ಪದ್ಯ ೨: ಯಜ್ಞದ ಅಗ್ನಿಯು ಹೇಗೆ ಉರಿಯಲಾರಂಭಿಸಿತು?

ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ
ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗುಭುಗಿಸಿ
ಸುಳಿಸುಳಿದು ಭೋರೆಂದು ಬಿಗಿದ
ವ್ವಳಿಸಿದವು ಘೃತ ಧಾರೆಗಳಿಗು
ಚ್ಚಳಿಸಿದವು ಹರಹಿನಲಿ ನಾಲಗೆ ಹವ್ಯವಾಹನನ (ಸಭಾ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಹೋಮಕುಂಡದಲ್ಲಿ ಯಜ್ಞೇಶ್ವರನ ಜ್ವಾಲೆಗಳು ಒಂದನ್ನೊಂದು ಕೂಡಿದವು. ಅಗ್ನಿ ಜ್ವಾಲೆಗಳು ತಿರುಗುತ್ತಾ ಬೇರೆ ಬೇರೆ ಚಾಚಿದವು. ಹವಿಸ್ಸನ್ನು ಪಚನಮಾಡಲು ಸಿಮಿಸಿಮಿಯೆಂದು ಸದ್ದು ಮಾಡಿ ಮೇಲೆದ್ದವು. ಭುಗಿಭುಗಿಸಿ ಭೋರೆಂದು ಸದ್ದು ಮಾಡಿದವು. ತುಪ್ಪದ ಧಾರೆಗಳು ಅಗ್ನಿಗೆ ನೀಡಿದಾಗ ಅವು ತುಪ್ಪವನ್ನು ಸ್ವೀಕರಿಸು ಅಗ್ನಿಯು ಮೇಲಕ್ಕೇಳಿತು.

ಅರ್ಥ:
ತಳಿತು: ಚಿಗುರು; ತಿವಿ: ಗುದ್ದು; ಮುರಿ: ಸೀಳು; ಅಗಲ: ವಿಸ್ತಾರ; ಹೊಗೆ: ಧೂಮ; ಸುತ್ತು: ತಿರುಗು; ಸಿಮಿ: ಬೆಂಕಿಯ ಸದ್ದನ್ನು ವರ್ಣಿಸುವ ಪದ; ಮೊಳಗು: ಧ್ವನಿ, ಸದ್ದು; ಹೊದರು: ತೊಡಕು, ತೊಂದರೆ; ಎದ್ದು: ಮೇಲೇಳು; ಸಗಾಢ: ಜೋರು, ರಭಸ; ಉಬ್ಬು: ಹೆಚ್ಚಾಗು; ಭುಗುಭುಗು: ಬೆಂಕಿಯು ಉರಿಯುವ ಶಬ್ದವನ್ನು ವಿವರಿಸುವ ಪದ; ಸುಳಿ: ಬೀಸು, ತೀಡು, ಆವರಿಸು; ಭೋರ್: ಅನುಕರಣ ಪದ; ಬಿಗಿ: ಕಟ್ಟು; ಅವ್ವಳಿಸು: ಆರ್ಭಟಿಸು; ಹರಹು: ವಿಸ್ತಾರ, ವೈಶಾಲ್ಯ; ನಾಲಗೆ: ಜಿಹ್ವೆ; ಹವ್ಯವಾಹನ: ಅಗ್ನಿ; ಉಚ್ಚಳಿಸು: ಮೇಲಕ್ಕೆ ಹಾರು;

ಪದವಿಂಗಡಣೆ:
ತಳಿತು +ತಿವಿದಾಡಿದವು +ಮುರಿದೊಡ್
ಅಗಲಸಿದವು +ಹೊಗೆ +ಸುತ್ತಿ +ಸಿಮಿ +ಸಿಮಿ
ಮೊಳಗಿ+ ಹೊದರ್+ಎದ್ದವು +ಸಗಾಢದಲ್+ಉಬ್ಬಿ +ಭುಗುಭುಗಿಸಿ
ಸುಳಿಸುಳಿದು+ ಭೋರೆಂದು +ಬಿಗಿದ್
ಅವ್ವಳಿಸಿದವು +ಘೃತ +ಧಾರೆಗಳಿಗ್
ಉಚ್ಚಳಿಸಿದವು +ಹರಹಿನಲಿ+ ನಾಲಗೆ +ಹವ್ಯವಾಹನನ

ಅಚ್ಚರಿ:
(೧) ಜೋಡಿ ಪದಗಳು – ಸಿಮಿಸಿಮಿ, ಭುಗುಭುಗಿಸಿ, ಸುಳಿಸುಳಿ
(೨) ಬೆಂಕಿಯ ವರ್ಣನೆ – ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗುಭುಗಿಸಿ

ಪದ್ಯ ೧೧ : ಸರ್ಪಾಸ್ತ್ರದ ತಾಪ ಹೇಗಿತ್ತು?

ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ (ಕರ್ಣ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಹೆಡೆಯಿಂದ ಉರಿಯ ಜೀರ್ಕೊಳವೆಗಳು ಬಂದವು. ದಳ್ಳುರಿಯು ಸಿಮಿಸಿಮಿ ಸದ್ದು ಮಾಡಿತು. ಕಿಡಿಯ ತುಂತುರುಗಳು, ಕಿಡಿಗಳ ತೆಕ್ಕೆ ಉಸಿರಾಟದಿಂದ ಬಂದ ಝಳ, ಕಪ್ಪುಹೊಗೆಯ ಹೊರಳಿಗಳು ಹಬ್ಬುತ್ತಿರಲು ಸರ್ಪವು ನನಗೆ ಅಪ್ಪಣೆಯೇನು ಎಂದು ಬೇಡಿತು.

ಅರ್ಥ:
ಉರಿ: ಬೆಂಕಿಯ ಕಿಡಿ; ಜೀರ್ಕೊಳವಿ: ಪಿಚಕಾರಿ; ಪೂತ್ಕರಿಸು: ಹೊರಹಾಕು; ಫಣಿ: ಹಾವು; ವದನ: ಮುಖ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಸಿಮಿಸಿಮಿ: ಉರಿಯ ಶಬ್ದದ ವರ್ಣನೆ; ತುಷಾರ: ಹಿಮ, ಇಬ್ಬನಿ; ತುಂತುರು: ಸಣ್ಣ ಸಣ್ಣ ಹನಿ; ಕಿಡಿ: ಬೆಂಕಿ; ಹೊರಳು: ತಿರುಗು, ಬಾಗು; ಕಿಡಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ಕಾಹುರ: ಆವೇಶ, ಸೊಕ್ಕು, ಕೋಪ; ಸುಯ್ಲು: ನಿಟ್ಟುಸಿರು; ಝಳ: ಪ್ರಕಾಶ, ಕಾಂತಿ; ಗರಳ:ವಿಷ; ಜಿಗಿ: ಹಾರು; ಮಾತು: ವಾಣಿ; ತೋರು: ಗೋಚರಿಸು; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಉರಿಯ+ ಜೀರ್ಕೊಳವಿಗಳವೊಲು +ಪೂ
ತ್ಕರಿಸಿದವು +ಫಣಿ +ವದನದಲಿ+ ದ
ಳ್ಳುರಿಯ +ಸಿಮಿಸಿಮಿಗಳ+ ತುಷಾರದ+ ಕಿಡಿಯ +ತುಂತುರಿನ
ಹೊರಳಿ+ಕಿಡಿಗಳ +ಕರ್ಬೊಗೆಯ +ಕಾ
ಹುರದ +ಸುಯ್ಲಿನ +ಝಳವ +ಗರಳಾ
ಕ್ಷರದ +ಜಿಗಿಯಲಿ +ಮಾತು +ತೋರಿತು +ಬೆಸಸು +ಬೆಸಸೆನುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಜೀರ್ಕೊಳವಿಗಳವೊಲು ಪೂತ್ಕರಿಸಿದವು ಫಣಿ
(೨) ಸರ್ಪಾಸ್ತ್ರದ ವರ್ಣನೆ – ಫಣಿ ವದನದಲಿ ದಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
(೩) ಬೆಂಕಿಯನ್ನು ಶಬ್ದದಲ್ಲಿ ಹಿಡಿಯುವ ಪರಿ – ಸಿಮಿಸಿಮಿ
(೪) ದಳ್ಳುರಿಯನ್ನು ತಂಪಾದ ತುಂತುರು ಎಂದು ಹೇಳುವ ಕವಿಯ ಕಲ್ಪನೆ