ಪದ್ಯ ೨೮: ಕರ್ಣನೆಂಬ ಹೆಸರು ಹೇಗೆ ಬಂತು?

ಅರಸ ಕೇಳೈ ಕರ್ಣ ಪಾರಂ
ಪರೆಯೊಳೀತನ ಹೆಸರು ಜಗದಲಿ
ಹರಿದುದಲ್ಲಿಂ ಬಳಿಕಲೀತನ ನಾಮಕರನದಲಿ
ಸುರನರೋರಗ ನಿಕರವೇ ವಿ
ಸ್ತರಿಸಿದುದು ಕರ್ಣಾಭಿಧಾನವ
ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ (ಆದಿ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಮಗುವಿನ ಹೆಸರು ಕಿವಿಗಳಿಂದ ಕಿವಿಗಳಿಗೆ ಹರಡುತ್ತಾ ಹೋಯಿತು. ದೇವತೆಗಳೂ, ನಾಗರೂ, ಮನುಷ್ಯರೂ ಇವನನ್ನು ಕರ್ಣನೆಂದು ಕರೆದುದರಿಂದ ನಾಮಕರಣದಲ್ಲಿ ಅವನಿಗೆ ಕರ್ಣನೆಂದೇ ಹೆಸರಾಯಿತು. ಮಹಾಪರಾಕ್ರಮಿಯಾದ ಕರ್ನನು ಸೂತನ ಮನೆಯಲ್ಲಿ ಬೆಳೆಯುತ್ತಿದ್ದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪಾರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು; ಹೆಸರು: ನಾಮ; ಜಗ: ಪ್ರಪಂಚ; ಹರಿ: ಪ್ರವಹಿಸು; ಬಳಿಕ: ನಂತರ; ನಾಮಕರಣ: ಹೆಸರಿಡುವ ಉತ್ಸವ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಸುರನರೋರಗ: ಮೂರು ಲೋಕದಲ್ಲೂ; ನಿಕರ: ಗುಂಪು; ವಿಸ್ತರಿಸು: ಹರಡು; ಅಭಿಧಾನ: ಹೆಸರು; ಗುರು: ಶ್ರೇಷ್ಠ; ಪರಾಕ್ರಮಿ: ಶ್ರೂರ; ಬೆಳೆ: ವೃದ್ಧಿಸು, ಏಳಿಗೆ ಹೊಂದು; ಸೂತ: ರಥವನ್ನು ಓಡಿಸುವವ; ಭವನ: ಆಲಯ;

ಪದವಿಂಗಡಣೆ:
ಅರಸ +ಕೇಳೈ +ಕರ್ಣ +ಪಾರಂ
ಪರೆಯೊಳ್+ಈತನ +ಹೆಸರು +ಜಗದಲಿ
ಹರಿದುದ್+ಅಲ್ಲಿಂ +ಬಳಿಕಲ್+ಈತನ+ ನಾಮಕರಣದಲಿ
ಸುರನರೋರಗ+ ನಿಕರವೇ +ವಿ
ಸ್ತರಿಸಿದುದು +ಕರ್ಣ+ಅಭಿಧಾನವ
ಗುರುಪರಾಕ್ರಮಿ +ಬೆಳೆವುತಿರ್ದನು +ಸೂತ+ಭವನದಲಿ

ಅಚ್ಚರಿ:
(೧) ಮೂರುಲೋಕ ಎಂದು ಹೇಳಲು – ಸುರನರೋರಗ ಪದದ ಬಳಕೆ

ಪದ್ಯ ೭: ಹಿರಣ್ಯಕಶಿಪುವಿನ ಮರಣವು ಹೇಗಾಯಿತು?

ಮರಣವೆಂದಿಂಗಾಗದಂತಿರೆ
ವರವಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ (ಗದಾ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಹಿಂದೆ ಹಿರಣ್ಯಕಶಿಪುವು ತನಗೆ ಮರಣವೇ ಸಂಭವಿಸದಂತಹ ವರವನ್ನು ಪಡೆದು ದೇವತೆಗಳು ಮನುಷ್ಯರು ನಾಗರನ್ನು ಹೊಡೆದು ಗೆದ್ದು ಮೆರೆಯುತ್ತಿರಲು, ವಿಷ್ಣುವು ನರಸಿಂಹ ರೂಪದಿಂದ ಅವನ ಮಾಯೆಯನ್ನು ಗೆದ್ದನು.

ಅರ್ಥ:
ಮರಣ: ಸಾವು; ವರ: ಶ್ರೇಷ್ಠ; ಅಸುರ: ರಾಕ್ಷಸ; ಸುರ: ದೇವ; ಉರಗ: ಹಾವು; ವಿಭಾಡಿಸು: ನಾಶಮಾಡು; ಪದ್ಧತಿ: ಹೆಜ್ಜೆಯ ಗುರುತು; ಧರ್ಮ: ಧಾರಣೆ ಮಾಡಿದುದು; ಧರಧುರ: ಆರ್ಭಟ, ಕೋಲಾಹಲ; ಕೇಸರಿ: ಸಿಂಹ; ರೂಪ: ಆಕಾರ; ವಿಶ್ವ: ಜಗತ್ತು; ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಗೆಲಿದು: ಜಯಿಸು; ಮಾಯೆ: ಗಾರುಡಿ; ಅಭಿಯೋಗ: ಯುದ್ಧ, ಆಕ್ರಮಣ;

ಪದವಿಂಗಡಣೆ:
ಮರಣವ್+ಎಂದಿಂಗ್+ಆಗದಂತಿರೆ
ವರವಕೊಂಡು +ಹಿರಣ್ಯಕ+ಅಸುರ
ಸುರ+ನರ+ಉರಗರನು +ವಿಭಾಡಿಸಿ+ ಧರ್ಮಪದ್ಧತಿಗೆ
ಧರಧುರವ +ಮಾಡಿದಡೆ +ನರಕೇ
ಸರಿಯ +ರೂಪಿನೊಳ್+ಆದಿವಿಶ್ವಂ
ಭರನು +ಗೆಲಿದನು +ಮಾಯೆಯನು +ಮಾಯಾಭಿಯೋಗದಲಿ

ಅಚ್ಚರಿ:
(೧) ವಿಷ್ಣುವನ್ನು ಆದಿವಿಶ್ವಂಭರ ಎಂದು ಕರೆದಿರುವುದು
(೨) ಮೂರುಲೋಕ ಎಂದು ಹೇಳಲು – ಸುರನರೋರಗ ಪದದ ಬಳಕೆ

ಪದ್ಯ ೫೬: ಯಾರಿಗೆ ಕೃಷ್ಣನ ಪಾದ ಸೇವೆ ದೊರೆಯುತ್ತದೆ?

ಆರಿದಲೈ ಮುರವೈರಿ ಸನಕಾ
ದ್ಯರ ಸಮಾಧಿಗೆ ಸುಳಿಯದಂಘ್ರಿಯ
ದರುಶನದ ಫಲಭೋಗ ಸಾರಿದುದಸ್ಮದಾದ್ಯರಿಗೆ
ಸುರನರೋರಗರೊಳು ಕೃತಾರ್ಥರು
ನಿರುತ ತಾವಲ್ಲದೊಡೆ ನಿಮ್ಮಯ
ಸರಸಿಜಾಂಘ್ರಿಯ ಸೇವೆ ದೊರಕುವುದಾವ ಮುನಿಗಳಿಗೆ (ಉದ್ಯೋಗ ಪರ್ವ, ೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ಮಹಾಮುನಿಗಳಾದ ಸನಕಾದ್ಯರಿಗೂ ನಿಮ್ಮ ಪಾದದ ದರುಶನ ಭಾಗ್ಯ ದೊರೆಯದು, ಈಗ ಇಂತಹ ಭಾಗ್ಯ ಇಲ್ಲಿ ನೆರೆದ ಶ್ರೇಷ್ಠರಿಗೆ ದೊರಕಿದೆ. ದೇವ, ಮನುಷ್ಯ, ಉರಗ, (ಮೂರುಲೋಕಗಳಲ್ಲೂ) ಧನ್ಯರು ಸದಾ ಧರ್ಮಶ್ರದ್ಧೆಉಳ್ಳವರಿಗಲ್ಲದೆ ನಿಮ್ಮ ಚರಣಕಮಲದ ಸೇವೆ ಮತ್ತಾವ ಮುನಿಗಳಿಗೆ ದೊರಕುತ್ತದೆ?

ಅರ್ಥ:
ಆರ್: ಯಾರು; ಮುರವೈರಿ: ಕೃಷ್ಣ; ಆದಿ: ಮುಂತಾದ; ಸಮಾಧಿ: ಅಷ್ಟಾಂಗ ಯೋಗದಲ್ಲಿ ಕೊನೆಯ ಮೆಟ್ಟಿಲು, ತನ್ಮಯತೆ; ಸುಳಿ: ಕಾಣಿಸಿಕೊಳ್ಳು; ಅಂಘ್ರಿ: ಪಾದ; ದರುಶನ: ನೋಟ, ದೃಶ್ಯ; ಫಲ: ಪರಿಣಾಮ; ಭೋಗ: ಸಂತೋಷ; ಸಾರು: ಹರಡು; ಅಸ್ಮದ್: ಇಂದಿನ; ಆರ್ಯ: ಗೌರವಾರ್ಹ; ಸುರ: ದೇವತೆಗಳು; ನರ: ಮನುಷ್ಯರು; ಉರಗ: ಹಾವು; ಕೃತಾರ್ಥ: ಧನ್ಯ; ನಿರುತ: ಸದಾ ಧರ್ಮಶ್ರದ್ಧೆಉಳ್ಳವನು; ಸರಸಿಜ: ಕಮಲ; ಸೇವೆ: ಉಪಚಾರ; ದೊರಕು: ಪಡೆ; ಮುನಿ: ಋಷಿ; ಆದ್ಯ: ಮುಂತಾದವು;

ಪದವಿಂಗಡಣೆ:
ಆರ್+ಇದಲೈ +ಮುರವೈರಿ+ ಸನಕಾ
ದ್ಯರ+ ಸಮಾಧಿಗೆ+ ಸುಳಿಯದ್+ಅಂಘ್ರಿಯ
ದರುಶನದ+ ಫಲಭೋಗ +ಸಾರಿದುದ್+ಅಸ್ಮದ್+ಆದ್ಯರಿಗೆ
ಸುರ+ನರ+ಉರಗರೊಳು +ಕೃತಾರ್ಥರು
ನಿರುತ+ ತಾವಲ್ಲದೊಡೆ +ನಿಮ್ಮಯ
ಸರಸಿಜಾಂಘ್ರಿಯ +ಸೇವೆ +ದೊರಕುವುದಾವ+ ಮುನಿಗಳಿಗೆ

ಅಚ್ಚರಿ:
(೧) ಅಂಘ್ರಿ, ಅಸ್ಮದ್, ಆದ್ಯರು, ಆರಿದರೈ – ‘ಅ’ಕಾರದ ಪದಗಳು
(೨) ಅಂಘ್ರಿ – ೨ ಬಾರಿ ಪ್ರಯೋಗ
(೩) ಮೂರುಲೋಕ ಎಂದು ಹೇಳಲು – ಸುರನರೋರಗ ಪದದ ಬಳಕೆ

ಪದ್ಯ ೯: ಕುಮಾರವ್ಯಾಸರು ಲಕ್ಷ್ಮಿಯನ್ನು ಹೇಗೆ ಆರಾಧಿಸುತ್ತಾರೆ?

ಶರಧಿಸುತೆ ಸನಕಾದಿವಂದಿತೆ
ಸುರನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ
ಪರಮ ಕರುಣಾಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ (ಆದಿ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಸಮುದ್ರರಾಜನ ಮಗಳೇ, ಸನಕಾದಿ ಮುನಿಗಳಿಂದ ಪೂಜಿಸಲ್ಪಡುವವಳೆ, ಮೂರುಲೋಕಗಳಲ್ಲಿಯ ಎಲ್ಲರಿಗೂ ತಾಯಿಯಾಗಿರುವವಳೆ, ಸಜ್ಜನರನ್ನು ಪೊರೆಯುವವಳೆ, ಇಂದ್ರನೇ ಮೊದಲಾದ ಪ್ರಮುಖರು ಮತ್ತು ಮುನಿಗಳಿಂದ ಸ್ತುತಿಸಲ್ಪಡುವವಳೆ, ಕರುಣೆಯ ಸಾಗರವಾಗಿರುವವಳೆ, ಪಾವನದರಿತಳು, ಬ್ರಹ್ಮಾದಿಗಳಿಂದ ಪೂಜಿಸಲ್ಪಡುವವಳು ಆದ ಶ್ರೀಲಕ್ಷ್ಮಿಯು ನಮಗೆ ಹೆಚ್ಚಿನ ಸಂಪತ್ತನ್ನು ಕೊಡಲಿ.

ಅರ್ಥ:
ಶರಧಿ: ಸಾಗರ, ಸಮುದ್ರ; ಸುತೆ: ಮಗಳು; ಆದಿ: ಮುಂತಾದವರು; ವಂದಿತೆ: ಪೂಜಿಸಲ್ಪಡುವ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಮಾತೆ: ತಾಯಿ; ಸುಜನರ: ಸಜ್ಜನ; ಪೊರೆ: ಕಾಪಾಡು; ದಾತೆ: ಉದಾರಿ;ಸುರ: ದೇವತೆ; ಅಗ್ರಗಣ್ಯ: ಒಡೆಯ; ಮೌನಿ: ಋಷಿ; ಸ್ತುತ್ಯೆ: ಸ್ತುತಿಸಲ್ಪಡುವ; ಪರಮ: ಶ್ರೇಷ್ಠ; ಕರುಣ: ದಯೆ; ಸಿಂಧು: ಸಾಗರ; ಪಾವನ: ನಿರ್ಮಲ; ಚರಿತೆ: ಕಥೆ, ಇತಿಹಾಸ; ಪದ್ಮಜ: ಬ್ರಹ್ಮ; ಮುಖ್ಯ: ಹಿರಿಯ; ಸಕಲ: ಎಲ್ಲಾ; ಅಮರ: ದೇವತೆಗಳು; ಪೂಜಿತೆ: ಆರಾಧಿಸಲ್ಪಡುವ; ಕೊಡು: ನೀಡು; ಅಧಿಕ: ಹೆಚ್ಚು; ಸಂಪದ: ಐಶ್ವರ್ಯ;

ಪದವಿಂಗಡಣೆ:
ಶರಧಿಸುತೆ +ಸನಕಾದಿ+ವಂದಿತೆ
ಸುರ+ನರ+ಉರಗ+ ಮಾತೆ +ಸುಜನರ
ಪೊರೆವ+ ದಾತೆ +ಸುರ+ಅಗ್ರಗಣ್ಯ+ ಸುಮೌನಿ +ವರಸ್ತುತ್ಯೆ
ಪರಮ +ಕರುಣಾ+ಸಿಂಧು +ಪಾವನ
ಚರಿತೆ +ಪದ್ಮಜ +ಮುಖ್ಯ +ಸಕಲ
ಅಮರ +ಸುಪೂಜಿತೆ +ಲಕ್ಷ್ಮಿ +ಕೊಡುಗೆಮಗ್+ಅಧಿಕ+ ಸಂಪದವ

ಅಚ್ಚರಿ:
(೧) ಶರಧಿ, ಸಿಂಧು – ಸಾಗರದ ಸಮನಾರ್ಥಕ ಪದ
(೨) ಮೂರುಲೋಕದ ಮಾತೆ ಎಂದು ಹೇಳಲು ಸುರ (ಆಕಾಶ), ನರ (ಭೂಮಿ), ಉರಗ (ಪಾತಾಳ) ಸುರನರೋರಗ ಪದದ ಬಳಕೆ
(೩) “ಸು”ಕಾರದ ಪದಗಳು – ಸುಜನ, ಸುರಾಗ್ರಗಣ್ಯ, ಸುಮೌನಿ, ಸುಪೂಜಿತೆ