ಪದ್ಯ ೨೪: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೫?

ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ತಂದೆ ಒಡೆಯ ದುರ್ಯೋಧನನೇ, ಪಾಂಡವರೈವರೂ ಬದುಕಿ ಉಳಿದರು, ನಿನ್ನೊಬ್ಬನನ್ನು ಬಿಟ್ಟು ನಿನ್ನ ತಮ್ಮಂದಿರೆಲ್ಲರೂ ಮಡಿದರು. ಅವರ ಐವರು ಮಕ್ಕಳೂ ಸುಖವಾಗಿ ಜೀವಿಸಿದ್ದಾರೆ, ನಿನ್ನ ಮಕ್ಕಳೆಲ್ಲರನ್ನೂ ಯಮನು ಸಿವುಡು ಕಟ್ಟಿ ಎಳೆದೊಯ್ದ. ಅಪ್ಪಾ ದುರ್ಯೋಧನ ದೈವವನ್ನು ವಿರೋಧಿಸಿ ಈ ದುಃಸ್ಥಿತಿಗೆ ಬಂದೆ ಎಂದು ಸಂಜಯನು ಹೇಳಿದನು.

ಅರ್ಥ:
ಬದುಕು: ಜೀವಿಸು; ಉಳಿ: ಬದುಕಿರು; ಸವರು: ನಾಶ; ಕುಮಾರ: ಮಕ್ಕಳು; ಸೌಖ್ಯ: ಸುಖ, ನೆಮ್ಮದಿ; ಜವ: ಯಮ; ಸಿವಡಿ: ಒಂದು ಅಳತೆ, ಕಿರ್ದಿ; ಹತ್ತು: ಏರು; ನೂರು: ಶತ; ದೈವ: ಭಗವಂತ; ಅವಗಡಿಸು: ಕಡೆಗಣಿಸು; ದುಃಸ್ಥಿತಿ: ಕೆಟ್ಟ ಅವಸ್ಥೆ;

ಪದವಿಂಗಡಣೆ:
ಅವರು +ಬದುಕಿದರ್+ಐವರೂ +ನಿ
ನ್ನವರೊಳಗೆ+ ನೀನುಳಿಯೆ +ನೂರ್ವರು
ಸವರಿತ್+ಅವರ್+ಐವರು+ ಕುಮಾರರು+ ಸೌಖ್ಯ +ಜೀವಿಗಳು
ಜವನ+ಸಿವಡಿಗೆ +ಹತ್ತಿದರು +ನಿ
ನ್ನವರು +ಮಕ್ಕಳು +ನೂರು +ದೈವವನ್
ಅವಗಡಿಸಿ +ದುಃಸ್ಥಿತಿಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ದುಃಸ್ಥಿತಿಗೆ ಕಾರಣ – ದೈವವನವಗಡಿಸಿ ದುಃಸ್ಥಿತಿಗೆ ಬಂದೈ