ಪದ್ಯ ೩: ಯಾರಿಗೆ ಪಟ್ಟಾಭಿಷೇಕವನ್ನು ಮಾಡಲಾಯಿತು?

ವರವಿವಾಹ ಮುಹೂರ್ತ ಸಮನಂ
ತರ ಸುಲಗ್ನದೊಳಖಿಳ ರಾಜ್ಯದ
ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ
ಸುರನದೀಸುತ ಪಾಂಡುವಿಗೆ ವಿ
ಸ್ತರಿಸಿದನು ಧೃತರಾಷ್ಟ್ರ ವಿದುರರ
ಪರಮಪರಿತೋಷಾನುಮತದಲಿ ಮೆರೆದುದಾ ವಿಭವ (ಆದಿ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ವಿವಾಹವಾದ ಮೇಲೆ ಒಳ್ಳೆಯ ಲಗ್ನದಲ್ಲಿ ಧೃತರಾಷ್ಟ್ರ ವಿದುರರ ಸಮ್ಮತಿಯಂತೆ ಪಾಂಡುವಿಗೆ ರಾಜ್ಯ ಪಟ್ಟಾಭಿಷೇಕವನ್ನು ನೆರವೇರಿಸಲಾಯಿತು.

ಅರ್ಥ:
ವರ: ಶ್ರೇಷ್ಠ; ವಿವಾಹ: ಮದುವೆ; ಮುಹೂರ್ತ: ಶುಭ ಸಮಯ; ಸಮನಂತರ: ಆನಂತರ; ಸುಲಗ್ನ: ಶುಭಮುಹೂರ್ತ; ಅಖಿಳ: ಎಲ್ಲಾ; ರಾಜ್ಯ: ರಾಷ್ಟ್ರ; ಧುರ: ಸಂಪತ್ತು; ನಿರ್ವಾಹಕ: ನಡೆಸುವ; ಪಟ್ಟಾಭಿಷೇಚನ: ರಾಜ್ಯಾಭಿಷೇಕ; ಸುರನದೀಸುತ: ಭೀಷ್ಮ; ಸುರನದಿ: ಗಂಗೆ; ಸುತ: ಪುತ್ರ; ವಿಸ್ತರಿಸು: ಹರಡು; ಪರಮ: ಶ್ರೇಷ್ಠ; ಪರಿತೋಷ: ಅತಿಯಾದ ಆನಂದ; ಅನುಮತ: ಒಪ್ಪಿಗೆ; ಮೆರೆ: ಶೋಭಿಸು; ವಿಭವ: ಸಿರಿ, ಸಂಪತ್ತು;

ಪದವಿಂಗಡಣೆ:
ವರ+ವಿವಾಹ +ಮುಹೂರ್ತ +ಸಮನಂ
ತರ +ಸುಲಗ್ನದೊಳ್+ಅಖಿಳ +ರಾಜ್ಯದ
ಧುರದ +ನಿರ್ವಾಹಕ +ಮಹಾ+ಪಟ್ಟಾಭಿಷೇಚನವ
ಸುರನದೀಸುತ +ಪಾಂಡುವಿಗೆ +ವಿ
ಸ್ತರಿಸಿದನು +ಧೃತರಾಷ್ಟ್ರ+ ವಿದುರರ
ಪರಮಪರಿತೋಷ+ಅನುಮತದಲಿ +ಮೆರೆದುದಾ +ವಿಭವ

ಅಚ್ಚರಿ:
(೧) ಮುಹೂರ್ತ, ಸುಲಗ್ನ – ಸಾಮ್ಯಾರ್ಥ ಪದ

ಪದ್ಯ ೪೭: ಶಲ್ಯನ ಸಾಮರ್ಥ್ಯವೆಂತಹದು?

ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸ ಹೇಳೆನುತ ತಾಗಿದನು ಕಲಿಪಾರ್ಥ (ಶಲ್ಯ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಷ್ಮನ ಬಾಣ ಪ್ರಯೋಗದ ಚಾತುರ್ಯ, ದ್ರೋಣನ ಶರಚಮತ್ಕಾರ, ಕರ್ಣನ ಎಸುಗೆಯ ವಿಸ್ತಾರ ಇವೆಲ್ಲವುಗಳ ಸಾರವು ಶಲ್ಯನಲ್ಲಿದೆ. ಅರಸನನ್ನು ರಕ್ಷಿಸಲು ಸಾತ್ಯಕಿ ನಿಲ್ಲಲಿ ಭೀಮ ಧೃಷ್ಟದ್ಯುಮ್ನರು ನೋಡುತ್ತಿರಲಿ ಎಂದು ಹೇಳಿ ಅರ್ಜುನನು ಶಲ್ಯನನ್ನಿದಿರಿಸಿದನು.

ಅರ್ಥ:
ಸುರನದೀಸುತ: ಭೀಷ್ಮ; ಶರ: ಬಾಣ; ಚಮತ್ಕೃತಿ: ಚಮತ್ಕಾರ, ಸೋಜಿಗ, ವಿಸ್ಮಯ; ಅಂಬು: ಬಾಣ; ಹರಹು: ವಿಸ್ತಾರ, ವೈಶಾಲ್ಯ; ಹೇರು: ಹೊರೆ, ಭಾರ; ದಳಪತಿ: ಸೇನಾಧಿಪತಿ; ಸೋನೆ: ಮಳೆ, ವೃಷ್ಟಿ; ಶರಸೋನೆ: ಬಾಣಗಳ ಮಳೆ; ಸಾರ: ತಿರುಳು, ಗುಣ; ದೊರೆ: ರಾಜ; ಸುಯ್ದಾನ: ರಕ್ಷಣೆ, ಕಾಪು; ಆದಿ: ಮುಂತಾದ; ನಿರೀಕ್ಷಿಸು: ತಾಳು; ತಾಗು: ಮುಟ್ಟು; ಕಲಿ: ಶೂರ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಸುರನದೀಸುತನ್+ಎಸುಗೆ +ದ್ರೋಣನ
ಶರಚಮತ್ಕೃತಿ +ಕರ್ಣನಂಬಿನ
ಹರಹು +ಹೇರಿತು +ದಳಪತಿಯ +ಶರಸೋನೆ +ಸಾರವಲಾ
ದೊರೆಯ +ಸುಯ್ದಾನದಲಿ +ಸಾತ್ಯಕಿ
ಯಿರಲಿ +ಧೃಷ್ಟದ್ಯುಮ್ನ +ಭೀಮಾ
ದ್ಯರ +ನಿರೀಕ್ಷಿಸ +ಹೇಳೆನುತ+ ತಾಗಿದನು+ ಕಲಿ+ಪಾರ್ಥ

ಅಚ್ಚರಿ:
(೧) ಶಲ್ಯನ ಶಕ್ತಿ – ಸುರನದೀಸುತನೆಸುಗೆ ದ್ರೋಣನ ಶರಚಮತ್ಕೃತಿ ಕರ್ಣನಂಬಿನ ಹರಹು ಹೇರಿತು ದಳಪತಿಯ

ಪದ್ಯ ೬: ಧರ್ಮಜನು ಕೃಷ್ಣನಿಗೆ ಏನು ಹೇಳಿದನು?

ಇರುಳು ಕೃಷ್ಣನ ಹೊರೆಗೆ ಬಂದನು
ಧರಣಿಪತಿ ದುಗುಡದಲಿ ನಿಜಸೋ
ದರರು ಸಹಿತ ಮುರಾರಿಯಂಘ್ರಿಗೆ ನಮಿಸಿ ಕೈಮುಗಿದು
ಸುರನದೀಸುತನಖಿಲ ಸೇನೆಯ
ನೊರಸಿದನು ನಮ್ಮಲ್ಲಿ ಖಾತಿಯ
ಧರಿಸಿದನು ಜಯವಧುವ ವರಿಸಿದ ದೇವ ಕೇಳೆಂದ (ಭೀಷ್ಮ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಒಂಬತ್ತನೆಯ ರಾತ್ರಿ ಧರ್ಮಜನು ತಮ್ಮಂದಿರೊಡನೆ ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿ ಕೈಮುಗಿದು, ಭೀಷ್ಮನು ನಮ್ಮ ಸೈನ್ಯವನ್ನು ನಾಶ ಮಾಡಿದನು. ನಮ್ಮ ಮೇಲೆ ಕೋಪಗೊಂಡಿದ್ದಾನೆ, ವಿಜಯಲಕ್ಷ್ಮಿಯನ್ನು ವರಿಸಿದ್ದಾನೆ, ದೇವ ನಮ್ಮಳಲನ್ನು ಕೇಳು ಎಂದು ಧರ್ಮಜನು ಹೇಳಿದನು.

ಅರ್ಥ:
ಇರುಳು: ರಾತ್ರಿ; ಹೊರೆ: ಆಶ್ರಯ, ಹತ್ತಿರ; ಬಂದು: ಆಗಮಿಸು; ಧರಣಿಪತಿ: ರಾಜ; ದುಗುಡ: ದುಃಖ; ಸೋದರ: ಅನುಜ; ಸಹಿತ: ಜೊತೆ; ಮುರಾರಿ: ಕೃಷ್ಣ; ಅಂಘ್ರಿ: ಪಾದ; ನಮಿಸು: ಎರಗು; ಕೈಮುಗಿ: ನಮಸ್ಕರಿಸು; ಸುರನದೀಸುತ: ಭೀಷ್ಮ; ಸುತ: ಮಗ; ಸುರನದೀ: ಗಂಗೆ; ಸೇನೆ: ಸೈನ್ಯ; ಒರಸು: ನಾಶ; ಖಾತಿ: ಕೋಪ; ಧರಿಸು: ಹಿಡಿ; ಜಯವಧು: ವಿಜಯಲಕ್ಷ್ಮಿ; ವರಿಸು: ಕೈಹಿಡಿ, ಒಪ್ಪಿಕೊಳ್ಳು; ಕೇಳು: ಆಲಿಸು;

ಪದವಿಂಗಡಣೆ:
ಇರುಳು +ಕೃಷ್ಣನ +ಹೊರೆಗೆ+ ಬಂದನು
ಧರಣಿಪತಿ +ದುಗುಡದಲಿ +ನಿಜ+ಸೋ
ದರರು +ಸಹಿತ +ಮುರಾರಿ+ಅಂಘ್ರಿಗೆ +ನಮಿಸಿ +ಕೈಮುಗಿದು
ಸುರನದೀಸುತನ್+ಅಖಿಲ +ಸೇನೆಯನ್
ಒರಸಿದನು +ನಮ್ಮಲ್ಲಿ +ಖಾತಿಯ
ಧರಿಸಿದನು +ಜಯವಧುವ+ ವರಿಸಿದ+ ದೇವ +ಕೇಳೆಂದ

ಅಚ್ಚರಿ:
(೧) ಮುರಾರಿ, ದೇವ – ಕೃಷ್ಣನನ್ನು ಕರೆದ ಪರಿ
(೨) ಗೆಲ್ಲುತ್ತಿದ್ದಾನೆ ಎಂದು ಹೇಳುವ ಪರಿ – ಜಯವಧುವ ವರಿಸಿದ

ಪದ್ಯ ೬೦: ದುರ್ಯೋಧನನು ತನ್ನ ಪಾದಕ್ಕೆ ಬಿದ್ದುದನ್ನು ನೋಡಿ ಕೃಷ್ಣನು ಏನು ಹೇಳಿದನು?

ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ (ಉದ್ಯೋಗ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೂಮಿಯನ್ನಾಳುವ ರಾಜನು ಸಿಂಹಾಸನದ ಮೇಲಿರದೆ ಹೀಗೆ ನನ್ನ ಕಾಲ ಬಳಿ ಎರಗುವುದು ಸರಿಯೇ, ಅಯ್ಯೋ ತಾಪ್ಪಾಯಿತಲ್ಲ, ನಾವೆ ನಿಮ್ಮ ಬಳಿ ಬಂದು ಆಶೀರ್ವದಿಸುತ್ತಿದ್ದೆವು ಎಂದು ಹೇಳುತ್ತಾ ದುರ್ಯೋಧನನ ತಲೆಯನ್ನು ಸವರಿಸುತ್ತಾ ಮೇಲೇಳಿಸಿದನು. ಭೀಷ್ಮರು ತಮ್ಮ ಹಸ್ತವನ್ನು ಚಾಚಿ ಕೃಷ್ಣನ ಆಸನವನ್ನು ತೋರಲು, ಕೃಷ್ಣನು ತನ್ನ ಸಿಂಹಾಸನಕ್ಕೆ ಬರಲು ಕುರುಕುಲದ ಶ್ರೇಷ್ಠರಿಂದ ಸನ್ಮಾನವನ್ನು ಸ್ವೀಕರಿಸಿದನು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಸಿಂಹಾಸನ: ರಾಜರು ಕುಳಿತುಕೊಳ್ಳುವ ಆಸನ; ಮೇಲೆ: ಅಗ್ರಭಾಗ; ಬಹರು: ಬರುವುದು; ಹರಸು: ಆಶೀರ್ವದಿಸು; ತಪ್ಪು: ಸರಿಯಾಗದ; ಎತ್ತು: ಮೇಲೇಳಿಸು; ಮಸ್ತಕ: ಶಿರ, ತಲೆ; ಸುರನದಿ: ಗಂಗೆ; ಸುತ: ಮಗ; ಸುರನದೀಸುತ: ಭೀಷ್ಮ; ಕೈ: ಹಸ್ತ; ಕೈಗುಡಲು: ಹಸ್ತವನ್ನು ನೀಡಲು; ಕೇಸರಿ: ಸಿಂಹ; ಪೀಠ: ಆಸನ; ದೇವ: ಭಗವಂತ; ಬಂದು: ಆಗಮಿಸು; ಅಗ್ರಣಿ: ಶ್ರೇಷ್ಠರು; ಕುಲ: ವಂಶ; ಸನ್ಮಾನ: ಗೌರವ; ಕೈಕೊಳುತ: ಸ್ವೀಕರಿಸು;

ಪದವಿಂಗಡಣೆ:
ಧರಣಿಪತಿ +ಸಿಂಹಾಸನದ+ ಮೇ
ಲಿರದೆ +ಬಹರೇ +ನಾವು +ಬಂದೇ
ಹರಸುವೆವು +ತಪ್ಪಾವುದ್+ಎನುತ್+ಎತ್ತಿದನು +ಮಸ್ತಕವ
ಸುರನದೀಸುತ +ಕೈಗುಡಲು +ಕೇ
ಸರಿಯ +ಪೀಠಕೆ +ದೇವ +ಬಂದನು
ಕುರುಕುಲ+ಅಗ್ರಣಿಗಳ+ ಸುಸನ್ಮಾನವನು +ಕೈಕೊಳುತ

ಅಚ್ಚರಿ:
(೧) ಸಿಂಹಾಸನ, ಕೇಸರಿಯ ಪೀಠ – ಸಮನಾರ್ಥಕ ಪದ

ಪದ್ಯ ೩೦: ವಿರಾಟ ದೇಶಕ್ಕೆ ಯಾರು ಪ್ರಯಾಣ ಮಾಡಿದರು?

ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವಂಟರೊಗ್ಗಿನಲಿ (ವಿರಾಟ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವತ್ತಿನ ಆಸ್ಥಾನ ಮುಗಿಯಿತು. ಮರುದಿನ ಒಳ್ಳೆಯ ಗಳಿಗೆಯಲ್ಲಿ ಸುಶರ್ಮನೇ ಮೊದಲಾದವರೊಡನೆ ರಾಜನು ಹೊರಟನು. ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪಾಚಾರ್ಯ, ಕರ್ಣ ಮೊದಲಾದ ಪ್ರಮುಖರು ಚತುರಂಗ ಸೈನ್ಯದ ಪದಾತಿಗಳೊಡನೆ ಹೊರಟರು.

ಅರ್ಥ:
ಹರಿದು: ಚದುರು; ಓಲಗ: ದರ್ಬಾರು; ಮರುದಿವಸ: ಮಾರನೆಯ ದಿನ;ದಿವಸ: ವಾರ; ಗುಡಿ: ಕುಟೀರ, ಮನೆ; ಹೊರಗೆ: ಆಚೆಗೆ; ಹೊಯ್ದ: ಹೊಡೆದ; ಮುಹೂರ್ತ: ಗಳಿಗೆ; ಅರಸ: ರಾಜ; ಹೊರವಂಟು: ಹೊರಟು; ಆದಿ: ಮುಂತಾದ; ಗಡಣ:ಸಮೂಹ; ಸುರ: ದೇವತೆ; ನದಿ: ಸರೋವರ; ಸುತ: ಮಗ; ಸುರನದಿ: ಗಂಗೆ; ಸುತ: ಪುತ್ರ; ಪ್ರಧಾನ: ಮುಖ್ಯ; ಕರಿ: ಆನೆ; ತುರಗ: ಕುದುರೆ; ರಥ: ಬಂಡಿ; ಪತ್ತಿ: ಪದಾತಿ, ಕಾಲು ನಡಗೆಯವನು; ಒಗ್ಗು: ಗುಂಪು;

ಪದವಿಂಗಡಣೆ:
ಹರಿದುದ್+ಓಲಗ +ಮರುದಿವಸ +ಗುಡಿ
ಹೊರಗೆ +ಹೊಯ್ದವು +ಸನ್+ಮುಹೂರ್ತದೊಳ್
ಅರಸ +ಹೊರವಂಟನು +ಸುಶರ್ಮಾದಿಗಳ+ ಗಡಣದಲಿ
ಸುರನದೀಸುತ+ ಕರ್ಣ +ಕೃಪ +ಗುರು
ಗುರುಸುತಾದಿ +ಮಹಾ+ಪ್ರಧಾನರು
ಕರಿ+ತುರಗ +ರಥ+ಪತ್ತಿಯಲಿ +ಹೊರವಂಟರ್+ಒಗ್ಗಿನಲಿ

ಅಚ್ಚರಿ:
(೧) ಗುರು ಗುರುಸುತ – ಗುರು ಪದದ ಬಳಕೆ
(೨) ಭೀಷ್ಮರನ್ನು ಸುರನದೀಸುತ ಎಂದು ಕರೆದಿರುವುದು – ೨ ಪದ ‘ರ’ ಕಾರದಲ್ಲಿ ಬರುವಹಾಗೆ