ಪದ್ಯ ೪೭: ದ್ರೌಪದಿಯ ಸುತ್ತಲ್ಲಿದ್ದ ಸಖಿಯರು ಏನು ಮಾಡುತ್ತಿದ್ದರು?

ಗಿಳಿಯ ಮೆಲುನುಡಿಗಳ ವಿನೋದದಿ
ಕೆಲರು ವೀಣಾಧ್ವನಿಯ ರಹಿಯಲಿ
ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ
ಕೆಲರು ನೆತ್ತದಲಮಳ ಮುಕ್ತಾ
ವಳಿಯ ಚೆಲುವಿನ ಚದುರೆಯರು ಕಂ
ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳಯದಲಿ (ಸಭಾ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ದ್ರೌಪದಿಯ ಸಖಿಯರಲ್ಲಿ ಕೆಲವರು ಗಿಳಿಗಳೊಂದಿಗೆ ಮೃದು ಧ್ವನಿಯಲ್ಲಿ ಮಾತನಾಡುತ್ತಾ ಸಂತಸದಲ್ಲಿದ್ದರು, ಕೆಲವರು ವೀಣಾವಾದನದದಲ್ಲಿ ಸಂಭ್ರಮಿಸುತ್ತಿದ್ದರು, ಕೆಲವರು ಇಂಪಾದ
ಸಂಗೀತದ ನಾದದಲ್ಲಿ ಮಗ್ನರಾಗಿದ್ದರು, ಕೆಲವರು ಪಗಡೆಯಾಟದ ವಿನೋದದಲ್ಲಿ ಕ್ರೀಡಿಸುತ್ತಿದ್ದರು, ಚೆಲುವಾದ ಚೆಲುವೆಯರು ಮುತ್ತಿನ ಹಾರಗಳನ್ನು ಧರಿಸಿ ಕಂಗೊಳಿಸುತ್ತಿದ್ದ ಕೆಲವರು ದ್ರೌಪದಿಯ ಪೀಠದ ಸುತ್ತಲೂ ಕುಳಿತಿದ್ದರು.

ಅರ್ಥ:
ಗಿಳಿ: ಶುಕ; ಮೆಲು: ಮೃದು; ನುಡಿ: ಮಾತು; ವಿನೋದ: ವಿಲಾಸ, ಸಂತೋಷ; ಕೆಲರು: ಕೆಲವರು, ಸ್ವಲ್ಪ; ಧ್ವನಿ: ರವ, ಶಬ್ದ; ರಹಿ:ಪ್ರಕಾರ, ಸಂಭ್ರಮ; ಸರಸ: ಚೆಲ್ಲಾಟ, ವಿನೋದ; ಸುಗಂಧ: ಪರಿಮಳ; ಸಂಗೀತ: ಗೀತೆ; ಸಮಾಧಿ: ಮಗ್ನರಾಗಿರುವ ಸ್ಥಿತಿ; ನೆತ್ತ: ಪಗಡೆಯ ದಾಳ; ಅಮಳ: ನಿರ್ಮಲ; ಮುಕ್ತಾವಳಿ: ಮುತ್ತಿನ ಹಾರ; ಚೆಲುವು: ಸೌಂದರ್ಯ; ಚದುರೆ: ಜಾಣೆ, ಪ್ರೌಢೆ; ಕಂಗೊಳಿಸು: ಶೋಭಿಸು; ಮಣಿ: ಬೆಲೆಬಾಳುವ ರತ್ನ; ಮಂಚ: ಪಲ್ಲಂಗ; ಸುತ್ತು: ಆವರಿಸು; ವಳಯ: ಆವರಣ;

ಪದವಿಂಗಡಣೆ:
ಗಿಳಿಯ+ ಮೆಲುನುಡಿಗಳ+ ವಿನೋದದಿ
ಕೆಲರು +ವೀಣಾ+ಧ್ವನಿಯ +ರಹಿಯಲಿ
ಕೆಲರು +ಸರಸ+ ಸುಗಂಧ +ಸಂಗೀತದ +ಸಮಾಧಿಯಲಿ
ಕೆಲರು +ನೆತ್ತದಲ್+ಅಮಳ +ಮುಕ್ತಾ
ವಳಿಯ +ಚೆಲುವಿನ +ಚದುರೆಯರು +ಕಂ
ಗೊಳಿಸಿತ್+ಅಬಲೆಯ +ಮಣಿಯ +ಮಂಚದ +ಸುತ್ತು+ವಳಯದಲಿ

ಅಚ್ಚರಿ:
(೧) ಸ ಕಾರದ ಸಾಲು ಪದ – ಸರಸ ಸುಗಂಧ ಸಂಗೀತದ ಸಮಾಧಿಯಲಿ
(೨) ಜೋಡಿ ಪದಗಳು – ಚೆಲುವಿನ ಚೆದುರೆಯರು; ವಿನೋದದ ವೀಣಾಧ್ವನಿ; ಮಣಿಯ ಮಂಚದ

ಪದ್ಯ ೯೫: ಕುಂತಿ ಐರಾವತವನ್ನು ಹೇಗೆ ಪೂಜಿಸಿದಳು?

ಇಂದುಮುಖಿ ಹರುಷದಲಿ ತಾ ಹೊ
ನ್ನಂದಣದೆ ಬಳಿಕಿಳಿದು ನಲವಿನೊ
ಳಂದು ಮೈಯಿಕ್ಕಿದಳು ಕಾಣಿಕೆಯಿಕ್ಕಿ ಚರಣದಲಿ
ಚಂದನಸುಗಂಧಾಕ್ಷತೆಗಳರ
ವಿಂದಪುಷ್ಪದಿ ಧೂಪದೀಪಗ
ಳಿಂದ ನೈವೇದ್ಯಂಗಳಿಂ ಪೂಜಿಸಿದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೯೫ ಪದ್ಯ)

ತಾತ್ಪರ್ಯ:
ಕುಂತಿಯು ಅತ್ಯಂತ ಸಂತೋಷದಿಂದ ಐರಾವತವಿದ್ದೆಡೆಗೆ ಬಂದು ತನ್ನ ಚಿನ್ನದ ಪಲ್ಲಕ್ಕಿಯಿಂದ ಕೆಳಗಿಳಿದು, ಆನಂದದಿಂದ ಐರಾವತಕ್ಕೆ ನಮಸ್ಕರಿಸಿದಳು, ತಾನು ತಂದ ಕಾಣಿಕೆಯನ್ನು ಅದರ ಚರಣಗಳಲ್ಲಿ ಅರ್ಪಿಸಿ, ಗಂಧ, ಅಕ್ಷತೆ, ಧೂಪ, ದೀಪ, ಪುಷ್ಪಗಳಿಂದ ಪೂಜಿಸಿ, ನೈವೇದ್ಯವನ್ನು ಅರ್ಪಿಸಿದಳು.

ಅರ್ಥ:
ಇಂದುಮುಖಿ: ಸುಂದರಿ, ಚಂದ್ರನಂತ ಮುಖವುಳ್ಳವಳು; ಹರುಷ: ಸಂತೋಷ; ಹೊನ್ನಂದಣ: ಚಿನ್ನದ ಪಲ್ಲಕ್ಕಿ; ಇಳಿ: ಕೆಳಕ್ಕಿ ಬರು; ನಲಿವು:ಸಂತೋಷ, ಆನಂದ; ಮೈಯಿಕ್ಕು: ನಮಸ್ಕರಿಸು; ಕಾಣಿಕೆ: ಉಡುಗೊರೆ; ಚರಣ: ಪಾದ; ಚಂದನ: ಗಂಧ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರವಿಂದ: ಕಮಲ; ಪುಷ್ಪ: ಹೂವು; ಧೂಪ:ಸುವಾಸನೆಯ ಪುಡಿ; ದೀಪ: ದೀವಿಗೆ; ನೈವೇದ್ಯ: ದೇವರಿಗೆ ಸಮರ್ಪಿಸುವ ಆಹಾರ; ಪೂಜಿಸು: ಆರಾಧಿಸು;

ಪದವಿಂಗಡಣೆ:
ಇಂದುಮುಖಿ +ಹರುಷದಲಿ+ ತಾ +ಹೊನ್ನ
ಅಂದಣದೆ+ ಬಳಿಕಿಳಿದು+ ನಲವಿನೊಳ್
ಅಂದು +ಮೈಯಿಕ್ಕಿದಳು +ಕಾಣಿಕೆಯಿಕ್ಕಿ +ಚರಣದಲಿ
ಚಂದನ+ಸುಗಂಧ+ಅಕ್ಷತೆಗಳ್+ಅರ
ವಿಂದ+ಪುಷ್ಪದಿ +ಧೂಪ+ದೀಪಗ
ಳಿಂದ +ನೈವೇದ್ಯಂಗಳಿಂ+ ಪೂಜಿಸಿದಳಾ+ ಕುಂತಿ

ಅಚ್ಚರಿ:
(೧) ಪೂಜಾಸಾಮಗ್ರಿಗಳ ಪದಗಳು – ಚಂದನಸುಗಂಧಾಕ್ಷತೆಗಳರವಿಂದಪುಷ್ಪದಿ ಧೂಪದೀಪ, ನೈವೇದ್ಯ
(೨) ಹರುಷ, ನಲಿವು – ಸಮನಾರ್ಥಕ ಪದ

ಪದ್ಯ ೨೨: ಶುಭಲಗ್ನದ ಸೂಚನೆ ಯಾವ ರೀತಿಯಲ್ಲಿ ಗೋಚರಿಸಿತು?

ಅರಸಚಿತ್ತೈಸಮಳಲಗ್ನಾಂ
ತರದಲಿವರುದಯದಲಿ ಹೊರವಂ
ಟರು ಸುವಿದ್ಯಾ ಪರಿಣತರ ಪಂಡಿತರ ಗಡಣದಲಿ
ಬರುತ ಕಂಡರು ಕಲಶ ಕನ್ನಡಿ
ವರಯುವತಿ ಖಗಮೃಗದ ಬಲುಸು
ಸ್ವರ ಸುಗಂಧಾನಿಲ ಸುಸಂಗತ ಶಕುನ ಸೂಚಕವ (ಆದಿ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಒಂದು ಶುಭದಿನ ಶುಭ ಮುಹೂರ್ತದಲ್ಲಿ ಪಾಂಡವರು ಸೂರ್ಯೋದಯವಾದ ಮೇಲೆ ವಿದ್ಯಾವಿಶಾರರಾದ ಪಂಡಿತರು ಮತ್ತು ಬ್ರಾಹ್ಮಣರ ಗುಂಪಿನಲ್ಲಿ ಪಾಂಚಾಲ ನಗರದ ಕಡೆಗೆ ಹೊರಟರು. ಶುಭಸೂಚಕದಂತೆ ಇವರು ಹೊರಟ ದಾರಿಯಲ್ಲಿ ಎದುರಾಗಿ, ಕಲಶ ಕನ್ನಡಿಯನ್ನು ಹಿಡಿದ ಶ್ರೇಷ್ಠಯುವತಿಯರು, ಪ್ರಾಣಿ, ಹಕ್ಕಿಗಳ ಸುಸ್ವರ, ಸುಗಂಧಭರಿತ ಗಾಳಿ, ಒಳ್ಳೆಯರ ಸಂಗಡ, ಇವೆಲ್ಲವೂ ಇವರಿಗೆ ಶುಭಸೂಚಕದಂತೆ ಗೋಚರಿಸಿತು.

ಅರ್ಥ:
ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಅಮಳ: ಜೋಡಿ, ಒಡನಾಡಿ; ಲಗ್ನ: ಶುಭಮುಹೂರ್ತ; ಉದಯ: ಮುಂಜಾನೆ, ಹುಟ್ಟು; ಹೊರವಂಟರು: ಆಚೆಗೆ ಹೋದರು; ವಿದ್ಯ: ಜ್ಞಾನ; ಪರಿಣತರು: ಪರಿಪಕ್ವವಾದವರು, ವಯಸ್ಸಾದವರು; ಪಂಡಿತ: ವಿದ್ವಾಂಸ; ಗಡ:ಗುಂಪು; ಬರು: ತೋರು; ಕಂಡರು: ನೋಡಿದರು; ಕಲಶ: ಕುಂಭ; ಕನ್ನಡಿ: ದರ್ಪಣ; ವರ: ಶ್ರೇಷ್ಠ; ಯುವತಿ: ಹುಡುಗಿ; ಖಗ: ಪಕ್ಷಿ, ಹಕ್ಕಿ; ಮೃಗ: ಪ್ರಾಣಿ; ಬಲು: ತುಂಬಾ; ಸ್ವರ: ಗಾನ; ಸುಗಂಧ: ಪರಿಮಳ; ಅನಿಲ: ಗಾಳಿ; ಸಂಗ: ಜೊತೆ; ಶಕುನ: ಸುಳಿವು, ಸೂಚನೆ; ಸೂಚಕ: ಸುಳಿವು, ಸಾಧನ;

ಪದವಿಂಗಡನೆ:
ಅರಸ+ಚಿತ್ತೈಸ್+ಅಮಳ+ಲಗ್ನಾಂ
ತರದಲ್+ಇವರ್+ಉದಯದಲಿ+ ಹೊರವಂ
ಟರು+ ಸುವಿದ್ಯಾ +ಪರಿಣತರ+ ಪಂಡಿತರ+ ಗಡಣದಲಿ
ಬರುತ+ ಕಂಡರು+ ಕಲಶ+ ಕನ್ನಡಿ
ವರಯುವತಿ+ ಖಗ+ಮೃಗದ +ಬಲು+ಸು
ಸ್ವರ+ ಸುಗಂಧ+ಅನಿಲ+ ಸುಸಂಗತ+ ಶಕುನ+ ಸೂಚಕವ

ಅಚ್ಚರಿ:
(೧) ಒಳ್ಳೆಯದನ್ನು ಸೂಚಿಸಲು “ಸು” ಅಕ್ಷರವನ್ನು ಬಳಸಿರುವುದು – ಸುವಿದ್ಯ, ಸುಸ್ವರ, ಸುಗಂಧ, ಸುಸಂಗ
(೨) ಪ್ರಾಣಿ ಪಕ್ಷಿಯನ್ನು ಸೂಚಿಸಲು, ಖಗಮೃಗ ಪದದ ಬಳಕೆ