ಪದ್ಯ ೬೨: ಭೀಮನು ಕೌರವರ ದುಷ್ಕೃತ್ಯವನ್ನು ಹೇಗೆ ವಿವರಿಸಿದನು?

ಲಲನೆ ಋತುಮತಿಯೆಂದಡೆಯು ಸಭೆ
ಗೆಳೆದು ತಂದವರಧಿಕಸಜ್ಜನ
ರಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ
ಸುಲಿಸಿದರು ಧಾರ್ಮಿಕರು ತಾವೇ
ಖಳರು ನೀವೇ ಸುಜನರೆಮ್ಮೀ
ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ (ಗದಾ ಪರ್ವ, ೧೧ ಸಂಧಿ, ೬೨ ಪದ್ಯ)

ತಾತ್ಪರ್ಯ:
ದ್ರೌಪದಿಯು ತಾನು ರಜಸ್ವಲೆಯೆಂದು ದೈನ್ಯದಿಂದ ಹೇಳಿದರೂ ದ್ರೌಪದಿಯನ್ನು ರಾಜ ಸಭೆಗೆ ಎಳೆತಂದವರು ಹೆಚ್ಚಿನ ಸಜ್ಜನರು. ಸಭೆಯ ನಡುವೆ ಸೀರೆಯನ್ನು ಸುಲಿದವರು ಸುಲಿಸಿದವರು ಧಾರ್ಮಿಕರು, ನಾವು ದುಷ್ಟರು ನೀವು ಸಜ್ಜನರು, ತಾಯೇ ನಾವು ಮಾಡಿದ ತಪ್ಪನ್ನು ಸಹಿಸಿಕೋ ಎಂದು ಭೀಮನು ದ್ರೌಪದಿಯಲ್ಲಿ ಬೇಡಿದನು.

ಅರ್ಥ:
ಲಲನೆ: ಹೆಣ್ಣು; ಋತುಮತಿ: ಸ್ತ್ರೀಯರ ಮುಟ್ಟಿನ ಸಮಯ, ರಜಸ್ವ; ಸಭೆ: ದರಬಾರು; ಎಳೆ: ತನ್ನ ಕಡೆಗೆ ಸೆಳೆದುಕೊ, ಸೆಳೆ; ಅಧಿಕ: ಹೆಚ್ಚು; ಸಜ್ಜನ: ಒಳ್ಳೆಯ ನಡತೆಯುಳ್ಳವ; ಅಳಿ: ಸಣ್ಣದು; ಉಟ್ಟ: ಧರಿಸಿದ; ಸೀರೆ: ಬಟ್ಟೆ; ಊರು: ಪ್ರದೇಶ; ಮಧ್ಯ: ನಡುವೆ; ಸುಲಿಸು: ಬಿಚ್ಚು; ಧಾರ್ಮಿಕ: ಸಜ್ಜನ; ಖಳ: ದುಷ್ಟ; ಸುಜನ: ಒಳ್ಳೆಯವ; ಸ್ಖಲಿತ: ತಪ್ಪು, ಅಪರಾಧ; ಸೈರಿಸು: ತಾಳು, ಸಹಿಸು; ತಾಯೆ: ಮಾತೆ;

ಪದವಿಂಗಡಣೆ:
ಲಲನೆ +ಋತುಮತಿಯೆಂದಡೆಯು+ ಸಭೆ
ಗೆಳೆದು +ತಂದವರ್+ಅಧಿಕ+ಸಜ್ಜನರ್
ಅಳಿಕುಳಾಳಿಕೆಯುಟ್ಟ+ ಸೀರೆಯನ್+ಊರು+ಮಧ್ಯದಲಿ
ಸುಲಿಸಿದರು+ ಧಾರ್ಮಿಕರು +ತಾವೇ
ಖಳರು +ನೀವೇ +ಸುಜನರ್+ಎಮ್ಮೀ
ಸ್ಖಲಿತವನು +ನೀವಿನ್ನು +ಸೈರಿಸಿ +ತಾಯೆ +ನಮಗೆಂದ

ಅಚ್ಚರಿ:
(೧) ಕೌರವರ ಮಹಾಪರಾಧ – ಅಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ ಸುಲಿಸಿದರು
(೨) ಸಜ್ಜನ, ಧಾರ್ಮಿಕ, ಸುಜನ – ಸಾಮ್ಯಾರ್ಥ ಪದ

ಪದ್ಯ ೧೨: ಕೃಷ್ಣನು ಕೌರವನೇಕೆ ಸಜ್ಜನನಲ್ಲೆನೆಂದು ಹೇಳಿದನು?

ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ (ಗದಾ ಪರ್ವ, ೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜೂಜು, ಬೇಟೆಗಳು ಕ್ಷತ್ರಿಯರ ವಿನೋದಗಳು. ಕಪಟದ ಜೂಜನ್ನು ತಿಳಿಯದೆ ಆಡಿ ಮಾಯೆಗೆ ಪರಾಜಿತರಾಗಿ ಭೂಮಿಯನ್ನು ಸೋತಿರಿ. ಅದು ಹಾಗಿರಲಿ, ನಿಮ್ಮ ರಾಣಿಯುಟ್ಟ ಸೀರೆಯನ್ನು ಭಯವಿಲ್ಲದೆ ಸುಲಿಸಿದ ಇವನು ಸಜ್ಜನನೇ ಎಂದು ಕೃಷ್ಣನು ಕೇಳಿದನು.

ಅರ್ಥ:
ದ್ಯೂತ: ಪಗಡೆಯಾಟ, ಜೂಜು; ಮೃಗ: ಪ್ರಾಣಿ; ವ್ಯಸನ: ಗೀಳು, ಚಟ; ನೃಪ: ರಾಜ; ಜಾತಿ: ಕುಲ; ವಿನೋದ: ವಿಹಾರ, ಕ್ರೀಡೆ; ಕಪಟ: ಮೋಸ; ನೃಪ: ರಾಜ; ಧರ್ಮ: ಧಾರಣೆ ಮಾಡಿದುದು; ಮಾಯ: ಗಾರುಡಿ; ಅಭಿಯೋಗ: ಒತ್ತಾಯ; ಸೋತು: ಪರಾಜಯ; ನಿರ್ಭೀತಿ: ಭಯವಿಲ್ಲದ ಸ್ಥಿತಿ; ಇಳೆ: ಭೂಮಿ; ಅರಸಿ: ರಾಣಿ; ಉಟ್ಟು: ಬಟ್ಟೆ, ಸೀರೆ; ಸುಲಿ: ತೆಗೆ, ಕಳಚು; ಸುಜನ: ಒಳ್ಳೆಯ ಮನುಷ್ಯ; ಭೂಪ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ದ್ಯೂತ +ಮೃಗ+ಯಾ+ವ್ಯಸನವಿವು+ ನೃಪ
ಜಾತಿಗಾದ+ ವಿನೋದ +ಕಪಟ
ದ್ಯೂತವಿದು +ನೃಪಧರ್ಮವೇ +ಮಾಯ+ಅಭಿಯೋಗದಲಿ
ಸೋತಿರ್+ಇಳೆಯನ್+ಅದಂತಿರಲಿ +ನಿ
ರ್ಭೀತಿಯಲಿ +ನಿಮ್ಮರಸಿ+ಉಟ್ಟುದನ್
ಈತ +ಸುಲಿಸಿದನ್+ಇವನು +ಸುಜನನೆ +ಭೂಪ +ಹೇಳೆಂದ

ಅಚ್ಚರಿ:
(೧) ನೃಪ ಜಾತಿಗೆ ವಿನೋದ – ದ್ಯೂತ ಮೃಗಯಾವ್ಯಸನವಿವು ನೃಪ ಜಾತಿಗಾದ ವಿನೋದ
(೨) ಕೌರವನ ಬಗ್ಗೆ ಕೃಷ್ಣನಾಡಿದ ಮಾತು – ನಿರ್ಭೀತಿಯಲಿ ನಿಮ್ಮರಸಿಯುಟ್ಟುದ ನೀತ ಸುಲಿಸಿದನಿವನು ಸುಜನನೆ

ಪದ್ಯ ೨೭: ಭೀಷ್ಮರು ತಮ್ಮನ್ನು ಪುರುಷಾಧಮನೆಂದು ಏಕೆ ಕರೆದರು?

ಹಿರಿಯನಾಗಲಿ ಸುಜನನಾಗಲಿ
ಗರುವನಾಗಲಿ ಅರ್ಥವುಳ್ಳನ
ಚರಣಸೇವಾಪರರು ಜಗದಲಿ ವರ್ತಮಾನವಿದು
ಪರರ ಭಜಕರಒಳಾವಗುಣವಾ
ವಿರವದಾವಗ್ಗಳಿಕೆ ಯಾವುದು
ಗರುವತನವೈ ತಂದೆ ಪುರುಷಾಧಮನು ತಾನೆಂದ (ಭೀಷ್ಮ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ಎಷ್ಟೆ ದೊಡ್ಡವನಾಗಲಿ, ಸಜ್ಜನನಾಗಲಿ, ಶ್ರೇಷ್ಠನಾಗಲಿ, ಇಂದಿನ ಜಗತ್ತಿನಲ್ಲಿ ಅವರೆಲ್ಲರೂ ಹಣವಮ್ತರ ಪಾದಸೇವಕರಾಗಿದ್ದಾರೆ, ಪರರ ಸೇವೆಯಲ್ಲಿ ನಿರತನಾದವನು ಎಂತಹ ಗುಣವಂತನಾದರೇನು? ಅವನದು ಒಂದು ಬಾಳೇ? ಅವನಿಗೆಂತಹ ಹಿರಿಮೆ? ಅಪ್ಪ ಧರ್ಮಜ ಪರಸೇವಕನಾದ ನಾನು ಪುರುಷರಲ್ಲಿ ಅಧಮನು ಎಂದು ಹೇಳಿದರು.

ಅರ್ಥ:
ಹಿರಿ: ದೊಡ್ಡವ; ಸುಜನ: ಒಳ್ಳೆಯ, ಸಜ್ಜನ; ಗರುವ: ಅಹಂಕಾರ; ಅರ್ಥ: ಹಣ, ವಿತ್ತ; ಚರಣ: ಪಾದ; ಸೇವೆ: ಚಾಕರಿ; ಜಗ: ಪ್ರಪಂಚ; ವರ್ತಮಾನ: ಈಗಿನ, ಸದ್ಯದ ಪರಿಸ್ಥಿತಿ; ಪರರು: ಬೇರೆಯವರು; ಭಜಕ: ಭಕ್ತ; ಗುಣ: ನಡತೆ; ಅಗ್ಗಳಿಕೆ: ಶ್ರೇಷ್ಠ; ಗರುವ: ಹಿರಿಯ, ಶ್ರೇಷ್ಠ; ಅಧಮ: ನೀಚ;

ಪದವಿಂಗಡಣೆ:
ಹಿರಿಯನಾಗಲಿ+ ಸುಜನನಾಗಲಿ
ಗರುವನಾಗಲಿ+ ಅರ್ಥವುಳ್ಳನ
ಚರಣ+ಸೇವಾಪರರು +ಜಗದಲಿ +ವರ್ತಮಾನವಿದು
ಪರರ+ ಭಜಕರೊಳ್+ಆವಗುಣವ್+ಆವ್
ಇರವದ್+ಆವ್+ಅಗ್ಗಳಿಕೆ+ ಯಾವುದು
ಗರುವತನವೈ+ ತಂದೆ+ ಪುರುಷ+ಅಧಮನು +ತಾನೆಂದ

ಅಚ್ಚರಿ:
(೧) ಲೋಕನೀತಿ – ಅರ್ಥವುಳ್ಳನ ಚರಣಸೇವಾಪರರು ಜಗದಲಿ ವರ್ತಮಾನವಿದು

ಪದ್ಯ ೩೯: ಯಕ್ಷ ಧರ್ಮಜನ ಸಂವಾದ – ೩

ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬುವನು
ನಿಯತಧೀರನದಾರು ದೇವ
ಪ್ರಿಯನದಾವನು ಕಠಿಣಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾಜನೀತಿಯನ್ನು ಬಲ್ಲವನೇ ಹೇಳು, ಕ್ಷತ್ರಿಯನು ಯಾರು? ಬ್ರಾಹಣರಲ್ಲಿ ಶ್ರೋತ್ರಿಯನಾರು? ಸಜ್ಜನರಲ್ಲಿ ಮಹಾಪುರುಷನಾರು? ಧೀರನು ಯಾರು? ದೇವತೆಗಳಿಗೆ ಪ್ರಿಯನಾದವನಾರು ಎಂದು ಕೇಳಿದನು.

ಅರ್ಥ:
ನಯ: ನುಣುಪು, ಮೃದುತ್ವ, ಅಂದ; ಕೇಳು: ಆಲಿಸು; ಕ್ಷತ್ರಿಯ: ನಾಲ್ಕು ವರ್ಣಗಳಲ್ಲಿ ಒಂದು; ವಿಪ್ರ: ಬ್ರಾಹ್ಮಣ; ಶ್ರೋತ್ರಿ: ಬ್ರಾಹ್ಮಣ; ಸುಜನ: ಒಳ್ಳೆಯ ವ್ಯಕ್ತಿ; ಮಹಪುರುಷ: ಶ್ರೇಷ್ಠ; ನಿಯತ: ನಿಶ್ಚಿತವಾದುದು; ಧೀರ: ಪರಾಕ್ರಮಿ; ದೇವ: ದೇವತೆ, ಸುರರು; ಪ್ರಿಯ: ಹಿತವಾದುದು; ಕಠಿಣ: ಬಿರುಸು, ಕಷ್ಟಕರವಾದ; ಆಶ್ರಯ: ಆಸರೆ, ಅವಲಂಬನ; ಹೇಳು: ತಿಳಿಸು; ಖಚರ: ಯಕ್ಷ, ಗಂಧರ್ವ;

ಪದವಿಂಗಡಣೆ:
ನಯವಿದನೆ+ ಕೇಳ್+ಆವನೈ +ಕ್ಷ
ತ್ರಿಯನು +ವಿಪ್ರರೊಳ್+ಆವನೈ+ ಶ್ರೋ
ತ್ರಿಯನು +ಸುಜನರೊಳ್+ಆವನೈ +ಮಹಪುರುಷನ್+ಎಂಬುವನು
ನಿಯತ+ಧೀರನದ್+ಆರು +ದೇವ
ಪ್ರಿಯನದ್+ಆವನು +ಕಠಿಣ+ಕಷ್ಟಾ
ಶ್ರಯನದ್+ಆವನು +ಧರ್ಮಸುತ +ಹೇಳೆಂದನಾ +ಖಚರ

ಅಚ್ಚರಿ:
(೧) ಕ್ಷತ್ರಿಯ, ಶ್ರೋತ್ರಿಯ – ಪ್ರಾಸ ಪದಗಳ ಬಳಕೆ

ಪದ್ಯ ೨೦: ದ್ರೌಪದಿಯನ್ನು ಆಶ್ರಮದಿಂದ ಏಕೆ ಹೊರತಂದನು?

ರಾಣಿವಾಸವಲಾ ಯುಧಿಷ್ಠಿರ
ನಾಣೆ ಬಿಡು ಬಿಡುಯೆನುತ ಸುಜನ
ಶ್ರೇಣಿಯಡ್ಡೈಸಿದರೆ ಬೀಸಿದನವನು ಖಂಡೆಯವ
ರಾಣಿ ನಡೆನಡೆ ನಮಗೆ ಪಾಂಡವ
ರಾಣೆಯಿಟ್ಟರು ಮುನಿಗಳಿಲ್ಲಿರ
ಲಾಣೆ ತಪ್ಪುವುದೆನುತ ಹೊರವಂಡಿಸಿದನಾಶ್ರಮವ (ಅರಣ್ಯ ಪರ್ವ, ೨೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಲ್ಲಿದ್ದ ಸಜ್ಜನರು, ಇವಳು ಯುಧಿಷ್ಠಿರನ ರಾಣಿ, ಯುಧಿಷ್ಠಿರನಾಣೆ ಅವಳನ್ನು ಬಿಡು ಬಿಡು, ಎಂದು ಅವನನ್ನು ಅಡ್ಡಗಟ್ಟಿದರು. ಅವನು ಕತ್ತಿಯನ್ನು ಬೀಸಿ, ಅವರನ್ನು ತೊಲಗಿಸಿ, ರಾಣೀ, ಮುನಿಗಳು ಪಾಂಡವರಾಣೆಯಿಟ್ಟಿದ್ದಾರೆ, ಇಲ್ಲಿದ್ದರೆ ಈ ಆಣೆ ತಪ್ಪುತ್ತದೆ ಎಂದು ಅವಳನ್ನು ಹೊರಕ್ಕೆಳೆದೊಯ್ದನು.

ಅರ್ಥ:
ರಾಣಿ: ಅರಸಿ; ಆಣೆ: ಪ್ರಮಾಣ; ಬಿಡು: ತೊರೆ; ಸುಜನ: ಒಳ್ಳೆಯ ಜನ; ಶ್ರೇಣಿ: ಸಾಲು, ಗುಂಪು; ಅಡ್ಡೈಸು: ಅಡ್ಡಗಟ್ಟು; ಬೀಸು: ಒಗೆ, ಎಸೆ; ಖಂಡೆಯ: ಕತ್ತಿ; ನಡೆ: ಚಲಿಸು; ತಪ್ಪು: ಸುಳ್ಳಾಗು; ಹೊರ: ಹೊರಗೆ; ಆಶ್ರಮ: ಕುಟೀರ;

ಪದವಿಂಗಡಣೆ:
ರಾಣಿವಾಸವಲಾ +ಯುಧಿಷ್ಠಿರನ್
ಆಣೆ +ಬಿಡು +ಬಿಡು+ಎನುತ +ಸುಜನ
ಶ್ರೇಣಿ+ಅಡ್ಡೈಸಿದರೆ+ ಬೀಸಿದನ್+ಅವನು +ಖಂಡೆಯವ
ರಾಣಿ +ನಡೆನಡೆ +ನಮಗೆ +ಪಾಂಡವರ್
ಆಣೆ+ಇಟ್ಟರು +ಮುನಿಗಳ್+ಇಲ್ಲಿರಲ್
ಆಣೆ+ ತಪ್ಪುವುದ್+ಎನುತ +ಹೊರವಂಡಿಸಿದನ್+ಆಶ್ರಮವ

ಅಚ್ಚರಿ:
(೧) ರಾಣಿ, ಶ್ರೇಣಿ – ಪ್ರಾಸ ಪದಗಳು

ಪದ್ಯ ೩೧: ಕೌರವನನ್ನು ನಿಗ್ರಹಿಸುವುದೇಕೆ ಒಳಿತೆಂದು ಚಿತ್ರಸೇನನು ಹೇಳಿದನು?

ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ (ಅರಣ್ಯ ಪರ್ವ, ೨೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹುಲಿಯನ್ನು ಸಂಹರಿಸಿದರೆ ಗೋವುಗಳಿಗೇಕೆ ಸಂಕಟವಾಗಬೇಕು? ಕಾಗೆಗಳನ್ನು ಹೊಡೆದರೆ ಕೋಗಿಲೆಗೇಕೆ ತೊಂದರೆಯಾಗಬೇಕು? ದುಷ್ಟರನ್ನು ನಿಗ್ರಹಿಸಿದರೆ ಸಜ್ಜನರಿಗೇಕೆ ತಲೆನೋವು ಬರಬೇಕು? ಕೌರವ ಕುಲವನ್ನು ನಿಗ್ರಹಿಸಿದರೆ ನಿನಗೇಕೆ ಹೊಟ್ಟೆ ಬೇನೆ? ಎಂದು ಚಿತ್ರಸೇನನು ಅರ್ಜುನನನ್ನು ಕೇಳಿದನು.

ಅರ್ಥ:
ಹುಲಿ: ವ್ಯಾಘ್ರ; ಮುರಿ: ಸೀಳು; ಒತ್ತು: ಆಕ್ರಮಿಸು, ಮುತ್ತು; ಪಶು: ಹಸು, ಗೋವು; ಸಂಕುಲ: ವಂಶ; ಸಂಕಟ: ತೊಂದರೆ; ವಾಯಸ: ಕಾಗೆ; ಕುಲ: ವಂಶ; ಕೈಮಾಡು: ಹೊಡೆ; ಕೋಟಲೆ: ತೊಂದರೆ; ಕೋಗಿಲೆ: ಪಿಕ; ಖಳ: ದುಷ್ಟ; ಕೊಪ್ಪರಿಸು: ತಿವಿ, ಹೊಡೆ; ಸುಜನ: ಒಳ್ಳೆಯ ಜನ; ತಲೆ: ಶಿರ; ವೇದನೆ: ನೋವು; ಜಠರ: ಹೊಟ್ಟೆ; ಶೂಲೆ: ನೋವು;

ಪದವಿಂಗಡಣೆ:
ಹುಲಿಯ +ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು; ವಾಯಸಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ

ಪದ್ಯ ೫೮: ಯಾವುದು ಸ್ವಾರ್ಥದ ಮಾರ್ಗ?

ಮಾಡುವುದು ಧರ್ಮವನು ಸುಜನರ
ಕೂಡುವುದು ಪರಪೀಡೆಯೆಂಬುದ
ಮಾಡಲಾಗದು ಕರಣ ಮೂರರೊಳಲ್ಲದಾಟವನು
ಆಡಲಾಗದು ದಸ್ಯುಜನವನು
ಕೂಡಲಾಗದಿದೆಂಬ ಮಾರ್ಗವ
ನೋಡಿ ನಡೆವುದು ತನಗೆ ಪರಮ ಸ್ವಾರ್ಥಕರವೆಂದ (ಉದ್ಯೋಗ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸ್ವಾರ್ಥವಾಗಿ ಬದುಕಲು ಏನು ಮಾಡಬೇಕೆಂದು ತಿಳಿಸುವ ಪದ್ಯ. ಧರ್ಮಾಚರಣೆ ಮಾಡಬೇಕು, ಸುಜನರ ಸಂಗವನ್ನು ಮಾಡಬೇಕು, ಮಾತು ಮನಸ್ಸು ಮತ್ತು ದೇಹಗಳಿಂದ ನಿಷಿದ್ಧ ವ್ಯಾಪಾರವನ್ನು ಮಾಡಬಾರದು. ದುರ್ಜನರ ಒಡನಾಟ ಮಾಡಬಾರದು, ಈ ದಾರಿಯಲ್ಲಿ ನಡೆಯುವುದೇ ಸ್ವಾರ್ಥ.

ಅರ್ಥ:
ಮಾಡು: ಕಾರ್ಯರೂಪಕ್ಕೆ ತರುವುದು; ಧರ್ಮ: ಧಾರಣೆ ಮಾಡುವುದು, ನಡತೆ; ಸುಜನ: ಸಜ್ಜನ, ಶ್ರೇಷ್ಠ; ಕೂಡು: ಒಡನಾಟ, ಸ್ನೇಹ; ಪರಪೀಡೆ: ಇತರರ ದುಃಖ; ಕರಣ: ಕಿವಿ; ಮೂರು: ತ್ರಿ: ಕರಣ ಮೂರು: ಮಾತು, ಮನಸ್ಸು, ದೇಹ; ಅಲ್ಲದ: ನಿಷಿದ್ಧ; ಆಟ: ಕಾರ್ಯ; ಆಡಲಾಗದು: ಮಾಡಬಾರದು; ದಸ್ಯು: ಅನಾರ್ಯ ಜನಾಂಗದವನು, ಅನಾಗರೀಕ; ಮಾರ್ಗ: ದಾರಿ; ನೋಡಿ: ವೀಕ್ಷಿಸು; ನಡೆ: ಹೆಜ್ಜೆ ಹಾಕು; ಪರಮ: ಶ್ರೇಷ್ಠ; ಸ್ವಾರ್ಥಕರ: ತನ್ನ ಪ್ರಯೋಜನ, ಸ್ವಹಿತ;

ಪದವಿಂಗಡಣೆ:
ಮಾಡುವುದು +ಧರ್ಮವನು +ಸುಜನರ
ಕೂಡುವುದು +ಪರಪೀಡೆ+ಯೆಂಬುದ
ಮಾಡಲಾಗದು +ಕರಣ +ಮೂರರೊಳ್+ಅಲ್ಲದ್+ಆಟವನು
ಆಡಲಾಗದು+ ದಸ್ಯು+ಜನವನು
ಕೂಡಲಾಗದ್+ಇದೆಂಬ +ಮಾರ್ಗವ
ನೋಡಿ +ನಡೆವುದು +ತನಗೆ +ಪರಮ +ಸ್ವಾರ್ಥಕರವೆಂದ

ಅಚ್ಚರಿ:
(೧) ಮಾಡುವುದು, ಮಾಡಲಾಗದು; ಕೂಡುವುದು, ಕೂಡಲಾಗದು – ವಿರುದ್ಧ ಪದಗಳ ಬಳಕೆ ಪದ್ಯದ ಮೊದಲ ಸಾಲುಗಳ ಪದ
(೨) ಅಲ್ಲದ ಆಟವನು ಆಡಲಾಗದು – ‘ಅ’ ಕಾರದ ಸಾಲು ಪದಗಳು
(೩) ಕರಣ ಮೂರು – ಮಾತು ಮನಸ್ಸು ದೇಹ ವನ್ನು ಸೂಚಿಸುವ ಪದ
(೪) ಸುಜನ, ದಸ್ಯುಜನ – ವಿರುದ್ಧ ಪದ

ಪದ್ಯ ೭೨: ಪಂಡಿತನ ಲಕ್ಷಣವೇನು?

ಇದು ಸಮಾಹಿತವಿದು ಶುಭೋದಯ
ವಿದು ಸಕಲ ಪುರುಷಾರ್ಥ ಸಾಧನ
ವಿದು ಸುಜನ ಸನ್ಮಾನವಿದು ಸಂಸಾರ ಸೌಖ್ಯಫಲ
ಇದು ಸುಬಲವಿದಬಲ ವಿದಾಮ್ನಾ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು (ಉದ್ಯೋಗ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ವಿದ್ವಾಂಸ (ತಿಳಿದವನ) ಲಕ್ಷಣಗಳನ್ನು ವಿದುರ ಇಲ್ಲಿ ವಿವರಿಸಿದ್ದಾರೆ. ಈ ಮೇಲೆ ಹೇಳಿದ ನೀತಿವಾಕ್ಯಗಳನ್ನು ತಿಳಿದವರು ಒಪ್ಪಿದ್ದಾರೆ, ಇದರಿಂದ ಶುಭವಾಗುತ್ತದೆ, ಇದರಿಂದ ಎಲ್ಲಾ ಪುರುಷಾರ್ಥಗಳ ಸಾಧನೆಯೂ ಆಗುತ್ತದೆ. ಇದರಿಂದ ಸಜ್ಜನರು ಸಂತೋಷಿಸುತ್ತಾರೆ, ಸಂಸಾರ ಸೌಖ್ಯವೇ ಇದಕ್ಕೆ ಫಲ. ಇದು ಬಲವಾದುದು ಹಾಗು ಇದು ದುರ್ಬಲವಾದುದು, ಇದು ವೇದ ವಿಹಿತವಾದದ್ದು ಎನ್ನುವುದನ್ನು ನಿಶ್ಚಯಿಸಿ ನೀತಿವಂತನಾಗಿ ಕಾರ್ಯವನ್ನಾಚರಿಸುವವನೇ ಪಂಡಿತನು.

ಅರ್ಥ:
ಸಮಾಹಿತ: ಒಟ್ಟುಗೂಡಿಸಿದ, ಕಲೆಹಾಕಿದ; ಶುಭ: ಮಂಗಳ; ಉದಯ: ಹುಟ್ಟು; ಸಕಲ: ಎಲ್ಲಾ; ಪುರುಷಾರ್ಥ: ಮನುಷ್ಯನು ಸಾಧಿಸಬೇಕಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮಧ್ಯೇಯಗಳು; ಸಾಧನ: ಗುರಿಮುಟ್ಟುವ ಪ್ರಯತ್ನ; ಸುಜನ: ಒಳ್ಳೆಯ ಜನ; ಸನ್ಮಾನ: ಗೌರವ; ಸಂಸಾರ: ಲೌಕಿಕ ಜೀವನ, ಬದುಕು; ಸೌಖ್ಯ: ಸುಖ, ನೆಮ್ಮದಿ; ಫಲ:ಪ್ರಯೋಜನ, ಲಾಭ; ಸುಬಲ:ಬಲವಾದ; ಅಬಲ:ದುರ್ಬಲ; ನಿಶ್ಚಯ: ತೀರ್ಮಾನ; ನೀತಿ: ಮಾರ್ಗ ದರ್ಶನ; ಕಾರ್ಯ: ಕೆಲಸ; ಹದ: ರೀತಿ, ಸರಿಯಾದ ಸ್ಥಿತಿ; ಅರಿ: ತಿಳಿ; ಆಚರಿಸು: ಪಾಲಿಸು; ಬಲ್ಲವ: ತಿಳಿದವ; ಪಂಡಿತ: ವಿದ್ವಾಂಸ; ಆಮ್ನಾಯ: ವೇದ;

ಪದವಿಂಗಡಣೆ:
ಇದು+ ಸಮಾಹಿತವಿದು +ಶುಭೋದಯ
ವಿದು +ಸಕಲ+ ಪುರುಷಾರ್ಥ+ ಸಾಧನ
ವಿದು+ ಸುಜನ +ಸನ್ಮಾನವಿದು+ ಸಂಸಾರ +ಸೌಖ್ಯಫಲ
ಇದು +ಸುಬಲವ್+ಇದ್+ಅಬಲ +ವಿದ್+ಆಮ್ನಾ
ಯದ +ಸುನಿಶ್ಚಯ+ ನೀತಿ+ ಕಾರ್ಯದ
ಹದನನ್+ಅರಿದ್+ಆಚರಿಸಬಲ್ಲವನ್+ಅವನೆ +ಪಂಡಿತನು

ಅಚ್ಚರಿ:
(೧) ಇದು – ೧-೪ ಸಾಲಿನ ಮೊದಲ ಪದ
(೨) ಸ ಕಾರದಿಂದ ಶುರುವಾಗುವ ಪದಗಳು: ಸಮಾಹಿತ, ಸಾಧನ, ಸುಜನ, ಸನ್ಮಾನ, ಸಂಸಾರ, ಸೌಖ್ಯ, ಸುಬಲ, ಸುನಿಶ್ಚಯ

ಪದ್ಯ ೯: ಕುಮಾರವ್ಯಾಸರು ಲಕ್ಷ್ಮಿಯನ್ನು ಹೇಗೆ ಆರಾಧಿಸುತ್ತಾರೆ?

ಶರಧಿಸುತೆ ಸನಕಾದಿವಂದಿತೆ
ಸುರನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ
ಪರಮ ಕರುಣಾಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ (ಆದಿ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಸಮುದ್ರರಾಜನ ಮಗಳೇ, ಸನಕಾದಿ ಮುನಿಗಳಿಂದ ಪೂಜಿಸಲ್ಪಡುವವಳೆ, ಮೂರುಲೋಕಗಳಲ್ಲಿಯ ಎಲ್ಲರಿಗೂ ತಾಯಿಯಾಗಿರುವವಳೆ, ಸಜ್ಜನರನ್ನು ಪೊರೆಯುವವಳೆ, ಇಂದ್ರನೇ ಮೊದಲಾದ ಪ್ರಮುಖರು ಮತ್ತು ಮುನಿಗಳಿಂದ ಸ್ತುತಿಸಲ್ಪಡುವವಳೆ, ಕರುಣೆಯ ಸಾಗರವಾಗಿರುವವಳೆ, ಪಾವನದರಿತಳು, ಬ್ರಹ್ಮಾದಿಗಳಿಂದ ಪೂಜಿಸಲ್ಪಡುವವಳು ಆದ ಶ್ರೀಲಕ್ಷ್ಮಿಯು ನಮಗೆ ಹೆಚ್ಚಿನ ಸಂಪತ್ತನ್ನು ಕೊಡಲಿ.

ಅರ್ಥ:
ಶರಧಿ: ಸಾಗರ, ಸಮುದ್ರ; ಸುತೆ: ಮಗಳು; ಆದಿ: ಮುಂತಾದವರು; ವಂದಿತೆ: ಪೂಜಿಸಲ್ಪಡುವ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಮಾತೆ: ತಾಯಿ; ಸುಜನರ: ಸಜ್ಜನ; ಪೊರೆ: ಕಾಪಾಡು; ದಾತೆ: ಉದಾರಿ;ಸುರ: ದೇವತೆ; ಅಗ್ರಗಣ್ಯ: ಒಡೆಯ; ಮೌನಿ: ಋಷಿ; ಸ್ತುತ್ಯೆ: ಸ್ತುತಿಸಲ್ಪಡುವ; ಪರಮ: ಶ್ರೇಷ್ಠ; ಕರುಣ: ದಯೆ; ಸಿಂಧು: ಸಾಗರ; ಪಾವನ: ನಿರ್ಮಲ; ಚರಿತೆ: ಕಥೆ, ಇತಿಹಾಸ; ಪದ್ಮಜ: ಬ್ರಹ್ಮ; ಮುಖ್ಯ: ಹಿರಿಯ; ಸಕಲ: ಎಲ್ಲಾ; ಅಮರ: ದೇವತೆಗಳು; ಪೂಜಿತೆ: ಆರಾಧಿಸಲ್ಪಡುವ; ಕೊಡು: ನೀಡು; ಅಧಿಕ: ಹೆಚ್ಚು; ಸಂಪದ: ಐಶ್ವರ್ಯ;

ಪದವಿಂಗಡಣೆ:
ಶರಧಿಸುತೆ +ಸನಕಾದಿ+ವಂದಿತೆ
ಸುರ+ನರ+ಉರಗ+ ಮಾತೆ +ಸುಜನರ
ಪೊರೆವ+ ದಾತೆ +ಸುರ+ಅಗ್ರಗಣ್ಯ+ ಸುಮೌನಿ +ವರಸ್ತುತ್ಯೆ
ಪರಮ +ಕರುಣಾ+ಸಿಂಧು +ಪಾವನ
ಚರಿತೆ +ಪದ್ಮಜ +ಮುಖ್ಯ +ಸಕಲ
ಅಮರ +ಸುಪೂಜಿತೆ +ಲಕ್ಷ್ಮಿ +ಕೊಡುಗೆಮಗ್+ಅಧಿಕ+ ಸಂಪದವ

ಅಚ್ಚರಿ:
(೧) ಶರಧಿ, ಸಿಂಧು – ಸಾಗರದ ಸಮನಾರ್ಥಕ ಪದ
(೨) ಮೂರುಲೋಕದ ಮಾತೆ ಎಂದು ಹೇಳಲು ಸುರ (ಆಕಾಶ), ನರ (ಭೂಮಿ), ಉರಗ (ಪಾತಾಳ) ಸುರನರೋರಗ ಪದದ ಬಳಕೆ
(೩) “ಸು”ಕಾರದ ಪದಗಳು – ಸುಜನ, ಸುರಾಗ್ರಗಣ್ಯ, ಸುಮೌನಿ, ಸುಪೂಜಿತೆ

ಪದ್ಯ ೨೭: ನಾರದರು ಯುಧಿಷ್ಠಿರನಿಗೆ ಕೇಳಿದ ಪ್ರಶ್ನೆಗಳಾವು?

ಕುಶಲವೆಮಗಿಂದೈದೆ ನೀನೀ
ವಸುಮತೀ ವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ
ದೆಸೆದೆಸೆಗಳಮಳಾಗ್ನಿಹೋತ್ರ
ಪ್ರಸರ ಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನರನೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಆದರ ಸತ್ಕಾರವನ್ನು ಸ್ವೀಕರಿಸಿದ ನಾರದರು ತಾವು ಕ್ಷೇಮವಾಗಿದ್ದಿವಿ, ನಿನ್ನ ಆಳ್ವಿಕೆಯಲ್ಲಿ ಈ ಭೂಮಿದೇವಿಗೆ ನೀನು ಒಳ್ಳೆಯ ಪಾಲಕನಾಗಿದ್ದೀಯಾ? ವರ್ಣಾಶ್ರಮಗಳ ನಡತೆಯು ನಿನ್ನ ಆಜ್ಞೆಯಂತೆ ಶೋಭಿಸುತ್ತಿವೆಯೆ? ಅಗ್ನಿಹೋತ್ರದ ಹೋಮದ ಧೂಮಗಳು ದಿಕ್ಕು ದಿಕ್ಕಿನಲ್ಲೂ ಹರಡಿವೆಯೆ? ನಿನ್ನ ಆಳ್ವಿಕೆಯಲ್ಲಿ ಸಜ್ಜನರನ್ನು ದುರ್ಜನರು ದೂಷಿಸುತ್ತಿಲ್ಲವೆ? ಎಂದು ನಾರದರು ಯುಧಿಷ್ಠಿರನನ್ನು ಪ್ರಶ್ನಿಸಿದರು.

ಅರ್ಥ:
ಕುಶಲ: ಕ್ಷೇಮ; ವಸುಮತಿ: ಭೂಮಿ; ವಧು: ಹೆಣ್ಣು; ಒಳ್ಳಿದು: ಒಳ್ಳೆಯದು; ಶೋಭಿಸು: ಅಂದವಾಗು; ಆಜ್ಞೆ:ಅಪ್ಪಣೆ, ಕಟ್ಟಳೆ; ವರ್ಣಾಶ್ರಮ: ಆಚಾರ, ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂಬ ನಾಲ್ಕು ಬಗೆಯ ಜೀವನದ ಘಟ್ಟಗಳು; ದೆಸೆ: ದಿಕ್ಕು; ಅಗ್ನಿಹೋತ್ರ: ಅಗ್ನಿಯನ್ನು ಉದ್ದೇಶಿಸಿ ಮಾಡುವ ಹೋಮ; ಪ್ರಸರ:ಹರಡುವುದು, ವಿಸ್ತಾರ; ಧೂಮ: ಹೊಗೆ; ಧ್ವಜ:ಪತಾಕೆ; ನಿಂದಿಸು: ದೂಷಿಸು; ದುರ್ಜನ: ಕೆಟ್ಟಜನ; ಸುಜನ: ಸಜ್ಜನ; ಮುನಿ: ಋಷಿ; ಅಮಳ: ನಿರ್ಮಲ;

ಪದವಿಂಗಡಣೆ:
ಕುಶಲವ್+ಎಮಗಿಂದೈದೆ+ ನೀನ್+
ಈ+ವಸುಮತೀ +ವಧುಗ್+ಒಳ್ಳಿದನೆ+ ಶೋ
ಭಿಸುವುದೇ + ಭವದಾಜ್ಞೆಯಲಿ+ ವರ್ಣಾಶ್ರಮ+ಆಚಾರ
ದೆಸೆದೆಸೆಗಳ್ +ಅಮಳ+ಅಗ್ನಿಹೋತ್ರ
ಪ್ರಸರ +ಧೂಮಧ್ವಜಗಳೇ+ ನಿಂ
ದಿಸರಲೇ+ ದುರ್ಜನರು+ ಸುಜನರನ್+ಎಂದನಾ +ಮುನಿಪ

ಅಚ್ಚರಿ:

(೧) ದುರ್ಜನ, ಸುಜನ – ವಿರುದ್ಧ ಪದ
(೨) ಭೂದೇವಿ ಎಂದು ಸೂಚಿಸಲು – ವಸುಮತೀ ವಧು ಪದದ ಬಳಕೆ
(೩) ನೀನೀ, ದೆಸೆದೆಸೆ – ಜೋಡಿ ಪದಗಳ ಬಳಕೆ