ಪದ್ಯ ೪೮: ದ್ರೋಣನ ಆಗಮನವನ್ನು ಯಾವು ಋತುವಿಗೆ ಕವಿ ಹೋಲಿಸಿದ್ದಾರೆ?

ಬಿಗಿದ ಝಲ್ಲರಿ ಮುಗಿಲ ಹೊಸ ಕೈ
ದುಗಳ ಮಿಂಚಿನ ಮಕುಟಮಣಿ ಕಾಂ
ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ
ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡುವೇ
ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ (ದ್ರೋಣ ಪರ್ವ, ೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕಟ್ಟಿದ ಜಲ್ಲರಿಗಳ ಮೋಡ, ಹೊಸ ಆಯುಧಗಳ ಮಿಂಚು, ಕಿರೀಟದ ರತ್ನಗಳ ಕಾಮನವಿಲ್ಲು, ಚತುರಂಗ ಸೈನ್ಯದ ಸದ್ದಿನ ಸಿಡಿಲು, ಇವುಗಳಿಂದ ಕೂಡಿದ ದ್ರೋಣನೆಂಬ ವರ್ಷ ಋತುವು ಬಂದಿತು. ಶತ್ರು ಸೈನ್ಯದ ಕಡು ಬೇಸಗೆಗೆ ಮುತ್ತಿಗೆ ಹಾಕಲು ರಾಜಹಂಸಗಳು ಹಿಮ್ಮೆಟ್ಟಿದವು.

ಅರ್ಥ:
ಬಿಗಿ: ಕಟ್ಟು, ಬಂಧಿಸು; ಝಲ್ಲರಿ: ಕುಚ್ಚು, ಗೊಂಡೆ; ಮುಗಿಲು: ಆಗಸ; ಹೊಸ: ನವೀನ; ಕೈದು: ಆಯುಧ; ಮಿಂಚು: ಹೊಳಪು, ಕಾಂತಿ; ಮಕುಟ: ಕಿರೀಟ; ಕಾಂತಿ: ಪ್ರಕಾಶ; ಸುರಧನು: ಕಾಮನಬಿಲ್ಲು; ಚತುರ್ಬಲ: ಚತುರಂಗ ಸೈನ್ಯ; ರವ: ಶಬ್ದ; ಸಿಡಿಲು: ಅಶನಿ; ವಿಗಡ: ಶೌರ್ಯ, ಪರಾಕ್ರಮ; ಕುಂಭಜ: ದ್ರೋಣ, ಕುಂಭದಲ್ಲಿ ಜನಿಸಿದ; ಮೇಘ: ಮೋಡ; ಋತು: ಕಾಲ; ತನಿ: ಹೆಚ್ಚಾಗು; ಹೊಗರು: ಕಾಂತಿ, ಪ್ರಕಾಶ; ಇರಿ: ಚುಚ್ಚು; ಪರಬಲ: ವೈರಿಸೈನ್ಯ; ಕಡುವೇಸಗೆ: ತುಂಬಾ ಶಾಖ, ಬಿಸಿಲು; ಕವಿ: ಆವರಿಸು; ಪ್ರಕರ: ಗುಂಪು; ಓಸರಿಸು: ಓರೆಮಾಡು, ಹಿಂಜರಿ;

ಪದವಿಂಗಡಣೆ:
ಬಿಗಿದ +ಝಲ್ಲರಿ +ಮುಗಿಲ +ಹೊಸ +ಕೈ
ದುಗಳ+ ಮಿಂಚಿನ +ಮಕುಟಮಣಿ +ಕಾಂ
ತಿಗಳ+ ಸುರಧನುವಿನ+ ಚತುರ್ಬಲ +ರವದ +ಸಿಡಿಲುಗಳ
ವಿಗಡ +ಕುಂಭಜ +ಮೇಘ +ಋತು +ತನಿ
ಹೊಗರಿರಿದು+ ಪರಬಲದ +ಕಡು+ವೇ
ಸಗೆಗೆ+ ಕವಿದುದು +ರಾಜಹಂಸ+ ಪ್ರಕರವ್+ಓಸರಿಸೆ

ಅಚ್ಚರಿ:
(೧) ದ್ರೋಣನ ಆಗಮನವನ್ನು ಮಳೆಗಾಲಕ್ಕೆ ಹೋಲಿಸುವ ಪರಿ – ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡುವೇಸಗೆಗೆ ಕವಿದುದು

ಪದ್ಯ ೫೧: ಮುಂದಾಲೋಚನೆಯಿಲ್ಲದ ನೃಪನನ್ನು ಯಾವುದಕ್ಕೆ ಹೋಲಿಸಬಹುದು?

ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರದ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹಬ್ಬುಗೆಯವನ ಸಿರಿ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಮುಂದಾಲೋಚನೆ ಮಾಡದ ರಾಜನ ಬಾಳ್ವಿಕೆಯು, ಗಾಳಿಗೆ ಒಡ್ಡಿದ ಹಣತೆಯಂತೆ, ಮೋಡಗಳ ರಚನೆಯಂತೆ, ಕಾಮನಬಿಲ್ಲಿನಂತೆ, ಶವದ ಉಡುಗೆಯಂತೆ, ಕತ್ತಿಗೆ ಒಡ್ಡಿದ ಕೊರಳಿನಂತೆ, ಹಾವಿರುವ ಬುಟ್ಟಿಯಲ್ಲಿ ಕೈಯಿಟ್ಟಂತೆ, ಪ್ರಾಣಕ್ಕೆ ಸಂಚಕಾರ ತರುತ್ತದೆ, ಅವನ ಸಿರಿ ಭ್ರಮೆ ಎಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಮೇಲು: ಮುಂದಾಲೋಚನೆ; ಅರಿ: ತಿಳಿ; ನೃಪ: ರಾಜ; ಬಾಳಿಕೆ: ಬಾಳುವುದು; ಗಾಳಿ: ಅನಿಲ, ಪವನ; ಒಡ್ಡು: ಈಡುಮಾಡು, ಅರ್ಪಿಸು; ಸೊಡರು: ದೀಪ; ನೀರದ: ಮೋಡ; ಒಡ್ಡಣೆ:ಗುಂಪು; ಜಾಲ: ಗುಂಪು; ಸುರಧನು: ಕಾಮನಬಿಲ್ಲು;ಆಕಾರ: ರೂಪ; ಶವ: ಹೆಣ; ಉಡುಗೆ: ಬಟ್ಟೆ; ಬಾಳು: ಜೀವಿಸು; ಔಕು:ಒತ್ತು, ಹಿಚುಕು;ಬಾಳ್: ಕತ್ತಿ; ಕೊರಳು:ಕತ್ತು; ಭುಜಗ: ಹಾವು; ಹೇಳಿಗೆ:ಹಾವುಗಳನ್ನಿಡುವ ಬಿದಿರಿನ ಬುಟ್ಟಿ; ಕರ: ಕೈ, ಹಸ್ತ; ಬೆಳ್ಳಾರ: ಬಿಳಿಯ ಹಾರ (ಮುತ್ತಿನ ಹಾರ); ಹಬ್ಬುಗೆ:ವಿಸ್ತಾರ; ಸಿರಿ: ಐಶ್ವರ್ಯ; ಭೂಪಾಲ: ರಾಜ ಬೆಳ್ಳಾದ: ಬೆಪ್ಪನಾದ;

ಪದವಿಂಗಡಣೆ:
ಮೇಲನ್+ಅರಿಯದ +ನೃಪನ +ಬಾಳಿಕೆ
ಗಾಳಿಗ್+ಒಡ್ಡಿದ +ಸೊಡರು +ನೀರದ
ಜಾಲದ್+ಒಡ್ಡಣೆ +ಸುರಧನುವಿನ್+ಆಕಾರ +ಶವದ್+ಉಡಿಗೆ
ಬಾಳಿಗ್+ಔಕಿದ +ಕೊರಳು +ಭುಜಗನ
ಹೇಳಿಗೆಯಲ್+ಇಕ್ಕಿದ +ಕರವು+ ಬೆ
ಳ್ಳಾರ +ಹಬ್ಬುಗೆ+ಯವನ +ಸಿರಿ +ಭೂಪಾಲ +ಕೇಳೆಂದ

ಅಚ್ಚರಿ:
(೧) ೬ ಬಗೆಯ ಉಪಮಾನಗಳಿಂದ ರಾಜನ ಮುಂದಾಲೋಚನೆಯ ಮಹತ್ವವನ್ನು ತಿಳಿಸಿರುವುದು
(೨) ಗಾಳಿ, ಬಾಳಿ, ಹೇಳಿ – ಪ್ರಾಸ ಪದಗಳ ಪ್ರಯೋಗ
(೩) ಜಾಲ, ಒಡ್ಡಣೆ – ಸಮನಾರ್ಥಕ ಪದ (ಗುಂಪು)