ಪದ್ಯ ೩೬: ಕೌರವನ ಹೊಡೆತದಿಂದ ಭೀಮನ ಸ್ಥಿತಿ ಹೇಗಿತ್ತು?

ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ (ಗದಾ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವನು ಮತ್ತೆ ಭೀಮನ ನೆತ್ತಿಯನ್ನು ಸರ್ವಶಕ್ತಿಯಿಂದಲೂ ಹೊಡೆಯಲು, ಭೀಮನು ಓಲಿ ಮೂರ್ಛೆಯಿಮ್ದ ಕೆಳಬಿದ್ದನು. ಕಣ್ಣುಗಳು ನೆಟ್ಟವು. ಉಸಿರಾಡುವಾಗ ರಕ್ತದ ಹನಿಗಳು ಒಸರಿಸಿದವು. ಗದೆ ಪಕ್ಕಕ್ಕೆ ಹಾರಿತು, ಭೀಮನು ನೆಲದ ಮೇಲೊರಗಿದನು.

ಅರ್ಥ:
ಮತ್ತೆ: ಪುನಃ; ಹೊಯ್ದು: ಹೊಡೆ; ನೆತ್ತಿ: ಶಿರ; ನಿಪ್ಪಸರ: ಅತಿಶಯ, ಹೆಚ್ಚಳ; ಕಳೆ: ಬೀಡು, ತೊರೆ, ಹೋಗಲಾಡಿಸು; ಝೋಂಪು: ಮೂರ್ಛೆ; ತಿರುಗು: ಹೊರಲಾಡು; ಬಿದ್ದು: ಎರಗು, ಬೀಳು; ಬಿಗಿ: ಕಟ್ಟು, ಬಂಧಿಸು; ಮೂರ್ಛೆ: ಎಚ್ಚರವಿಲ್ಲದ ಸ್ಥಿತಿ; ಕೆತ್ತು: ನಡುಕ, ಸ್ಪಂದನ; ಕಂಗಳು: ಕಣ್ಣು; ಸುಯ್ಲು: ನಿಟ್ಟುಸಿರು; ಲಹರಿ: ರಭಸ, ಆವೇಗ; ಸುತ್ತಲು: ಎಲ್ಲಾಕಡೆ; ಅರುಣಾಂಬು: ರಕ್ತ; ಸಿಡಿ: ಹಾರು; ಗದೆ: ಮುದ್ಗರ; ಭಟ: ಸೈನಿಕ; ಒರಗು: ಕೆಳಕ್ಕೆ ಬಾಗು; ಮರವೆ: ಮರವು, ಜ್ಞಾಪಕವಿಲ್ಲದಿರುವುದು;

ಪದವಿಂಗಡಣೆ:
ಮತ್ತೆ +ಹೊಯ್ದನು +ಭೀಮಸೇನನ
ನೆತ್ತಿಯನು +ನಿಪ್ಪಸರದಲಿ +ಕಳೆ
ಹತ್ತಿ+ ಝೋಂಪಿಸಿ +ತಿರುಗಿ +ಬಿದ್ದನು +ಬಿಗಿದ +ಮೂರ್ಛೆಯಲಿ
ಕೆತ್ತ+ ಕಂಗಳ +ಸುಯ್ಲ+ ಲಹರಿಯ
ಸುತ್ತಲೊಗುವ್+ಅರುಣಾಂಬುಗಳ +ಕೆಲ
ದತ್ತ +ಸಿಡಿದಿಹ +ಗದೆಯ +ಭಟನ್+ಒರಗಿದನು+ಮರವೆಯಲಿ

ಅಚ್ಚರಿ:
(೧) ಮೂರ್ಛೆ, ಮರವೆ – ಸಾಮ್ಯಾರ್ಥ ಪದ
(೨) ಭೀಮನನ್ನು ಗದೆಯ ಭಟ ಎಂದು ಕರೆದಿರುವುದು

ಪದ್ಯ ೩೩: ಅರ್ಜುನ ಶಿವನ ಯುದ್ಧದ ರಭಸ ಹೇಗಿತ್ತು?

ಸುಯ್ಲ ಹೊಗೆಗಳ ಹೊದರುದಿವಿಗಳ
ಮಯ್ಲುಳಿಯ ಮುರಿವುಗಳ ದೃಢವೇ
ಗಾಯ್ಲರಿಕ್ಕಿದ ಗಾಯ ಗಾಯಕೆ ಮುಷ್ಟಿಕಿಡಿಯೇಳೆ
ಶಯ್ಲ ಹತಿಗಳ ಭಾರಣೆಯ ಬಿರು
ವೊಯ್ಲ ಬೆಳೆಸಿರಿವಂತರಿವರೆನ
ಲಯ್ಲು ಪೈಲಿನ ಜರಡುಗಳೆ ನರನಾಥ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ ರಾಜ ಕೇಳು, ಅವರ ಉಸಿರುಗಳು ಬಿಸಿ ಹೊಗೆಯಂತಿದ್ದವು, ಮತ್ತೆ ಮತ್ತೆ ಮುಷ್ಟಿಘಾತವನ್ನು ಮಾಡುವ ಅವರ ಮೈಗಳು ಅತಿ ವೇಗವಾಗಿ ಚಲಿಸುತ್ತಿದ್ದವು. ಮುಷ್ಟಿಯಿಂದ ಗುದ್ದಿದರೆ ಕಿಡಿಗಳೇಳುತ್ತಿದ್ದವು, ಬೆಟ್ಟವೇ ಅಪ್ಪಳಿಸುತ್ತಿದೆಯೋ ಎನ್ನುವಂತಹ ಬಿರುಸಿನ ಹೊಡೆತಗಳು ಹೇರಳವಾಗಿದ್ದವು. ಅವರೇನು ಬಲಹೀನ ಐಲುಪೈಲುಗಳೇ ಎಂದು ವೈಶಂಪಾಯನರು ಇಬ್ಬರ ಹೋರಾಟವನ್ನು ವಿವರಿಸಿದರು.

ಅರ್ಥ:
ಸುಯ್ಲು: ನಿಟ್ಟುಸಿರು; ಹೊಗೆ: ಧೂಮ; ಹೊದರು: ಗುಂಪು, ತೊಡಕು; ದಿವಿ: ಆಕಾಶ; ಮುಯ್: ಭುಜ; ಲುಳಿ: ರಭಸ, ವೇಗ; ಮುರಿ: ಸೀಳು; ದೃಢ: ಗಟ್ಟಿ; ವೇಗಾಯ: ವೇಗವಾಗಿ ಚಲಿಸುವ; ಇಕ್ಕು: ಚುಚ್ಚು; ಗಾಯ: ಪೆಟ್ಟು; ಮುಷ್ಟಿ: ಮುಚ್ಚಿದ ಅಂಗೈ; ಕಿಡಿ: ಬೆಂಕಿ; ಏಳು: ತಲೆಯೆತ್ತು; ಶಯ್ಲ: ಶೈಲ, ಪರ್ವತ; ಹತಿ: ಪೆಟ್ಟು, ಹೊಡೆತ; ಭಾರಣೆ: ಮಹಿಮೆ, ಗೌರವ; ಬಿರುವೊಯ್ಲು: ಜೋರಾದ ಹೊಡೆತ; ಬಿರು: ಗಟ್ಟಿಯಾದುದು; ಬೆಳೆಸಿರಿ: ಬೆಳೆಯ ಸಂಪತ್ತು, ಹೆಚ್ಚಳ; ಅರಿ: ಚುಚ್ಚು; ಐಲು: ಹುಚ್ಚು, ಮರಳುತನ; ಜರಡು: ಹುರುಳಿಲ್ಲದುದು, ಜೊಳ್ಳು; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸುಯ್ಲ+ ಹೊಗೆಗಳ +ಹೊದರು+ದಿವಿಗಳ
ಮಯ್ಲುಳಿಯ +ಮುರಿವುಗಳ+ ದೃಢವೇ
ಗಾಯ್ಲರ್+ಇಕ್ಕಿದ+ ಗಾಯ +ಗಾಯಕೆ+ ಮುಷ್ಟಿ+ಕಿಡಿಯೇಳೆ
ಶಯ್ಲ+ ಹತಿಗಳ+ ಭಾರಣೆಯ+ ಬಿರು
ವೊಯ್ಲ +ಬೆಳೆಸಿರಿವಂತ್+ಅರಿವರ್+ಎನಲ್
ಅಯ್ಲು +ಪೈಲಿನ+ ಜರಡುಗಳೆ+ ನರನಾಥ+ ಕೇಳೆಂದ

ಅಚ್ಚರಿ:
(೧) ಜನಮೇಜಯನನ್ನು ನರನಾಥ ಎಂದು ಕರೆದಿರುವುದು
(೨) ಸುಯ್ಲ, ಶಯ್ಲ, ವೊಯ್ಲ, ಗಾಯ್ಲ – ಪ್ರಾಸ ಪದಗಳು
(೩) ಜೋಡಿ ಪದಗಳು – ಹೊಗೆಗಳ ಹೊದರು, ಮಯ್ಲುಳಿಯ ಮುರಿವುಗಳ
(೪) ಉಪಮಾನದ ಪ್ರಯೋಗ – ಶಯ್ಲ ಹತಿಗಳ ಭಾರಣೆಯ ಬಿರುವೊಯ್ಲ ಬೆಳೆಸಿರಿವಂತರಿವರೆನ
ಲಯ್ಲು ಪೈಲಿನ ಜರಡುಗಳೆ ನರನಾಥ ಕೇಳೆಂದ

ಪದ್ಯ ೧೦: ಭೀಮನು ಕೋಪಗೊಂಡ ದೃಶ್ಯವನ್ನು ಹೇಗೆ ಚಿತ್ರಿಸಬಹುದು?

ಅರಸ ಕೇಳೈ ಶೋಕರಸಸಾ
ಗರದೊಳೆದ್ದುದೊ ವಡಬನೆನೆ ಕ
ಣ್ಣರಳಿದವು ಕುಡಿಮೀಸೆ ಕುಣಿದವು ಸುಯ್ಲ ಹೊಗೆ ಮಸಗೆ
ಕರ ನಡುಗೆ ಮೈ ಬಲಿಯೆ ಹುಬ್ಬುಗ
ಳುರೆ ಬಿಗಿಯೆ ಕಂಗಳಲಿ ಕೆಂಗಡಿ
ಸುರಿಯೆ ವೀರಾವೇಶದಲಿ ಮಸಗಿದನು ಕಲಿಭೀಮ (ಕರ್ಣ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಭೀಮನು ಹೇಗೆ ಕೋಪಗೊಂಡನು ಎಂದು ತಿಳಿಸುತ್ತಾನೆ. ಯುಧಿಷ್ಠಿರನ ನೋವು, ತಾನು ಇದಕ್ಕೆ ಹೇಗೆ ಕಾರಣನೆಂದು ಚಿಂತಿಸಿ, ಹೀಗಾಯಿತಾಲ್ಲಾ ಎಂಬ ಕೋಪವು ಭೀಮನನ್ನು ಆವರಿಸಿತು. ಶೋಕ ಸಾಗರದಿಂದ ಏಳುವ ಬೆಂಕಿಯಂತೆ ಭೀಮನು ಎದ್ದನು, ಅವನ ಕಣ್ಣುಗಳು ಅರಳಿದವು, ಚಿಗುರಿದ ಮೀಸಿಯು ಕುಣಿಯಲಾರಂಭಿಸಿತು, ನಿಟ್ಟುಸಿರು ಹೊಗೆಯನ್ನು ಹೊರಹೊಮ್ಮುತ್ತಿತ್ತು, ಕೈಗಳು ನಡುಗುತ್ತಿತ್ತು, ಹುಬ್ಬುಗಳು ಹೆಚ್ಚಾಗಿಯೇ ಬಿಗಿದವು, ತನುವು ಗಟ್ಟಿಯಾದವು, ಕಣ್ಣಲ್ಲಿ ಕೆಂಪು ಕಿಡಿಗಳುದುರಿದವು, ಈ ರೀತಿ ವೀರಾವೇಶದಿಂದ ಶೂರನಾದ ಭೀಮನು ತೋರಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಶೋಕ: ದುಃಖ; ರಸ: ಸಾರ; ಸಾಗರ: ಸಮುದ್ರ; ಎದ್ದು: ಮೇಲೇಳು; ವಡಬ: ಸಮುದ್ರದಲ್ಲಿರುವ ಬೆಂಕಿ; ಕಣ್ಣು: ನಯನ; ಅರಳು: ಅಗಲವಾಗು; ಕುಡಿ: ಚಿಗುರು; ಮೀಸೆ: ಗಂಡಸರಿಗೆ ಬಾಯಮೇಲೆ ಬೆಳೆವ ಕೂದಲು; ಕುಣಿ: ನರ್ತಿಸು; ಸುಯ್ಲು: ನಿಟ್ಟುಸಿರು; ಹೊಗೆ: ಧೂಮ; ಮಸಗು: ಹರಡು; ಕರ: ಕೈ, ಹಸ್ತ; ನಡುಗು: ಅಲುಗಾಡು; ಬಲಿ: ಗಟ್ಟಿ; ಹುಬ್ಬು: ಕಣ್ಣಿನ ಮೇಲಿರುವ ಕೂದಲು; ಉರೆ: ಅಧಿಕವಾಗಿ; ಬಿಗಿ: ಗಟ್ಟಿ; ಕಂಗಳು: ನಯನ, ಕಣ್ಣು; ಕೆಂಗಿಡು: ಕೆಂಪಾದ ಕಿಡಿ; ಸುರಿ: ಹರಿ, ಹೊರಬೀಳು; ವೀರ: ಪರಾಕ್ರಮ; ಆವೇಶ: ರೋಷ ; ಕಲಿ: ಶೂರ;

ಪದವಿಂಗಡಣೆ:
ಅರಸ +ಕೇಳೈ +ಶೋಕರಸ+ಸಾ
ಗರದೊಳ್+ಎದ್ದುದೊ +ವಡಬನ್+ಎನೆ +ಕ
ಣ್ಣ್ +ಅರಳಿದವು +ಕುಡಿಮೀಸೆ +ಕುಣಿದವು+ ಸುಯ್ಲ +ಹೊಗೆ +ಮಸಗೆ
ಕರ +ನಡುಗೆ +ಮೈ +ಬಲಿಯೆ +ಹುಬ್ಬುಗಳ್
ಉರೆ +ಬಿಗಿಯೆ +ಕಂಗಳಲಿ +ಕೆಂಗಡಿ
ಸುರಿಯೆ +ವೀರಾವೇಶದಲಿ +ಮಸಗಿದನು +ಕಲಿಭೀಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಣ್ಣರಳಿದವು ಕುಡಿಮೀಸೆ ಕುಣಿದವು
(೨) ಕೋಪಗೊಂಡಾಗಿನ ಚಿತ್ರಣವನ್ನು ಪದಗಳಲ್ಲಿ ಬಿಡಿಸಿರುವ ಕುಮಾರವ್ಯಾಸ!