ಪದ್ಯ ೧೧: ಭೀಮನಿಗೆ ಶ್ರೀಕೃಷ್ಣ ಯಾವ ಚೋದ್ಯದ ನುಡಿಗಳನ್ನು ನುಡಿದನು?

ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರಸ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳೂಗುಳಕೆ ಪವಮಾನನಂದನ
ನಳುಕಿದನು ಮಝಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ (ಉದ್ಯೋಗ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಸಂಧಿಯ ಪ್ರಸ್ತಾವನೆಯನ್ನು ಕೇಳಿದ ಕೃಷ್ಣನು ಆಶ್ಚರ್ಯಗೊಂಡು, “ಓಹೋ ಇದೇನಿದು ಶಿವ ಶಿವ ಹಾಲಾಹಲವು ಅಮೃತವಾಯಿತಲ್ಲಾ, ಭಾರಿಯ ಬೆಂಕಿ ಒಮ್ಮೆಲೆ ತಣ್ಣಗಾಯಿತಲ್ಲಾ, ಸಿಡಿಲ ಜೋರು ನಯವಾಯಿತಲ್ಲಾ, ಭೀಮನು ಯುದ್ಧಕ್ಕೆ ಬೆದರಿದನೇ? ಭಲೇ ಮಾಯೆಯಾಟವೇ, ಕುಂತೀದೇವಿಯು ಎಂಥ ಮಕ್ಕಳನ್ನು ಹಡೆದಳು, ಸಾರ್ಥಕವಾಯಿತೆಂದು” ನಸುನಗುತ ನುಡಿದನು

ಅರ್ಥ:
ಮಹಾದೇವ: ಶಿವ; ಹಾಲಾಹಲ: ವಿಷ, ಗರಲ, ನಂಜು; ಸುಧ: ಅಮೃತ; ರಸ: ಸಾರ; ಉಕ್ಕು: ಚಿಮ್ಮು; ಉರಿ: ಬೆಂಕಿ; ಅಗ್ಗ: ಕಡಿಮೆ; ಸಿಡಿಲು: ಅಶನಿ, ಚಿಮ್ಮು, ಗರ್ಜಿಸು; ಶೀತಳ: ತಣ್ಣಗಾಗು; ನಯ: ಮೃದುತ್ವ, ಅಂದ; ಕೊಳುಗುಳ: ಯುದ್ಧ; ನಂದನ: ಮಗ; ಪವಮಾನ: ವಾಯು; ಅಳುಕು: ಹೆದರು; ಮಝ: ಕೊಂಡಾಟದ ಒಂದು ಮಾತು; ಲಲನೆ: ಹೆಣ್ಣು; ಹೆತ್ತು: ಹಡೆ; ಸುತ: ಮಕ್ಕಳು; ಶೌರಿ: ಕೃಷ್ಣ; ನಗು: ಸಂತೋಷ; ಆಟೋಪ:ಆಡಂಬರ;

ಪದವಿಂಗಡಣೆ:
ಎಲೆ+ ಮಹಾದೇವ+ಆಯ್ತು +ಹಾಲಾ
ಹಲ +ಸುಧಾರಸ+ ಉಕ್ಕಿದ್+ಉರಿ
ಅಗ್ಗಳದ +ಶೀತಳವಾಯ್ತು +ಸಿಡಿಲ+ಆಟೋಪ+ ನಯವಾಯ್ತು
ಕೊಳೂಗುಳಕೆ +ಪವಮಾನ+ನಂದನನ್
ಅಳುಕಿದನು +ಮಝಮಾಯೆ +ಕುಂತೀ
ಲಲನೆ +ಹೆತ್ತಳು +ಸುತರನೆಂದನು +ಶೌರಿ +ನಸುನಗುತ

ಅಚ್ಚರಿ:
(೧) ಉಪಮಾನಗಳ ಬಳಕೆ – ಆಯ್ತು ಹಾಲಾಹಲ ಸುಧಾರಸ, ಉಕ್ಕಿದುರಿಯಗ್ಗಳದ ಶೀತಳವಾಯ್ತು, ಸಿಡಿಲಾಟೋಪ ನಯವಾಯ್ತು
(೨) ಭೀಮನು ಬಲಶಾಲಿ ಎಂದು ತಿಳಿದಿದ್ದರು ಅವನ ಬಲವನ್ನೇ ಅಸ್ತ್ರವಾಗಿಸಿ ಅವನನ್ನು ತಿವಿಯುವ ಪರಿ