ಪದ್ಯ ೭೨: ಪಂಡಿತನ ಲಕ್ಷಣವೇನು?

ಇದು ಸಮಾಹಿತವಿದು ಶುಭೋದಯ
ವಿದು ಸಕಲ ಪುರುಷಾರ್ಥ ಸಾಧನ
ವಿದು ಸುಜನ ಸನ್ಮಾನವಿದು ಸಂಸಾರ ಸೌಖ್ಯಫಲ
ಇದು ಸುಬಲವಿದಬಲ ವಿದಾಮ್ನಾ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು (ಉದ್ಯೋಗ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ವಿದ್ವಾಂಸ (ತಿಳಿದವನ) ಲಕ್ಷಣಗಳನ್ನು ವಿದುರ ಇಲ್ಲಿ ವಿವರಿಸಿದ್ದಾರೆ. ಈ ಮೇಲೆ ಹೇಳಿದ ನೀತಿವಾಕ್ಯಗಳನ್ನು ತಿಳಿದವರು ಒಪ್ಪಿದ್ದಾರೆ, ಇದರಿಂದ ಶುಭವಾಗುತ್ತದೆ, ಇದರಿಂದ ಎಲ್ಲಾ ಪುರುಷಾರ್ಥಗಳ ಸಾಧನೆಯೂ ಆಗುತ್ತದೆ. ಇದರಿಂದ ಸಜ್ಜನರು ಸಂತೋಷಿಸುತ್ತಾರೆ, ಸಂಸಾರ ಸೌಖ್ಯವೇ ಇದಕ್ಕೆ ಫಲ. ಇದು ಬಲವಾದುದು ಹಾಗು ಇದು ದುರ್ಬಲವಾದುದು, ಇದು ವೇದ ವಿಹಿತವಾದದ್ದು ಎನ್ನುವುದನ್ನು ನಿಶ್ಚಯಿಸಿ ನೀತಿವಂತನಾಗಿ ಕಾರ್ಯವನ್ನಾಚರಿಸುವವನೇ ಪಂಡಿತನು.

ಅರ್ಥ:
ಸಮಾಹಿತ: ಒಟ್ಟುಗೂಡಿಸಿದ, ಕಲೆಹಾಕಿದ; ಶುಭ: ಮಂಗಳ; ಉದಯ: ಹುಟ್ಟು; ಸಕಲ: ಎಲ್ಲಾ; ಪುರುಷಾರ್ಥ: ಮನುಷ್ಯನು ಸಾಧಿಸಬೇಕಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮಧ್ಯೇಯಗಳು; ಸಾಧನ: ಗುರಿಮುಟ್ಟುವ ಪ್ರಯತ್ನ; ಸುಜನ: ಒಳ್ಳೆಯ ಜನ; ಸನ್ಮಾನ: ಗೌರವ; ಸಂಸಾರ: ಲೌಕಿಕ ಜೀವನ, ಬದುಕು; ಸೌಖ್ಯ: ಸುಖ, ನೆಮ್ಮದಿ; ಫಲ:ಪ್ರಯೋಜನ, ಲಾಭ; ಸುಬಲ:ಬಲವಾದ; ಅಬಲ:ದುರ್ಬಲ; ನಿಶ್ಚಯ: ತೀರ್ಮಾನ; ನೀತಿ: ಮಾರ್ಗ ದರ್ಶನ; ಕಾರ್ಯ: ಕೆಲಸ; ಹದ: ರೀತಿ, ಸರಿಯಾದ ಸ್ಥಿತಿ; ಅರಿ: ತಿಳಿ; ಆಚರಿಸು: ಪಾಲಿಸು; ಬಲ್ಲವ: ತಿಳಿದವ; ಪಂಡಿತ: ವಿದ್ವಾಂಸ; ಆಮ್ನಾಯ: ವೇದ;

ಪದವಿಂಗಡಣೆ:
ಇದು+ ಸಮಾಹಿತವಿದು +ಶುಭೋದಯ
ವಿದು +ಸಕಲ+ ಪುರುಷಾರ್ಥ+ ಸಾಧನ
ವಿದು+ ಸುಜನ +ಸನ್ಮಾನವಿದು+ ಸಂಸಾರ +ಸೌಖ್ಯಫಲ
ಇದು +ಸುಬಲವ್+ಇದ್+ಅಬಲ +ವಿದ್+ಆಮ್ನಾ
ಯದ +ಸುನಿಶ್ಚಯ+ ನೀತಿ+ ಕಾರ್ಯದ
ಹದನನ್+ಅರಿದ್+ಆಚರಿಸಬಲ್ಲವನ್+ಅವನೆ +ಪಂಡಿತನು

ಅಚ್ಚರಿ:
(೧) ಇದು – ೧-೪ ಸಾಲಿನ ಮೊದಲ ಪದ
(೨) ಸ ಕಾರದಿಂದ ಶುರುವಾಗುವ ಪದಗಳು: ಸಮಾಹಿತ, ಸಾಧನ, ಸುಜನ, ಸನ್ಮಾನ, ಸಂಸಾರ, ಸೌಖ್ಯ, ಸುಬಲ, ಸುನಿಶ್ಚಯ