ಪದ್ಯ ೧: ಬಲರಾಮನಿಗೆ ಯಾರು ನಮಸ್ಕರಿಸಿದರು?

ಕೇಳು ಧೃತರಾಷ್ಟ್ರವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ಧರ್ಮಜನೇ ಮೊದಲಾದ ರಾಜರು ಶ್ರೀಕೃಷ್ಣನೊಡನೆ ಬಲರಾಮನಿಗೆ ವಂದಿಸಿ ಕಾಣಿಕೆಯನ್ನು ನೀಡಿದರು. ದುರ್ಯೋಧನನ ಅಪಾರ ದುಃಖವು ಅವನ ಕಣ್ಣಿನ ಕೊನೆಯಲ್ಲಿ ತುಂಬಿದ ನೀರಿನಿಂದ ಹೊರಹೊಮ್ಮುತ್ತಿತ್ತು. ಬಗಲಿನಲ್ಲಿ ಗದೆಯನ್ನಿಟ್ಟುಕೊಂಡು ಅವನು ಬಲರಾಮನ ಪಾದಗಳಿಗೆ ಹಣೆಯನ್ನು ಚಾಚಿದನು.

ಅರ್ಥ:
ಅವನಿಪ: ರಾಜ; ಸಿರಿಲೋಲ: ಲಕ್ಷ್ಮಿಯ ಪ್ರಿಯಕರ (ಕೃಷ್ಣ); ಸಹಿತ: ಜೊತೆ; ಆದಿ: ಮುಂತಾದ; ನೃಪಾಲ: ರಾಜ; ಕಾಣಿಕೆ: ಉಡುಗೊರೆ; ನಮಿಸು: ಎರಗು; ಹಲಧರ: ಹಲವನ್ನು ಹಿಡಿದವ (ಬಲರಾಮ); ದುಗುಡ: ದುಃಖ; ಮೇಲುದುಗುಡ: ತುಂಬಾ ದುಃಖ; ಮುಖ: ಆನನ; ನೀರು: ಜಲ; ಒರೆವಾಲಿ: ಕಣ್ಣಿನ ಕೊನೆ; ಕಕ್ಷ: ಕಂಕಳು; ಗದೆ: ಮುದ್ಗರ; ಭೂಪಾಲ: ರಾಜ; ಬಂದು: ಆಗಮಿಸು; ನೊಸಲ: ಹಣೆ; ಚಾಚು: ಹರಡು; ಚರಣ: ಪಾದ;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ +ಅವನಿಪ +ಸಿರಿ
ಲೋಲ +ಸಹಿತ +ಯುಧಿಷ್ಠಿರಾದಿ+ ನೃ
ಪಾಲಕರು+ ಕಾಣಿಕೆಯನಿತ್ತರು+ ನಮಿಸಿ+ ಹಲಧರಗೆ
ಮೇಲು+ದುಗುಡದ +ಮುಖದ +ನೀರ್+ಒರೆ
ವಾಲಿಗಳ +ಕಕ್ಷದ+ ಗದೆಯ +ಭೂ
ಪಾಲ +ಬಂದನು +ನೊಸಲ +ಚಾಚಿದನವರ +ಚರಣದಲಿ

ಅಚ್ಚರಿ:
(೧) ಅವನಿಪ, ಭೂಪಾಲ, ನೃಪಾಲ – ಸಮಾನಾರ್ಥಕ ಪದ
(೨) ದುಃಖವನ್ನು ವಿವರಿಸುವ ಪರಿ – ಮೇಲುದುಗುಡದ ಮುಖದ ನೀರೊರೆವಾಲಿಗಳ

ಪದ್ಯ ೧: ಅರ್ಜುನನು ಯುದ್ಧದಲ್ಲಿ ಹೇಗೆ ಮುಂದುವರೆದನು?

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತರ್ಜುನನು ಸೇನಾ
ಜಾಲವನು ಸಂತೈಸಿ ದೊರೆ ಸುಯ್ದಾನವೆಂದೆನುತ
ಆಳೊಡನೆ ಬೆರೆಸಿದನು ಕುರುಭೂ
ಪಾಲಕನ ಥಟ್ಟಿನಲಿ ಶಸ್ತ್ರ
ಜ್ವಾಲೆಗಳ ಕೆದರಿದನು ಹೊದರಿದನ ಹಿಂಡ ಹರೆಗಡಿದ (ಗದಾ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಅರ್ಜುನನು ಸೇನೆಯನ್ನು ಸಮಾಧಾನ ಪಡಿಸಿ, ಯುಧಿಷ್ಠಿರನನ್ನು ಎಚ್ಚರಿಕೆಯಿಂದ ಕಾಪಾಡುವಂತೆ ಹೇಳಿ, ಶ್ರೀಕೃಷ್ಣನೊಡನೆ ಸೈನ್ಯ ಸಮೇತನಾಗಿ ಕುರುಸೇನೆಯನ್ನು ಹೊಕ್ಕು, ಬಾಣಗಳ ಬೆಂಕಿಯನ್ನು ಕವಿಸಿ, ವಿರೋಧಿಗಳ ಹಿಂಡನ್ನು ಕಡಿದುಹಾಕುತ್ತಾ ಹೋದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಸಿರಿಲೋಲ: ಲಕ್ಷ್ಮೀಯಲ್ಲಿ ತಲ್ಲೀನನಾದ (ಕೃಷ್ಣ); ಸಿರಿ: ಐಶ್ವರ್ಯ; ಸಹಿತ: ಜೊತೆ; ಜಾಲ: ಸಮೂಹ; ಸಂತೈಸು: ಸಮಾಧಾನ ಪಡಿಸು; ದೊರೆ: ಒಡೆಯ; ಸುಯ್ದಾನ: ರಕ್ಷಣೆ, ಕಾಪು; ಆಳು: ಸೇವಕ; ಬೆರೆಸು: ಜೊತೆಗೂಡು; ಭೂಪಾಲ: ರಾಜ; ಥಟ್ಟು: ಗುಂಪು; ಶಸ್ತ್ರ: ಆಯುಧ; ಜ್ವಾಲೆ: ಬೆಂಕಿ; ಕೆದರು: ಹರಡು; ಹೊದರು: ಗುಂಪು, ಸಮೂಹ; ಹಿಂಡು: ಗುಂಪು; ಹರೆ: ಚೆದುರು; ಕಡು: ಸೀಳು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಸಿರಿ
ಲೋಲ+ಸಹಿತ್+ಅರ್ಜುನನು +ಸೇನಾ
ಜಾಲವನು +ಸಂತೈಸಿ +ದೊರೆ +ಸುಯ್ದಾನವ್+ಎಂದೆನುತ
ಆಳೊಡನೆ +ಬೆರೆಸಿದನು +ಕುರು+ಭೂ
ಪಾಲಕನ +ಥಟ್ಟಿನಲಿ +ಶಸ್ತ್ರ
ಜ್ವಾಲೆಗಳ +ಕೆದರಿದನು +ಹೊದರಿದನ+ ಹಿಂಡ +ಹರೆ+ಕಡಿದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊದರಿದನ ಹಿಂಡ ಹರೆಗಡಿದ
(೨) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೩) ಕೃಷ್ಣನನ್ನು ಸಿರಿಲೋಲ ಎಂದು ಕರೆದಿರುವುದು

ಪದ್ಯ ೨೯: ಯುದ್ಧರಂಗದ ಧೂಳಿನಬ್ಬರ ಹೇಗಿತ್ತು?

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತ ಯುಧಿಷ್ಠಿರಾದಿಗ
ಳಾಳಮೇಳಾಪದಲಿ ಹೊಕ್ಕರು ಕಾಳೆಗದ ಕಳನ
ಸಾಲರಿದು ನಿಜಸೇನೆಯನು ಪಾಂ
ಚಾಲಸುತ ಮೋಹರಿಸಿದನು ಕೆಂ
ಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ (ದ್ರೋಣ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಂಜಯನು ವಿವರಿಸುತ್ತಾ, ರಾಜ ಧೃತರಾಷ್ಟ್ರನೇ ಕೇಳು, ಪಾಂಡವರು ಶ್ರೀಕೃಷ್ಣನೊಡನೆ ಮಾತನಾಡುತ್ತಾ ಯುದ್ಧರಂಗವನ್ನು ಹೊಕ್ಕರು. ಧೃಷ್ಟದ್ಯುಮ್ನನು ಸೈನ್ಯವನ್ನು ವ್ಯೂಹಾಕಾರವಾಗಿ ನಿಲ್ಲಿಸಿದನು. ಕೆಂಧೂಳು ಮೇಲೆದ್ದು ರೆಪ್ಪೆಯಿಲ್ಲದ ದೇವತೆಗಳು ಕಣ್ಣುಮುಚ್ಚಿಕೊಳ್ಳುವ ಹಾಗಾಯಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಸಿರಿಲೋಲ: ಲಕ್ಷ್ಮೀಲೋಲ, ಕೃಷ್ಣ; ಆದಿ: ಮುಂತಾದ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ; ಅರಿ: ತಿಳಿ; ಸೇನೆ: ಸೈನ್ಯ; ಸುತ: ಮಗ; ಮೋಹರ: ಸೈನ್ಯ, ದಂಡು, ಯುದ್ಧ; ಕೆಂಧೂಳಿ: ಕೆಂಪಾದ ಧೂಳು; ಮಾಣಿಸು: ನಿಲ್ಲುವಂತೆ ಮಾಡು; ಅನಿಮಿಷ: ದೇವತೆ, ಕಣ್ಣು ಮಿಟುಕಿಸದ; ಅಮರ: ದೇವತೆ; ಸಂತತಿ: ವಂಶ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ+ ಸಿರಿ
ಲೋಲಸಹಿತ+ ಯುಧಿಷ್ಠಿರ್+ಆದಿಗಳ್
ಅಳಮೇಳಾಪದಲಿ+ ಹೊಕ್ಕರು +ಕಾಳೆಗದ +ಕಳನ
ಸಾಲರಿದು +ನಿಜಸೇನೆಯನು +ಪಾಂ
ಚಾಲಸುತ +ಮೋಹರಿಸಿದನು +ಕೆಂ
ಧೂಳಿ +ಮಾಣಿಸಿತ್+ಅನಿಮಿಷತ್ವವನ್+ಅಮರ +ಸಂತತಿಯ

ಅಚ್ಚರಿ:
(೧) ಯುದ್ಧರಂಗದ ರಭಸವನ್ನು ವಿವರಿಸುವ ಪರಿ – ಕೆಂಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ
(೨) ಕೃಷ್ಣನನ್ನು ಸಿರಿಲೋಲ ಎಂದು ಕರೆದಿರುವುದು

ಪದ್ಯ ೨೫: ಮನೆಗೆ ಹಿಂತಿರುಗಿದ ಕರ್ಣನು ಏಕೆ ಚಿಂತಿಸತೊಡಗಿದ?

ಬೀಳುಕೊಂಡನು ಮನೆಗೆ ಬಂದು ವಿ
ಶಾಲಮತಿ ಚಿಂತಿಸಿದನಾ ಸಿರಿ
ಲೋಲ ಮಾಡಿದ ಮಂತ್ರ ಮನದೊಳು ನಟ್ಟು ಬೇರ್ವರಿಯೆ
ಕಾಳುಮಾಡಿದನಕಟ ಕುರುಪತಿ
ಬಾಳಲರಿಯದೆ ಕೆಟ್ಟನೀ ಗೋ
ಪಾಲ ಬರಿದೇ ಬಿಡನು ಜೀವವ ಕೊಳ್ಳದಿರನೆಂದ (ಉದ್ಯೋಗ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕೃಷ್ಣನಿಂದ ಬೀಳ್ಕೊಂಡು ಮನೆಗೆ ಬಂದ ಕರ್ಣನು ತನ್ನ ಚಿಂತಿಸಲು ತೊಡಗಿದನು. ಕರ್ಣನ ಮನಸ್ಸಿನಲ್ಲಿ ಕೃಷ್ಣನು ಮಾಡಿದ ಭೇದ ಮಂತ್ರವು ಬೇರೂರಿತು. ಅಯ್ಯೋ ಕೃಷ್ಣನು ಕೆಡುಕನ್ನು ಮಾದಿಬಿಟ್ಟ. ದುರ್ಯೋಧನನು ಬಾಳುವುದಾದರು ಹೇಗೆಂದು ತಿಳಿಯದೆ ಕೆಟ್ಟ. ಈ ಗೋಪಾಲನು ಜೀವವನ್ನೇ ಬಲಿ ತೆಗೆದುಕೊಳ್ಳದೆ ಬಿಡುವುದಿಲ್ಲವೆಂದು ಚಿಂತಾಕ್ರಾಂತನಾದನು.
ಅರ್ಥ:
ಬೀಳುಕೊಂಡು: ತೊರೆ; ಮನೆ: ಆಲಯ; ಬಂದು: ಆಗಮಿಸಿ; ವಿಶಾಲ: ವಿಸ್ತಾರವಾದ; ಮತಿ: ಬುದ್ಧಿ; ಚಿಂತಿಸು: ಯೋಚಿಸು; ಸಿರಿ: ಐಶ್ವರ್ಯ; ಲೋಲ: ಪ್ರೀತಿ; ಸಿರಿಲೋಲ: ಕೃಷ್ಣ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ, ವಿಚಾರ; ಮನ: ಮನಸ್ಸು; ನಟ್ಟು: ಬೇರೂರು; ಬೇರು: ಬುಡ; ಅರಿ: ತಿಳಿ; ಕಾಳು:ಕೆಟ್ಟದ್ದು; ಅಕಟ: ಅಯ್ಯೋ; ಬಾಳ: ಬದುಕು; ಅರಿ: ತಿಳಿ; ಕೆಟ್ಟನು: ಒಳ್ಳೆಯದಲ್ಲದ; ಬರಿ: ಕೇವಲ, ವ್ಯರ್ಥ; ಜೀವ: ಬದುಕು; ಕೊಳ್ಳು: ಪಡೆದು;

ಪದವಿಂಗಡಣೆ:
ಬೀಳುಕೊಂಡನು +ಮನೆಗೆ +ಬಂದು +ವಿ
ಶಾಲಮತಿ +ಚಿಂತಿಸಿದನಾ +ಸಿರಿ
ಲೋಲ +ಮಾಡಿದ +ಮಂತ್ರ +ಮನದೊಳು +ನಟ್ಟು +ಬೇರ್ವರಿಯೆ
ಕಾಳುಮಾಡಿದನ್+ಅಕಟ+ ಕುರುಪತಿ
ಬಾಳಲ್+ಅರಿಯದೆ +ಕೆಟ್ಟನ್+ಈ+ ಗೋ
ಪಾಲ+ ಬರಿದೇ +ಬಿಡನು +ಜೀವವ +ಕೊಳ್ಳದಿರನೆಂದ

ಅಚ್ಚರಿ:
(೧) ಕರ್ಣನನ್ನು ವಿಶಾಲಮತಿ ಎಂದು ಕರೆದಿರುವುದು
(೨) ಕೃಷ್ಣನನ್ನು ಸಿರಿಲೋಲ, ಗೋಪಾಲ ಎಂದು ಕರೆದಿರುವುದು

ಪದ್ಯ ೨೬: ದುರ್ಯೋಧನನು ವಿದುರನಿಗೆ ಏನು ಹೇಳಿದ?

ಓಲಗದೊಳಿರ್ದಖಿಳ ಮೂರ್ಖರ
ಮೌಳಿಯನು ಕಂಡವಧರಿಸು ಸಿರಿ
ಲೋಲ ಬಿಜಯಂಗೈಯಲವಸರವುಂಟೆ ಹೇಳೆನಲು
ನಾಳೆ ಕಾಣಿಸಿ ಕೊಂಬೆವಿನ್ನೇ
ನಾಳಿಕಾರನ ಬರವು ಹಗೆವರ
ಪಾಲಿಸುವ ಭರ ಸಂಧಿಕಾರ್ಯಕೆ ಬಾರದಿರನೆಂದ (ಉದ್ಯೋಗ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿದುರನು ದುರ್ಯೋಧನನ ಅರಮನೆಗೆ ಹೋದನು. ಮೂರ್ಖರಗುಂಪಿನ ಶಿಖರಪ್ರಾಯನಾಗಿದ್ದ ದುರ್ಯೋಧನನ್ನು ಕಂಡು ವಿದುರನು ಕೃಷ್ಣನು ಬಂದಿರುವನು ಎಂದು ಹೇಳಿದನು. ಅದಕ್ಕೇನು ಅವಸರ, ನಾಳೆ ನಾವು ಅವನನ್ನು ನೋಡುವೆವು ನಮ್ಮ ವೈರಿಗಳಾದ ಪಾಂಡವರನ್ನು ಪಾಲಿಸುವ ಭರದಿಂದ ಸಂಧಿಕಾರ್ಯಕ್ಕೆ ಬಾರದೇ ಹೋಗುವವನೇ ಎಂದು ದುರ್ಯೋಧನನು ನುಡಿದನು.

ಅರ್ಥ:
ಓಲಗ: ದರ್ಬಾರು; ಅಖಿಳ: ಎಲ್ಲಾ; ಮೂರ್ಖ: ಅವಿವೇಕಿ; ಮೌಳಿ: ಶಿರ, ಕಿರೀಟ; ಕಂಡು: ನೋಡಿ; ಅವಧರಿಸು: ಮನಸ್ಸಿಟ್ಟು ಕೇಳು; ಸಿರಿ: ಲಕ್ಷ್ಮಿ; ಲೋಲ: ಪ್ರೀತಿಯುಳ್ಳವನು; ಬಿಜಯಂಗೈ: ದಯಮಾಡಿಸು; ಅವಸರ: ಬೇಗ, ಕಾರ್ಯ; ಹೇಳು: ತಿಳಿಸು; ಕಾಣಿಸು: ತೋರು; ಆಳಿ: ಸಮೂಹ, ಗುಂಪು; ಬರವು: ಆಗಮನ; ಹಗೆ: ವೈರತ್ವ; ಪಾಲಿಸು: ಕಾಪಾಡು; ಭರ: ಅಧಿಕ, ಹೊತ್ತುಕೊಳ್ಳುವುದು ; ಸಂಧಿ: ಸಂಧಾನ; ಕಾರ್ಯ: ಕೆಲಸ; ಬಾರದಿರು: ಬರಬೇಡ;

ಪದವಿಂಗಡಣೆ:
ಓಲಗದೊಳಿರ್ದ+ಅಖಿಳ+ ಮೂರ್ಖರ
ಮೌಳಿಯನು +ಕಂಡ್+ಅವಧರಿಸು +ಸಿರಿ
ಲೋಲ +ಬಿಜಯಂಗೈಯಲ್+ಅವಸರವುಂಟೆ+ ಹೇಳ್+ಎನಲು
ನಾಳೆ +ಕಾಣಿಸಿ +ಕೊಂಬೆವ್+ಇನ್ನೇನ್
ಆಳಿಕಾರನ +ಬರವು +ಹಗೆವರ
ಪಾಲಿಸುವ +ಭರ +ಸಂಧಿಕಾರ್ಯಕೆ +ಬಾರದಿರನೆಂದ

ಅಚ್ಚರಿ:
(೧) ದುರ್ಯೋಧನನನ್ನು ಅಖಿಳ ಮೂರ್ಖರಮೌಳಿ ಎಂದು ಕರೆದಿರುವುದು
(೨) ಕೃಷ್ಣನನ್ನು ಸಿರಿಲೋಲ ಎಂದು ಕರೆದಿರುವುದು

ಪದ್ಯ ೧: ಕೃಷ್ಣಾರ್ಜುನರು ಯುದ್ಧವನ್ನು ಗೆದ್ದು ಎಲ್ಲಿಗೆ ಹಿಂದಿರುಗಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರ ಹೊಸಮೆಳೆಯ
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ (ಸಭಾ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಖಾಂಡವವನವನನ್ನು ಬೆಂಕಿಯು ಸುಟ್ಟುಹಾಕಿತು, ಅದರ ಕಿಚ್ಚು ವನದ ಎಲ್ಲಾ ಪೊದರೆಗಳನ್ನೂ, ಬಿದಿರುಗಳನ್ನೂ ನಿಶ್ಶೇಷ ಮಾದಿತು. ಯುದ್ಧದಲ್ಲಿ ಜಯವನ್ನು ಸಾಧಿಸಿದ ಕೃಷ್ಣಾರ್ಜುನರು ಇಂದ್ರಪ್ರಸ್ಥಕ್ಕೆ ಹಿಂದಿರುಗಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರಿ: ಭೂಮಿ; ವನ: ಕಾಡು; ವಹ್ನಿ: ಅಗ್ನಿ, ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ತೆಗೆ:ಈಚೆಗೆ ತರು; ಕೂಡೆ: ಒಡಣೆ, ತಕ್ಷಣ; ಹೊಗೆ: ಧೂಮ, ಆವಿ; ಹೊದರು: ಪೊದೆ; ಹೊಸಮೆಳೆ:ಬಿದಿರು, ಮೊಳಕೆ; ಕಾಳಗ: ಯುದ್ಧ; ಮೇಲು: ಹೆಚ್ಚಾದ, ಅತಿಶಯ; ಉಬ್ಬು:ಹಿಗ್ಗು; ಸಿರಿ: ಸಂಪತ್ತು;
ಲೋಲ: ಪ್ರೀತಿ; ಸಿರಿಲೋಲ: ಕೃಷ್ಣ, ವಿಷ್ಣು; ಸಹಿತ: ಜೊತೆ; ವಿಕ್ರಮ: ಪರಾಕ್ರಮ; ಏಳಿಗೆ: ಹೆಚ್ಚಾಗುವ; ಪರಿತೋಷ:ಅತಿಯಾದ ಆನಂದ; ತಿರುಗು: ಹಿಂದಕ್ಕೆ ಬಾ, ಹಿಂದಿರುಗು; ಪಟ್ಟಣ: ಊರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಖಾಂಡವವನದ+ ವಹ್ನಿ
ಜ್ವಾಲೆ +ತೆಗೆದುದು +ಕೂಡೆ +ಹೊಗೆದುದು +ಹೊದರ +ಹೊಸಮೆಳೆಯ
ಮೇಲು+ಕಾಳಗದ್+ಉಬ್ಬಿನಲಿ +ಸಿರಿ
ಲೋಲ +ಸಹಿತ್+ ಅರ್ಜುನನು+ ವಿಕ್ರಮದ್
ಏಳಿಗೆಯ +ಪರಿತೋಷದಲಿ +ತಿರುಗಿದನು+ ಪಟ್ಟಣಕೆ

ಅಚ್ಚರಿ:
(೧) ಕೃಷ್ಣನನ್ನು ಸಿರಿಲೋಲ ಎಂದು ವರ್ಣಿಸಿರುವುದು
(೨) “ಹೊ” ಕಾರದ ತ್ರಿವಳಿ ಪದ – ಹೊಗೆದುದು ಹೊದರ ಹೊಸಮೆಳೆಯ