ಪದ್ಯ ೨೪: ಅರ್ಜುನನ ಮನಸ್ಸೇಕೆ ದುಃಖಿಸಿತು?

ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮರ್ತ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿರ್ದರು ಕೃಷ್ಣಫಲುಗುಣರ (ದ್ರೋಣ ಪರ್ವ, ೧೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೂರಿಶ್ರವನ ಆತ್ಮಜ್ಯೋತಿಯು ದೇಹವನ್ನು ಬಿಟ್ಟು ಆಕಾಶಕ್ಕೆ ಹೋಯಿತು. ಮನುಷ್ಯರು, ದೇವತೆಗಳು ಸಾತ್ಯಕಿಯ ದುಷ್ಕರ್ಮದ ವಾಸನೆಯನ್ನು ಸುಡು ಎಂದರು. ಅರ್ಜುನನ ಮನ ಮಿಡಿದು ದುಃಖಿಸಿದನು. ಕುರುರಾಜರು ಶೋಕಸಾಗರದಲ್ಲಿ ಮುಳುಗಿ ಕೃಷ್ಣಾರ್ಜುನರನ್ನು ಬೈದರು.

ಅರ್ಥ:
ಒಡಲು: ದೇಹ; ಒಡೆ: ಸೀಳು; ಜ್ಯೋತಿ: ಬೆಳಕು, ಕಾಂತಿ; ಗಗನ: ಆಗಸ; ನಡೆ: ಚಲಿಸು; ಸುರ: ಅಮರ; ಮರ್ತ್ಯ: ಮನುಷ್ಯ; ಸುಡು: ದಹಿಸು; ದುಷ್ಕರ್ಮ: ಕೆಟ್ಟ ಕಾರ್ಯ; ವಾಸನೆ: ಬಯಕೆ, ಆಸೆ; ಹಿಡಿ: ಗ್ರಹಿಸು; ದುಗುಡ: ದುಃಖ; ಮನ: ಮನಸ್ಸು; ಮಿಡುಕು: ಅಲುಗಾಟ, ಚಲನೆ; ನೃಪ: ರಾಜ; ಶೋಕ: ದುಃಖ; ಕಡಲು: ಸಾಗರ; ಬೈವು: ಜರಿ; ಅದ್ದು: ತೋಯು;

ಪದವಿಂಗಡಣೆ:
ಒಡಲನ್+ಒಡೆದ್+ಆ+ ಜ್ಯೋತಿ +ಗಗನಕೆ
ನಡೆದುದ್+ಇತ್ತಲು +ಸುರರು +ಮರ್ತ್ಯರು
ಸುಡು +ಸುಡೆಂದುದು +ಸಾತ್ಯಕಿಯ +ದುಷ್ಕರ್ಮ+ವಾಸನೆಗೆ
ಹಿಡಿದ +ದುಗುಡದಲ್+ಅರ್ಜುನನು +ಮನ
ಮಿಡುಕಿದನು +ಕುರು+ನೃಪರು +ಶೋಕದ
ಕಡಲೊಳ್+ಅದ್ದರು +ಬೈವುತಿರ್ದರು +ಕೃಷ್ಣ+ಫಲುಗುಣರ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಒಡಲನೊಡೆದಾ ಜ್ಯೋತಿ ಗಗನಕೆನಡೆದುದ್
(೨) ಅರ್ಜುನನ ಮನಃಸ್ಥಿತಿ – ಹಿಡಿದ ದುಗುಡದಲರ್ಜುನನು ಮನಮಿಡುಕಿದನು

ಪದ್ಯ ೬೧: ಧರ್ಮಜನು ವಸುದೇವನಿಗೇನು ಹೇಳಿದ?

ಅರಸಿಯೈದೆತನಕ್ಕೆಯೆಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆಯೆಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯರೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯೊಳು ಮನ್ನಿಸಿದ (ವಿರಾಟ ಪರ್ವ, ೧೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು, ಮಾವ, ದ್ರೌಪದಿಯ ಮುತ್ತೈದೆ ಭಾಗ್ಯಕ್ಕೆ ನಮ್ಮ ಆಯುಷ್ಯಕ್ಕೆ, ರಾಜ್ಯದ ಸೊಗಸಿಗೆ ನಿಮ್ಮ ಮಗನಾದ ಈ ಕೃಷ್ಣನ ಕರುಣೆಯೇ ಕಾರಣ, ನಮಗೆ ದೇವತೆಗಳೂ ಸರಿಯಿಲ್ಲವೆಂದ ಮೇಲೆ, ಮನುಷ್ಯರು ಯಾವ ಲೆಕ್ಕ, ಎಂದು ವಸುದೇವನಿಗೆ ಹೇಳಿದನು.

ಅರ್ಥ:
ಅರಸಿ: ರಾಣಿ; ಐದು: ಬಂದು ಸೇರು; ಐದೆತನ: ಮುತ್ತೈದೆತನ; ಆಯುಷ್ಯ: ಜೀವಿತದ ಅವಧಿ; ರಾಜ್ಯ: ರಾಷ್ಟ್ರ; ಸಿರಿ: ಐಶ್ವರ್ಯ; ಸೊಂಪು: ಸೊಗಸು; ಮಗ: ಪುತ್ರ; ಹೊಣೆ: ಜವಾಬ್ದಾರಿ; ಸುರ: ದೈವ; ಮಿಕ್ಕ: ಉಳಿದ; ನರ: ಮನುಷ್ಯ; ಗಣ್ಯ: ಮಾನ್ಯ, ಪ್ರಮುಖ; ಅರಸ: ರಾಜ; ಮಧುರ: ಸಿಹಿ; ಉಕ್ತಿ: ಮಾತು; ಮನ್ನಿಸು: ಗೌರವಿಸು;

ಪದವಿಂಗಡಣೆ:
ಅರಸಿ+ಐದೆತನಕ್ಕೆ+ಎಮ್ಮ್
ಐವರ +ನಿಜಾಯುಷ್ಯಕ್ಕೆ+ರಾಜ್ಯದ
ಸಿರಿಯ +ಸೊಂಪಿಗೆ +ನಿಮ್ಮ +ಮಗನ್+ಈ+ ಕೃಷ್ಣ+ ಹೊಣೆ+ಎಮಗೆ
ಸುರರು +ಸರಿಯಿಲ್ಲೆಮಗೆ +ಮಿಕ್ಕಿನ
ನರರು +ಗಣ್ಯರೆ+ ಮಾವ +ಕೇಳೆಂದ್
ಅರಸ +ವಸುದೇವನನು+ ಮಧುರೋಕ್ತಿಯೊಳು +ಮನ್ನಿಸಿದ

ಅಚ್ಚರಿ:
(೧) ಸುರರು, ನರರು – ಪ್ರಾಸ ಪದ
(೨) ಅರಸ, ಅರಸಿ – ಜೋಡಿ ಪದಗಳು, ೧ -೬ ಸಾಲಿನ ಮೊದಲ ಪದ

ಪದ್ಯ ೪೮: ಪಾಂಡವರ ಬೀಡು ಕುರುಭೂಮಿಯಲ್ಲಿ ಹೇಗೆ ರಾರಾಜಿಸಿತು?

ಎರಡು ಬಾಗಿಲ ಸೂತ್ರದಲಿ ವಿ
ಸ್ತರಿಸಿದಂಗಡಿ ಸೋಮ ವೀಧಿಯ
ತರಣಿ ವೀಧಿಯ ಲವರವರ ಪಾಳೆಯಕೆ ಮುರಿವುಗಳ
ಸುರರು ಸೃಷ್ಟಿಸ ಬಾರದಿನ್ನೀ
ನರರುಗಳ ಪಾಡೇನು ಕೌಂತೇ
ಯರ ಸಮಗ್ರದ ಬೀಡು ಕುರುಭೂಮಿಯಲಿ ರಂಜಿಸಿತು (ಉದ್ಯೋಗ ಪರ್ವ, ೧೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಎರಡು ಬಾಗಿಲುಗಳಿರುವ ಬಿಡಾರದ ರಚನೆಯಾಗಿತ್ತು, ಒಂದು ಬಾಗಿಲು ಸೂರ್ಯವೀಧಿಯ ಮಾರ್ಗ, ಮತ್ತೊಂದಕ್ಕೆ ಚಂದ್ರವೀಧಿಯ ಮಾರ್ಗವೆಂದು ಕರೆಯಲಾಯಿತು. ಈ ಮಾರ್ಗದಲ್ಲಿ ಮುಂದುವರೆದರೆ ಅವರವರ ಪಾಳಯಕ್ಕೆ ಹೋಗವ ಹಾದಿ, ಹೀಗೆ ಸಮಗ್ರತೆಯನ್ನೊಳಗೊಂಡ ಭದ್ರವಾದ ಪಾಂಡವರ ಪಾಳೆಯದಂಥದನ್ನು ನಿರ್ಮಿಸಲು ದೇವತೆಗಳಿಗೂ ಅಸಾಧ್ಯವೆಂದ ಮೇಲೆ ಮನುಷ್ಯರ ಪಾಡೇನು? ಪಾಂಡವರ ಸಮಗ್ರ ಬೀಡು ಕುರುಭೂಮಿಯಲ್ಲಿ ರಾರಾಜಿಸಿತು.

ಅರ್ಥ:
ಎರಡು: ದ್ವಂದ್ವ, ಜೋಡಿ; ಬಾಗಿಲು: ಕವಾಟ; ಸೂತ್ರ: ಕ್ರಮ; ವಿಸ್ತರಿಸು: ಹರಡು; ಅಂಗಡಿ: ಬೀಡು; ಸೋಮ: ಚಂದ್ರ; ವೀಧಿ: ಮಾರ್ಗ, ದಾರಿ; ತರಣಿ: ಸೂರ್ಯ; ಪಾಳೆ: ಬಿಡಾರ, ಗೂಡಾರ; ಮುರಿ: ಸೀಳು, ಅಡ್ಡ; ಸುರರು: ದೇವತೆಗಳು; ಸೃಷ್ಟಿ: ರಚಿಸು; ನರ: ಮನುಷ್ಯ; ಪಾಡು: ಗತಿ; ಸಮಗ್ರ: ಒಟ್ಟಾರೆ; ಬೀಡು: ಆಲಯ, ಗೂಡಾರ; ರಂಜಿಸು: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಎರಡು +ಬಾಗಿಲ +ಸೂತ್ರದಲಿ +ವಿ
ಸ್ತರಿಸಿದ್+ಅಂಗಡಿ +ಸೋಮ +ವೀಧಿಯ
ತರಣಿ+ ವೀಧಿಯಲ್+ಅವರವರ +ಪಾಳೆಯಕೆ +ಮುರಿವುಗಳ
ಸುರರು +ಸೃಷ್ಟಿಸ ಬಾರದ್+ಇನ್ನೀ
ನರರುಗಳ+ ಪಾಡೇನು +ಕೌಂತೇ
ಯರ +ಸಮಗ್ರದ +ಬೀಡು +ಕುರುಭೂಮಿಯಲಿ +ರಂಜಿಸಿತು

ಅಚ್ಚರಿ:
(೧) ಸುರರು, ನರರು – ಪ್ರಾಸ ಪದಗಳು