಯವೆ
(೩) ನಿರ್ಜರನಗರಿ, ಸುರಲೋಕ – ಸಮನಾರ್ಥಕ ಪದ

ಪದ್ಯ ೩೪: ಊರ್ವಶಿಯು ಯಾವ ತಾಪದಿಂದ ಬಳಲುತ್ತಿದ್ದಳು?

ತಿಳುಹಿದೊಡೆ ಸುರಲೋಕದವರತಿ
ಗಳಹೆಯರಲಾಯೆಂಬೆ ಮನ್ಮಥ
ಖಳಕಣಾ ನಿಷ್ಕರುಣಿ ನೀ ಸೌಭಾಗ್ಯಗರ್ವದಲಿ
ಒಲುಮೆಬಿದ್ದುದು ವಾಸಿಯಲಿ ಕಂ
ದೊಳಸುಗೊಂಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ನಾನು ಬಾಯಿ ಬಿಟ್ಟು ಹೇಳಿದರೆ, ಸ್ವರ್ಗಲೋಕದವರು ಬಾಯಿ ಬಡುಕಿಯರು ಎಂದು ಹೇಳುತ್ತೀಯ. ಆದರೆ ಕಾಮನು ಮಹಾ ನೀಚನು, ನೀನೋ ಮಹಾ ಸೌಭಾಗ್ಯಶಾಲಿ ಎಂಬ ಗರ್ವದಿಂದ ಕರುಣೆಯನ್ನೇ ಕಳೆದುಕೊಂಡಿರುವೆ. ನನಗಾದರೋ ಛಲ ಹುಟ್ಟಿದೆ. ಮನ್ಮಥನ ಪುಷ್ಪಬಾಣಗಳು ನನ್ನ ಅಂತರಂಗವನ್ನು ಹೊಕ್ಕಿವೆ, ನನ್ನ ಮನಸ್ಸು ಅಳುಕಿ ವಿರಹತಾಪಕ್ಕೆ ಪಕ್ಕಾಗಿದೆ ಎಂದು ಊರ್ವಶಿ ಹೇಳಿದಳು.

ಅರ್ಥ:
ತಿಳುಹಿ: ತಿಳಿಸು, ಗೋಚರಿಸು; ಸುರಲೋಕ: ಸ್ವರ್ಗ; ಗಳಹು: ಪ್ರಲಾಪಿಸು, ಹೇಳು; ಎಂಬೆ: ಹೇಳುವೆ; ಮನ್ಮಥ: ಕಾಮ; ಖಳ: ದುಷ್ಟ; ನಿಷ್ಕರುಣಿ: ದಯೆಯಿಲ್ಲದವ; ಸೌಭಾಗ್ಯ: ಅದೃಷ್ಟವಂತ; ಗರ್ವ: ಸೊಕ್ಕು, ಹೆಮ್ಮೆ; ಒಲುಮೆ: ಪ್ರೀತಿ; ವಾಸಿ: ಛಲ, ಹಠ; ಕಂದೊಳಸು: ಕಕ್ಕಾಬಿಕ್ಕಿಯಾಗು; ಕಾಮ: ಮನ್ಮಥ; ಶರ: ಬಾಣ; ಮನ: ಮನಸ್ಸು; ಅಳುಕು: ಹೆದರು; ಕೆಡಹು: ಅವ್ಯವಸ್ಥಿತವಾಗು, ಹದಗೆಡು; ವಿರಹ: ಅಗಲಿಕೆ, ವಿಯೋಗ; ತಾಪ: ಬಿಸಿ, ಶಾಖ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ತಿಳುಹಿದೊಡೆ +ಸುರಲೋಕದವರ್+ಅತಿ
ಗಳಹೆಯರಲಾ+ಎಂಬೆ +ಮನ್ಮಥ
ಖಳ+ಕಣಾ +ನಿಷ್ಕರುಣಿ+ ನೀ +ಸೌಭಾಗ್ಯ+ಗರ್ವದಲಿ
ಒಲುಮೆ+ಬಿದ್ದುದು +ವಾಸಿಯಲಿ +ಕಂ
ದೊಳಸುಗೊಂಡುದು+ ಕಾಮಶರ+ ಮನವ್
ಅಳುಕೆ +ಕೆಡಹಿತು+ ವಿರಹ+ತಾಪದಲ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಮನ್ಮಥನನ್ನು ವರ್ಣಿಸುವ ಪರಿ – ಮನ್ಮಥ ಖಳಕಣಾ ನಿಷ್ಕರುಣಿ
(೨) ಊರ್ವಶಿಯನ್ನು ಆವರಿಸಿದ ತಾಪ – ಕಾಮಶರ ಮನವಳುಕೆ ಕೆಡಹಿತು ವಿರಹತಾಪದಲ್

ಪದ್ಯ ೧೦೩: ಚಿತ್ರಸೇನನು ಊರ್ವಶಿಗೆ ಏನು ಹೇಳಿದನು?

ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ
ಸೋತಡೆಯು ದಿಟಭಂಗವಲ್ಲ ಪು
ರಾತನದ ನಳನಹುಷ ಭರತ ಯ
ಯಾತಿ ನೃಪರೊಳಗೀತನಗ್ಗಳನಬಲೆ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಚಿತ್ರಸೇನನು ಅರ್ಜುನನು ಉತ್ತಮ ದೀರೋದಾತ್ತ ನಾಯಕ, ನೀಣು ಸ್ವರ್ಗದಲ್ಲಿ ಮಹಾ ಪ್ರಸಿದ್ಧೆಯಾಗಿರುವವಳು. ನಾವು ನಿಮ್ಮ ಪರಿವಾರದವರು, ನಾಚಿಕೆಯೇಕೆ? ಒಂದು ಪಕ್ಷ ಸೋತರೂ ಅವಮಾನವೇನೂ ಆಗುವುದಿಲ್ಲ, ಹಿಂದಿನ ನಳ, ನಹುಷ, ಭರತ, ಯಯಾತಿ ಇವರಿಗಿಂತಲೂ ಇವನು ಹೆಚ್ಚಿನವನು ಎಂದು ಊರ್ವಶಿಗೆ ಹೇಳಿದನು.

ಅರ್ಥ:
ಉತ್ತಮ: ಶ್ರೇಷ್ಠ; ನಾಯಕ: ಒಡೆಯ; ವಿಖ್ಯಾತ: ಪ್ರಸಿದ್ಧಿ; ಸುರಲೋಕ: ಸ್ವರ್ಗ; ಅತಿಶಯ: ಹೆಚ್ಚಳ, ಅಸಾಧಾರಣ ಮಹಿಮೆ; ಪರಿವಾರ: ಸುತ್ತಲಿನವರು, ಪರಿಜನ; ಸೋತು: ಪರಾಭವ; ದಿಟ: ಸತ್ಯ; ಭಂಗ: ಮುರಿ, ಚೂರು; ಪುರಾತನ: ಹಳೆಯದು; ನೃಪ: ರಾಜ; ಅಗ್ಗ: ಶ್ರೇಷ್ಠ; ಅಬಲೆ: ಸ್ತ್ರೀ, ಹೆಣ್ಣು; ಕೇಳು: ಆಲಿಸು; ಲಜ್ಜ: ನಾಚಿಕೆ;

ಪದವಿಂಗಡಣೆ:
ಆತನ್+ಉತ್ತಮ +ನಾಯಕನು +ವಿ
ಖ್ಯಾತೆ +ನೀ +ಸುರಲೋಕದಲಿ+ ಲಜ್ಜ
ಅತಿಶಯವೇಕಿಲ್ಲಿ +ನಾವೇ +ನಿಮ್ಮ +ಪರಿವಾರ
ಸೋತಡೆಯು +ದಿಟ+ಭಂಗವಲ್ಲ +ಪು
ರಾತನದ +ನಳ+ನಹುಷ+ ಭರತ+ ಯ
ಯಾತಿ +ನೃಪರೊಳಗ್+ಈತನ್+ಅಗ್ಗಳನ್+ಅಬಲೆ +ಕೇಳೆಂದ

ಅಚ್ಚರಿ:
(೧) ಅರ್ಜುನನ ಹಿರಿಮೆ – ನೃಪರೊಳಗೀತನಗ್ಗಳನಬಲೆ ಕೇಳೆಂದ