ಪದ್ಯ ೨೬: ಇಂದ್ರನು ದೇವತೆಗಳನ್ನು ಹೇಗೆ ಹುರಿದುಂಬಿಸಿದನು?

ಹೊಗಲಿ ಸಮರಕೆ ಸ್ವಾಮಿದ್ರೋಹರು
ತೆಗೆಯಬೇಡೋ ಬೆನ್ನ ಲಾಂಕೆಗೆ
ಜಗದೊಡೆಯನೋ ಫಡಫಡಂಜದಿರೆನಲು ಸುರರಾಜ
ಉಗಿದ ಖಡುಗದ ತಿರುವಿನಂಬಿನ
ಬಿಗಿದ ಬಿಲ್ಲಿನ ಸುರಪನಿದಿರಿನೊ
ಳಗಣಿತಾಮರ ಭಟರು ಹೊಕ್ಕುದು ದೈತ್ಯಬಲದೊಳಗೆ (ಕರ್ಣ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೇವತೆಗಳು ಇಂದ್ರನನ್ನು ಬೈಯ್ಯುವುದನ್ನು ಕಂಡನಿಂದ್ರನು, ಎಲೋ ಸ್ವಾಮಿದ್ರೋಹಿಗಳೇ, ಯುದ್ಧಕ್ಕೆ ಮುನ್ನುಗ್ಗಿ, ನಮ್ಮ ಬೆಂಬಲಕ್ಕೆ ಜಗದೊಡೆಯನಾದ ಶಿವನೇ ಇದ್ದಾನೆ, ಹೆದರಬೇಡಿರಿ ಎಂದನು. ಆಗ ಖಡ್ಗಧಾರಿಗಳಾಗಿ, ಬಿಲ್ಲಿನ ತಿರುವಿನಲ್ಲಿ ಬಾಣವನ್ನು ಹೂಡಿ ದೇವತೆಗಳು ಸಮರಕ್ಕೆ ಮುನ್ನುಗ್ಗಿದರು.

ಅರ್ಥ:
ಹೊಗಲಿ: ನಡೆಯಿರಿ; ಸಮರ: ಯುದ್ಧ; ಸ್ವಾಮಿ: ಒಡೆಯ; ದ್ರೋಹ: ವಿಶ್ವಾಸಘಾತ, ವಂಚನೆ; ತೆಗೆ: ಹೊರಹಾಕು; ಬೆನ್ನ: ಹಿಂದೆ; ಲಾಂಕೆ: ಬೆಂಬಲ; ಜಗ: ಜಗತ್ತು; ಒಡೆಯ: ದೊರೆ, ನಾಯಕ; ಫಡಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಅಂಜದಿರಿ: ಹೆದರದಿರಿ; ಸುರರಾಜ: ದೇವತೆಗಳ ಒಡೆಯ (ಇಂದ್ರ); ಉಗಿ: ಹೊರಹಾಕು; ಖಡುಗ: ಕತ್ತಿ; ತಿರುವು: ಸುತ್ತು; ಅಂಬು: ಬಾಣ; ಬಿಗಿ: ಗಟ್ಟಿಯಾಗಿ ಕಟ್ಟು; ಬಿಲ್ಲು: ಧನಸ್ಸು; ಸುರಪ:ಇಂದ್ರ; ಇದಿರು: ಎದುರು; ಅಗಣಿತ: ಅಸಂಖ್ಯಾತ; ಅಮರ: ದೇವತೆಗಳು; ಭಟ: ಸೈನ್ಯ; ಹೊಕ್ಕು: ಸೇರು; ದೈತ್ಯ: ದಾನವ; ಬಲ: ಸೈನ್ಯ;

ಪದವಿಂಗಡಣೆ:
ಹೊಗಲಿ +ಸಮರಕೆ+ ಸ್ವಾಮಿದ್ರೋಹರು
ತೆಗೆಯಬೇಡೋ +ಬೆನ್ನ +ಲಾಂಕೆಗೆ
ಜಗದೊಡೆಯನೋ +ಫಡಫಡ್+ಅಂಜದಿರ್+ಎನಲು +ಸುರರಾಜ
ಉಗಿದ +ಖಡುಗದ +ತಿರುವಿನ್+ಅಂಬಿನ
ಬಿಗಿದ +ಬಿಲ್ಲಿನ +ಸುರಪನ್+ಇದಿರಿನೊಳ್
ಅಗಣಿತ+ಅಮರ +ಭಟರು +ಹೊಕ್ಕುದು +ದೈತ್ಯ+ಬಲದೊಳಗೆ

ಅಚ್ಚರಿ:
(೧) ಸುರರಾಜ, ಸುರಪ – ಇಂದ್ರನನ್ನು ಕರೆದ ಬಗೆ
(೨) ದೇವತೆಗಳು ಯುದ್ಧಕ್ಕೆ ಹೋದ ಪರಿ – ಉಗಿದ ಖಡುಗದ ತಿರುವಿನಂಬಿನ ಬಿಗಿದ ಬಿಲ್ಲಿನ