ಪದ್ಯ ೪೪: ಅರ್ಜುನನು ಏನೆಂದು ಚಿಂತಿಸಿದನು?

ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ
ಆಗಲಿದು ಸುರಭವನ ವಧುಗಳು
ನಾಗರಿಕರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆಂದ (ಅರಣ್ಯ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನು ಈ ಘಟನೆಯಿಂದ ಮೂಕನಾದನು. ಅವನ ಅಪಾರ ಧೈರ್ಯದಲ್ಲಿ ರಂಧ್ರವನ್ನು ಕೊರೆದಂತಾಯಿತು. ಅವನು ತಲೆಯನ್ನು ತೂಗಿ ನಾನಿರುವುದು ಸ್ವರ್ಗದಲ್ಲಿ, ಇಲ್ಲಿನ ಅಪ್ಸರೆಯರು ನಾಗರಿಕರು, ಇವರೆಲ್ಲಿ, ಕರ್ಮ ಭೂಮಿಯಾದ ಭಾರತವರ್ಷದವರು ನಾವೆಲ್ಲಿ? ಈ ಪ್ರಸಂಗ ವಿಧಿವಶದಿಂದ ಘಟಿಸಿತಲ್ಲವೇ? ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಮೂಗ: ಮಾತುಬರದವ; ಬಹಳ: ತುಂಬ; ಧೈರ್ಯ: ಎದೆಗಾರಿಕೆ, ಕೆಚ್ಚು; ಬೇಗಡೆ: ಕಾಗೆ ಬಂಗಾರ, ಮಿಂಚುವ ಬಣ್ಣ; ಬಿಡೆ: ತೊರೆ; ಬಿಗಿ: ಕಟ್ಟು; ಬೆರಗು: ಆಶ್ಚರ್ಯ; ಮೂಗು: ನಾಸಿಕ; ಅಂಗುಲಿ: ಬೆರಳು; ಒಲಿ: ಒಪ್ಪು; ಶಿರ: ತಲೆ; ಸುರ: ದೇವತೆ; ಭವನ: ಆಲಯ; ವಧು: ಹೆಣ್ಣು; ನಾಗರಿಕ: ಸಭ್ಯ; ಭೂಗತ: ಭೂಮಿಯ ಒಳಗಿರುವ; ಘಟಿಸು: ನಡೆದುದು; ವಿಧಿ: ಆಜ್ಞೆ, ಆದೇಶ;

ಪದವಿಂಗಡಣೆ:
ಮೂಗನಾದನು+ ಬಹಳ +ಧೈರ್ಯದ
ಬೇಗಡೆಯ +ಬಿಡೆ +ಬಿಗಿದ +ಬೆರಗಿನ
ಮೂಗಿನ್+ಅಂಗುಲಿಗಳ+ ಧನಂಜಯನ್+ಒಲೆದು +ನಿಜ+ಶಿರವ
ಆಗಲಿದು +ಸುರಭವನ +ವಧುಗಳು
ನಾಗರಿಕರ್+ಇವರೆತ್ತ+ ಭಾರತ
ಭೂಗತರು +ತಾವೆತ್ತಲ್+ಇದು +ಘಟಿಸಿದುದು +ವಿಧಿಯೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೇಗಡೆಯ ಬಿಡೆ ಬಿಗಿದ ಬೆರಗಿನ
(೨) ಅಪ್ಸರೆ ಎಂದು ಹೇಳಲು – ಸುರಭವನ ವಧುಗಳು
(೩) ಅರ್ಜುನನ ಸ್ಥಿತಿಯನ್ನು ಚಿತ್ರಿಸುವ ಪರಿ – ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ